ಅರ್ಜುನ ಆನೆ ಸಾವು, ಕೊನೆ ಕ್ಷಣದಲ್ಲಿ ಆಗಿದ್ದೇನು?;ಕಾರ್ಯಾಚರಣೆಯ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ
ಅರ್ಜುನ ಆನೆಯ ಸಾವಿನ ಸುತ್ತ ಹಲವಾರು ಅನುಮಾನಗಳ ಹುತ್ತ ಬೆಳೆದಿದೆ. ಒಬ್ಬೊಬ್ಬರು ಒಂದೊಂದು ರೀತಿಯಾಗಿ ಮಾತನಾಡುತ್ತಿದ್ದಾರೆ. ಇದರಿಂದ ಸಾಕಷ್ಟು ಗೊಂದಲಗಳು ಉಂಟಾಗಿದೆ. ಆದರೆ, ಅಂದು ಅಸಲಿಗೆ ಅಲ್ಲಿ ನಡೆದಿದ್ದೇನು? ಕಾರ್ಯಾಚರಣೆ ಹೇಗಿತ್ತು?, ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಮೈಸೂರು, ಡಿ.10: ಅರ್ಜುನ ಆನೆ(Arjuna elephant)ಯ ಸಾವಿನ ಸುತ್ತ ಹಲವಾರು ಅನುಮಾನಗಳ ಹುತ್ತ ಬೆಳೆದಿದೆ. ಒಬ್ಬೊಬ್ಬರು ಒಂದೊಂದು ರೀತಿಯಾಗಿ ಮಾತನಾಡುತ್ತಿದ್ದಾರೆ. ಇದರಿಂದ ಸಾಕಷ್ಟು ಗೊಂದಲಗಳು ಉಂಟಾಗಿದೆ. ಆದರೆ, ಅಂದು ಅಸಲಿಗೆ ಅಲ್ಲಿ ನಡೆದಿದ್ದೇನು? ಕಾರ್ಯಾಚರಣೆ ಹೇಗಿತ್ತು?, ಅರ್ಜುನನ ಸಾವಿಗೆ ನಿಜವಾದ ಕಾರಣವೇನು? ಕಾರ್ಯಾಚರಣೆಯಲ್ಲಿ ಯಾರ್ಯಾರು ಇದ್ದರು. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಕಾಡಾನೆ ಕಾರ್ಯಾಚರಣೆ
ಕಾಡಾನೆಗಳ ಕಾರ್ಯಾಚರಣೆ ಆರಂಭವಾಗಿದ್ದು ನವೆಂಬರ್ 23 ರಂದು. ಒಟ್ಟು ಎರಡು ತಂಡಗಳಾಗಿ ಕಾಡಾನೆಗಳ ಕಾರ್ಯಾಚರಣೆ ನಡೆಸಲಾಗುತಿತ್ತು. ಒಂದು ತಂಡ ಮೂಡಿಗೆರೆ ಬಳಿ ಕಾರ್ಯಾಚರಣೆ ನಡೆಸುತಿತ್ತು. ಮತ್ತೊಂದು ತಂಡ ಸಕಲೇಶಪುರದ ಬಳಿ ಕಾರ್ಯಾಚರಣೆ ನಡೆಸುತ್ತಿತ್ತು. ಸಕಲೇಶಪುರೆ ಬಳಿಯ ಕಾರ್ಯಾಚರಣೆಯ ತಂಡದಲ್ಲಿದ್ದದ್ದು ಅರ್ಜುನ, ಕರ್ನಾಟಕದ ಭೀಮ, ಧನಂಜಯ ಮತ್ತು ಪ್ರಶಾಂತ್ ಸೇರಿ ಒಟ್ಟು 6 ಆನೆಗಳು. ತಂಡದಲ್ಲಿ ಡಾ. ರಮೇಶ್, ರಂಜನ್ ಹಾಗೂ ಮಾವುತ ಕಾವಾಡಿಗಳಿದ್ದರು.
