ಭಾಷಣ ಮಾಡಲ್ಲ ಎಂದ ರಾಜ್ಯಪಾಲರು: ವಿಶೇಷ ಅಧಿವೇಶನ ರದ್ದಾಗುತ್ತಾ? ಸರ್ಕಾರದ ಮುಂದಿರುವ ಆಯ್ಕೆಗಳೇನು?
ಕರ್ನಾಟಕದಲ್ಲಿ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ನಿರಾಕರಿಸಿರೋದು, ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯ ಮುನ್ಸೂಚನೆ ನೀಡಿದೆ. ಸಂವಿಧಾನದ ಆರ್ಟಿಕಲ್ 176(1)ರ ಪ್ರಕಾರ ರಾಜ್ಯಪಾಲರ ಭಾಷಣ ಕಡ್ಡಾಯ. ಸರ್ಕಾರ ಸಿದ್ಧಪಡಿಸಿದ ಭಾಷಣ ಓದುವುದು ಅವರ ಕರ್ತವ್ಯ. ಹೀಗಾಗಿ ಒಂದೊಮ್ಮೆ ಅಧಿವೇಶನಕ್ಕೆ ಗವರ್ನರ್ ಬಾರದಿದ್ದರೆ ಕಾನೂನು ಹೋರಾಟಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

ಬೆಂಗಳೂರು, ಜನವರಿ 21: ನಾಳೆಯಿಂದ ಜ.31ರವರೆಗೆ ವಿಧಾನಮಂಡಲ ವಿಶೇಷ ಅಧಿವೇಶನ ನಡೆಯಲಿದ್ದು, ನಿಯಮದಂತೆ ಜಂಟಿ ಅಧಿವೇಶನ ಉದ್ದೇಶಿಸಿ ಗವರ್ನರ್ ಭಾಷಣ ಮಾಡಬೇಕು. ಆದರೆ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣಕ್ಕೆ ಗವರ್ನರ್ ನಿರಾಕರಿಸಿರುವ ಹಿನ್ನೆಲೆ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಎದುರಾಗುವ ಸಾಧ್ಯತೆ ಇದೆ. ವರ್ಷದ ಮೊದಲ ಅಧಿವೇಶನವನ್ನು ರಾಜ್ಯಪಾಲರು ಆರಂಭಿಸಬೇಕು. ಆದರೆ ಗವರ್ನರ್ ನಡೆ ಗಮನಿಸಿದೆ ನಾಳೆಯಿಂದ ವಿಶೇಷ ಅಧಿವೇಶನ ಆರಂಭವಾಗುವ ಸಾಧ್ಯತೆಯಿಲ್ಲ ಎನ್ನುವ ಮಾತುಗಳೀಗ ಕೇಳಿಬಂದಿವೆ. ಈ ನಡುವೆ ಲೋಕಭವನಕ್ಕೆ ಸಚಿವ ಹೆಚ್.ಕೆ. ಪಾಟೀಲ್ ನೇತೃತ್ವದ ನಿಯೋಗ ಭೇಟಿ ನೀಡಿ ರಾಜ್ಯಪಾಲರಿಗೆ ಸಾಂವಿಧಾನಿಕ ಹುದ್ದೆ ಸ್ಥಾನಮಾನಗಳ ಬಗ್ಗೆ ಮಾಹಿತಿ ನೀಡಿದೆ.
ನಿಯಮಾವಳಿ ಹೇಳೋದೇನು?
