ಹಾಸನ, ಜನವರಿ 24: ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಗಡಿಭಾಗ ಸುಳುಗೋಡು ಸೋಮವಾರ ಗ್ರಾಮದಲ್ಲಿ ಜಮೀನು ಉಳುಮೆ ಮಾಡುವಾಗ ಜೈನ ತೀರ್ಥಂಕರರ ಸುಂದರ ಕೆತ್ತನೆಯ ಪ್ರತಿಮೆ ಹಾಗೂ ಸ್ಥಂಭ ರೂಪದ ಕಲಾಕೃತಿ ಪತ್ತೆಯಾಗಿದೆ. ಗ್ರಾಮದ ಮಂಜು ಎಂಬುವವರ ಜಮೀನಿನಲ್ಲಿ ಪುರಾತನ ಕಾಲದ ಅಪರೂಪದ ಕಲಾಕೃತಿ ಕಣ್ಣಿಗೆ ಬಿದ್ದಿದೆ. ಸ್ಥಳೀಯರು ಪುರಾತತ್ವ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಭೂ ಗರ್ಭದಿಂದ ಜೈನಧರ್ಮದ ತೀರ್ಥಂಕರರು ಹಾಗೂ ಸ್ಥಂಭದ ಶಿಲಾ ಕೆತ್ತನೆಯ ಕಲಾಕೃತಿಗಳು ಕಂಡುಬಂದಿರುವುದು ನಿಜಕ್ಕೂ ಅಚ್ಚರಿ ಜೊತೆಗೆ ಈ ನೆಲದಲ್ಲಿ ಮತ್ತಿನ್ನೇನು ಹುದುಗಿರಬಹುದು ಎಂಬ ಕುತೂಹಲ ಹುಟ್ಟಿಸಿದೆ.
40 ವರ್ಷಗಳ ಹಿಂದೆ ಹೇಮಾವತಿ ಜಲಾಶಯ ನಿರ್ಮಾಣವಾದಾಗ ಹಿನ್ನೀರಿನಿಂದ ಮುಳುಗಡೆಯಾದ ಆ ಭಾಗದ ಸುಮಾರು 15 ಗ್ರಾಮಗಳ ಜನರು 1963 ರಿಂದ ಈಚೆಗೆ ಇಲ್ಲಿಗೆ ಬಂದು ವಾಸವಾಗಿದ್ದಾರೆ. ಹಾಗಾಗಿ ಈ ಗ್ರಾಮಕ್ಕೆ ಸಂಬಂಧಿಸಿದ ಐತಿಹಾಸಿಕ ಸಂಗತಿಗಳ ಬಗ್ಗೆ ನಿಖರ ಮಾಹಿತಿ ಯಾರಿಗೂ ತಿಳಿದಿಲ್ಲ. ಹೀಗಾಗಿ, ಇಲ್ಲಿನ ಶಿಲಾವಶೇಷಗಳ ಬಗ್ಗೆ ವಿವರವಾಗಿ ತಿಳಿಯುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯವರು ಗಮನಹರಿಸಿ ಉತ್ಖನನ ಮಾಡಿ ಸಿಗುವ ಜೈನ ಬಸದಿ, ಬಳಪದ ಕಲ್ಲಿನ ವಿಗ್ರಹ, ಮೂರ್ತಿಗಳು, ಕಲ್ಲಿನ ದೀಪ, ಕೆತ್ತನೆಯ ಕಂಬಗಳು, ನಿಷದಿಗಲ್ಲು ಹಾಗೂ ಶಾಸನ ಕಂಬಗಳು ಮೊದಲಾದ ಶಿಲಾವಶೇಷಗಳನ್ನು ಸಂರಕ್ಷಿಸಿಸಲಿ ಎಂಬುದು ಅನೇಕರ ಮನವಿಯಾಗಿದೆ.
