ತಪಾಸಣೆ ನೆಪದಲ್ಲಿ ವಿದೇಶಿ ಮಹಿಳೆಯ ಖಾಸಗಿ ಅಂಗ ಸ್ಪರ್ಶಿಸಿ ತಬ್ಬಿಕೊಂಡ ವಿಮಾನ ನಿಲ್ದಾಣ ಸಿಬ್ಬಂದಿಯ ಬಂಧನ
ಭದ್ರತಾ ತಪಾಸಣೆಯ ಹೆಸರಿನಲ್ಲಿ ವಿಮಾನ ನಿಲ್ದಾಣದ ಸಿಬ್ಬಂದಿಯೇ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಸದ್ಯ ಆರೋಪಿ ಅಪಾನ್ ಅಹ್ಮದ್ ಎಂಬಾತನನ್ನು ವಶಕ್ಕೆ ಪಡೆದಿರುವ ಏರ್‌ಪೋರ್ಟ್ ಸಿಬ್ಬಂದಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಅಷ್ಟಕ್ಕೂ ಆರೋಪಿ ಅಪಾನ್ ಮಾಡಿದ್ದೇನು? ಇಲ್ಲಿದೆ ಮಾಹಿತಿ.

ಬೆಂಗಳೂರು, ಜನವರಿ 22: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ವಿದೇಶಿ ಮಹಿಳೆಗೆ ತಪಾಸಣೆ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ ಗಂಭೀರ ಘಟನೆ ವರದಿಯಾಗಿದೆ. ಕೊರಿಯಾಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ವಿದೇಶಿ ಮಹಿಳೆಗೆ ಏರ್‌ಪೋರ್ಟ್ ಸಿಬ್ಬಂದಿ ಅಪಾನ್ ಅಹ್ಮದ್ ಎಂಬಾತ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಸದ್ಯ ಆತನ ಬಂಧನವಾಗಿದೆ.
ಟಿಕೆಟ್ ಪರಿಶೀಲನೆ ವೇಳೆ ಮಹಿಳೆಯ ಬ್ಯಾಗ್‌ನಿಂದ ಬೀಪ್ ಸೌಂಡ್ ಬರುತ್ತಿದೆ ಎಂದು ಹೇಳಿದ ಅಪಾನ್ ಅಹ್ಮದ್, ಪ್ರತ್ಯೇಕವಾಗಿ ತಪಾಸಣೆ ನಡೆಸಬೇಕೆಂದು ತಿಳಿಸಿದ್ದಾನೆ. ಚೆಕಿಂಗ್ ಕೌಂಟರ್‌ಗೆ ಹೋದರೆ ವಿಮಾನಕ್ಕೆ ತಡವಾಗುತ್ತದೆ ಎಂದು ನಂಬಿಸಿ, ಮಹಿಳೆಯನ್ನು ಪುರುಷರ ಶೌಚಾಲಯಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ತಪಾಸಣೆ ನೆಪದಲ್ಲಿ ಮಹಿಳೆಯ ಖಾಸಗಿ ಅಂಗಗಳನ್ನು ಸ್ಪರ್ಶಿಸಿ, ಬಲವಂತವಾಗಿ ತಬ್ಬಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಈ ವೇಳೆ ಮಹಿಳೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಷ್ಟರಲ್ಲಿ ಆರೋಪಿಯು, ‘ಓಕೆ ಥ್ಯಾಂಕ್ ಯು’ ಎಂದು ಹೇಳಿ ಅಲ್ಲಿಂದ ಹೊರನಡೆದಿದ್ದಾನೆ. ಬಳಿಕ ವಿದೇಶಿ ಮಹಿಳೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ದೂರು ನೀಡಿದ್ದು, ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ವಿದೇಶಿ ಮಹಿಳೆಯ ದೂರಿನ ಮೇರೆಗೆ ಕೆಂಪೇಗೌಡ ಏರ್‌ಪೋರ್ಟ್ ಠಾಣೆ ಪೊಲೀಸರು ಅಪಾನ್ ಅಹ್ಮದ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಬಂಧನವಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಗಣರಾಜ್ಯೋತ್ಸವ ಹಿನ್ನೆಲೆ ವಿಮಾನ ನಿಲ್ದಾಣದಲ್ಲಿ ಭದ್ರತೆ ಹೆಚ್ಚಳ
ಗಣರಾಜ್ಯೋತ್ಸವ ಮತ್ತು ದೀರ್ಘ ವಾರಾಂತ್ಯದ ಕಾರಣ ವಿಮಾನ ನಿಲ್ದಾಣದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಪ್ರಯಾಣಿಕರ ಭದ್ರತಾ ತಪಾಸಣೆಯನ್ನೂ ಬಿಗಿಗೊಳಿಸಲಾಗಿದೆ. ಇದರಿಂದಾಗಿ ಭದ್ರತಾ ತಪಾಸಣೆಯ ಹೆಚ್ಚುವರಿ ಸಮಯವನ್ನು ಗಮನದಲ್ಲಿಟ್ಟುಕೊಂಡು ಬೇಗನೆ ಏರ್ಪೋರ್ಟ್ಗೆ ಬರುವಂತೆ ಪ್ರಯಾಣಿಕರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಡಳಿತ ಸಲಹೆ ನೀಡಿದೆ.
ಇದನ್ನೂ ಓದಿ: ವಿಮಾನ ಪ್ರಯಾಣಿಕರೇ ಗಮನಿಸಿ: ಬೆಂಗಳೂರು ಏರ್ಪೋರ್ಟ್ನಿಂದ ಮಹತ್ವದ ಸೂಚನೆ; ಮಾಹಿತಿ ಇಲ್ಲಿದೆ
ಕೊನೆ ಕ್ಷಣದಲ್ಲಿ ವಿಮಾನಕ್ಕೆ ತೆರಳಲು ವಿಳಂಬವಾಗುವುದು ಅಥವಾ ವಿಮಾನ ತಪ್ಪುವಂಥ ಸನ್ನಿವೇಶ ಸೃಷ್ಟಿಯಾಗದಿರಲು ಸಾಮಾನ್ಯವಾಗಿ ಬರುವುದಕ್ಕಿಂತಲೂ ಸ್ವಲ್ಪ ಹೆಚ್ಚೇ ಬೇಗನೆ ಏರ್ಪೋರ್ಟ್ಗೆ ಬರುವಂತೆ ಪ್ರಯಾಣಿಕರಿಗೆ ಮನವಿ ಮಾಡಲಾಗಿದೆ.