ಇದನ್ನೂ ಓದಿ:ಅರ್ಜುನ ಆನೆ ಸಾವು: ಅರಣ್ಯ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ – ಈಶ್ವರ ಖಂಡ್ರೆ
9 ಆನೆಗಳ ಟಾರ್ಗೆಟ್ – 6 ಆನೆಗಳ ಕಾರ್ಯಾಚರಣೆ ಮುಗಿಸಿದ್ದ ತಂಡ
ಅರ್ಜುನ ಆನೆ ಇದ್ದ ತಂಡಕ್ಕೆ 9 ಆನೆಗಳ ಕಾರ್ಯಾಚರಣೆ ಟಾಸ್ಕ್ ನೀಡಲಾಗಿತ್ತು. ಸಾಮಾನ್ಯವಾಗಿ ಕಾಡಿನಲ್ಲಿರುವ ಎಲ್ಲಾ ಆನೆಗಳಿಗೂ ರೇಡಿಯೋ ಕಾಲರ್‌ಗಳನ್ನು ಹಾಕುವಂತಿಲ್ಲ. ಮೊದಲು ಕಾರ್ಯಾಚರಣೆ ಮಾಡಬೇಕಾದ ಆನೆಗಳನ್ನು ಗುರುತಿಸಲಾಗುತ್ತದೆ. ಅವುಗಳ ಪೋಟೋಗಳನ್ನು ಕ್ಲಿಕ್ಕಿಸಿಕೊಂಡು ಅವುಗಳ ಚಲನ ವಲನಗಳ ಬಗ್ಗೆ ನಿಗಾ ಇಡಲಾಗುತ್ತದೆ. ಎಲ್ಲಾ ಆದ ಮೇಲೆ ಕಾರ್ಯಾಚರಣೆ ನಡೆಸಲಾಗುತ್ತದೆ. ಇದೇ ರೀತಿಯಲ್ಲಿ ಈ ತಂಡ ಒಟ್ಟು 6 ಆನೆಗಳನ್ನು ಹಿಡಿದು. ಅವುಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಅಲ್ಲಿಂದ ಸ್ಥಳಾಂತರ ಮಾಡಿತ್ತು. ಅದರಲ್ಲಿ ಮೂರು ಹೆಣ್ಣು ಆನೆ. ಎರಡು ಗಂಡಾನೆ ಹಾಗೂ ಒಂದು ಮಕ್ನಾ ಆನೆ ಸಹಾ ಸೇರಿದ್ದವು. ಈ ಎಲ್ಲವೂ ಸುಸೂತ್ರವಾಗಿ ನಡೆದಿದ್ದು, ಸಹಜವಾಗಿ ತಂಡಕ್ಕೆ ಖುಷಿ ಕೊಟ್ಟಿತ್ತು.
7ನೇ ಟಾರ್ಗೆಟ್ – ಕಾಡಾನೆ ವಿಕ್ರಾಂತ್
6 ಆನೆ ಕಾರ್ಯಾಚರಣೆ ಮುಗಿಸಿದ್ದ ತಂಡ, ತಮ್ಮ 7ನೇ ಟಾರ್ಗೆಟ್ ಆಗಿದ್ದ ಆನೆಯ ಹುಡುಕಾಟದಲ್ಲಿ ಕಾಡಿನ ಕಡೆ ಹೊರಟಿತ್ತು. ಸಾಮಾನ್ಯವಾಗಿ ಕಾರ್ಯಾಚರಣೆ ಮಾಡುವ ಕಾಡಾನೆಗಳಿಗೆ ಅರಣ್ಯ ಇಲಾಖೆಯವರು ಗುರುತಿಗಾಗಿ ತಾತ್ಕಾಲಿಕ ಹೆಸರು ನೀಡುತ್ತಾರೆ. ಅದರಂತೆ 7ನೇ ಆನೆಗೆ ನೀಡಿದ ಹೆಸರು ವಿಕ್ರಾಂತ್. ಸಾಮಾನ್ಯವಾಗಿ ಟಾರ್ಗೆಟ್ ಕಾರ್ಯಾಚರಣೆಗೂ ಮುನ್ನ ಒಂದಷ್ಟು ಹೋಮ್ ವರ್ಕ್ ಮಾಡಿಕೊಳ್ಳಲಾಗುತ್ತದೆ. ಅದರಂತೆ ಕಾರ್ಯಾಚರಣೆಗೂ ಮುನ್ನ ಒಬ್ಬ ಸಿಬ್ಬಂದಿ ಹೋಗಿ ಅರಣ್ಯದಲ್ಲಿ ನೋಡಿಕೊಂಡು ಬರುತ್ತಾನೆ. ಅದರಂತೆ ಅಂದು ಸಹ ಒಬ್ಬ ಹೋಗಿ ನೋಡಿ ಬಂದಿದ್ದ. ಆದರೆ, ಆತನಿಗೆ ಟಾರ್ಗೆಟ್ ಇರುವ ಆನೆ ಕಾಣ ಸಿಗುವುದಿಲ್ಲ. ಅದರ ಬದಲು ಬೇರೊಂದು ಆನೆ ಕಾಣಿಸುತ್ತದೆ. ಅದು ಸಹ ಗಾತ್ರದಲ್ಲಿ ದೊಡ್ಡದಾಗಿರುತ್ತದೆ.
ಇದನ್ನೂ ಓದಿ:ಅರ್ಜುನನಿಗೆ ಗುಂಡೇಟು ಬಿದ್ದಿಲ್ಲ: ಹಾಗಾದ್ರೆ ಅಂಬಾರಿ ಆನೆ ಮೃತಪಟ್ಟಿದ್ದು ಹೇಗೆ? ಸಾವಿನ ರಹಸ್ಯ ಬಿಚ್ಚಿಟ್ಟ ವೈದ್ಯ
ಅದನ್ನು ಆತ ಹೇಳಿದ ತಕ್ಷಣ ತಂಡದಲ್ಲಿದ್ದ ವೈದ್ಯ ರಮೇಶ್ ಅರೆವಳಿಕೆಯ ಎರಡು ಡೋಸ್ ಸಿದ್ದಪಡಿಸುತ್ತಾರೆ. ಒಂದು ತಮ್ಮ ಟಾರ್ಗೆಟ್ ಆಗಿರುವ ವಿಕ್ರಾಂತ್ ಆನೆಗೆ, ಅದು ಹೆಚ್ಚು ಡೋಸ್ ಹೊಂದಿರುತ್ತದೆ. ಎರಡನೆಯದು ಸ್ಬಲ್ಪ ಕಡಿಮೆ ಡೋಸ್, ಹೊಸ ಆನೆ ಅಂದರೆ ಕರ್ನಾಟಕ ಭೀಮನ ರೀತಿ ಇರುವ ಆನೆಗೆ ಎಂದು ಸಿದ್ದಪಡಿಸುತ್ತಾರೆ. ಅದರಲ್ಲಿ ವೈದ್ಯ ರಮೇಶ್ ಅರ್ಜುನನ ಮೇಲೆ ಹೆಚ್ಚು ಡೋಸ್ ಇರುವ ಗನ್ ಹಿಡಿದು ಕೂರುತ್ತಾರೆ. ರಂಜನ್ ಪ್ರಶಾಂತ್ ಆನೆ ಮೇಲೆ ಕಡಿಮೆ ಡೋಸ್ ಇರುವ ಗನ್ ಹಿಡಿದು ಕೂರುತ್ತಾರೆ. ಉಳಿದ ಆನೆಗಳ ಮೇಲೆ ಇತರ ವಸ್ತುಗಳನ್ನು ಇಟ್ಟು ಕಾರ್ಯಾಚರಣೆಗೆ ಹೊರಡಲಾಗುತ್ತದೆ. ಮಧ್ಯಾಹ್ನ 1.30ಗೆ ಕಾಡಿನ ಒಳಗೆ ಹೋಗಲಾಗುತ್ತದೆ. ಅರ್ಜುನ ಆನೆಯ ಮೇಲೆ ಮಾವುತ ವಿನು, ಡಾ ರಮೇಶ್, ಕರ್ನಾಟಕ ಭೀಮದ ಮಾವುತ ಗುಂಡ ಹಾಗೂ ಮತ್ತೊಬ್ಬ ಅನಿಲ್ ಇರುತ್ತಾರೆ.