ಈ ಊರಿಗೆ ತುಂಬಾ ಹತ್ತಿರದ ಕೊಡಗಿನ ಶನಿವಾರಸಂತೆಯ ಸಮೀಪದ ಮುಳ್ಳೂರು ಗ್ರಾಮ ಜೈನರ ವಾಸ್ತು ಶಿಲ್ಪದ ನೆಲೆಯಾಗಿದೆ. ಇಲ್ಲಿ ಜೈನ ತೀರ್ಥಂಕರರ ಸ್ಮರಣೆಗಾಗಿ ನಿರ್ಮಿಸಿರುವ ತ್ರಿವಳಿ ಜೈನ ಬಸದಿಗಳಿವೆ. ಈ ಬಸದಿಗಳು ಸಾವಿರಾರು ವರ್ಷಗಳ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತಿವೆ.
ಶನಿವಾರಸಂತೆಯಿಂದ ಬಾಣಾವಾರ ರಸ್ತೆಯಲ್ಲಿ ಸಾಗಿ, 6 ಕಿ.ಮೀ ದೂರದಲ್ಲಿರುವ ಮುಳ್ಳೂರು ಬಸ್ ನಿಲ್ದಾಣದಿಂದ ಎಡಗಡೆಗೆ ಸ್ವಲ್ಪ ದೂರ ಕ್ರಮಿಸಿದರೆ ಮಾವಿನ ತೋಪಿನ ನಡುವೆ ತ್ರಿವಳಿ ಜೈನ ಬಸದಿಗಳು ಆಕರ್ಷಣೀಯವಾಗಿವೆ. ತ್ರಿವಳಿ ಪಾರ್ಶ್ವನಾಥ, ಚಂದ್ರನಾಥ ಹಾಗೂ ಶಾಂತಿನಾಥ ಬಸದಿಗಳನ್ನು ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಿಸಲಾಗಿದೆ. ಗರ್ಭಗುಡಿ ಹಾಗೂ 3 ಅಂಕಣಗಳಿಂದ ಕೂಡಿರುವ ಪ್ರತಿ ಬಸದಿಗಳಲ್ಲೂ ಕ್ರಮವಾಗಿ ಪಾರ್ಶ್ವನಾಥ, ಚಂದ್ರನಾಥ ಹಾಗೂ ಶಾಂತಿನಾಥ (ಮಹಾವೀರ) ಮೂರ್ತಿಗಳಿವೆ.
1058ರಲ್ಲಿ ನಿರ್ಮಾಣವಾಗಿರುವ ಚಂದ್ರನಾಥ ಬಸದಿಯು ಗಂಗ-ಚೋಳರ ಶೈಲಿಯದಾಗಿದೆ. ಗರ್ಭಗೃಹದಲ್ಲಿ ಧ್ಯಾನಾಸಕ್ತ ಚಂದ್ರನಾಥ ತೀರ್ಥಂಕರನ ಶಿಲಾ ಮೂರ್ತಿಯಿದೆ. ದ್ವಾರದ ಎರಡೂ ಬದಿಯಲ್ಲಿ ದ್ವಾರಪಾಲಕ ಶಿಲ್ಪಗಳಿವೆ. ಹೊರಭಾಗದ ಗೋಡೆಗಳ ಮೇಲೆ ಅಲಂಕಾರಿಕ ಯಕ್ಷ- ಯಕ್ಷಿಯರ ಶಿಲ್ಪಗಳಿವೆ. ಕ್ರಿ.ಶ 1390ರಲ್ಲಿ ವಿಜಯನಗರ ಸಾಮ್ರಾಜ್ಯದ ಎರಡನೇ ಹರಿಹರನ ದಂಡನಾಯಕನಾಗಿದ್ದ ಗುಂಡಪ್ಪ ಮುಳ್ಳೂರಿನ ತ್ರಿವಳಿ ಬಸದಿಗಳನ್ನು ಜೀರ್ಣೋದ್ದಾರ ಮಾಡಿಸಿದನೆಂಬ ಉಲ್ಲೇಖವಿದೆ. ತ್ರಿವಳಿ ಬಸದಿಯ ಮುಂಭಾಗದ ಆವರಣದಲ್ಲಿ 20 ಶಾಸನಗಳು, ವೀರಗಲ್ಲುಗಳು ಹಾಗೂ ನಿಷಧಿಗಲ್ಲುಗಳನ್ನು ನಿಲ್ಲಿಸಿ ಸಂರಕ್ಷಿಸಲಾಗಿದೆ.
ಮತ್ತೊಂದೆಡೆ ಹನಸೋಗೆ ಶಾಸನದ ಪ್ರಕಾರ, ಗಂಗರು-ಚೋಳರ ಯುದ್ಧದಲ್ಲಿ ಜಯಗಳಿಸಿದ, ಚೋಳರ ಮಾಂಡಲೀಕರಾಗಿದ್ದ ಕೊಂಗಾಳ್ವರು ಮುಳ್ಳೂರನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತ ನಡೆಸಿದ್ದರು ಎಂಬ ಐತಿಹ್ಯ ಇದೆ. ಹೀಗಾಗಿ, ಈ ಭಾಗ ಐತಿಹಾಸಿಕ ಮಹತ್ವ ಹೊಂದಿದ್ದು, ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ಮುತುವರ್ಜಿ ವಹಿಸಿ ಉತ್ಖನನ ನಡೆಸಿದರೆ ಮತ್ತಷ್ಟು ಐತಿಹ್ಯ ಹೊರ ಬರುವ ನಿರೀಕ್ಷೆ ಇದೆ.
ಇದೇ ಗ್ರಾಮದಲ್ಲಿ ಈ ಹಿಂದೆಯೂ ಕೂಡ ಕೆಲ ಕಲಾಕೃತಿ ಸಿಕ್ಕಿದ್ದವು. ಕಳೆದ ವರ್ಷ ಜೈನಬಸದಿ, ಬಳಪದ ಕಲ್ಲಿನ ವಿಗ್ರಹ, ಮೂರ್ತಿಗಳು, ಕಲ್ಲಿನ ದೀಪ, ಕೆತ್ತನೆಯ ಕಂಬಗಳು, ನಿಷಧಿಗಲ್ಲು ಹಾಗೂ ಶಾಸನ ಕಂಬ ದೊರೆತಿದ್ದವು.
ಉಳುಮೆ ವೇಳೆ ನವುರಾದ ಕೆತ್ತನೆಯ ಕಂಬದ ಮಾದರಿ ಸಿಕ್ಕಿತ್ತು. ಗ್ರಾಮದ ನಂದಿ ದೇವಾಲಯದ ಪಕ್ಕದಲ್ಲಿರುವ ಹೊಲದಲ್ಲಿ ಜೆಸಿಬಿಯಿಂದ ನೆಲ ಸಮತಟ್ಟು ಮಾಡುವಾಗ ಬಳಪದ ಕಲ್ಲಿನ ಎರಡು ವಿಗ್ರಹ ಹಾಗೂ ದೇವಾಲಯದ ಕೆತ್ತನೆಯ ಕಲ್ಲು ಕಂಬಗಳು ದೊರೆತಿದ್ದವು. ಇದೇ ಜಾಗದಲ್ಲಿ ಶಿಲಾ ಶಾಸನ ಕಂಬವೂ ಇದೆ. ಹಿಂದೆ ಮಹಾವೀರನ ವಿಗ್ರಹ ಕೂಡ ಸಿಕ್ಕಿದ್ದು ಅದನ್ನು ಗ್ರಾಮದ ಯುವಕರು ದೇವಾಲಯದ ಮುಂಭಾಗ ಇಟ್ಟು ರಕ್ಷಿಸಿದ್ದಾರೆ. ಇದೇ ಮಾದರಿಯ ಮತ್ತಷ್ಟು ಶಿಲಾವಷೇಶ ಅಡಗಿರಬಹುದು ಎಂದು ಗ್ರಾಮಸ್ಥರು ಹೇಳಿದ್ದಾರೆ.