ಬೆಂಗಳೂರು: 12 ಜನ ಮುಂಬೈಗೆ ಹೋಗಿದ್ದರು. ಮುಂಬೈಗೆ ಹೋಗಿ ಆ ಪುಣ್ಯಾತ್ಮರು ಏನು ಮಾಡಿದ್ದಾರೋ? ರಾಜಕಾರಣಕ್ಕಾಗಿ ಈ ಮಟ್ಟಕ್ಕೆ ಯಾರೂ ಇಳಿಯಬಾರದು. ಪಾಪ ರಮೇಶ್ ಜಾರಕಿಹೊಳಿ ಅಮಾಯಕರಿದ್ದಾರೆ. 6 ಜನ ಸಚಿವರು ನ್ಯಾಯಾಲಯಕ್ಕೆ ಹೋದಾಗ ಗೋವಾ, ಮುಂಬೈ, ಹೈದರಾಬಾದ್ ಸುತ್ತಾಡಿದ್ದರು. ಆಗ ಏಕೆ ಇವರು ಕೋರ್ಟ್ ಮೊರೆ ಹೋಗಿರಲಿಲ್ಲ. ಇಂತಹವರನ್ನು ನಂಬಿ ರಾಜಕಾರಣ ಮಾಡಬೇಕಾಗಿತ್ತಾ? ಎಂದು ವಿಧಾನಸೌಧದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ ದೊಡ್ಡ ಪ್ರಚಾರ ನಡೆದಿದೆ. ನಮ್ಮ ಕುಟುಂಬದವರು, ನಮ್ಮ ತಂದೆ ಕಾಲದಿಂದಲೂ ಇಂತಹ ಕೆಲಸ ಮಾಡುತ್ತಿಲ್ಲ. ಸಿಡಿ ಮುಂದಿಟ್ಟುಕೊಂಡು ನಾವೆಂದೂ ರಾಜಕೀಯ ಮಾಡಿಲ್ಲ. ಆ ಹೆಣ್ಣು ಮಗಳು ಸಂತ್ರಸ್ತೆಯಾಗಿದ್ದರೆ, ನಿಜಕ್ಕೂ ಕಿರುಕುಳ ಆಗಿದ್ದರೆ ಏಕೆ ಸಮಾಜದ ಮುಂದೆ ಬರಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಆ ಹೆಣ್ಣು ಮಗಳ ವಿಡಿಯೋ ಬಂದಿದೆ. ಹೀಗಾಗಿ ಅವರ ಕುಟುಂಬಸ್ತರೋ, ಸಂತ್ರಸ್ತೆಯೋ ಅಥವಾ ನಕಲಿ ಅಂತಿರುವ ರಮೇಶ್ ಜಾರಕಿಹೊಳಿ ಸಂತ್ರಸ್ತರೋ ನೀವೆ ಹೇಳಿ ಎಂದು ಪ್ರಶ್ನೆ ಮಾಡಿದ್ದಾರೆ.
ಬ್ಲಾಕ್ ಮೇಲ್ ಮಾಡುವ ಪ್ರಕರಣಗಳಿಗೆ ಅಂತ್ಯ ಎಂದರೆ ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು ಎಂದು ಅರ್ಥ. ಮಹಾಭಾರತ ಹಾಗೂ ರಾಮಾಯಣ ಯಾವ ಕಾರಣಕ್ಕೆ ಆಯ್ತು? ಇದೆಲ್ಲಾ ಗಂಡು ಹೆಣ್ಣಿನಿಂದ ಅಲ್ಲವೇ.. ದಿನೇಶ್ ಕಲ್ಲಳ್ಳಿ ಮೇಲೆ ನಾನು ಹಣದ ವಿಚಾರವಾಗಿ ಏನು ಹೇಳಿಲ್ಲ. ಅವರು ಏಕೆ ಆ ರೀತಿ ನನ್ನ ಮೇಲೆ ದೂರು ಹೇಳಿ ವಾಪಸ್ ತೆಗೆದುಕೊಂಡರು ಗೊತ್ತಿಲ್ಲ, ಅವರನ್ನೇ ಕೇಳಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ತಪ್ಪು ಮಾಡಿಲ್ಲ ಎಂದರೆ ಯಾಕೆ ನ್ಯಾಯಾಲಯಕ್ಕೆ ಹೋಗಬೇಕು?
