AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಹಿಂದ ಸಮಾವೇಶಕ್ಕೆ ವಾಹನ ನೀಡದಂತೆ ಹೇಳಿದ್ದಾರೆ: ಡಿಕೆಶಿ ವಿರುದ್ಧ ಗಂಭೀರ ಆರೋಪ

ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ನಡುವೆ, ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ನಡೆಸಿ ಸಿದ್ದರಾಮಯ್ಯನವರಿಗೆ ಪ್ರಬಲ ಬೆಂಬಲ ವ್ಯಕ್ತಪಡಿಸಿದೆ. ಹೈಕಮಾಂಡ್ ಸಿಎಂ ಬದಲಾವಣೆ ಮಾಡಬಾರದೆಂದು ಅಹಿಂದ ನಾಯಕರು ಎಚ್ಚರಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅಹಿಂದ ಸಮಾವೇಶಗಳಿಗೆ ಅಡ್ಡಿಪಡಿಸುತ್ತಿದ್ದಾರೆಂದು ಆರೋಪಿಸಲಾಗಿದ್ದು, ಸಿದ್ದರಾಮಯ್ಯನವರನ್ನು ಕುಗ್ಗಿಸುವ ಪ್ರಯತ್ನವನ್ನು ವಿರೋಧಿಸಲಾಗಿದೆ. ಇದು ಐದು ಹಂತದ ಸಮಾವೇಶಗಳಲ್ಲಿ ಮೊದಲನೆಯದು.

ಅಹಿಂದ ಸಮಾವೇಶಕ್ಕೆ ವಾಹನ ನೀಡದಂತೆ ಹೇಳಿದ್ದಾರೆ: ಡಿಕೆಶಿ ವಿರುದ್ಧ ಗಂಭೀರ ಆರೋಪ
ಅಹಿಂದ ಸಮಾವೇಶ
ಸಂಜಯ್ಯಾ ಚಿಕ್ಕಮಠ
| Edited By: |