ಇನ್ನು ಪ್ರಶಾಂತ್ ಆನೆಯ ಮೇಲೆ ರಂಜನ್ ಹಾಗೂ ಇತರ ಮಾವುತ ಕಾವಾಡಿಗಳು ಇರುತ್ತಾರೆ. ಕಾಡಿನ ಒಳಗೆ ಹೋದ ತಕ್ಷಣ ತಂಡಕ್ಕೆ 7 ರಿಂದ 8 ಆನೆ ಕಾಣುತ್ತದೆ. ಅದರಲ್ಲಿ ಹೆಣ್ಣಾನೆಗಳು, ಮರಿಗಳು ಮತ್ತು ಒಂದು ಗಂಡಾನೆ ಇರುತ್ತದೆ. ಆದರೆ ಟಾರ್ಗೆಟ್ ನೀಡಿದ್ದ ಆನೆ ಅಲ್ಲಿ ಕಾಣುವುದಿಲ್ಲ. ಹೀಗಾಗಿ ತಂಡ ಈ ಆನೆ ಗುಂಪನ್ನು ಬಿಟ್ಟು ತಮ್ಮ ಟಾರ್ಗೆಟ್ ಆನೆಯನ್ನು ಹುಡುಕಿಕೊಂಡು ಹೊರಡುತ್ತಾರೆ. ಸ್ವಲ್ಪ ದೂರ ಹೋದಾಗ ದಟ್ಟ ನೀಲಗಿರಿ ಮರಗಳಿರುವ ಅರಣ್ಯದಲ್ಲಿ ಒಂದು ಒಂಟಿ ಆನೆ ನಿಂತಿರುತ್ತದೆ. ಆದರೆ, ಅದು ಟಾರ್ಗೆಟ್ ಆಗಿದ್ದ ವಿಕ್ರಾಂತ್ ಆನೆಯಾ ? ಅಥವಾ ಮಾಹಿತಿದಾರ ಹೋಗಿ ನೋಡಿಬಂದ ಕರ್ನಾಟಕ ಭೀಮ ಆನೆಯ ಎಂದು ಗೊತ್ತಾಗುವುದಿಲ್ಲ. ಆದರೂ ಅದನ್ನು ಕವರ್ ಮಾಡಲಾಗುತ್ತದೆ. ಆ ಆನೆಯನ್ನು ಅರ್ಜುನ, ಪ್ರಶಾಂತ್, ಸುಗ್ರೀವ ಧನಂಜಯ ಅಶ್ವತ್ಥಾಮ ಸೇರಿ ಎಲ್ಲಾ ಆನೆಗಳು ಕವರ್ ಮಾಡುತ್ತವೆ.
