ಹಾಸನ, (ಜುಲೈ 31): ಹಗರಣಗಳ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಲಿದ್ದಾರೆ ಎನ್ನುವ ಸುದ್ದಿ ಓಡಾಡುತ್ತಿದೆ. ಈ ಸುದ್ದಿ ಬೆನ್ನಲ್ಲೇ ಇತ್ತ ಹಾಸನದಲ್ಲಿ ಕಾಂಗ್ರೆಸ್ ಬೀದಿಗಳಿದು ಪ್ರತಿಭಟನೆ ನಡೆಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ. ಬಳಿಕ ಹಾಸನದ ಕಾಂಗ್ರೆಸ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ಮಾಡಿದ್ದು, ಸಿಎಂ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡದಂತೆ ಹಾಸನ ಡಿಸಿ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ನೀಡಿದರು. ಈ ವೇಳೆ ಮಾತನಾಡಿದ ಶಾಸಕ ಶಿವಲಿಂಗೇಗೌಡ, ಸಿದ್ದರಾಮಯ್ಯ ಸರ್ಕಾರ ಅಲುಗಾಡಿಸಿದ್ರೆ ರಕ್ತಕ್ರಾಂತಿಯಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರವನ್ನು ಅಲುಗಾಡಿಸಿದರೆ ರಕ್ತಕ್ರಾಂತಿ ಆಗುತ್ತೆ ಎಚ್ಚರದಿಂದ ಇರಿ.
ನಿಮಗೆ ಏನಾದರೂ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವ ಆಲೋಚನೆ ಇದ್ದರೆ ಅದನ್ನು ಹಿಂಪಡೆದುಕೊಳ್ಳಿ. ಒಂದು ವೇಳೆ ಪ್ರಾಸಿಕ್ಯೂಷನ್ಗೆ ನೋಟಿಸ್ ಕೊಟ್ಟರೆ ಉಗ್ರಕ್ರಾಂತಿ ಆಗುತ್ತದೆ ಎಂದು ಎಚ್ಚರಿಸಿದ್ದಾರೆ.
ಬಿಜೆಪಿ ಸರ್ಕಾರ ಎರಡು ಬಾರಿಯೂ ಮುಂಭಾಗಲಿನಿಂದ ಅಧಿಕಾರಕ್ಕೆ ಬಂದಿಲ್ಲ. ಬದಲಾಗಿ ಹಿಂಭಾಗಿಲಿನಿಂದ ಅಧಿಕಾರಕ್ಕೆ ಬಂದಿದೆ. ಈ ಬಾರಿ ಪುನಃ ಇದೇ ಆಟವನ್ನು ಬಿಜೆಪಿಯವರು ಹೊರಟಿದ್ದಾರೆ. ಇಂದು ಹಾಸನದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಇವತ್ತು ಸತ್ಯಶೋಧನೆ ಸಮಿತಿ ಸಭೆ ನಡೆಸಿದ್ದೇವೆ. ಇಂದು ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗೆ ಮನವಿ ನೀಡಿದ್ದೇವೆ. ಇದು ನಡೆದರೆ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ, ರಕ್ತ ಕ್ರಾಂತಿ ಆಗುತ್ತೆ. ಇದಕ್ಕೆ ನಾವು ತಯಾರಾಗಿದ್ದೇವೆ ಎಂದು ಖಡಕ್ ಆಗಿ ಹೇಳಿದರು.
136 ಸೀಟ್ ಬಂದಿರುವ ಸರ್ಕಾರವನ್ನು ಅನ್ಯ ಮಾರ್ಗದಲ್ಲಿ ತಗೆಯಲು ಹೋದರೆ ಈ ರಾಜ್ಯದಲ್ಲಿ ಯುದ್ದನೇ ಆಗುತ್ತೆ, ರಕ್ತ ಕ್ರಾಂತಿ ಆಗುತ್ತೆ. ಬಿಜೆಪಿಗೆಯವರಿಗೆ ಇದು ಎಚ್ಚರಿಕೆ. ಎರಡು ಬಾರಿ ನಿಮ್ಮ ಆಟ ನೋಡಿದ್ದೇವೆ. ಈ ಬಾರಿ ನಿಮ್ಮ ಆಟ ನಡೆಯಲ್ಲ. ರಾಜ್ಯದಲ್ಲಿ ಯುದ್ದನೇ ಮಾಡಬೇಕಾಗುತ್ತೆ. ಅನಿವಾರ್ಯ ಘಟನೆ ನಡೆದರೆ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಯುದ್ಧಕ್ಕೆ ತಯಾರಾಗಿ ಎಂದು ಕರೆ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