ಕರ್ನಾಟಕದ ಪ್ರತಿಷ್ಠಿತ ಮಠದ ಸ್ವಾಮೀಜಿಗೆ ಬ್ಲ್ಯಾಕ್‌ಮೇಲ್, ಲಕ್ಷಾಂತರ ರೂ. ವಸೂಲಿ: ಚಿಕ್ಕಮಗಳೂರಿನ ಮಹಿಳೆಯ ಬಂಧನ
ಕರ್ನಾಟಕದ ಪ್ರತಿಷ್ಠಿತ ಮಠದ ಸ್ವಾಮೀಜಿಯೊಬ್ಬರನ್ನು ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡಿದ್ದಲ್ಲದೆ, ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ಚಿಕ್ಕಮಗಳೂರಿನ ಸ್ಪೂರ್ತಿ ಎಂಬಾಕೆಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹಣ ಕೊಡದಿದ್ದರೆ ಮಾನಹಾನಿ ಮಾಡುವುದಾಗಿ ಮಹಿಳೆ ಬೆದರಿಕೆ ಹಾಕಿದ್ದಳು ಎನ್ನಲಾಗಿದ್ದು, ಸದ್ಯ ತಮ್ಮ ವಿರುದ್ಧದ ಫೋಟೊ, ವಿಡಿಯೋ ಪ್ರಸಾರ ಮಾಡದಂತೆ ಸ್ವಾಮೀಜಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.

ಬೆಂಗಳೂರು, ಜನವರಿ 22: ರಾಜ್ಯದ ಪ್ರತಿಷ್ಠಿತ ಮಠದ ಸ್ವಾಮೀಜಿಯೊಬ್ಬರಿಗೆ ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡಿದ ಆರೋಪದ ಮೇಲೆ ಚಿಕ್ಕಮಗಳೂರು ಮೂಲದ ಸ್ಪೂರ್ತಿ ಎಂಬ ಮಹಿಳೆಯನ್ನು ಬೆಂಗಳೂರು (Bangalore) ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸ್ವಾಮೀಜಿಯಿಂದ ಈಗಾಗಲೇ 4.5 ಲಕ್ಷ ರೂ. ವಸೂಲಿ ಮಾಡಿಕೊಂಡಿದ್ದ ಆರೋಪಿ, ಮತ್ತೆ 1 ಕೋಟಿ ರೂ. ನೀಡುವಂತೆ ಒತ್ತಡ ಹೇರಿದ್ದಳು ಎನ್ನಲಾಗಿದೆ. ಐದು ತಿಂಗಳ ಹಿಂದೆ ಸ್ವಾಮೀಜಿಗೆ ಕರೆ ಮಾಡಿದ ಸ್ಪೂರ್ತಿ, ತಿಪಟೂರಿನಲ್ಲಿ ವ್ಯಾಸಂಗ ಮಾಡಿದ್ದೇನೆ ಎಂದು ಪರಿಚಯಿಸಿಕೊಂಡಿದ್ದಳು. ಬಳಿಕ ಹಣಕ್ಕೆ ಬೇಡಿಕೆ ಇಟ್ಟು, ಹಣ ಕೊಡದಿದ್ದರೆ ಮಾನಹಾನಿ ಮಾಡುವುದಾಗಿ ಹಾಗೂ ಜೀವ ಬೆದರಿಕೆ ಹಾಕಿದ್ದಳು.
ಸ್ವಾಮೀಜಿ ಬೆಂಗಳೂರಿಗೆ ಬಂದಿದ್ದಾಗ ಅವರಿಂದ 4.5 ಲಕ್ಷ ರೂ. ಪಡೆದುಕೊಂಡರೂ, ಮತ್ತೆ 1 ಕೋಟಿ ರೂ. ಕೊಡಬೇಕೆಂದು ತನ್ನ ಸಹಚರರ ಜೊತೆಗೂಡಿ ಬೆದರಿಕೆ ಮುಂದುವರಿಸಿದ್ದಳು.
ಕಾಟ ತಾಳಲಾರದೆ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದ ಸ್ವಾಮೀಜಿ
ಆರೋಪಿ ಮಹಿಳೆ ಮತ್ತೆ ಮತ್ತೆ ಹಣಕ್ಕಾಗಿ ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದರಿಂದ ಆತಂಕಗೊಂಡ ಸ್ವಾಮೀಜಿ ಸಿಸಿಬಿ ಪೊಲೀಸರ ಮೊರೆ ಹೋಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಸ್ಪೂರ್ತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಎರಡು ವರ್ಷ ಹಿಂದೆಯೂ ನಡೆದಿತ್ತು ಹನಿಟ್ರ್ಯಾಪ್ ಯತ್ನ
ಇದೇ ಸ್ವಾಮೀಜಿ ವಿರುದ್ಧ ಎರಡು ವರ್ಷಗಳ ಹಿಂದೆ ಹನಿಟ್ರ್ಯಾಪ್ ಯತ್ನ ನಡೆದಿತ್ತು. ಆ ವೇಳೆ 6 ಕೋಟಿ ರೂ. ಬೇಡಿಕೆ ಇಟ್ಟಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದೀಗ ಮತ್ತೆ ಬ್ಲ್ಯಾಕ್‌ಮೇಲ್ ಕಾಟ ಎದುರಾಗಿದೆ.
ಇದನ್ನೂ ಓದಿ: ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ಕೇಸ್: ಸರ್ಕಾರದ ಮುಂದಿರುವ ಸವಾಲುಗಳೇನು?
ಸದ್ಯ ಬ್ಲ್ಯಾಕ್‌ಮೇಲ್ ಪ್ರಕರಣದ ಹಿನ್ನೆಲೆಯಲ್ಲಿ ಸ್ವಾಮೀಜಿ ಕೋರ್ಟ್ ಮೊರೆ ಹೋಗಿದ್ದು, ತಮಗೆ ಸಂಬಂಧಿಸಿದ ಯಾವುದೇ ಫೋಟೋಗಳು ಹಾಗೂ ವಿಡಿಯೋಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ಪಡೆದಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು
