ತಹಶೀಲ್ದಾರ್​​ರಿಂದ ಕಿರುಕುಳ ಆರೋಪ: ತಾಲೂಕು ಕಚೇರಿ ಮುಂಭಾಗವೇ ಆತ್ಮಹತ್ಯೆಗೆ ಯತ್ನಿಸಿದ ಶಿರಸ್ತೇದಾರ್

ಹಾಸನ ಜಿಲ್ಲೆಯ ಬೇಲೂರು ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ವಿರುದ್ಧ ಕಿರುಕುಳ ಆರೋಪಿಸಿ ಶಿರಸ್ತೇದಾರ್ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಕಚೇರಿ ಮುಂಭಾಗದಲ್ಲೇ ಮಾತ್ರೆ ಸೇವಿಸಿರುವ ತನ್ವೀರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಂದೆಡೆ ಕೌಂಟುಬಿಕ ಕಲಹ ವಿಚಾರವಾಗಿ ವ್ಯಕ್ತಿಯೋರ್ವ ನ್ಯಾಯಾಲಯದಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ 5ನೇ ಹೆಚ್ಚುವರಿ ಕೋರ್ಟ್​ನಲ್ಲಿ ನಡೆದಿದೆ.

ತಹಶೀಲ್ದಾರ್​​ರಿಂದ ಕಿರುಕುಳ ಆರೋಪ: ತಾಲೂಕು ಕಚೇರಿ ಮುಂಭಾಗವೇ ಆತ್ಮಹತ್ಯೆಗೆ ಯತ್ನಿಸಿದ ಶಿರಸ್ತೇದಾರ್
ತಾಲೂಕು ಕಚೇರಿ ಮುಂಭಾಗವೇ ಆತ್ಮಹತ್ಯೆಗೆ ಯತ್ನ

Updated on: Jan 22, 2026 | 4:37 PM

ಹಾಸನ/ ದಕ್ಷಿಣ ಕನ್ನಡ, ಜನವರಿ 22: ತಹಶೀಲ್ದಾರ್ ವಿರುದ್ಧ ಕಿರುಕುಳ ಆರೋಪ ಮಾಡಿ ಮಾತ್ರೆ ಸೇವಿಸಿ ಶಿರಸ್ತೇದಾರ್ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಬೇಲೂರು ತಹಶೀಲ್ದಾರ್​ ಶ್ರೀಧರ್ ಕಂಕನವಾಡಿ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದ್ದು, ತನ್ವೀರ್ ಅಹ್ಮದ್ ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿಯಾಗಿದ್ದಾರೆ. ತನ್ವೀರ್​​ನ್ನು ಬೇಲೂರು ಆಸ್ಪತ್ರೆಗೆ ಸಿಬ್ಬಂದಿ ದಾಖಲಿಸಿದ್ದು, ತಮ್ಮ ಮೇಲಿನ ಆರೋಪವನ್ನು ಶ್ರೀಧರ್ ನಿರಾಕರಿಸಿದ್ದಾರೆ.

ತಹಶೀಲ್ದಾರ್ ಅವರು ಬೇಕಂತಲೇ ಕೆಲಸದ ಒತ್ತಡ ಹೇರುತ್ತಿರುವ ಜೊತೆಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕು ಕಚೇರಿ ಮುಂಭಾದಲ್ಲೇ ಮಾತ್ರೆಗಳನ್ನು ಸೇವಿಸಿ ತನ್ವೀರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ತಹಸೀಲ್ದಾರ್​​ ಅವರು, ತನ್ವೀರ್ ಅಹಮದ್ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಜೊತೆಗೆ ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ ವಿರುದ್ಧವೇ ದೂರು ನೀಡಲು ಮುಂದಾಗಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಪ್ರತಿಷ್ಠಿತ ಮಠದ ಸ್ವಾಮೀಜಿಗೆ ಬ್ಲ್ಯಾಕ್​ಮೇಲ್, ಲಕ್ಷಾಂತರ ರೂ. ವಸೂಲಿ; ಚಿಕ್ಕಮಗಳೂರಿನ ಮಹಿಳೆಯ ಬಂಧನ

