PSI Recruitment Scam: ಅಕ್ರಮದಲ್ಲಿ ಶಾಮೀಲಾಗಿ ಅಭ್ಯರ್ಥಿಗೆ ಕೆಲಸ ಕೊಡಿಸಿದ್ದ ಚನ್ನರಾಯಪಟ್ಟಣ ಪುರಸಭೆ ಸದಸ್ಯ ಬಂಧನ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 10, 2022 | 8:47 AM

ಪಿಎಸ್​ಐ ನೇಮಕಾತಿ ಹಗರಣದ ಆರೋಪಿ ಶಶಿಧರನನ್ನು ವಿಚಾರಣೆಗಾಗಿ 10 ದಿನಗಳ ಅವಧಿಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.

PSI Recruitment Scam: ಅಕ್ರಮದಲ್ಲಿ ಶಾಮೀಲಾಗಿ ಅಭ್ಯರ್ಥಿಗೆ ಕೆಲಸ ಕೊಡಿಸಿದ್ದ ಚನ್ನರಾಯಪಟ್ಟಣ ಪುರಸಭೆ ಸದಸ್ಯ ಬಂಧನ
ಸಿಐಡಿ ಬಂಧಿಸಿರುವ ರುದ್ರಗೌಡ ಮತ್ತು ಕೇಶವ ಪ್ರಸಾದ್
Follow us on

ಹಾಸನ: ಪಿಎಸ್​ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಚನ್ನರಾಯಪಟ್ಟಣ ಪುರಸಭೆಯ ಹಾಲಿ ಸದಸ್ಯ ಸಿ.ಎನ್.ಶಶಿಧರ್ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಶಶಿಧರನನ್ನು ವಿಚಾರಣೆಗಾಗಿ 10 ದಿನಗಳ ಅವಧಿಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಪಿಎಸ್​ಐ ಹುದ್ದೆಗೆ ಆಯ್ಕೆಯಾಗಿದ್ದ ಬೆಕ್ಕ ಗ್ರಾಮದ ವೆಂಕಟೇಶ್​ ಅವರಿಗೆ ಕೆಲಸ ಪಡೆಯಲು ಡೀಲ್ ಮಾಡಿಸಿದ್ದ ಆರೋಪದ ಮೇಲೆ ಶಶಿಯನ್ನು ಬಂಧಿಸಲಾಗಿದೆ. ಈ ಹಿಂದೆ ಜೆಡಿಎಸ್​ನಲ್ಲಿದ್ದ ಶಶಿ, ನಂತರದ ದಿನಗಳಲ್ಲಿ ಜೆಡಿಎಸ್ ತೊರೆದು ಬಿಜೆಪಿ ನಾಯಕರ ಜೊತೆಗೆ ಸಖ್ಯ ಬೆಳೆಸಿಕೊಂಡರು.

ಶಶಿ‌ ಸಂಬಂಧಿಯೂ ಆಗಿರುವ ಬೆಕ್ಕ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಕೇಶವಮೂರ್ತಿ ಅವರನ್ನು ಮೂರು ದಿನಗಳ ಹಿಂದೆ ಬಂಧಿಸಲಾಗಿತ್ತು. ನಂತರ ಪಿಎಸ್​ಐ ಆಗಿ ಆಯ್ಕೆ ಆಗಿದ್ದ ವೆಂಕಟೇಶ್ ಮತ್ತು ಆತನ ತಂದೆ ಚಂದ್ರಶೇಖರ್​ ಅವರನ್ನು ಬಂಧಿಸಲಾಗಿತ್ತು. ಪ್ರಭಾವಿಗಳು ಮತ್ತು ಪೊಲೀಸ್ ಅಧಿಕಾರಿಗಳ ಜೊತೆ ಸಂಬಂಧ ಹೊಂದಿ ಡೀಲ್ ಕುದುರಿಸಿರುವ ಆರೋಪದ ಮೇಲೆ ಶಶಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಶಶಿ ವಿಚಾರಣೆ ನಂತರ ಮತ್ತಷ್ಟು ವಿಚಾರ ಬಹಿರಂಗಗೊಳ್ಳುವ ಸಾಧ್ಯತೆಯಿದೆ.