ಇನ್ನು ಆ ಆರು ಜನಕ್ಕೆ ಯಾರು ಸಲಹೆ ಕೊಟ್ಟರು ಗೊತ್ತಿಲ್ಲ. ನೀವು ತಪ್ಪು ಮಾಡಿಲ್ಲ ಎಂದರೆ ಯಾಕೆ ನ್ಯಾಯಾಲಯಕ್ಕೆ ಹೋಗಬೇಕು. ಉಳಿದ ಆರು ಜನರು ಹೊಗುತ್ತಿದ್ದರಂತೆ ಆದರೆ ಆ ಮೇಲೆ ಏಕೋ ಸುಮ್ಮನಾಗಿರಬೇಕು. ನಿಮ್ಮ ಮುಖಕ್ಕೆ ನೀವೆ ಮಸಿ ಬಳಿದುಕೊಳ್ಳುತ್ತಿದ್ದೀರಿ. ನಾನು ಕೂಡ ತಪ್ಪು ಮಾಡಿದ್ದೇ ಎಂದು ವಿಧಾನ ಸಭೆಯ ಕಲಾಪದಲ್ಲೇ ಹೇಳಿದ್ದೆ. ಅದನ್ನ ತಿದ್ದುಕೊಂಡು ಬದುಕಬೇಕು. ಕೋರ್ಟ್ಗೆ ಹೋದವರು ಅಮಾಯಕರು. ಆದರೆ ಅವರು ಮೇಧಾವಿಗಳು ನೀವು ಇಂತಹ ಸರ್ಕಾರ ತರುವುದಕ್ಕೆ ಹೋಗಬೇಕಿತ್ತಾ?. ಇಲ್ಲೇ ಅರಾಮಾಗಿ ಇರಬಹುದಿತ್ತಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ನಾನು ಫ್ರೀ ಬಿಟ್ಟಿದ್ದೇ ಆದರೂ ಬಾಂಬೆಗೆ ಹೋಗಿ ಯಾಕೆ ಕುಳಿತುಕೊಳ್ಳಬೇಕಿತ್ತು. ಇದರಲ್ಲಿ ಬಾಂಬೆಗೆ ಯಾರು ಕರೆದುಕೊಂಡಿದ್ದಾರೋ ನನಗೆ ಗೊತ್ತಿಲ್ಲ. ಕಾಂಗ್ರೆಸ್ ಪ್ರಭಾವಿ ನಾಯಕರು ಮಾಡಿದ್ದಾರೋ ಅಥವಾ ಬಾಂಬೆಗೆ ಕರೆದುಕೊಂಡು ಹೋದವರು ಮಾಡಿದ್ದಾರೋ ನನಗೆ ಗೊತ್ತಿಲ್ಲ. ಯಾರು ಇಂಜೆಕ್ಷನ್ ತೆಗೆದುಕೊಂಡಿದ್ದಾರೋ ಅವರಿಗೆ ಗೊತ್ತಿರಬೇಕು ಎಂದು ಹೆಚ್ಡಿಕೆ ತಿಳಿಸಿದ್ದಾರೆ.
ಹಣವೆಲ್ಲಾ ಡೈವರ್ಟ್ ಮಾಡಿಕೊಂಡ ಮೇಲೆ ಬಜೆಟ್ ಏಕೆ?
