ವಿಶೇಷ ಅಧಿವೇಶನ: ಸರ್ಕಾರಕ್ಕೆ ಚೆಕ್ ಮೇಟ್ ಇಡ್ತಾರಾ ರಾಜ್ಯಪಾಲರು? ಕುತೂಹಲ ಮೂಡಿಸಿದ ನಡೆ!
ನರೇಗಾ ಹೆಸರು ಬದಲಾವಣೆಗೆ ಆಕ್ಷೇಪಿಸಿ ಕರ್ನಾಟಕ ಸರ್ಕಾರ ವಿಶೇಷ ಅಧಿವೇಶನ ಕರೆದಿದೆ. ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ ಇರುವ ಕೇಂದ್ರದ ವಿರುದ್ಧದ 11 ಪ್ಯಾರಾಗಳನ್ನು ಓದಲು ರಾಜ್ಯಪಾಲರು ನಿರಾಕರಿಸಿದ್ದಾರೆ. ಆದರೆ, ಸರ್ಕಾರ ಪಟ್ಟುಬಿಡುತ್ತಿಲ್ಲ. ಇದರಿಂದ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ರಾಜ್ಯಪಾಲರು ಮತ್ತು ಸರ್ಕಾರದ ಮುಂದೆ ಏನೇನು ಆಯ್ಕೆಗಳಿವೆ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು, ಜನವರಿ 22: ಕೇಂದ್ರ ಸರ್ಕಾರ ನರೇಗಾ ಯೋಜನೆಯ ಹೆಸರನ್ನು ಬದಲಾಯಿಸಿ ವಿಬಿ ಜಿ ರಾಮ್ ಜಿ ಎಂದು ಮರು ನಾಮಕರಣ ಮಾಡಿರುವುದರ ವಿರುದ್ಧ ನಿರ್ಣಯ ಕೈಗೊಳ್ಳಲು ಕರ್ನಾಟಕ (Karnataka) ಕಾಂಗ್ರೆಸ್ ಸರ್ಕಾರ ವಿಶೇಷ ಅಧಿವೇಶನ ಕರೆದಿದೆ. ವಿಶೇಷ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಇದೀಗ ರಾಜ್ಯಪಾಲರು ತಗಾದೆ ತೆಗೆದಿದ್ದಾರೆ. ಭಾಷಣದ 11 ಪ್ಯಾರಾಗಳನ್ನು ಓದಲು ಅವರು ನಿರಾಕರಿಸಿದ್ದಾರೆ. ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕೆಲ ಅಂಶಗಳಿವೆ. ಕೇಂದ್ರ ವಿರುದ್ಧದ ವಿಚಾರ ಕೈಬಿಡಬೇಕೆಂಬುದು ಅವರ ಆಗ್ರಹ. ಆದರೆ, ಸರ್ಕಾರ ಅದನ್ನು ಕೈಬಿಡಲು ತಯಾರಿಲ್ಲ. ಹೀಗಾಗಿ ರಾಜ್ಯಪಾಲರು ಅಧಿವೇಶನಕ್ಕೆ ಗೈರಾಗುತ್ತಾರೆಯೇ ಎಂಬ ಪ್ರಶ್ನೆಯೂ ಮೂಡಿದೆ. ಒಂದು ವೇಳೆ ಅವರು ಗೈರಾದರೆ ಸುಪ್ರೀಂ ಕೋರ್ಟ್ ಮೊರೆ ಹೋಗಲು ಸರ್ಕಾರ ಸಿದ್ಧತೆ ಮಾಡಿದೆ. ಹೀಗಾಗಿ ಅಧಿವೇಶನಕ್ಕೆ ಹಾಜರಾಗಿಯೇ ಸರ್ಕಾರಕ್ಕೆ ಚೆಕ್ ಮೇಟ್ ಇಡ್ತಾರಾ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಎಂಬ ಪ್ರಶ್ನೆ ಈಗ ಮೂಡಿದೆ.
ಹಾಗಾದರೆ, ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ಮುಂದೆ ಏನೇನು ಆಯ್ಕೆಗಳಿವೆ? ಮಾಹಿತಿ ಇಲ್ಲಿದೆ.
ರಾಜ್ಯಪಾಲರ ಮುಂದಿರುವ ಆಯ್ಕೆಗಳೇನು?