ಪಿಡಬ್ಲ್ಯುಡಿ ಪರೀಕ್ಷೆ ಅಕ್ರಮದಲ್ಲಿಯೂ ರುದ್ರಗೌಡ ಕಿಂಗ್​ಪಿನ್

ಪಿಎಸ್​ಐ ಹುದ್ದೆಗಳ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ರುದ್ರಗೌಡ ಪಾಟೀಲ್ ಈ ಹಿಂದೆ ನಡೆದಿದ್ದ ಪಿಡಬ್ಲ್ಯುಡಿ ನೇಮಕಾತಿ ಅಕ್ರಮದಲ್ಲಿಯೂ ಮುಖ್ಯ ಪಾತ್ರ ವಹಿಸಿದ್ದ ಸಂಗತಿ ಬೆಳಕಿಗೆ ಬಂದಿದೆ. ಈ ಸಂಬಂಧ ಕಳೆದ ಡಿಸೆಂಬರ್ 14ರಂದು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಡಬ್ಲ್ಯುಡಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ ರುದ್ರಗೌಡ 7ನೇ ಆರೋಪಿಯಾಗಿದ್ದ. ಈ ಸಂಬಂಧ ಬೆಂಗಳೂರಿನ ಸೇಂಟ್​ಜಾನ್ಸ್ ಶಾಲೆಯ ಸಿಬ್ಬಂದಿ ದೂರು ನೀಡಿದ್ದರು.

ಅಭ್ಯರ್ಥಿಯೊಬ್ಬ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯಲು ಯತ್ನಿಸಿದ್ದ ಸಂದರ್ಭದಲ್ಲಿ ಸಿಕ್ಕಿಹಾಕಿಕೊಂಡ ನಂತರ ಪ್ರಕರಣ ಬೆಳಕಿಗೆ ಬಂದಿತ್ತು. ಅನೇಕರಿಗೆ ಅಕ್ರಮವಾಗಿ ಪರೀಕ್ಷೆ ಬರೆಸಿರುವ ರುದ್ರಗೌಡನಿಗೆ ಇದೀಗ ಕೇಸ್​ ರೀ ಓಪನ್ ಆದ​ ಹಿನ್ನೆಲೆಯಲ್ಲಿ ಹೊಸ ಸಂಕಷ್ಟ ಎದುರಾಗಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ರುದ್ರಗೌಡನನ್ನು ವಶಕ್ಕೆ ಪಡೆದುಕೊಳ್ಳಲು ಕಲಬುರಗಿಗೆ ಬಂದಿದ್ದಾರೆ. ಸದ್ಯ ಪಿಎಸ್​ಐ ಅಕ್ರಮ ನೇಮಕಾತಿ ಅಕ್ರಮದ ಆರೋಪ ಹೊತ್ತಿರುವ ರುದ್ರಗೌಡ ಜೈಲು ಸೇರಿದ್ದಾರೆ.

ಇದನ್ನೂ ಓದಿ: ಪಿಎಸ್​ಐ ಅಕ್ರಮದ ಮೂಲ ಕಿಂಗ್​​ಪಿನ್​​ ಹೆಸರು ಹೇಳಿದ್ರೆ ಸರ್ಕಾರವೇ ಉರುಳುತ್ತೆ: ಹೊಸ ಬಾಂಬ್​ ಸಿಡಿಸಿದ, ಮಾಜಿ ಸಿಎಂ ಹೆಚ್.​​ಡಿ. ಕುಮಾರಸ್ವಾಮಿ

ಇದನ್ನೂ ಓದಿ: ಪಿಎಸ್‌ಐ ನೇಮಕಾತಿ ಅಕ್ರಮ: ಬಂಧಿತ ಸಿಪಿಐ ಆನಂದ್ PSI ಪರೀಕ್ಷೆ ಬಳಿಕ ಬರೋಬ್ಬರಿ 22 ಎಕರೆ ಜಮೀನು ಖರೀದಿ ಮಾಡಿದ್ದ

Published On - 8:47 am, Tue, 10 May 22