ಬಿಜೆಪಿಯವರು ಯಾವ ಕಾರ್ಯಕ್ರಮ ಪೂರ್ತಿಗೊಳಿಸಿದ್ದಾರೆ. ಪುಸ್ತಕದಲ್ಲಿ ಸರ್ವರಿಗೂ ಸಮಪಾಲು ಎಂದು ಹೇಳುತ್ತಾರೆ ಅಷ್ಟೇ. ಬಿಜೆಪಿಯವರು ಸರಿಯಾಗಿ ಅನುದಾನ ನೀಡಿಲ್ಲ. ದಾರಿ ತಪ್ಪಿಸುವ ರೀತಿಯಲ್ಲಿ ಹೇಳಿಕೊಂಡಿದ್ದಾರಷ್ಟೇ, ಈ ಬಜೆಟ್ ಅನ್ನು ಆರ್ಥಿಕ ಇಲಾಖೆ ಅಧಿಕಾರಿಗಳು ಮಾಡಿದ್ದಾರೋ ಅಥವಾ ಬೇರೆ ಯಾರು ಮಾಡಿದ್ದಾರೋ ಗೊತ್ತಿಲ್ಲ ಎಂದು ವಿಧಾನಸೌಧದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ನಾನು ಬಜೆಟ್ ಪ್ರತಿ ಓದಿದೆ ನನಗೇನೂ ಅರ್ಥವಾಗುತ್ತಿಲ್ಲ. ನನ್ನ ಕಾಲದಲ್ಲಿ ಟೆಂಡರ್ ಕರೆದಿದ್ದನ್ನು ನಿಲ್ಲಿಸಿದ್ದಾರೆ. ನಾನು ಕೊಟ್ಟಂತಹ ದುಡ್ಡನ್ನ ಡೈವರ್ಟ್ ಮಾಡಿಕೊಂಡಿದ್ದಾರೆ. ಕೇವಲ ಕೊವಿಡ್ ಕೊವಿಡ್ ಅಂತಾರೆ. ಕೊವಿಡ್ ಆರಂಭದ ಮೂರ್ನಾಲ್ಕು ತಿಂಗಳು ಆರ್ಥಿಕ ನಷ್ಟವಾಯ್ತು ಅಷ್ಟೇ. ಹಣವೆಲ್ಲಾ ಡೈವರ್ಟ್ ಮಾಡಿಕೊಂಡ ಮೇಲೆ ಬಜೆಟ್ ಏಕೆ? ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಏಕೆ ಬಜೆಟ್ ಮಂಡನೆ ಮಾಡುತ್ತೀರಿ? ನನ್ನ ಕಾಲದಲ್ಲಿ ಬಿಜೆಪಿ ಶಾಸಕರಿಗೂ ಅನುದಾನ ಕೊಟ್ಟಿದ್ದೇನೆ. ಅದನ್ನ ಬಿಜೆಪಿ ಶಾಸಕರೇ ಹೇಳುತ್ತಾರೆ. ಇಷ್ಟು ದಿನ ನಾನು ಮಾತನಾಡಿರಲಿಲ್ಲ. ನೆರೆಹಾವಳಿ ಕೊವಿಡ್‌ನಿಂದಾಗಿ ಕಾಲಾವಕಾಶ ಕೊಟ್ಟಿದ್ದೆ. ಬಜೆಟ್ ನೋಡಿದ ಮೇಲೆ ಇದೆಲ್ಲಾ ಯಾವ ಪುರುಷಾರ್ಥಕ್ಕೆ ಎಂದು ಅನಿಸುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ನಾನು ಯಾವತ್ತು ಜಾತಿ ರಾಜಕೀಯ ಮಾಡಿಲ್ಲ. ಸಣ್ಣಪುಟ್ಟ ಸಮುದಾಯಗಳನ್ನು ಚೆನ್ನಾಗಿ ನಡೆಸಿಕೊಂಡಿದ್ದೇನೆ. ಇವರು ಜಾತಿ ರಾಜಕೀಯ ಮಾಡಿ ಬದುಕುತ್ತಿದ್ದಾರೆ. ಸುಳ್ಳು ಹೇಳಿಕೊಂಡು ರಾಜಕೀಯ ಮಾಡುತ್ತಾರೆ. ಇವರು ಯಾವ ಕಾರ್ಯಕ್ರಮಗಳನ್ನ ಪೂರ್ತಿಗೊಳಿಸಿದ್ದಾರೆ. ಹಲವಾರು ಕಾರ್ಯಕ್ರಮಗಳನ್ನ ಪೂರ್ತಿಗೊಳಿಸಿಲ್ಲ ಎಂದು ಹೆಚ್ಡಿಕೆ ತಿಳಿಸಿದ್ದಾರೆ.