Updated on: Jan 21, 2026 | 10:22 PM

Share

ಹುಬ್ಬಳ್ಳಿ, ಜ.21: ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ನಡುವೆ, ಅಹಿಂದ ಸಮ್ಮೇಳನ (AHINDA Rallies for Siddaramaiah) ನಡೆದಿದೆ. ಇದೀಗ ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್​​ ಬಣದ ನಡುವೆ ಮುಸುಕಿನ ಗುದ್ದಾಟ ಜೋರಾಗಿರುವಂತೆ ಕಾಣುತ್ತಿದೆ. ನವೆಂಬರ್​ ಕ್ರಾಂತಿ, ಡಿಸೆಂಬರ್​​ ಕ್ರಾಂತಿ ಎಂದೆಲ್ಲ ವಿರೋಧ ಪಕ್ಷದ ನಾಯಕರ ಜತೆಗೆ ಕಾಂಗ್ರೆಸ್​​​ನ ಕೆಲವು ನಾಯಕರು ಕೂಡ ಹೇಳಿಕೆಯನ್ನು ನೀಡುತ್ತಿದ್ದರು. ಇದೀಗ ಬಹಿರಂಗವಾಗಿ ಸಿಎಂ ಸಿದ್ಧರಾಮಯ್ಯ ಪರ ಅಹಿಂದ ನಾಯಕರು ನಿಂತಿದ್ದಾರೆ. ಸಿದ್ದರಾಮಯ್ಯನವರು ಎರಡನೇ ಬಾರಿಗೆ ಸಿಎಂ ಆಗಿ ಎರಡುವರೆ ವರ್ಷವಾಗುತ್ತಿದ್ದಂತೆ, ರಾಜ್ಯದಲ್ಲಿ ಸಿಎಂ ಕುರ್ಚಿ ಬದಲಾವಣೆ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಸ್ವತಃ ಕಾಂಗ್ರೆಸ್​ನ ಅನೇಕರು ಸಿದ್ದರಾಮಯ್ಯರನ್ನು ಕೆಳಗಿಳಿಸಿ ಡಿ.ಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಹೇಳಿದ್ದಾರೆ. ಇನ್ನು ಕೆಲವರು ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಆಗೋದಿಲ್ಲಾ ಅಂತ ಹೇಳುತ್ತಲೇ ಇದ್ದಾರೆ. ಆದರೆ ಈ ಬಗ್ಗೆ ಹೈಕಮಾಂಡ್ ನಿಂದ ಮಾತ್ರ ಸಿಎಂ ಬದಲಾವಣೆಯ ಚರ್ಚೆಗೆ ತೆರೆ ಎಳೆಯುವ ಯಾವುದೇ ಕೆಲಸ ಆಗುತ್ತಿಲ್ಲ. ಇದು ಅಹಿಂದ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯನವರಿಗೆ ಶಕ್ತಿ ತುಂಬಲು ಇಂದು (ಜ.21) ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ನಡೆಸಲಾಯಿತು. ಹುಬ್ಬಳ್ಳಿ ನಗರದ ಗ್ಲಾಸ್ ಹೌಸ್ ನಲ್ಲಿ ನಡೆದ ಅಹಿಂದ ಸಮಾವೇಶಲ್ಲಿ ಅನೇಕ ನಾಯಕರು ಭಾಗಿಯಾಗಿದ್ದರು. ಸಿದ್ದರಾಮಯ್ಯರಿಗೆ ಶಕ್ತಿ ತುಂಬಲು ಅಹಿಂದ ನಾಯಕರು ಮುಂದಾಗಿದ್ದಾರೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಇಂದು ಉತ್ತರ ಕರ್ನಾಟಕ ಭಾಗದ ಅಹಿಂದ ನಾಯಕರು ಭಾಗಿಯಾಗಿದ್ದರು. ಇದರ ನಡುವೆ ಅಹಿಂದ ನಾಯಕರು ಡಿಕೆ ಶಿವಕುಮಾರ್​​ ವಿರುದ್ಧ ಒಂದು ಮಹತ್ವದ ಆರೋಪವನ್ನು ಮಾಡಿದ್ದಾರೆ. ಜ.27ರಂದು ಮೈಸೂರಿನಲ್ಲಿ ನಡೆಯುವ ಅಹಿಂದ ಸಮಾವೇಶಕ್ಕೆ ವಾಹನಗಳನ್ನು ಬಿಡಬಾರದು ಎಂದು ಹೇಳಿದ್ದಾರೆ. ಈ ಮೂಲಕ ಸಿದ್ಧರಾಮಯ್ಯ ಅವರನ್ನು ಕುಗ್ಗಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಈ ಸಮಾವೇಶದ ಮೂಲಕ ಯಾವುದೇ ಕಾರಣಕ್ಕೂ ಕೂಡಾ ಸಿಎಂ ಸಿದ್ದರಾಮಯ್ಯರನ್ನು ಬದಲಾವಣೆ ಮಾಡಬಾರದು. ಮಾಡಿದ್ರೆ ಅಹಿಂದ ವರ್ಗ ಸುಮ್ಮನೇ ಇರೋದಿಲ್ಲಾ. ಈ ಗೊಂದಲಗಳಿಗೆ ಕಾಂಗ್ರೆಸ್ ಹೈಕಮಾಂಡ್ ತೆರೆ ಎಳೆಯೋ ಕೆಲಸ ಮಾಡಬೇಕು ಎಂದು ಹೇಳಿದೆ. ರಾಜ್ಯದಲ್ಲಿ ಐದು ಕಡೆ ಅಹಿಂದ ಸಮಾವೇಶ ನಡೆಸಲು ಮುಂದಾಗಿದ್ದು, ಮೊದಲ ಸಮಾವೇಶವನ್ನು ಇಂದು ಹುಬ್ಬಳ್ಳಿಯಲ್ಲಿ ನಡೆಸಲಾಯಿತು, ಇಲ್ಲಿಂದ ರಾಜ್ಯಾದ್ಯಂತ ಸಮಾವೇಶ ನಡೆಸಲು ಅಹಿಂದ ನಾಯಕರು ಮುಂದಾಗಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಅಹಿಂದ ಸಮಾವೇಶಕ್ಕೆ ಸಚಿವರಾದ ಸತೀಶ್ ಜಾರಕಿಹೊಳಿ, ಮಹದೇವಪ್ಪ ಸೇರಿದಂತೆ ಹತ್ತಕ್ಕೂ ಹೆಚ್ಚು ಕಾಂಗ್ರೆಸ್ ಸಚಿವರು, ಅನೇಕ ಶಾಸಕರಿಗೆ ಆಹ್ವಾನ ನೀಡಲಾಗಿತ್ತು. ಆದ್ರೆ ಇಂದಿನ ಸಮಾವೇಶಕ್ಕೆ ಯಾವೊಬ್ಬ ಸಚಿವರು ಭಾಗಿಯಾಗಿಲ್ಲ. ಇನ್ನು ಸಿಎಂ ಸಿದ್ದರಾಮಯ್ಯರನ್ನು ಕೆಳಗಿಳಿಸೋ ಷಡ್ಯಂತ್ರವನ್ನು ಡಿಸಿಎಂ ಡಿ ಕೆ ಶಿವಕುಮಾರ್ ಮಾಡಿದ್ದಾರೆ. ಇಂದಿನ ಸಭೆಗೆ ಯಾರಿಗೂ ಬರದಂತೆ ನೋಡಿಕೊಂಡಿದ್ದಾರೆ. ಹುಬ್ಬಳ್ಳಿ ಯಲ್ಲಿ 24 ಕ್ಕೆ ನಡೆಯೋ ಮನೆ ಹಂಚಿಕೆ ಕಾರ್ಯಕ್ರಮಕ್ಕೆ ಕೂಡ ಅಹಿಂದ ಜನರು ಬರದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಅಹಿಂದ ನಾಯಕರು ಹೇಳಿದ್ದಾರೆ.

