ಹಾಸನ: ಹಾಡ ಹಗಲೇ ವಿದ್ಯಾರ್ಥಿನಿಯನ್ನು ಅಪಹರಿಸಲು ಯತ್ನ, ಬಾಲಕಿ ಬಚಾವ್ ಆಗಿದ್ದೇ ರೋಚಕ
ಮನೆಯಿಂದ ಶಾಲೆಯತ್ತ ಹೊರಟಿದ್ದ ಹಾಸನ ಜಿಲ್ಲೆಯ ಓರ್ವ ವಿದ್ಯಾರ್ಥಿನಿಯನ್ನು ಕಾರೊಂದು ಹಿಂಬಾಲಿಸಿಕೊಂಡು ಬಂದಿದೆ. ವಿದ್ಯಾರ್ಥಿನಿ ಹಿಂದೆ ತಿರುಗಿ ನೋಡಿದಾಗ, ಓರ್ವ ಯುವಕ ಹಿಡಿಯಿರಿ ಹಿಡಿಯಿರಿ ಎಂದು ಬೆನ್ನು ಹತ್ತಿದ್ದಾನೆ. ವಿದ್ಯಾರ್ಥಿನಿ ಚೀರಾಡಿಕೊಂಡು ಅಲ್ಲಿಂದ ಓಡಿದ್ದಾಳೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹಂಚೂರು ಗ್ರಾಮದಲ್ಲಿ ಘಟನೆ ನಡೆದಿದೆ. ಮುಂದೇನಾಯ್ತು ಇಲ್ಲಿದೆ ವಿವರ.

ಹಾಸನ, ಆಗಸ್ಟ್ 14: ಆಲೂರು (Alur) ತಾಲೂಕಿನ ಹಂಚೂರು ಗ್ರಾಮದ ಸರ್ಕಾರಿ ಪ್ರೌಡ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ಓರ್ವ ವಿದ್ಯಾರ್ಥಿನಿಯನ್ನು (Student) ಅಪಹಿರಿಸಲು ಯತ್ನಿಸಿರುವ ಘಟನೆ ನಡೆದಿದೆ. ವಿದ್ಯಾರ್ಥಿನಿ ಬೆಳಗ್ಗೆ ಹಾಂಜಿಹಳ್ಳಿಯಲ್ಲಿನ ತನ್ನ ಮನೆಯಿಂದ 2 ಕಿಮೀ ದೂರದಲ್ಲಿರುವ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ ವಿದ್ಯಾರ್ಥಿನಿಯನ್ನು ಹಿಂಬಾಲಿಸಿಕೊಂಡು ಬಂದ ಮಾರುತಿ ಓಮಿನಿ ಕಾರೊಂದು ರಸ್ತೆ ಮಧ್ಯೆಯೇ ನಿಂತಿದೆ.
ಆಗ, ವಿದ್ಯಾರ್ಥಿನಿ ಕಾರಿನಲ್ಲಿ ಇಬ್ಬರು ವಿದ್ಯಾರ್ಥಿನಿಯರನ್ನು ಕಂಡಿದ್ದಾಳೆ. ಇದೇ ವೇಳೆ, ಓರ್ವ ಯುವಕ ವಿದ್ಯಾರ್ಥಿನಿಯನ್ನು ಹಿಡಿಯಲು ಓಡಿ ಬಂದಿದ್ದನಂತೆ. ಆಗ, ವಿದ್ಯಾರ್ಥಿನಿ ಶಾಲೆಯ ಬ್ಯಾಗ್ ಅನ್ನು ಬಿಸಾಡಿ, ಕಿರುಚಿಕೊಂಡು ಓಡಿ ಹೋಗಿ ಅಲ್ಲೇ ಇದ್ದ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದಾಳೆ.