ಅರ್ಜುನ ಕಾಡಾನೆ ಕಾಳಗದ ನಡುವೆ ಫೈರ್ ಆದ ಅರೆವಳಿಕೆ – ಪ್ರಶಾಂತ್ ಆನೆಗೆ ತಗುಲಿ ಅವಘಡ
ಈ ವೇಳೆ ಯಾವಾಗ ಅರ್ಜುನ ಆನೆಗೆ, ಕಾಡಾನೆ ಅಟ್ಯಾಕ್ ಮಾಡಿತೋ ಮೇಲಿದ್ದ ಮಾವುತ ವಿನು ಅವರ ಹಿಂದೆ ಇದ್ದ ಡಾ ರಮೇಶ್, ಮಾವುತ ಮತ್ತೊಬ್ಬ ಹುಡುಗ ಆಯತಪ್ಪುತ್ತಾರೆ. ಕೈನಲ್ಲಿ ಹಗ್ಗ ಹಿಡಿದು ಜೋತಾಡ ತೊಡಗಿದರು. ಈ ವೇಳೆ ವೈದ್ಯ ರಮೇಶ್ ಒಂದು ಕೈನಲ್ಲಿ ಹಗ್ಗ ಮತ್ತೊಂದು ಕೈನಲ್ಲಿ ಅರವಳಿಕೆ ಮದ್ದಿನ ಬಂದೂಕು ಹಿಡಿದು ನೇತಾಡುತ್ತಿದ್ದರು. ಕಾರ್ಯಾಚರಣೆಯಲ್ಲಿದ್ದ ಇತರ ಆನೆಯವರ ಪ್ರಕಾರ ಈ ವೇಳೆ ಡಾ ರಮೇಶ್ ಕೈನಲ್ಲಿದ್ದ ಅರೆವಳಿಕೆಯ ಡೋಸ್ ಫೈರ್ ಆಗುತ್ತದೆ. ಅದು ಹೋಗಿ ಪ್ರಶಾಂತ್‌ಗೆ ಕಾಲಿಗೆ ಚುಚ್ಚಿದೆ. ಈ ವಿಚಾರ ಆಗ ಡಾ ರಮೇಶ್‌ಗೆ ಗೊತ್ತಿರುವುದಿಲ್ಲ. ಈ ವೇಳೆ ಐದು ನಿಮಿಷ ಅರ್ಜುನ ಹಾಗೂ ಕಾಡಾನೆ ನಡುವೆ ಭೀಕರ ಕಾಳಗ ನಡೆಯುತ್ತದೆ.
ಇದನ್ನೂ ಓದಿ:Viral Video: ಅರ್ಜುನನಿಗೆ ನೋವು ಮಾಡಿ ಬಲಿ ಪಡೆ ಆನೆ ಇದುವೇ ನೋಡಿ
ಈ ವೇಳೆ ಅಲ್ಲಿದ್ದವರು ಕಾಡಾನೆಯನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುತ್ತಾರೆ. ಜೋರು ಶಬ್ದ ಮಾಡಲಾಗುತ್ತದೆ. ಅರ್ಜುನ ಆನೆಯ ಫೈಟ್ ಹಾಗೂ ಸಿಬ್ಬಂದಿ ಪ್ರಯತ್ನದಿಂದ ಕಾಡಾನೆ ಕಾಳಗ ನಿಲ್ಲಿಸಿ ವಾಪಸ್ಸು ಕಾಡಿಗೆ ಓಡಿ ಹೋಗುತ್ತದೆ. ಆಗ ಆನೆಯಿಂದ ಕೆಳಗೆ ಬಿದ್ದಿದ್ದ ಡಾ ರಮೇಶ್ ಮತ್ತೆ ತಮ್ಮ ಬಳಿಯಿದ್ದ ಮತ್ತೊಂದು ಡೋಸ್ ಲೋಡ್ ಮಾಡುತ್ತಾರೆ. ಪ್ರಶಾಂತ್ ಆನೆಗೆ ಆಕಸ್ಮಿಕವಾಗಿ ಅರೆವಳಿಕೆ ಬಿದ್ದಿರುವ ಬಗ್ಗೆ ಅವರಿಗೆ ತಿಳಿಯುತ್ತದೆ. ಡಾ ರಮೇಶ್ ಅಲ್ಲಿಗೆ ಹೋಗಿ ಪ್ರಶಾಂತ್‌ಗೆ ಆ್ಯಂಟಿ ಡೋಸ್ ನೀಡಿ ಪ್ರಶಾಂತ್ ಆನೆಯನ್ನು ಸರಿ ಮಾಡುತ್ತಾರೆ. ಪ್ರಶಾಂತ್ ಆನೆಯನ್ನು ಪಕ್ಕಕ್ಕೆ ಕಳುಹಿಸಿ ಮತ್ತೆ ಅರ್ಜುನ ಆನೆ ಬಳಿಗೆ ಬರುತ್ತಾರೆ.
