ರಾಜ್ಯಪಾಲರ ಮೂಲಕ ಸಿದ್ದರಾಮಯ್ಯ ಸರ್ಕಾರ ಅಸ್ಥಿರಗೊಳಿಸುವ ಕಸರತ್ತು ನಡೆದಿದ್ಯಾ? ಪುಷ್ಠಿ ನೀಡುವ ಅಂಶಗಳು ಇಲ್ಲಿವೆ
ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಒಂದೆಡೆ ಮುಡಾ ಹಾಗೂ ವಾಲ್ಮೀಕಿ ಹಗರಣಗಳನ್ನಿಟ್ಟುಕೊಂಡು ವಿಪಕ್ಷಗಳಾದ ಬಿಜೆಪಿ ಜೆಡಿಎಸ್ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಅದ್ರೆ, ಇದೀಗ ದೋಸ್ತಿಗಳಲ್ಲಿ ಬಿರುಕು ಮೂಡಿದ್ದು, ಬೆಂಗಳೂರು-ಮೈಸೂರು ಪಾದಯಾತ್ರೆ ಬೆಂಬಲ ಕೊಡುವುದಿಲ್ಲ ಎಂದು ಹೇಳಿದೆ. ಇದರ ಮಧ್ಯ ರಾಜ್ಯಪಾಲರ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವ ಪ್ರಯತ್ನಗಳು ನಡೆದಿವೆಯಾ? ಹೀಗೊಂದು ಪ್ರಶ್ನೆಗೆ ಪುಷ್ಠಿ ನೀಡುವ ಹಲವು ಅಂಶಗಳು ಬಹಿರಂಗವಾಗಿವೆ.
ಬೆಂಗಳೂರು./ಹಾಸನ, (ಜುಲೈ 31): ಲೋಕಸಭಾ ಚುನಾವಣೆ ಬಳಿಕ ಸಿದ್ದರಾಮಯ್ಯ ಸರ್ಕಾರ ಇರುವುದಿಲ್ಲ ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಹೇಳಿಕೊಂಡು ಬಂದಿದ್ದಾರೆ. ಅದರಂತೆ ಇದೀಗ ವಿಪಕ್ಷಗಳು ರಾಜ್ಯಪಾಲರ ಮೂಲಕ ಸಿದ್ದರಾಮಯ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಕಸರತ್ತು ನಡೆದಿದ್ಯಾ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ನನ್ನ ವಿರುದ್ಧ ಪಿತೂರಿ ನಡೆಯಿತ್ತಿದೆ. ಹೀಗಾಗಿ ಹೈಕಮಾಂಡ್ ನಾಯಕರಿಗೆ ಸಹಾಯಕ್ಕೆ ಬರುವಂತೆ ಮನವಿ ಮಾಡಿದ್ದೇನೆ ಎಂದು ಸ್ವತಃ ಸಿದ್ದರಾಮಯ್ಯನವರೇ ನಿನ್ನೆ(ಜುಲೈ 30) ದೆಹಲಿಯಲ್ಲಿ ಹೇಳಿದ್ದರು. ಇನ್ನೊಂದೆಡೆ ಸಿಎಂ ವಿರುದ್ಧ ವಿಚಾರಣೆಗೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕಾನೂನು ತಜ್ಞರಿಂದ ವರದಿ ಪಡೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಸ್ವತಃ ಸಚಿವರೇ ಬಹಿರಂಗವಾಗಿ ರಾಜ್ಯಪಾಲರ ಮೂಲಕ ಸರ್ಕಾರವನ್ನು ಉರುಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಸ್ಫೋಟಕ ಆರೋಪ ಮಾಡಿದ್ದು, ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಇಂದು (ಜುಲೈ31) ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಲುವಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಜೆಡಿಎಸ್ ಅರ್ಜಿಗಳನ್ನು ಕೊಟ್ಟು ರಾಜ್ಯಪಾಲರಿಂದ ಸರ್ಕಾರಕ್ಕೆ ಪತ್ರಗಳನ್ನು ಬರೆಸಿ ಏನಾದರೂ ಮಾಡಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಯತ್ನಿಸುತ್ತಿದ್ದಾರೆ. ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಸಿಲುಕಿಸಿ ಸರ್ಕಾರ ಬುಡಮೇಲು ಮಾಡಲು ಹೊರಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣ: ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಕಾನೂನು ತಜ್ಞರಿಂದ ವರದಿ ಪಡೆದ ರಾಜ್ಯಪಾಲ
ನಮಗೂ ಸಂವಿಧಾನ ಇದೆ. ಈ ದೇಶದಲ್ಲಿ ಜನ ಸಂವಿಧಾನದ ಪರವಾಗಿ ಮತ ಕೊಟ್ಟಿದ್ದಾರೆ. ಸಂವಿಧಾನದ ರಕ್ಷಣೆ ನಮಗೆ ಇದೆ. ರಾಜ್ಯಪಾಲರ ಕಚೇರಿಯನ್ನು ದುರುಪಯೋಗಪಡಿಸಿಕೊಂಡು ನಮ್ಮ ಸರ್ಕಾರವನ್ನು ಬುಡಮೇಲು ಮಾಡಲು ಹೋದರೆ ನಾವು ಕೋರ್ಟ್‌ಗೆ ಹೋಗಿ ಹೋರಾಟ ಮಾಡುತ್ತೇವೆ. ಹಲವು ರಾಜ್ಯಗಳಲ್ಲಿ ಕೋರ್ಟ್ ಮೆಟ್ಟಿಲೇರಿದ್ದಾರೆ. ರಾಜ್ಯಪಾಲರ ಕಚೇರಿ ದುರುಪಯೋಗ ಮಾಡಿ ನಮ್ಮ ಸರ್ಕಾರದ ಮೇಲೆ ಪಿತೂರಿ ಮಾಡಿದರೆ ನಾವು ಸುಪ್ರೀಂಕೋರ್ಟ್ ಮೆಟ್ಟಲಿಗೆ ಹೋಗುತ್ತೇವೆ. ಅಷ್ಟೇ ಅಲ್ಲ ಪ್ರಜಾಪ್ರಭುತ್ವ ಉಳಿಸಲು ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿಯವರು ಇವತ್ತು ಹತಾಶರಾಗಿದ್ದಾರೆ. ಜೆಡಿಎಸ್‌ನವರು ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಜೆಡಿಎಸ್‌ನ ಒಬ್ಬರು, ಬಿಜೆಪಿಯ ಒಬ್ಬರು ದೆಹಲಿಯಲ್ಲಿ ಕುಳಿತುಕೊಂಡು ಕರ್ನಾಟಕಕ್ಕೆ ನ್ಯಾಯ ಕೊಡಿಸುವುದನ್ನು ಬಿಟ್ಟು ನಮ್ಮ ಸರ್ಕಾರ ಬೀಳಿಸಲು ಹೊಂಚು ಹಾಕುತ್ತಿದ್ದಾರೆ. ಕೇಂದ್ರದಲ್ಲಿ ಮಂತ್ರಿಯಾಗಿರುವವರು ಮೇಕೆದಾಟು, ಕಳಸಾಬಂಡೂರಿ ಯೋಜನೆಗೆ ದುಡ್ಡು ಕೊಡಿಸುವುದು ಬಿಟ್ಟು ಅಲ್ಲಿ ಕುಳಿತುಕೊಂಡು ನಮ್ಮ ಸರ್ಕಾರ ಬೀಳಿಸುವುದು ಹೇಗೆಂದು ಸ್ಕೆಚ್ ಹಾಕುತ್ತಿದ್ದಾರೆ. ನಾವು ಕೈಕಟ್ಟಿ ಕುಳಿತು ಕೊಳ್ಳುವುದಿಲ್ಲ, ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಎಲ್ಲಾ ಸವಾಲುಗಳನ್ನು ಎದುರಿಸಲು ತಯಾರಿದ್ದೇವೆ. ಅವರು ಏನು ಮಾಡುತ್ತಾರೆ ಮಾಡಲಿ ಎಂದು ಸವಾಲು ಹಾಕಿದರು.
ಈಗ ಅವರವರಲ್ಲೇ ಜಗಳ ಶುರುವಾಗಿದೆ. ಪ್ರಜಾಪ್ರಭುತ್ವ ಉಳಿಯಬೇಕು ಅದಕ್ಕಾಗಿ ಬೀದಿ ಹೋರಾಟ ಹಾಗೂ ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಈ ಸರ್ಕಾರ ಅಲ್ಲಾಡಿಸಬೇಕು ಎಂದು ಹಗಲುಗನಸು ಕಾಣುತ್ತಿದ್ದಾರೆ ಇಡಿ ಆಯ್ತು ಈಗ ರಾಜ್ಯಪಾಲರ ಕಚೇರಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಮುಡಾ ಹಗರಣದ ವಿರುದ್ಧ ಪಾದಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜನಗಳ ದೃಷ್ಟಿಯಲ್ಲಿ ಒಂದು ಕಲ್ಪನೆ ಕ್ರಿಯೇಟ್ ಮಾಡಲು ಎಲ್ಲಾ ಪಿತೂರಿ ಮಾಡಿತ್ತಿದ್ದಾರೆ. ನಾವು ಆಯೋಗ ರಚನೆ ಮಾಡಿದ್ದೇವೆ ತನಿಖೆ ಮಾಡಲಿ. ಅವರೆಲ್ಲ ಜಗಳ ಶುರುವಾಗಿದೆ. ಮೈಸೂರು ಮುಡಾದಲ್ಲಿ ಹೆಚ್ಚು ಸೈಟ್‌ಗಳನ್ನು ತೆಗೆದುಕೊಂಡಿರುವುದು ಬಿಜೆಪಿ, ಜೆಡಿಎಸ್‌ನವರು ಸಾವಿರಾರು ಸೈಟ್‌ಗಳು, ಸಾವಿರಾರು ಬದಲಿ ಜಮೀನುಗಳನ್ನು ತೆಗೆದುಕೊಂಡಿದ್ದಾರೆ. ಅವರೇನೆ ಮಾಡಬಾರದ್ದು ಮಾಡಿ ನಮ್ಮ ಕಡೆಗೆ ಬೆರಳು ತೋರಿಸುತ್ತಿದ್ದಾರೆ. ಅವರ ಉದ್ದೇಶ ಯಾವ ಹಗರಣವೂ ಅಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಕೊಡುವುದು ಅಲ್ಲ. ಅವರಿಗೆ ಅಧಿಕಾರದ ದಾಹ. ಬಡವರ ಪರವಾಗಿ ಇರುವ ಕಾಂಗ್ರೆಸ್ ಸರ್ಕಾರವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಏನಾದರೂ ಮಾಡಿ ಬಡವರ ಪರ ಇರುವ ಸರ್ಕಾರವನ್ನು ಬುಡಮೇಲು ಮಾಡಲು ಯತ್ನ ಮಾಡುತ್ತಿದ್ದಾರೆ. ಇದು ಪಿತೂರಿಯ ಒಂದು ಭಾಗ ಅಷ್ಟೇ ಎಂದರು.
ವಾಲ್ಮೀಕಿ ಹಗರಣ ಮುಚ್ಚಿ ಹಾಕಿದರು ಎಂದು ಯತ್ನಾಳ್ ಅವರು ಹೇಳಿದ್ದಾರೆ. ಇನ್ನೊಂದು ಕಡೆ ಪಾದಯಾತ್ರೆ ಬೇಕಾಗಿಲ್ಲ ಎಂದು ಜೆಡಿಎಸ್‌ನವರು ಹೇಳುತ್ತಿದ್ದಾರೆ. ಏಕೆಂದರೆ ಅವರೇ ಹೆಚ್ಚು ಫಲಾನುಭವಿಗಳು. ತನಿಖೆ ಮಾಡಿದರೆ ಹೆಚ್ಚು ಹೊರಗೆ ಬರುವುದು ಅವರದ್ದೇ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಲು ನಮ್ಮ ಸರ್ಕಾರ ದೃಢವಾಗಿದೆ. ಆ ದಿಕ್ಕಿನಲ್ಲಿ ನಾವು ಕೆಲಸವನ್ನು ಮಾಡುತ್ತೇವೆ ಎಂದು ಗುಡುಗಿದರು.
ಅದೇ ಆರೋಪ ಮಾಡಿದ ಮಧುಬಂಗಾರಪ್ಪ
ಇನ್ನು ಮತ್ತೊಂದೆಡೆ ಸಚಿವ ಮಧುಬಂಗಾರಪ್ಪ ಅವರು ಮಾತನಾಡಿ, ರೂಲ್ಸ್ ಪ್ರಕಾರ ಏನಿದೆ ಗೊತ್ತಿಲ್ಲ, ಆ ಬಗ್ಗೆ ವಿಶ್ಲೇಷಣೆ ಮಾಡಲ್ಲ. ಆದರೆ ಬಿಜೆಪಿಗೆ ಕೆಟ್ಟ ಚಾಳಿ ಇದೆ. ರಾಜ್ಯಪಾಲರ ಮೂಲಕ ಸರ್ಕಾರ ಅಸ್ಥಿರಗೊಳಿಸುವ ಚಾಳಿ ಇದೆ. ರಾಜ್ಯದಲ್ಲಿ ಬಿಜೆಪಿಯವರಿಗೆ ಬಹುಮತ ಬಂದಿಲ್ಲ. ಪಾದಯಾತ್ರೆ ಸಿಬಿಐ ಇಡಿ ವಿರುದ್ದ ಮಾಡುತ್ತಿದ್ದಾರಾ? ಬಿಜೆಪಿಯವರು ತಿಪ್ಪರಲಾಗ ಹಾಕಿದರೂ ಸರ್ಕಾರಕ್ಕೆ ಏನೂ ಆಗಲ್ಲ ಎಂದು ಹೇಳಿದ್ದಾರೆ.