ಸಿಎಂ ಸ್ಥಾನದಿಂದ ಕೆಳಗಿಳಿಸಿದ್ರೆ ಅಲ್ಲೋಲ ಕಲ್ಲೋಲ

ಸಿಎಂ ಸಿದ್ದರಾಮಯ್ಯಗೆ ಶಕ್ತಿ ತುಂಬಲು ಸಮಾವೇಶ ಮಾಡ್ತಿದ್ದೇವೆ. ಸಿದ್ದರಾಮಯ್ಯರನ್ನು ಕೆಳಗಿಳಿಸಲು ಕಾಂಗ್ರೆಸ್ ಪಕ್ಷ ಹೊರಟಿದೆ. ಯಾವ ಕಾರಣಕ್ಕೆ ಸಿಎಂ ಸ್ಥಾನದಿಂದ ಕೆಳಗಿಳಿಸುವ ಕೆಲಸ ನಡೀತಿದೆ. ಸಾವಿರಾರು ಕೋಟಿ ಲಂಚ ಹೊಡೆದು ಜೈಲಿಗೆ ಹೋಗಿದ್ದಾರಾ? ಸಿದ್ದರಾಮಯ್ಯ ಮಾಡಿರುವ ತಪ್ಪು ಏನೆಂದು ಕಾಂಗ್ರೆಸ್ ಹೇಳಲ. ಸಿಎಂ ಸ್ಥಾನದಿಂದ ಕೆಳಗಿಳಿಸಿದ್ರೆ ಅಲ್ಲೋಲ ಕಲ್ಲೋಲ ಆಗುತ್ತದೆ. ಯಾವ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ರಾಜ್ಯದಲ್ಲಿ ಶೇ.86ರಷ್ಟು ಅಹಿಂದ ಸಮುದಾಯದವರು ಇದ್ದೇವೆ. 2028ರವರೆಗೆ ಕೆಳಗಿಳಿಸುವುದಿಲ್ಲ ಅಂತಾ ಹೈಕಮಾಂಡ್​ ಹೇಳಬೇಕು. ಪದೇಪದೆ ಅಹಿಂದ ನಾಯಕರನ್ನು ಅವಮಾನಿಸಿದ್ರೆ ನಾವು ಬಿಡಲ್ಲ ಎಂದು ಅಹಿಂದ ಮುಖಂಡ ಸಿದ್ದಣ್ಣ ತೇಜಿ ಹೇಳಿದ್ದಾರೆ.

