​ನಾಳೆಯಿಂದ ಹಾಸನಾಂಬೆ ಜಾತ್ರೆ: ದರ್ಶನ ವ್ಯವಸ್ಥೆಯಲ್ಲಿ ಕೆಲ ಬದಲಾವಣೆ; ಮಾಹಿತಿ ಇಲ್ಲಿದೆ

ಹಾಸನದ ಅಧಿದೇವತೆ ಹಾಸನಾಂಬೆಯ ಜಾತ್ರೋತ್ಸವ ನಾಳೆಯಿಂದ ಅಕ್ಟೋಬರ್​ 23ರ ವರೆಗೆ ಅದ್ಧೂರಿಯಾಗಿ ನಡೆಯಲಿದೆ. ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಪೂರ್ಣಗೊಳಿಸಿದ್ದು, ದೇವಿಯ ದರ್ಶನ ವ್ಯವಸ್ಥೆಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮಾಹಿತಿ ನೀಡಿದ್ದಾರೆ.

​ನಾಳೆಯಿಂದ ಹಾಸನಾಂಬೆ ಜಾತ್ರೆ: ದರ್ಶನ ವ್ಯವಸ್ಥೆಯಲ್ಲಿ ಕೆಲ ಬದಲಾವಣೆ; ಮಾಹಿತಿ ಇಲ್ಲಿದೆ
ಹಾಸನಾಂಬೆ
Updated By: ಪ್ರಸನ್ನ ಹೆಗಡೆ

Updated on: Oct 08, 2025 | 3:34 PM

ಹಾಸನ, ಅಕ್ಟೋಬರ್​ 08: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವು ಹಾಸನದ ಅಧಿದೇವತೆ ಹಾಸನಾಂಬೆಯ (Hasanamba) ದರ್ಶನೋತ್ಸವ ನಾಳೆಯಿಂದ ಆರಂಭಗೊಳ್ಳಲಿದೆ. ಅಕ್ಟೋಬರ್​ 9ರಿಂದ 23ರವರೆಗೆ ಹಾಸನಾಂಬೆ ಉತ್ಸವ ನಡೆಯಲಿದ್ದು, ಅ.10ರಿಂದ 22ರ ತನಕ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿರಲಿದೆ. ಜಾತ್ರಾಮಹೋತ್ಸವಕ್ಕೆ ಅಗತ್ಯ ತಯಾರಿಯನ್ನ ಜಿಲ್ಲಾಡಳಿತ ಈಗಲೇ ಕೈಗೊಂಡಿದ್ದು, ದೇವಿಯ ದರ್ಶನ ವಿಚಾರದಲ್ಲಿ ಈ ಬಾರಿ ಒಂದಿಷ್ಟು ಬದಲಾವಣೆ ಮಾಡಲಾಗಿದೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಸುಗಮ ದರ್ಶನಕ್ಕೆ ಭಕ್ತರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಸಾಮಾನ್ಯ ದರ್ಶನಕ್ಕೆ ಒಂದು ಸಾಲು, ಟಿಕೆಟ್ ಖರೀದಿಸಿ ಬರುವವರಿಗಾಗಿ ಎರಡು ಸಾಲು ಮತ್ತು ಶಿಷ್ಟಾಚಾರಕ್ಕೆ ಒಂದು ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 10.30ರಿಂದ 12.30 ರವರೆಗೆ ಮಾತ್ರ ವಿಐಪಿಗಳಿಗೆ ದರ್ಶನಕ್ಕೆ ಅವಕಾಶವಿರಲಿದೆ. ಗಣ್ಯರ ಜೊತೆ ಬರುವ ನಾಲ್ವರಿಗೆ ಮಾತ್ರ ಶಿಷ್ಟಾಚಾರದ ಅಡಿ ದರ್ಶನಕ್ಕೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ದೇವಿ ದರ್ಶನಕ್ಕೆ ಬರುವ ಗಣ್ಯರು ಮೊದಲೇ ಮಾಹಿತಿ ನೀಡಿ ಬರಬೇಕು. ನಿಗದಿತ ಸಮಯದ ನಂತರ ಶಿಷ್ಟಾಚಾರ ಕೌಂಟರ್ ಬಂದ್ ಮಾಡಲಾಗುತ್ತದೆ. ವಿಐಪಿಗಳು ತಮ್ಮ ವಾಹನಗಳನ್ನು ಐಬಿಯಲ್ಲಿ ನಿಲ್ಲಿಸಿ, ಜಿಲ್ಲಾಡಳಿತದ ವಾಹನದಲ್ಲಿ ದೇವಾಲಯಕ್ಕೆ ಹೋಗಬೇಕು ಎಂದು ಡಿಸಿ ತಿಳಿಸಿದ್ದಾರೆ.