ಅರ್ಜುನ ಒಬ್ಬನೇ ಇದ್ದಾಗ ಮತ್ತೆ ಕಾಡಾನೆ ದಾಳಿ
ಯಾವಾಗ ಕಾಡಾನೆ ವಾಪಸ್ಸು ಹೋಯಿತೋ ಆಗ ಎಲ್ಲರೂ ಸ್ವಲ್ಪ ರಿಲ್ಯಾಕ್ಸ್ ಆಗಿದ್ದಾರೆ. ವೈದ್ಯ ರಮೇಶ್ ಪ್ರಶಾಂತ್ ಬಳಿ ಹೋಗಿದ್ದಾರೆ. ಇತ್ತ ಮಾವುತ ವಿನು ಸಹಾ ಅರ್ಜುನನಿಂದ ದೂರ ಸರಿಯುತ್ತಾನೆ. ಅರ್ಜುನನ ಬಳಿ ಇದ್ದಿದ್ದು, ಅನಿಲ್ ಎಂಬ ಹುಡುಗ ಮಾತ್ರ. ಈ ವೇಳೆ ಕಾಡಾನೆ ಮತ್ತೆ ಅರ್ಜುನನ ಮೇಲೆ ದಾಳಿ ಮಾಡಿದೆ. ತಂಡದ ಬಳಿ ಆಗ ಎರಡು ರೀತಿಯ ಡೋಸ್ ಇತ್ತು. ಒಂದು ಸಂಪೂರ್ಣವಾಗಿ ಕಾಡಾನೆಯನ್ನು ನೆಲಕ್ಕೆ ಉರುಳಿಸುವುದು. ಇನ್ನೊಂದು ಮತ್ತು ಬರಿಸುವುದು. ಆದ್ರೆ, ವೈದ್ಯ ರಮೇಶ್ ಮತ್ತು ಬರಿಸುವ ಡೋಸ್ ಮಾತ್ರ ನೀಡಿದ್ದರಂತೆ.
ಕಾರಣ ಒಂದು ವೇಳೆ ಕಾಡಾನೆಯನ್ನು ನೆಲಕ್ಕುರುಳಿಸಿದ್ದರೆ ಅರ್ಜುನ ಆನೆ ಕಾಡಾನೆಯನ್ನು ಸಾಯಿಸುವ ಸಾಧ್ಯತೆ ಹೆಚ್ಚಾಗಿತ್ತಂತೆ. ಆಗ ಕಾಡಾನೆಯನ್ನು ಸಾಯಿಸಿದ ಆರೋಪ ಎದುರಾಗುತ್ತಿತ್ತು. ಆ ಕಾರಣಕ್ಕೆ ಮತ್ತು ಬರಿಸುವ ಡೋಸ್ ನೀಡಲಾಯಿತು ಎಂದು ವೈದ್ಯರ ಜೊತೆಯಿದ್ದಾತನ ಹೇಳಿದ್ದಾರೆ. ಅದು ಕಾಡಾನೆಗೆ ತಗುಲುತ್ತದೆ. ಆದರೂ ಅದಕ್ಕೆ ಮತ್ತು ಏರುವ ಮುನ್ನ ಕಾಡಾನೆ, ಅರ್ಜುನ ಆನೆಯನ್ನು ಸೋಲಿಸಿ ಅದನ್ನು ಕೊಂದು ಹಾಕಿ ಬಿಡುತ್ತದೆ. ತಂಡ ಅಸಹಾಯಕರಾಗಿ ನೋಡುತ್ತಾ ನಿಲ್ಲುವುದನ್ನು ಬಿಟ್ಟರೆ ಏನು ಮಾಡಲು ಸಾಧ್ಯವಾಗಲಿಲ್ಲವಂತೆ.