ಇದನ್ನೂ ಓದಿ: ಭಾಷಣ ಮಾಡಲ್ಲ ಎಂದ ರಾಜ್ಯಪಾಲರು: ವಿಶೇಷ ಅಧಿವೇಶನ ರದ್ದಾಗುತ್ತಾ? ಸರ್ಕಾರದ ಮುಂದಿರುವ ಆಯ್ಕೆಗಳೇನು?

ಅಹಿಂದ ಸಮಾವೇಶಕ್ಕೆ ವಾಹನ ನೀಡಬೇಡಿ ಎಂದಿದ್ದಾರೆ ಡಿಕೆಶಿ

ಅಹಿಂದ ಮುಖಂಡರನ್ನು ಡಿ.ಕೆ.ಶಿವಕುಮಾರ್ ಮುಗಿಸುವ ಕೆಲಸ ಮಾಡುತ್ತಿದ್ದಾರೆ. ಜನವರಿ 24ಕ್ಕೆ ನಡೆಯುವ ಅಹಿಂದ ಸಮಾವೇಶಕ್ಕೆ ವಾಹನ ನೀಡಬೇಡಿ ಎಂದು ಹೇಳಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಪ್ರಭಾವ ಕುಗ್ಗಿಸಲು ಯತ್ನಿಸುತ್ತಿದ್ದಾರೆ. ಅಹಿಂದ ಜನ ಬಂದ್ರೆ ಸಿದ್ದರಾಮಯ್ಯ ಪರ ಜೈಕಾರ ಹಾಕುತ್ತಾರೆ. ಹೀಗಾಗಿ ಅವರು ಬರದಂತೆ ನೋಡಿಕೊಳ್ಳಿ ಅಂತಾ ಹೇಳಿದ್ದಾರೆ. ಕಾಂಗ್ರೆಸ್ ಶಾಸಕರು, ನಾಯಕರಿಗೆ ಡಿಕೆ ವಾರ್ನಿಂಗ್ ನೀಡಿದ್ದಾರೆ. ಕಾಂಗ್ರೆಸ್ ಲಿಂಗಾಯತರ ಪಕ್ಷ ಆಗುತ್ತಿದೆ. ಸಿದ್ದರಾಮಯ್ಯ ಮುಖ ನೋಡಿ ಲಿಂಗಾಯತರಿಗೆ ವೋಟ್ ಹಾಕಿದ್ದೇವೆ. ಇದರ ಜತೆಗೆ ಅಹಿಂದ ಅಧಿಕಾರಿಗಳಿಗೆ ಒಳ್ಳೆಯ ಪೋಸ್ಟ್ ಆಗುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾಗಲೇ ಇಂತಹ ಪರಿಸ್ಥಿತಿ ಇದೆ. ಕೋಮುವಾದಿ ಪಕ್ಷ ಅಧಿಕಾರದಲ್ಲಿದ್ದರೆ ನಮ್ಮ ಪರಿಸ್ಥಿತಿ ಏನಾಗುತ್ತದೆ ಎಂದು ಅಹಿಂದ ಮುಖಂಡರು ಹೇಳಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