ನಿಯಮಾವಳಿ ಪ್ರಕಾರ ರಾಜ್ಯಪಾಲರು ಸದನಕ್ಕೆ ಹಾಜರಾಗುವುದಿಲ್ಲ ಎಂದು ನಿರಾಕರಿಸಲು ಸಾಧ್ಯವಿಲ್ಲ. ಅವರ ಕಡ್ಡಾಯ ಕರ್ತವ್ಯಗಳಲ್ಲಿ ಸದನವನ್ನು ಉದ್ದೇಶಿಸಿ ಭಾಷಣ ಮಾಡುವುದೂ ಕೂಡ ಒಂದು. ಆರ್ಟಿಕಲ್ 176(1)ರ ಪ್ರಕಾರ ರಾಜ್ಯಪಾಲರು ಸದನವನ್ನು ಉದ್ದೇಶಿಸಿ ಭಾಷಣ ಮಾಡಬೇಕು. ಪ್ರತಿ ವರ್ಷದ ಮೊದಲ ಅಧಿವೇಶನ ಅಥವಾ ಹೊಸ ಸರ್ಕಾರ ರಚನೆಯಾದ ನಂತರದ ಮೊದಲ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವುದು ಕಡ್ಡಾಯ. ಭಾಷಣದ ವಿಷಯದ ಮೇಲೆ ರಾಜ್ಯಪಾಲರು ಸ್ವತಂತ್ರ ನಿರ್ಣಯ ಕೈಗೊಳ್ಳುವಂತಿಲ್ಲ. ರಾಜ್ಯಪಾಲರು ಹೀಗೆ ನಿರಾಕರಿಸಿದರೆ ಅದು ಸಾಂವಿಧಾನಿಕ ಬಿಕ್ಕಟ್ಟು. ಕಾನೂನು ಬಾಹಿರ ಎಂಬುದಕ್ಕಿಂತ ಹೆಚ್ಚಾಗಿ ಇದು ಸಾಂವಿಧಾನಿಕ ಕರ್ತವ್ಯದ ನಿರಾಕರಣೆ ಎನ್ನಲಾಗಿದೆ. ಇನ್ನು ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣದ ಕರಡು ಪ್ರತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಮೂಲಕ ರಾಜ್ಯಪಾಲರಿಗೆ ರವಾನಿಸಲಾಗುತ್ತದೆ. ಡ್ರಾಫ್ಟ್ ಸ್ಪೀಚ್ನಲ್ಲಿ ರಾಜ್ಯಪಾಲರಿಗೆ ಸಮ್ಮತಿಯಿಲ್ಲದ ಅಂಶಗಳಿದ್ದರೆ ಅಥವಾ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಡುವ ಪ್ರಯತ್ನ ನಡೆದಿದೆ ಎಂದು ಅನಿಸಿದರೆ ಆಕ್ಷೇಪ ವ್ಯಕ್ತಪಡಿಸಬಹುದು. ಆದರೆ ರಾಜ್ಯಪಾಲರು ಸ್ವತಂತ್ರ ನಿರ್ಣಯ ಕೈಗೊಳ್ಳುವಂತಿಲ್ಲ.
ಇದನ್ನೂ ಓದಿ: ಜನವರಿ 22ರಿಂದ 31ರ ವರೆಗೆ ವಿಶೇಷ ಅಧಿವೇಶನಕ್ಕೆ ಕ್ಯಾಬಿನೆಟ್ ನಿರ್ಧಾರ; ಕಾರಣ ಏನು?
ಸರ್ಕಾರದ ಮುಂದಿರುವ ಆಯ್ಕೆಗಳೇನು?
