ಹಾಸನ: ಅರ್ಜುನ ಆನೆ ಸಮಾಧಿ ಮೇಲೆ ಕಾಡಾನೆಗಳ ದಾಂಧಲೆ
ಡಿಸೆಂಬರ್ 4ರಂದು ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ಅರಣ್ಯ ಪ್ರದೇಶದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮಾಜಿ ಕ್ಯಾಪ್ಟನ್ ಅರ್ಜುನ ಆನೆ ಮೃತಪಟ್ಟಿದ್ದನು. ಇಲ್ಲಿಯೇ ಅರ್ಜುನನ್ನು ಸಮಾಧಿ ಮಾಡಲಾಗಿದೆ. ಈ ಸಮಾಧಿ ಬಳಿ ಕಾಡಾನೆಗಳು ದಾಂಧಲೆ ಮಾಡಿವೆ.
ಹಾಸನ, ಡಿಸೆಂಬರ್ 15: ಮಾಜಿ ಕ್ಯಾಪ್ಟನ್ ಅರ್ಜುನ ಆನೆ (Dasara Elephant Arjuna) ಸಮಾಧಿ ಬಳಿ ಕಾಡಾನೆಗಳು ದಾಂಧಲೆ ಮಾಡಿವೆ. ಸಮಾಧಿ ಸುತ್ತ ಹಾಕಿದ್ದ ತಂತಿಬೇಲಿಯನ್ನು ನಾಶ ಮಾಡಿ ಕಾಡಾನೆಗಳು ಸಮಾಧಿ ಮೇಲೆಲ್ಲಾ ಓಡಾಡಿವೆ. ಡಿಸೆಂಬರ್ 4ರಂದು ಸಕಲೇಶಪುರ (Sakaleshpura) ತಾಲೂಕಿನ ದಬ್ಬಳ್ಳಿಕಟ್ಟೆ ಅರಣ್ಯ ಪ್ರದೇಶದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮಾಜಿ ಕ್ಯಾಪ್ಟನ್ ಅರ್ಜುನ ಆನೆ ಮೃತಪಟ್ಟಿದ್ದನು. ಇಲ್ಲಿಯೇ ಅರ್ಜುನನ್ನು ಸಮಾಧಿ ಮಾಡಲಾಗಿದೆ. ತಾತ್ಕಾಲಿಕವಾಗಿ ಅರ್ಜುನನ ಸಮಾಧಿ ಸುತ್ತ ತಂತಿಬೇಲಿ ಹಾಕಲಾಗಿತ್ತು. ನಿನ್ನೆ (ಡಿ.14) ರಾತ್ರಿ ಕಾಡಾನೆಗಳ ಹಿಂಡು ತಂತಿ ಬೇಲಿಯನ್ನೇ ನೆಲಸಮಗೊಳಿಸಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
11ನೇ ದಿನದ ಪೂಜೆ
ಅರ್ಜುನ ಆನೆ ಮೃತಪಟ್ಟು 11 ದಿನಗಳು ಕಳೆದವು. ಇಂದು (ಡಿ.15) ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಯಸಳೂರು ಸುತ್ತಮುತ್ತಲ ಗ್ರಾಮಸ್ಥರು ಪೂಜೆ ನೆರವೇರಿಸಿದರು. ಜನ ಅರ್ಜುನನ ಭಾವಚಿತ್ರವಿಟ್ಟು ಪೂಜೆ ಮಾಡಿದರು. ಈ ವೇಳೆ ಅರ್ಜುನನ್ನು ನೆನೆದು ಭಾವುಕರಾದರು.
ಇದನ್ನೂ ಓದಿ: ಅರ್ಜುನ ಆನೆ ಸಾವು, ಕೊನೆ ಕ್ಷಣದಲ್ಲಿ ಆಗಿದ್ದೇನು?;ಕಾರ್ಯಾಚರಣೆಯ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ
ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ
ಅರ್ಜುನ ಸಾವಿನ ಬಗ್ಗೆ ಅನೇಕರು ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅರಣ್ಯ ಇಲಾಖೆಯ ನಿವೃತ್ತ ವನ್ಯಜೀವಿ ಪಾಲಕರ ನೇತೃತ್ವದಲ್ಲಿ ತನಿಖಾ ಸಮಿತಿ ನೇಮಕ ಮಾಡಿದ್ದೇವೆ. ಅವರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, 15 ದಿನದ ಒಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆ. ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಹೇಳಿದ್ದರು. ಅರ್ಜುನ ಸಮಾಧಿ ಸ್ಥಳ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಲ್ಲಿರುವ ಬಳ್ಳೆ ಆನೆ ಶಿಬಿರದಲ್ಲಿ ಸ್ಮಾರಕ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:32 am, Fri, 15 December 23