ಇದನ್ನೂ ಓದಿ: ಹಾಸನಾಂಬ ದೇಗುಲದ ಇತಿಹಾಸ ಮತ್ತು ಸಪ್ತ ಮಾತೃಕೆಯರು ಇಲ್ಲಿ ನೆಲೆಸಿದ್ದು ಹೇಗೆ? ಇಲ್ಲಿದೆ ಮಾಹಿತಿ

ಗೋಲ್ಡ್ ಕಾರ್ಡ್‌ ಪಡೆದು ಬರುವವರಿಗೂ ಸಮಯದ ಪರಿಮಿತಿ ನೀಡಲಾಗಿದ್ದು, ಬೆಳಿಗ್ಗೆ 7.30ರಿಂದ 10 ಗಂಟೆಯವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಉಳಿದ ಸಮಯದಲ್ಲಿ ಸಾಮಾನ್ಯ ಭಕ್ತರಿಗೆ ದರ್ಶನ ಇರುತ್ತದೆ. ಕುಡಿಯುವ ನೀರು, ಮಜ್ಜಿಗೆ ಸೇರಿ  ಆರೋಗ್ಯ ಇಲಾಖೆ, ಅಗ್ನಿಶಾಮಕದಳ, ಪೊಲೀಸ್ ಇಲಾಖೆ ಒಳಗೊಂಡಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಹಾಸನಾಂಬೆ ದರ್ಶನಕ್ಕೆ ಬರುವವರಿಗಾಗಿ ಆನ್‌ಲೈನ್ ಬುಕ್ಕಿಂಗ್, ವಾಟ್ಸ್ಯಾಪ್​ ಚಾಟ್‌ಬಾಟ್ ಪರಿಚಯಿಸಲಾಗಿದೆ. ಎಐ ಟೆಕ್ನಾಲಜಿ ಮೂಲಕ ದೇವಿ ದರ್ಶನದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು. ಜಾತ್ರೆ ಪ್ರಯುಕ್ತ ವಸ್ತು ಪ್ರದರ್ಶನ, ಡಾಗ್ ಶೋ, ಪಾಕ ಸ್ಪರ್ಧೆ, ಹೆಲಿ ಟೂರಿಸಂ, ಫಲಪುಷ್ಪ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಹನ್ನೆರಡು ಟೂರ್ ಪ್ಯಾಕೇಜ್​ ಗಳನ್ನ ಪರಿಚಯಿಸಿರೋದಾಗಿ ಎಂದು ಕೆ.ಎಸ್. ಲತಾಕುಮಾರಿ ಹೇಳಿದ್ದಾರೆ.

ಡ್ರೆಸ್​ ಕೋಡ್​ ನಿಗದಿ

ಈ ಬಾರಿ‌ ಹಾಸನಾಂಬೆ ದರ್ಶನಕ್ಕೆ ಬರುವ ಭಕ್ತರಿಗೆ ಜಿಲ್ಲಾಡಳಿತ ಡ್ರೆಸ್ ಕೋಡ್ ನಿಗದಿಪಡಿಸಿದೆ. ದೇವಾಲಯಕ್ಕೆ ಬರುವ ಭಕ್ತರು ಸಾಂಪ್ರದಾಯಿಕ ಉಡುಗೆಯಲ್ಲಿ ಬಂದು ದೇವಿ ದರ್ಶನ ಮಾಡಬೇಕು ಎಂದು ಡಿಸಿ ಮನವಿ ಮಾಡಿದ್ದಾರೆ.

ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:44 pm, Wed, 8 October 25