ಇದನ್ನೂ ಓದಿ:ಅನುಮಾನ ಉಳಿಸಿಯೇ ಆನೆ ಅಂತ್ಯಕ್ರಿಯೆ: ಮಣ್ಣಲ್ಲಿ ಮಣ್ಣಾಯ್ತಾ ಅರ್ಜುನನ ಸಾವಿನ ರಹಸ್ಯ…!
ಅರ್ಜುನ ಸಾವಿನ ನಂತರ
ಅರ್ಜುನ ಸಾವಿನ ನಂತರ ಎಲ್ಲರೂ ಸ್ವಲ್ಪ ಹೊತ್ತು ಅದರ ಮುಂದೆ ಅಳುತ್ತಾರೆ, ಗೋಳಾಡುತ್ತಾರೆ. ಇದಾದ ನಂತರ ಆ ಜಾಗಕ್ಕೆ ಮತ್ತೊಂದು ಬೇರೆ ಕಾಡಾನೆ ಬರುತ್ತದೆ. ಆ ಕಾಡಾನೆ ಬಂದ ತಕ್ಷಣ ಎಲ್ಲರೂ ಅಲ್ಲಿಂದ ದೂರ ಸರಿಯುತ್ತಾರೆ. ಅಷ್ಟರಲ್ಲಿ ಕತ್ತಲಾಗುತ್ತದೆ. ಎಲ್ಲರೂ ಕಾಡಿನಿಂದ ಆಚೆ ಬರುತ್ತಾರೆ. ಹಿರಿಯ ಅಧಿಕಾರಿಗಳಿಗೆ ವಿಚಾರ ತಿಳಿಸುತ್ತಾರೆ. ಮತ್ತೆ ಬೆಳಗ್ಗೆ ಹೆಚ್ಚಿನ ಸಿಬ್ಬಂದಿ ಜೊತೆ ಘಟನಾ ಸ್ಥಳಕ್ಕೆ ತೆರಳುತ್ತಾರೆ.
ಗುಂಡು ಇರಲಿಲ್ಲ
ಕಾರ್ಯಾಚರಣೆಯಲ್ಲಿದ್ದವರ ಪ್ರಕಾರ ಯಾರ ಬಳಿಯೂ ಬಂದೂಕಿನ ಗುಂಡು ಇರಲಿಲ್ಲ. ಇದ್ದದ್ದು ಅರವಳಿಕೆ ಹಾಗೂ ಚೆರ್ರೆಗಳು ಮಾತ್ರ. ಹೀಗಾಗಿ ಅವರ ಪ್ರಕಾರ ಅರ್ಜುನ ಆನೆಗೆ ಗುಂಡು ತಗುಲಿತು ಅನ್ನೋದು ಕೇವಲ ವದಂತಿ. ಅರವಳಿಕೆ ಮದ್ದು ಸಹಾ ಮಿಸ್ ಆಗಿ ಪ್ರಶಾಂತ್ ಆನೆಗೆ ಬಿದ್ದಿತ್ತು. ಹೀಗಾಗಿ ಅರ್ಜುನನಿಗೆ ಅರೆವಳಿಕೆ ಚುಚ್ಚುಮದ್ದು ಹೊಕ್ಕಿರುವ ಸಾಧ್ಯತೆ ಸಹ ಕಡಿಮೆ. ಆದರೆ, ಕಾಡಾನೆಗೆ ಸಿಡಿಸಿದ ಚೆರ್ರೆ ತಗುಲಿದ್ದರು ತಗುಲಿರಬಹುದು. ಅದು ಅಷ್ಟೋಂದು ಅರ್ಜುನನಿಗೆ ಗಾಯ, ಘಾಸಿ ಮಾಡಿರಲಿಕ್ಕಿಲ್ಲ ಅನ್ನೋದು ಕಾರ್ಯಾಚರಣೆಯಲ್ಲಿದ್ದವರ ಅಭಿಪ್ರಾಯ.
