ವಿಶೇಷ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡದಿದ್ರೆ ಸುಪ್ರೀಂ ಮೊರೆ ಹೋಗಲು ರಾಜ್ಯ ಸರ್ಕಾರ ಸಿದ್ಧತೆ!
ಕರ್ನಾಟಕ ರಾಜ್ಯಪಾಲರು ಜಂಟಿ ಅಧಿವೇಶನದಲ್ಲಿ ಸರ್ಕಾರದ ಭಾಷಣ ಓದಲು ನಿರಾಕರಿಸಿದ್ದು, 11 ಪ್ಯಾರಾಗಳ ತಿದ್ದುಪಡಿಗೆ ಸೂಚಿಸಿದ್ದಾರೆ. ಸರ್ಕಾರ ಈ ಸಲಹೆಯನ್ನು ತಿರಸ್ಕರಿಸಿ, ರಾಜ್ಯಪಾಲರು ಮೂಲ ಭಾಷಣವನ್ನೇ ಓದುವಂತೆ ಒತ್ತಾಯಿಸಿದೆ. ರಾಜ್ಯಪಾಲರು ಅಧಿವೇಶನಕ್ಕೆ ಬರದಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗಲು ಸರ್ಕಾರ ಸಿದ್ಧತೆ ನಡೆಸಿದೆ, ಅಡ್ವೊಕೇಟ್ ಜನರಲ್ ದೆಹಲಿಗೆ ತೆರಳಿದ್ದಾರೆ.

ಬೆಂಗಳೂರು, ಜನವರಿ 22: ಕರ್ನಾಟಕದಲ್ಲಿ (Karnataka) ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ಶೀತಲ ಸಮರ ಈಗ ಬಹಿರಂಗ ಸಂಘರ್ಷಕ್ಕೆ ತಿರುಗಿದೆ. ಇಂದು ಆರಂಭವಾಗಲಿರುವ ವಿಧಾನಮಂಡಲದ ವಿಶೇಷ (Karnataka Assembly Session) ಅಧಿವೇಶನದಲ್ಲಿ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದಲು ರಾಜ್ಯಪಾಲರು ನಿರಾಕರಿಸಿದ್ದಾರೆ. ಭಾಷಣದಲ್ಲಿ ಉಲ್ಲೇಖಿಸಲಾಗಿರುವ 11 ಪ್ಯಾರಾಗಳನ್ನು ತಿದ್ದುಪಡಿ ಮಾಡುವಂತೆ ಅಥವಾ ಕೈಬಿಡುವಂತೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ. ಆದರೆ, ರಾಜ್ಯ ಸರ್ಕಾರವು ರಾಜ್ಯಪಾಲರ ಈ ಷರತ್ತಿಗೆ ನಕಾರ ವ್ಯಕ್ತಪಡಿಸಿದೆ. ಸರ್ಕಾರವು ಬರೆದುಕೊಟ್ಟ ಭಾಷಣವನ್ನೇ ರಾಜ್ಯಪಾಲರು ಓದಬೇಕು ಎಂದು ಪಟ್ಟು ಹಿಡಿದಿದೆ. ಈ ವಿಚಾರವಾಗಿ ಸರ್ಕಾರ ಕಾನೂನು ಹೋರಾಟಕ್ಕೂ ಸಿದ್ಧವಾಗಿದೆ.
ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ನವದೆಹಲಿಗೆ ತೆರಳಿದ್ದಾರೆ. ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ರಾಜ್ಯಪಾಲರಿಗೆ ನಿರ್ದೇಶನ ನೀಡುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಿರುವ ಸಂಭಾವ್ಯ ಅರ್ಜಿಯಲ್ಲಿ ಎರಡು ಪ್ರಮುಖ ಅಂಶಗಳ ಮೇಲೆ ರಾಜ್ಯಪಾಲರಿಗೆ ನಿರ್ದೇಶನ ನೀಡಲು ಸರ್ಕಾರ ಕೋರಲಿದೆ. ಮೊದಲನೆಯದಾಗಿ, ರಾಜ್ಯಪಾಲರು ಸರ್ಕಾರದ ಭಾಷಣವನ್ನು ಸದನದಲ್ಲಿ ಓದಬೇಕು. ಎರಡನೆಯದಾಗಿ, ರಾಜ್ಯಪಾಲರು ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ಪಾಲಿಸಬೇಕು. ಈ ಕುರಿತು ಅರ್ಜಿ ಸಿದ್ಧಪಡಿಸಲು ಮುಖ್ಯಮಂತ್ರಿಗಳು ಪೊನ್ನಣ್ಣ ಮತ್ತು ಅಡ್ವೊಕೇಟ್ ಜನರಲ್ ಅವರಿಗೆ ಜವಾಬ್ದಾರಿಯನ್ನು ವಹಿಸಿದ್ದಾರೆ.
11 ಅಂಶ ಕೈಬಿಡಲು ಹೇಳಿದ್ದೇಕೆ ರಾಜ್ಯಪಾಲರು?
