ಅರ್ಜುನನ ಸಮಾಧಿ ಎದುರು ಮುಗಿಲು ಮುಟ್ಟಿದ ಮಾವುತನ ಆಕ್ರಂಧನ; ಹನ್ನೊಂದು ದಿನ ಕಳೆದ್ರು ನಿಲ್ಲುತ್ತಿಲ್ಲ ಕಣ್ಣೀರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 15, 2023 | 8:04 PM

ಹನ್ನೊಂದು ದಿನ ಕಳೆದ್ರು ಕಣ್ಣೀರು ಬತ್ತುತ್ತಿಲ್ಲ, ದಿನಗಳೆ ಉರುಳಿ ಹೋದ್ರು ಮನದಲ್ಲಿನ ನೋವು ಮರೆಯಾಗುತ್ತಿಲ್ಲ, ಕಾಡಾನೆ ಕಾರ್ಯಚಾರಣೆ ವೇಳೆ ಹುತಾತ್ಮನಾದ ಅರ್ಜುನನ ಹನ್ನೊಂದನೇ ದಿನವೂ ಕೂಡ ಕರುನಾಡಿನ ಪ್ರೀತಿಯ ಆನೆ ನೆನೆದು ಜನರು ಕಣ್ಣಿರಿಟ್ಟಿದ್ದಾರೆ. ಅರ್ಜುನನ ತವರು ಬಳ್ಳೆ ಕ್ಯಾಂಪ್​ನಿಂದ ಬಂದಿದ್ದ ಮಾವುತ ವಿನು ಕುಟುಂಬ ಹನ್ನೊಂದನೇ ದಿನದ ಆರಾದನೆ ಕಾರ್ಯ ಮಾಡಿದ್ರೆ, ನೂರಾರು ಜನರಿಗೆ ಅನ್ನ ಸಂತರ್ಪಣೆ ಮಾಡೋ ಮೂಲಕ ಗ್ರಾಮಸ್ಥರು ಕೂಡ ವೀರ ಅರ್ಜುನನಿಗೆ ಶಾಂತಿ ಕೋರಿದರು.

ಅರ್ಜುನನ ಸಮಾಧಿ ಎದುರು ಮುಗಿಲು ಮುಟ್ಟಿದ ಮಾವುತನ ಆಕ್ರಂಧನ; ಹನ್ನೊಂದು ದಿನ ಕಳೆದ್ರು ನಿಲ್ಲುತ್ತಿಲ್ಲ ಕಣ್ಣೀರು
ಅರ್ಜುನ ಆನೆಯ ಸಮಾಧಿ
Follow us on

ಹಾಸನ, ಡಿ.15: ಅರ್ಜುನನ ಆನೆಯ(Elephant) ಸಮಾಧಿ ಎದುರು ಮಾವುತ ವಿನು ಆಕ್ರಂಧನ ಮುಗಿಲು ಮುಟ್ಟಿತ್ತು. ಸಮಾಧಿ ತಬ್ಬಿ ನೆಚ್ಚಿನ ಆನೆಯ ನೆನೆದು ಭಾವುಕರಾದರು. ದಶಕಗಳ ಕಾಲ ಮನೆಯಲ್ಲಿ ಮಗನಂತಿದ್ದ ಹುತಾತ್ಮ ಅರ್ಜುನನ ನೆನೆದು ಮಾವುತನ ಕುಟುಂಬ ಕಣ್ಣೀರಿಟ್ಟಿದ್ದಾರೆ. ವಿಧಿ ವಿಧಾನಗಳ ಮೂಲಕ ಇಂದು(ಡಿ.15) ಹನ್ನೊಂದನೇ ದಿನದ ಕಾರ್ಯ ಮಾಡಿದ ಗ್ರಾಮಸ್ಥರು, ಅರ್ಜುನನ ಮೆಚ್ಚುಗೆಯ ಅಹಾರಗಳನ್ನಿಟ್ಟು ನಮಿಸಿದರು. ಕರುನಾಡಿನ ಕೋಟಿ ಕೋಟಿ ಜನರ ಪ್ರೀತಿಯ ಅರ್ಜುನ ಮರೆಯಾಗಿ ಹನ್ನೊಂದು ದಿನ ಕಳೆದುಹೋಗಿದೆ. ಆದರೂ ಕೂಡ ಮನದಲ್ಲಿನ ನೋವು ಮರೆಯಾಗುತ್ತಿಲ್ಲ.

ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಸಮೀಪದ ದಬ್ಬಳಿಕಟ್ಟೆಯ ಅರಣ್ಯ ಇಲಾಖೆ ನೆಡು ತೋಪಿನಲ್ಲಿ ಮದವೇರಿದ ಸಲಗದ ಜೊತೆಗೆ ಕಾದಾಟದಲ್ಲಿ ವೀರಾವೇಶದಿಂದ ಹೋರಾಡಿದ್ದ 63 ವರ್ಷದ ಅರ್ಜುನ ವೀರಮರಣ ಹೊಂದಿದ್ದ. ಸಾಕಷ್ಟು ವಿರೋಧದ ನಡುವೆಯೂ ಅರ್ಜುನ ಮೃತಪಟ್ಟ ಸ್ಥಳದಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಅಂತ್ಯ ಸಂಸ್ಕಾರವಾಗಿ 11 ದಿನ ಕಳೆದ ಹಿನ್ನೆಲೆಯಲ್ಲಿ ಇಂದು ದೂರದ ಬಳ್ಳೆ ಕ್ಯಾಂಪ್ ನಿಂದ ಕುಟುಂಬ ಸಮೇತವಾಗಿ ಬಂದಿದ್ದ ಮಾವುತ ವಿನು ಕುಟುಂಬ, ಶ್ರದ್ದಾ ಭಕ್ತಿಯಿಂದ ತಮ್ಮ ಪ್ರೀತಿಯ ಆನೆಗೆ ಹಾಲು ತುಪ್ಪ ಬಿಟ್ಟು,  ಎಡೆಯಿಟ್ಟು ಆರಾದನೆ ಮಾಡಿದರು.

ಇದನ್ನೂ ಓದಿ:ಹಾಸನ: ಅರ್ಜುನ ಆನೆ ಸಮಾಧಿ ಮೇಲೆ ಕಾಡಾನೆಗಳ ದಾಂಧಲೆ

ಸಮಾಧಿ ಬಳಿ ಬರುತ್ತಲೆ ಮನೆ ಮಗನಂತಿದ್ದ ಆನೆ ಕಳೆದುಕೊಂಡ ನೋವಲ್ಲಿ ಮಾವುತ ವಿನು ತಂದೆ-ದೊಡ್ಡಪ್ಪಾಜಿ, ತಾಯಿ ಚಿಕ್ಕಮ್ಮಣ್ಣಿ, ಮಕ್ಕಳಾದ ಸಿದ್ದಾರ್ಥ,ಗೌತಮ ಹಾಗು ಪತ್ನಿ ಮತ್ತು ಕುಟುಂಬ ಸದಸ್ಯರ ನೋವಿನ ಕಟ್ಟೆಯೊಡೆದಿತ್ತು, ಆನೆ ನೆನೆದು ಬಿಕ್ಕಿ ಬಿಕ್ಕಿ ಅಳುತ್ತಾ ಸಮಾಧಿ ಬಳಿ ನಿಂತು ರೋದಿಸಿದರು. ನಿತ್ಯವೂ ಕೈ ತುತ್ತು ತಿನ್ನುತ್ತ ತಮ್ಮೊಟ್ಟಿಗೆ ಇರ್ತಿದ್ದ ಅರ್ಜುನ ಇನ್ನು ಇಲ್ಲ, ಮತ್ತೆಂದು ಬರುವುದಿಲ್ಲ ಎನ್ನುವ ನೋವಲ್ಲಿ ಮನದ ದುಖಃ ಹೊರ ಹಾಕಿದರು. ಅರ್ಜುನ ಎದ್ದೇಳೋ ಎಂದು ತೊಳಲಾಡುತ್ತಿದ್ದ ಮಾವುತ ವಿನುವನ್ನ ಸಂತೈಸಲು ಎಲ್ಲರೂ ಪ್ರಾಯಾಸ ಪಟ್ಟರು. ಅರ್ಜುನನಿಗೆ ಪ್ರಿಯವಾದ ಅನ್ನದ ಮುದ್ದೆ, ಹುಲ್ಲು, ಭತ್ತ, ಕಬ್ಬು,ಬೆಲ್ಲದ ಜೊತೆಗೆ ತಿಂಡಿ ತಿನಿಸುಗಳನ್ನ ಎಡೆಯಿಟ್ಟು ಹಾಲು ತುಪ್ಪ ಬಿಟ್ಟು ಪೂಜೆ ಸಲ್ಲಿಸಿದ ಮಾವುತನ ಕುಟುಂಬ, ತಾನು ಮಡಿದು ಹಲವರ ಪ್ರಾಣ ಉಳಿಸಿದ ಅರ್ಜುನನ ನಮ್ಮನ್ನೆಲ್ಲಾ ಕಾಪಾಡಲಿ ಎಂದು ಬೇಡಿಕೊಂಡರು.