ಕೊನೆಯದಾಗಿ
ಮದವಿದ್ದ ಆನೆ ಕಾರ್ಯಾಚರಣೆಗೆ ವಯಸ್ಸಾದ ಆನೆ ಬಳಸಿದ್ದರ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಈ ಬಗ್ಗೆ ನಿವೃತ್ತ ಹಿರಿಯ ಅರಣ್ಯಾಧಿಕಾರಿಗಳು ಹಾಗೂ ಆನೆಯ ಬಗ್ಗೆ ವಿಶೇಷ ಅಧ್ಯಯನ ಮಾಡಿರುವವರು ಹೇಳುವ ಪ್ರಕಾರ. ‘60 ವರ್ಷವಾದ ನಂತರ ಭಾರ ಎತ್ತುವ ಕೆಲಸ ಮಾಡಿಸಬಾರದು. ಆದರೆ, ಈ ರೀತಿಯ ಕಾರ್ಯಾಚರಣೆ ಮಾಡಿಸಬಹುದಾ?. ಇನ್ನು ಮದವಿದ್ದ ಆನೆಯಿಂದ ಕಾಡಾನೆ ಓಡಿಸುವುದು ಸುಲಭ. ಯಾಕಂದ್ರೆ, ಆನೆ ಮದವಿರುವ ಬಗ್ಗೆ ಬೇರೆ ಆನೆಗಳಿಗೆ ವಾಸನೆಯಿಂದ ಗೊತ್ತಾಗುತ್ತದೆಯಂತೆ. ಆಗ ಕಾಡಾನೆಗಳು ಮದವಿದ್ದ ಆನೆಯ ಬಳಿ ಬರಲು ಹಿಂದೇಟು ಹಾಕುತ್ತವೆ. ಇದರ ಬಗ್ಗೆ ಮಾವುತರು ಹಾಗೂ ಕಾವಾಡಿಗಳಿಗೆ ಅದನ್ನು ನಿಯಂತ್ರಣ ಮಾಡುತ್ತೇವೆ ಎನ್ನುವ ವಿಶ್ವಾಸವಿರಬೇಕು. ಇದೆಲ್ಲಕ್ಕಿಂತ ಮುಖ್ಯವಾಗಿ ಆನೆಗಳಿಗೆ ಸರಿ ಸುಮಾರು 6 ತಿಂಗಳು ಮದವಿರುತ್ತದೆ.
ಇನ್ನು ನಮ್ಮಲ್ಲಿ ಅಭಿಮನ್ಯು, ಅರ್ಜುನ ಆನೆ ಬಿಟ್ಟರೆ ಕಾಡಾನೆಯನ್ನು ಹಿಮ್ಮೆಟ್ಟಿಸಲು ಯಾವ ಆನೆಗೂ ಸಾಧ್ಯವಿಲ್ಲ. ಹೀಗಿರುವಾಗ ಕಾರ್ಯಾಚರಣೆ ನಡೆಸಲು ಹೇಗೆ ಸಾಧ್ಯ ಎನ್ನುವುದು ತಜ್ಞರ ಪ್ರಶ್ನೆ. ಇನ್ನು ಅಷ್ಟು ತುರ್ತಾಗಿ ಕಾರ್ಯಾಚರಣೆ ಮಾಡಲು ಕಾರಣವೇ ತಾರಕಕ್ಕೇರಿದ್ದ ಮಾನವ ಕಾಡು ಪ್ರಾಣಿಗಳ ಸಂಘರ್ಷ. ಅದರಲ್ಲೂ ಆನೆ ದಾಳಿಯಿಂದ ಸಾವು ಸಂಭವಿಸಿದ ನಂತರವಂತೂ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಲಾಗಿತ್ತು. ಆದ್ರೆ, ದುರಾದೃಷ್ಟವಶಾತ್ ಎಲ್ಲರ ನೆಚ್ಚಿನ ಆನೆ ಅರ್ಜುನ ಬಲಿಯಾಗಬೇಕಾಯಿತು. ಅರ್ಜುನ ಆನೆಯ ಸೇವೆ ಸಾವು ಖಂಡಿತ ಎಲ್ಲರಿಗೂ ನೋವು ತಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