ಸರ್ಕಾರ ಬರೆದುಕೊಟ್ಟ ಭಾಷಣದಲ್ಲಿ ಮನ್ರೇಗಾ ಕಾಯ್ದೆ ಬದಲಾವಣೆ ಬಗ್ಗೆ ಉಲ್ಲೇಖಿಸಲಾಗಿತ್ತು. ಅದರಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕೆಲ ಅಂಶಗಳಿವೆ ಎಂದಿರುವ ರಾಜ್ಯಪಾಲರು, 11 ಪ್ಯಾರಾಗಳನ್ನು ಕೈಬಿಡಬೇಕೆಂದು ಸಲಹೆ ನೀಡಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರದ ನಡುವೆ ಸಂಬಂಧದ ಬಗ್ಗೆ ಉಲ್ಲೇಖವಿದೆ. ಮನ್ರೇಗಾ ಯೋಜನೆ ಮರುಸ್ಥಾಪನೆ, ಅನುದಾನ ತಾರತಮ್ಯ, ಕೇಂದ್ರ ಸರ್ಕಾರ ಕಾರ್ಮಿಕರ ಕೆಲಸ ಕಿತ್ತುಕೊಂಡಿದ್ದು, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಅನುದಾನ ನೀಡದಿರುವುದು ಸೇರಿದಂತೆ ಕೇಂದ್ರ ವಿರುದ್ಧದ ವಿಚಾರ ಕೈಬಿಡುವಂತೆ ರಾಜ್ಯಪಾಲರಿಂದ ಸಲಹೆ ನೀಡಿದ್ದಾರೆ.
ರಾಜ್ಯ ಸರ್ಕಾರದಿಂದ ಕಾದುನೋಡುವ ತಂತ್ರ
ರಾಜ್ಯ ಸರ್ಕಾರವು ಬೆಳಗ್ಗೆ 11 ಗಂಟೆಯವರೆಗೂ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ. ಬೆಳಗ್ಗೆ 11 ಗಂಟೆಗೆ ಸರಿಯಾಗಿ ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣವನ್ನು ಪ್ರಾರಂಭಿಸಬೇಕು. ಅದಕ್ಕೂ ಮುನ್ನ 10 ಗಂಟೆ 55 ನಿಮಿಷಕ್ಕೆ ಅವರು ವಿಧಾನಸೌಧದ ಗ್ರಾಂಡ್ ಸ್ಟೆಪ್‌ಗಳನ್ನು ತಲುಪಬೇಕಾಗುತ್ತದೆ. ಒಂದು ವೇಳೆ ಆ ನಿಗದಿತ ಸಮಯದ ನಂತರವೂ ರಾಜ್ಯಪಾಲರು ಅಧಿವೇಶನಕ್ಕೆ ಹಾಜರಾಗದೆ ಹೋದರೆ ಅಥವಾ ಭಾಷಣ ಮಾಡಲು ನಿರಾಕರಿಸಿದರೆ, ರಾಜ್ಯ ಸರ್ಕಾರವು ಕಾನೂನು ಸಮರವನ್ನು ಪ್ರಾರಂಭಿಸಲು ತೀರ್ಮಾನಿಸಿದೆ.
ಇದನ್ನೂ ಓದಿ: ಭಾಷಣ ಮಾಡಲ್ಲ ಎಂದ ರಾಜ್ಯಪಾಲರು: ವಿಶೇಷ ಅಧಿವೇಶನ ರದ್ದಾಗುತ್ತಾ? ಸರ್ಕಾರದ ಮುಂದಿರುವ ಆಯ್ಕೆಗಳೇನು?
ಈ ನಡುವೆ, ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು ರಾಜ್ಯಪಾಲರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದು, ನಂತರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ವರದಿ ಸಲ್ಲಿಸಿದ್ದಾರೆ. ರಾಜ್ಯಪಾಲರು ಭಾಷಣದ 11 ಅಂಶಗಳನ್ನು ಯಾವ ಕಾರಣಕ್ಕಾಗಿ ಕೈಬಿಡಲು ಸೂಚಿಸಿದ್ದಾರೆ ಎಂಬ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಸುದೀರ್ಘ ಚರ್ಚೆ ನಡೆದಿದೆ. ಅಕಸ್ಮಾತ್ ರಾಜ್ಯಪಾಲರು ಅಧಿವೇಶನಕ್ಕೆ ಬರದಿದ್ದರೆ, ಅದು ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಲಿದೆ ಎಂದು ಸರ್ಕಾರ ಭಾವಿಸಿದೆ. ರಾಜ್ಯಪಾಲರು ಜಂಟಿ ಅಧಿವೇಶನದಲ್ಲಿ ಯಾವ ರೀತಿಯ ಭಾಷಣ ಮಾಡುತ್ತಾರೆ, ಸರ್ಕಾರ ಕೊಟ್ಟಿರುವ 11 ಅಂಶಗಳನ್ನು ಕೈಬಿಟ್ಟು ಓದುತ್ತಾರಾ, ಅಥವಾ ಸಂಪೂರ್ಣವಾಗಿ ಗೈರುಹಾಜರಾಗುತ್ತಾರಾ ಎಂಬುದು ಕುತೂಹಲ ಕೆರಳಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:05 am, Thu, 22 January 26