ಬಳಿಕ, ಆಶ್ರಯ ನೀಡಿದ ಮನೆಯವರು ವಿದ್ಯಾರ್ಥಿನಿಯನ್ನು ಶಾಲೆಗೆ ಕರೆದುಕೊಂಡು ಹೋಗಿದ್ದಾರೆ. ಶಾಲೆಯ ಸಿಬ್ಬಂದಿ ವಿದ್ಯಾರ್ಥಿನಿಯ ಪೋಷಕರಿಗೆ ವಿಚಾರ ತಿಳಿಸಿದ್ದಾರೆ. ಆಲೂರು ಪೊಲೀಸರಿಗೂ ವಿಚಾರ ತಿಳಿಸಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ಪೊಲೀಸರು ವಿದ್ಯಾರ್ಥಿನಿಯಿಂದ ಮಾಹಿತಿ ಪಡೆದಿದ್ದಾರೆ. ಘಟನೆ ಸಂಬಂಧ ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
“ನಮ್ಮ ಗ್ರಾಮಕ್ಕೆ ಸರ್ಕಾರಿ ಬಸ್ ಬಸ್ ವ್ಯವಸ್ತೆ ಸರಿಯಾಗಿಲ್ಲ. ಶಾಲೆಗೆ ಹೋಗುವಾಗ ಮತ್ತು ಬರುವ ಸಮಯದಲ್ಲಿ ಮಕ್ಕಳಿಗೆ ಬಸ್ಗಳು ಮಿಸ್ ಆಗುತ್ತಿವೆ. ಕೆಲ ಚಾಲಕ ಹಾಗೂ ನಿರ್ವಾಹಕರು ಬಸ್ ಹತ್ತಿಸುಕೊಳ್ಳುವುದಿಲ್ಲ. ಹೀಗಾಗಿ ಮಕ್ಕಳು ನಡೆದುಕೊಂಡು ಹೋಗುತ್ತಾರೆ. ಒಂದು ವೇಳೆ ನಮ್ಮ ಮಗಳು ಅಪಹರಣಕ್ಕೆ ಒಳಗಾಗಿದ್ದರೆ ಏನು ಗತಿ?. ಈ ಘಟನೆ ಹಿಂದೆ ಯಾರಿದ್ದಾರೆ ಪತ್ತೆ ಹಚ್ಚಬೇಕು. ಕೂಡಲೇ ಆರೋಪಿಗಳನ್ನು ಬಂಧಿಸಿ” ಎಂದು ವಿದ್ಯಾರ್ಥಿನಿಯ ಪೋಷಕರು ಆಗ್ರಹಿಸಿದ್ದಾರೆ.
ವಿದ್ಯಾರ್ಥಿನಿಯನ್ನು ಅಪಹರಿಸಲು ಯತ್ನಿಸಿರುವ ವಿಚಾರ ತಿಳಿಯುತ್ತಿದ್ದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗೆ ದೌಡಾಯಿಸಿದ್ದಾರೆ. ವಿದ್ಯಾರ್ಥಿನಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿನಿ ನೀಡಿದ ಮಾಹಿತಿ ಆಧರಿಸಿ ಅಧಿಕಾರಿಗಳು ತಾಲ್ಲೂಕಿನ ಬೇರೆ ಯಾವುದಾದರು ಶಾಲೆಯಿಂದ ವಿದ್ಯಾರ್ಥಿನಿಯರು ಕಾಣೆಯಾಗಿದ್ದಾರಾ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ಒಟ್ಟಿನಲ್ಲಿ ಶಾಲೆಯತ್ತ ಹೊರಟಿದ್ದ ಬಾಲಕಿಯನ್ನ ಅಪಹರಿಸಲು ಯತ್ನಿಸಲಾಗಿದೆ ಎಂಬ ವಿಚಾರ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ. ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ಇಲಾಖೆ ಘಟನೆಯ ಸತ್ಯಾಸತ್ಯತೆ ಭೇದಿಸಲು ಮುಂದಾಗಿದೆ. ಸುತ್ತಮುತ್ತಲ ಪ್ರದಶದ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಸಂಗ್ರಹಿಸಲಾಗುತ್ತಿದ್ದು, ತನಿಖೆ ಬಳಿಕ ಘಟನೆಯ ನೈಜತೆ ಬೆಳಕಿಗೆ ಬರಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:05 pm, Thu, 14 August 25