ಸರ್ಕಾರ ನೀಡಿರುವ ಭಾಷಣದ ಆಕ್ಷೇಪಾರ್ಹ ಪ್ಯಾರಾಗಳನ್ನು ಬಿಟ್ಟು ಉಳಿದ ಭಾಷಣವನ್ನು ರಾಜ್ಯಪಾಲರು ಓದಬಹುದು. ಆಕ್ಷೇಪಾರ್ಹ ಪ್ಯಾರಾಗಳನ್ನು ಓದುವುದನ್ನು ಕೈಬಿಡುವ ಸಂದರ್ಭದಲ್ಲಿ ‘ಈ ಪ್ಯಾರಾಗಳು ನನ್ನ ಭಾಷಣದ ಭಾಗವಾಗಿಲ್ಲ’ ಎಂದು ಉಚ್ಚರಿಸಬೇಕು. ರಾಜ್ಯಪಾಲರು ಹೀಗೆ ಉಲ್ಲೇಖಿಸಿದರೆ ಆ ಪ್ಯಾರಾಗಳ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶವಿಲ್ಲ. ಇದು ರಾಜ್ಯ ಸರ್ಕಾರ ವಿಶೇಷ ಅಧಿವೇಶನ ನಡೆಸುವುದರ ಮೂಲ ಉದ್ದೇಶಕ್ಕೇ ಪೆಟ್ಟು ಕೊಡುತ್ತದೆ. ಹೀಗಾಗಿ ಈ ರೀತಿ ಸರ್ಕಾರಕ್ಕೆ ಚೆಕ್ ಮೇಟ್ ಕೊಡುವ ಆಯ್ಕೆ ರಾಜ್ಯಪಾಲರ ಎದುರಿದೆ.
ರಾಜ್ಯಪಾಲರ ಮುಂದಿರುವ ಇನ್ನಿತರ ಆಯ್ಕೆಗಳೇನು?
ಸಂವಿಧಾನದ ಆರ್ಟಿಕಲ್ 160ರ ಪ್ರಕಾರ ರಾಜ್ಯಪಾಲರಿಗೆ ವಿಶೇಷ ಪರಿಸ್ಥಿತಿಗಳಲ್ಲಿ ಅಧಿವೇಶನಕ್ಕೆ ಗೈರುಹಾಜರಾಗುವ ಅವಕಾಶವಿದೆ. ಅನಿರೀಕ್ಷಿತ ಅಥವಾ ಅಸಾಧಾರಣ ಸಂದರ್ಭಗಳು, ಆಕಸ್ಮಿಕ ಅನಾರೋಗ್ಯ ಅಥವಾ ತುರ್ತು ಪರಿಸ್ಥಿತಿ ಎದುರಾದಲ್ಲಿ, ರಾಜ್ಯಪಾಲರು ರಾಷ್ಟ್ರಪತಿಗಳಿಂದ ಅನುಮತಿ ಪಡೆದು ಅಧಿವೇಶನಕ್ಕೆ ಹಾಜರಾಗದೇ ಇರಬಹುದು. ಇಂತಹ ಸಂದರ್ಭಗಳಲ್ಲಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಗೈರು ಹಾಜರಾತಿಗೆ ಅನುಮೋದನೆ ನೀಡುವ ಅಧಿಕಾರ ಹೊಂದಿದ್ದಾರೆ. ರಾಷ್ಟ್ರಪತಿಗಳ ಅನುಮತಿ ದೊರೆತಿದ್ದರೆ, ಈ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯದ ಹಸ್ತಕ್ಷೇಪ ಕಷ್ಟಸಾಧ್ಯವಾಗುತ್ತದೆ. ರಾಜ್ಯಪಾಲರ ವಿರುದ್ಧ ಯಾವುದೇ ಕಾನೂನು ಕ್ರಮ ಆರಂಭವಾದರೂ, ಅವರು ಸಂವಿಧಾನಾತ್ಮಕವಾಗಿ ಸಮಂಜಸವಾದ ಕಾರಣವನ್ನು ನೀಡುವ ಹಕ್ಕು ಹೊಂದಿರುತ್ತಾರೆ.
ಸರ್ಕಾರದ ಮುಂದಿರುವ ಆಯ್ಕೆಗಳೇನು?
ರಾಜ್ಯಪಾಲರು ಅಧಿವೇಶನಕ್ಕೆ ಗೈರಾದರೆ ಕಾನೂನು ಹೋರಾಟ ಮಾಡುವ ಆಯ್ಕೆ ಸರ್ಕಾರ ಮುಂದಿದೆ. ರಾಜ್ಯಪಾಲರು ಸಾಂವಿಧಾನಿಕ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲ ಎಂದು ಆರೋಪಿಸಬಹುದು. ರಾಜ್ಯಪಾಲರು ಭಾಷಣ ಓದದೇ ಇದ್ದ ಪಕ್ಷದಲ್ಲಿ ತನ್ನ ಭಾಷಣವನ್ನು ಸದನದಲ್ಲಿ ನಿರ್ಣಯ ಮಂಡಿಸಿ ಸಭಾಧ್ಯಕ್ಷರಿಂದ ಚರ್ಚೆ ಅವಕಾಶ ಕೇಳಬಹುದು.
ಇದನ್ನೂ ಓದಿ: ವಿಶೇಷ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡದಿದ್ರೆ ಸುಪ್ರೀಂ ಮೊರೆ ಹೋಗಲು ರಾಜ್ಯ ಸರ್ಕಾರ ಸಿದ್ಧತೆ!
ಸದ್ಯ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವಣ ಸಂಘರ್ಷ ಕುತೂಹಲ ಘಟ್ಟ ತಲುಪಿದ್ದು, ಏನಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.