ನ್ಯಾಯಾಲಯದಲ್ಲೇ ಆತ್ಮಹತ್ಯೆಗೆ ಯತ್ನ

ನ್ಯಾಯಾಲಯದಲ್ಲೇ ವಿಷ ಕುಡಿದು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ 5ನೇ ಹೆಚ್ಚುವರಿ ಕೋರ್ಟ್​ನಲ್ಲಿ ನಡೆದಿದೆ. ವಿಷ ಕುಡಿದು ಕಾವು ಮಣಿಯಡ್ಕ ನಿವಾಸಿ ರವಿ(35) ಆತ್ಮಹತ್ಯೆಗೆ ಯತ್ನಿಸಿದ್ದು,ತಕ್ಷಣ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಶಿಫ್ಟ್​​ ಮಾಡಲಾಗಿದೆ.

ರವಿ ಹಾಗೂ ಪತ್ನಿ ವಿದ್ಯಾಶ್ರೀ ನಡುವೆ ಕೌಟುಂಬಿಕ ಕಲಹ ಇತ್ತು. 2 ದಿನದ ಹಿಂದೆ ವಿದ್ಯಾಶ್ರೀ ಕತ್ತು ಹಿಸುಕಿ ಕೊಲೆಗೆ ರವಿ ಯತ್ನಿಸಿದ್ದ ಎನ್ನಲಾಗಿದ್ದು, ಗಂಡ ಮತ್ತು ಹೆಂಡತಿ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಳಿಕ, ಇಬ್ಬರ ನಡುವೆ ವಿಚ್ಛೇದನದ ಮಾತುಕತೆ ನಡೆದಿತ್ತು. ಪೊಲೀಸರು ಮಹಿಳಾ ಠಾಣೆಗೆ ಹಾಜರಾಗಲು ರವಿಗೆ ಸೂಚಿಸಿದ್ದು, ಈ ನಡುವೆ ಪುತ್ತೂರು ಕೋರ್ಟ್​ ಆವರಣಕ್ಕೆ ಬಂದ ರವಿ ಜಡ್ಜ್ ಮುಂದೆಯೇ ವಿಷ ಸೇವಿಸಿದ್ದಾರೆ. ವಿಷ ಸೇವನೆ ಬಳಿಕ ನ್ಯಾಯಾಲಯದಲ್ಲೇ ವಾಂತಿ ಮಾಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಡನ ವಿರುದ್ಧ ದೂರು ನೀಡಿದ್ದ ಪತ್ನಿಯೇ ಆತನನ್ನು ಆ್ಯಂಬುಲೆನ್ಸ್​ ಮೂಲಕ ಮಂಗಳೂರಿಗೆ ಕರೆದೊಯ್ದಿದ್ದಾಳೆ.

ಎಣ್ಣೆ ನಶೆಯಲ್ಲಿ ಬ್ಲೇಡ್​ನಿಂದ ಕತ್ತು ಕೊಯ್ದುಕೊಂಡ ವ್ಯಕ್ತಿ

ಕುಡಿದ ಮತ್ತಿನಲ್ಲಿ ಪತ್ನಿ ಜೊತೆ ಕಿರಿಕ್ ಮಾಡಿಕೊಂಡು ವ್ಯಕ್ತಿಯೋರ್ವ ಬ್ಲೇಡ್​ನಿಂದ ಕತ್ತು ಕೊಯ್ದುಕೊಂಡ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಕಾಮಗೆರೆಯಲ್ಲಿ ನಡೆದಿದೆ. ಪತ್ನಿ ರಂಜಿತಾ ಜತೆ ಜಗಳವಾಡಿ ಕತ್ತು ಕೊಯ್ದುಕೊಂಡ ಪತಿ ಲೋಕೇಶ್ ರಕ್ತಸ್ರಾವವಾಗಿ ಒದ್ದಾಡುತ್ತಿದ್ದರು. ಗಾಯಾಳುವನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಸದ್ಯ ಚಿಕಿತ್ಸೆ ಪಡೆದು ಗಾಯಾಳು ಲೋಕೇಶ್ ಮನೆಗೆ ವಾಪಾಸಾಗಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 4:34 pm, Thu, 22 January 26