- ಸಂವಿಧಾನದ 176ನೇ ವಿಧಿಯ ಪ್ರಕಾರ ರಾಜ್ಯಪಾಲರು ಕಡ್ಡಾಯವಾಗಿ ಭಾಷಣವನ್ನ ಓದಲೇಬೇಕೆಂಬ ವಾದ ಮುಂದಿಡುವುದು
- ವೈಯಕ್ತಿಕ ಅಂಶಗಳನ್ನು ಓದಲು ಇಲ್ಲವೇ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಇಲ್ಲ ಎಂದು ಪ್ರತಿಪಾದಿಸುವುದು
- ಇದಕ್ಕೂ ಒಪ್ಪದೇ ಇದ್ದಲ್ಲಿ ರಾಜ್ಯಪಾಲರ ಮನವೊಲಿಕೆ ಯತ್ನ ನಡೆಸುವುದು
- ಈ ವೇಳೆ ನರೇಗಾ ವಿಚಾರವನ್ನ ಭಾಷಣದಲ್ಲಿ ಕೈಬಿಡಬೇಕೆಂದು ರಾಜ್ಯಪಾಲರ ಪಟ್ಟು ಹಿಡಿಯುವ ಸಾಧ್ಯತೆ
- ಆಗಲೂ ರಾಜ್ಯಪಾಲರ ಮಾತಿಗೆ ಒಪ್ಪದಿದ್ದಲ್ಲಿ ತುರ್ತು ಸಚಿವ ಸಂಪುಟ ಸಭೆ ಕರೆಯುವ ಸಾಧ್ಯತೆ
- ಕೆಲ ಕಾಲ ವಿಶೇಷ ಅಧಿವೇಶನ ಮುಂದೂಡಿ ತುರ್ತು ಸಚಿವ ಸಂಪುಟ ಕರೆಯಲು ಅವಕಾಶ
- ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರ ವಿರುದ್ಧ ನಿರ್ಣಯ ಕೈಗೊಳ್ಳಲು ಅವಕಾಶ
- ರಾಜ್ಯಪಾಲರನ್ನ ವಾಪಸ್ ಕರೆಸಿಕೊಳ್ಳಿ ಎಂದು ಒತ್ತಾಯಿಸಿ ಕೇಂದ್ರಕ್ಕೆ ನಿರ್ಣಯ ಪಾಸ್ ಮಾಡುವ ಸಾಧ್ಯತೆ
- ಜೊತೆಗೆ ರಾಜ್ಯಪಾಲರ ನಡೆ ವಿರೋಧಿಸಿ ರಾಷ್ಟ್ರಪತಿಗಳಿಗೆ ದೂರು ನೀಡಲು ಅವಕಾಶ
- ರಾಜ್ಯಪಾಲರ ವಿರುದ್ಧ ಕಾನೂನು ಹೋರಾಟ ನಡೆಸಬಹುದು
ಸ್ಪೀಕರ್, ಸಭಾಪತಿ ಅಭಿಪ್ರಾಯವೇನು?
ಸರ್ಕಾರ ಬರೆದುಕೊಟ್ಟ ಭಾಷಣವನ್ನು ರಾಜ್ಯಪಾಲರು ಓದಲೇಬೇಕು. ಸರ್ಕಾರ ಕೊಟ್ಟಿದ್ದೇ ಫೈನಲ್ ಆಗಿದ್ದು, ರಾಜ್ಯಪಾಲರು ತಮ್ಮದೇ ಲೈನ್ ಸೇರಿಸಲು ಕಟ್ ಮಾಡಲು ಬರಲ್ಲ. ಸರ್ಕಾರ ನೀಡಿದ ಭಾಷಣವನ್ನ ಓದೋದು ರಾಜ್ಯಪಾಲರ ಕರ್ತವ್ಯ ಎಂದು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ನಮ್ಮ ರಾಜ್ಯಪಾಲರು ಪ್ರಬುದ್ಧರು, ಹಿರಿಯರು, ಸಂವಿಧಾನ, ನಿಯಮ ಎಲ್ಲ ಗೊತ್ತಿದೆ. ಅವರು ಸಂವಿಧಾನದ ಪ್ರಕಾರ ನಡೆಯುತ್ತಾರೆ ಅಂತಾ ನನಗೆ ನಂಬಿಕೆ ಇದೆ. ಸರ್ಕಾರ ಕೊಟ್ಟ ಭಾಷಣವನ್ನು ರಾಜ್ಯಪಾಲರು ಓದಬೇಕು ಅಂತಾ ಸಭಾಪತಿ ಹೊರಟ್ಟಿ ಹೇಳಿರೋದನ್ನ ನಾನು ಅನುಮೋದಿಸುತ್ತೇನೆ ಎಂದು ಸ್ಪೀಕರ್ ಖಾದರ್ ಹೇಳಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