ಇನ್ನು ಜೊತೆಗೆ ಸುತ್ತಮುತ್ತಲ ಯಸಳೂರು, ಮತ್ತೂರು, ಬಾಳೆಕೆರೆ ಸೇರಿ ಹಲವು ಗ್ರಾಮಗಳ ನೂರಾರು ಜನರು ಬೆಳಿಗ್ಗೆಯೇ ಸಮಾಧಿ ಬಳಿ ಆಗಮಿಸಿ ಪೂಜೆ ಸಲ್ಲಿಸಿದರು. ಕಬ್ಬು ಬೆಲ್ಲ ನೈವೇದ್ಯ ಇಟ್ಟು, ತಮ್ಮ ನೆಚ್ಚಿನ ಭೀಮನಿಗೆ ಚಿರ ಶಾಂತಿ ಕೋರಿದರು. ಇಂದು ಬೆಳಿಗ್ಗೆಯಿಂದಲೂ ಸಮಾಧಿ ಸ್ಥಳಕ್ಕೆ ಬಂದು ಪೂಜೆ ಸಲ್ಲಿಸಿದ ಎಲ್ಲರಿಗೂ ಅನ್ನ ಸಂತರ್ಪಣೆ ಮಾಡಿದ ಸ್ಥಳೀಯರು ಅರ್ಜನು ಕೇವಲ ಒಂದು ಆನೆಯನ್ನ ಕರುನಾಡಿನ ಕೋಟಿ ಕೋಟಿ ಜನರ ಆರಾದ್ಯ ದೈವ, ತಾಯಿ ಚಾಮುಂಡೇಶ್ವರಿಯನ್ನ ಹೊತ್ತು ಮೆರೆಸಿದ ಶಕ್ತಿ, ಹಾಗಾಗಿಯೇ ಈ ಸ್ಥಳದಲ್ಲಿಯೇ ಬೇಗನೆ ಸ್ಮಾರಕ ಮಾಡಬೇಕು. ಸ್ಮಾರಕ ಮಾಡಿ ಇದರ ದರ್ಶನಕ್ಕೆ ಬರೋ ಜನರಿಗೆ ಸುರಕ್ಷತೆ ಒದಗಿಸಬೇಕು ಎಂದು ಮನವಿ ಮಾಡಿದರು.

ಒಟ್ಟಿನಲ್ಲಿ ಅರ್ಜುನನ ಕಳೆದುಕೊಂಡು ಅನಾಥವಾಗಿರುವ ಕರುನಾಡಿನ ಜನರ ದುಖಃ ಇನ್ನೂ ಮರೆಯಾಗಿಲ್ಲ,. ದಿನ ಕಳೆದಂತೆ ಮನದಲ್ಲಿನ ನೋವು, ಪ್ರೀತಿ ಮರೆಯಲಾಗದೆ ತೊಳಲಾಡುತ್ತಿರುವ ಜನರು, 8 ಬಾರಿ ಅಂಬಾರಿ ಹೊತ್ತು ನೂರಾರು ಪುಂಡಾನೆ ಹತ್ತಾರು ಹಂತಕ ಹುಲಿ ಚಿರತೆಗಳನ್ನ ಸೆರೆಹಿಡಿದು ವೀರನೆನಿಸಿದ್ದ ಅರ್ಜನುನ ಶೌರ್ಯವನ್ನ ಎಲ್ಲರಿಗೂ ತಿಳಿಸೋ ಸ್ಮಾರಕ ಬೇಗನೆ ಮಾಡಲಿ ಎನ್ನುವುದು ಜನರ ಒತ್ತಾಯವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