ರಾಜ್ಯಪಾಲರ ಅನುಮತಿಗೆ ಕೌಂಟರ್ ನೀಡಲು ಸಿದ್ಧತೆ
ವಾಲ್ಮೀಕಿ ಹಾಗೂ ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಅನುಮತಿ ನೀಡುವ ಸಂಬಂಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕಾನೂನು ತಜ್ಞರಿಂದ ವರದಿ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ವಿಚಾರ ಸಿಎಂ ಸಿದ್ದರಾಮಯ್ಯ ಗಮನಕ್ಕೆ ಬಂದಿದ್ದು, ಇಂದು (ಜುಲೈ 31) ಸಂಜೆ ತುರ್ತು ಸಚಿವರ ಸಭೆ ಕರೆದಿದ್ದಾರೆ. ತಮ್ಮ (ಸಿದ್ದರಾಮಯ್ಯ) ವಿರುದ್ಧ ರಾಜ್ಯಪಾಲರು ವಿಚಾರಣಾ ಅನುಮತಿ ನೀಡುವುದನ್ನು ತಡೆಯಲು ನಿರ್ಣಯ ಅಂಗೀಕರಿಸುವ ಸಂಬಂಧ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರೂ ಸಹ ಕಾನೂನು ತಜ್ಞರಿಂದ ಮಾಹಿತಿ ಪಡೆದಿದ್ದಾರೆ.
ರಾಜ್ಯಪಾಲರು ಅವರ ಅಧಿಕಾರ ಚಲಾಯಿಸಬಹುದು ಎಂದ ಅಶೋಕ್
ಇನ್ನು ಸಿಎಂ ಸಿದ್ದರಾಮಯ್ಯ ವಿರುದ್ದ ವಿಚಾರಣಾ ಅನುಮತಿ ನೀಡದಂತೆ ಸಂಪುಟ ಸಭೆಯಲ್ಲಿ ನಿರ್ಣಯ ಅಂಗಿಕರಿಸಲು ನಿರ್ಧಾರ ಮಾಡಿರುವ ಬಗ್ಗೆ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್, ಕಾನೂನು ಸ್ಪಷ್ಟವಾಗಿದೆ. ರಾಜ್ಯಪಾಲರು ಅವರ ಅಧಿಕಾರ ಚಲಾಯಿಸಬಹುದು. ನ್ಯಾಯಯುತ ಅಧಿಕಾರವನ್ನು ರಾಜ್ಯಪಾಲರು ಕೂಡ ಚಲಾಯಿಸಬೇಕು. ಸಚಿವ ಸಂಪುಟಕ್ಕೆ ಇದಕ್ಕೆ ಸಂಬಂಧವಿಲ್ಲ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಎಲ್ಲಾ ಬೆಳವಣಿಗೆಗಳು ರಾಜ್ಯ ರಾಜಕಾರಣದಲ್ಲಿ ಸಂಚಲಕ್ಕೆ ಕಾರಣವಾಗಿದ್ದು, ಮುಂದೆ ಏನೆಲ್ಲಾ ಬೆಳವಣಿಯಾಗಲಿವೆ ಎನ್ನು ಕುತೂಹಲ ಕೆರಳಿಸಿದೆ.
ಒಟ್ಟಿನಲ್ಲಿ ಸಿದ್ದರಾಮಯ್ಯನವರು ದೆಹಲಿಯಲ್ಲಿ ಮಾತನಾಡಿದ್ದು, ರಾಜ್ಯಪಾಲರು ವರದಿ ಪಡೆದುಕೊಂಡಿದ್ದು ಇದೀಗ ಕೃಷ್ಣಬೈರೇಗೌಡ ಮತ್ತು ಮಧುಬಂಗಾರಪ್ಪ ಅವರು ಮಾತುಗಳನ್ನು ಗಮನಿಸಿದರೆ ಸದ್ದಿಲ್ಲದೇ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವ ಕಸರತ್ತು ನಡೆದಿದ್ಯಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:23 pm, Wed, 31 July 24