ಹಾಸನಾಂಭೆ ಉತ್ಸವ ಸಂಪನ್ನ: ಪುನೀತ್ ರಾಜಕುಮಾರ್ ಪುತ್ಥಳಿ ಜೊತೆ ಬಂದು ದೇವಿಯ ದರ್ಶನ ಮಾಡಿದ ಅಪ್ಪು ಅಭಿಮಾನಿಗಳು!

| Updated By: ರಮೇಶ್ ಬಿ. ಜವಳಗೇರಾ

Updated on: Oct 26, 2022 | 8:52 PM

ಅಪ್ಪು ಅವರ ಪುಟ್ಟ ಮುದ್ದಾದ ವಿಗ್ರಹ ಹೊತ್ತು ತಂದಿದ್ದ ಅಪ್ಪು ಅಭಿಮಾನಿಗಳಿಗೆ ಪೊಲೀಸರು ವಿಶೇಷ ಕ್ಯೂ ಮೂಲಕ ದರ್ಶನಕ್ಕೆ ಅವಕಾಶ ನೀಡಿದರು. ಕಳೆದ ವರ್ಷ ಹಾಸನಾಂಬೆ ದರ್ಶನೋತ್ಸವದ ವೇಳೆಯೇ ಕಣ್ಮರೆಯಾದ ರಾಜರತ್ನನನ್ನ ಹಾಸನಾಂಬೆ ಎದುರಿಗೆ ಇರಿಸಿ ಪೂಜೆ ಸಲ್ಲಿಸಿದ ಯುವಕರು ಕಳೆದ ವರ್ಷ ಅಪ್ಪು ಇಲ್ಲದ ನೋವಿನಲ್ಲಿ ಹಾಸನಾಂಬೆ ದರ್ಶನ ಮಾಡಲಿಲ್ಲ ಎಂದರು.  

ಹಾಸನಾಂಭೆ ಉತ್ಸವ ಸಂಪನ್ನ: ಪುನೀತ್ ರಾಜಕುಮಾರ್  ಪುತ್ಥಳಿ ಜೊತೆ ಬಂದು ದೇವಿಯ ದರ್ಶನ ಮಾಡಿದ ಅಪ್ಪು ಅಭಿಮಾನಿಗಳು!
hasanamba
Follow us on

ಹಾಸನದ ಅಧಿದೇವತೆ, ನಾಡಿನ ಶಕ್ತಿದೇವತೆ, ಜಗನ್ಮಾತೆ ಹಾಸನಾಂಬೆಯ ಸಾರ್ವಜನಿಕ ದರ್ಶನೋತ್ಸವ (Hasanamba utsav) ಇಂದು ಬುಧವಾರ ಸಂಪನ್ನಗೊಂಡಿದೆ. ಕಳೆದ 14 ದಿನಗಳ ಹಿಂದೆ ದೇಗುಲದ ಗರ್ಭಗುಡಿ ಬಾಗಿಲು ತೆರೆದ ನಂತರ ಇಂದಿನವರೆಗೆ 12 ದಿನ ಸಾರ್ವಜನಿಕ ದರ್ಶನಕ್ಕೆ ಸಿಕ್ಕ ಅವಕಾಶದಲ್ಲಿ 7 ಲಕ್ಷಕ್ಕೂ ಅಧಿಕ ಭಕ್ತರು ಬೇಡಿದ ವರವ ಕರುಣಿಸೋ ಹಾಸನಾಂಬೆಯನ್ನ ಕಣ್ತುಂಬಿಕೊಂಡಿದ್ಧಾರೆ. ಕೊನೆಯ ದಿನವಾದ ಇಂದೂ ಕೂಡ ಸಹಸ್ರಾರು ಭಕ್ತರು ಸರತಿ ಸಾಲುಗಳಲ್ಲಿ ನಿಂತು ವರ್ಷಕ್ಕೊಮ್ಮೆ ದರ್ಶನ ನೀಡೋ ತಾಯಿಯನ್ನ ಕಣ್ತುಂಬಿಕೊಂಡರು.

ಎಲ್ಲರ ಸಂಕಷ್ಟ ದೂರ ಮಾಡು ತಾಯೇ ಎಂದು ವರವ ಬೇಡಿಕೊಂಡರು. ಗಣ್ಯಾತಿಗಣ್ಯರ ಜೊತೆಗೆ ಹಲವಾರು ಮಂದಿ ದೇವಿ ದರ್ಶನ ಪಡೆದರು. ಕಳೆದ ವರ್ಷ ಹಾಸನಾಂಬೆ ದರ್ಶನದ ವೇಳೆ ಅಗಲಿದ ನಟ ಪುನೀತ್ ರಾಜಕುಮಾರ್ ಅವರ ಪುತ್ಥಳಿ ಜೊತೆಗೆ ಆಗಮಿಸಿ ದೇವಿ ದರ್ಶನ ಮಾಡಿದ ಅಪ್ಪು ಅಭಿಮಾನಿಗಳು (Puneeth Rajkumar fans) ಗಮನ ಸೆಳೆದರು. ರಾತ್ರಿವರೆಗೂ ಬಿಡುವಿಲ್ಲದಂತೆ ಜಮಾಯಿಸಿದ್ದ ಜನರು ಕೊನೆ ಕ್ಷಣದವರೆಗೂ ದೇವಿಗೆ ನಮಿಸಿದರು. ನಾಳೆ ಗುರುವಾರ ಮಧ್ಯಾಹ್ನ 12 ಗಂಟೆಗೆ ಗರ್ಭಗುಡಿ ಬಾಗಿಲು ಬಂದ್ ಆಗಲಿದ್ದು, ಈ ವರ್ಷದ ಹಾಸನಾಂಬೆ (Hasanamba) ಉತ್ಸವಕ್ಕೆ ತೆರೆ ಬೀಳಲಿದೆ. (ವರದಿ: ಕೆ.ಬಿ. ಮಂಜುನಾಥ್, ಟಿವಿ 9, ಹಾಸನ)

ಒಟ್ಟು 15 ದಿನ ಗರ್ಭಗುಡಿ ಬಾಗಿಲು ತೆರೆದಿದ್ದು, ಒಂದು ದಿನ ಗ್ರಹಣ, ಮೊದಲ ಹಾಗು ಕೊನೆಯ ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇಲ್ಲದ ಕಾರಣ ಒಟ್ಟು 12 ದಿನಗಳು ಲಭ್ಯವಾಗಿದ್ದ ಹಾಸನಾಂಬೆ ದರ್ಶನ ಕೊನೆಯ ದಿನವಾದ ಇಂದು ಕೂಡ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕೊನೆ ಘಳಿಗೆಯವರೆಗೂ ದರ್ಶನ ಪಡೆದುಕೊಂಡ್ರು. ಹಾಸನಾಂಬೆ ದರ್ಶನೋತ್ಸವದ ಕೊನೆಯ ದಿನವಾದ ಇಂದು ಕರುನಾಡ ರಾಜಕುಮಾರ… ರಾಜ ರತ್ನ ಪುನೀತ್ ರಾಜ್ ಕುಮಾರ್ ರ ಪುಟ್ಟ ಪುತ್ಥಳಿ ಜೊತೆಗೆ ಆಗಮಿಸಿದ್ದ ಹಾಸನದ ಗುಡ್ಡೇನಹಳ್ಳಿಯ ನಾಲ್ವರು ಯುವಕರು ಎಲ್ಲರ ಗಮನ ಸೆಳೆದ್ರು.

ಅಪ್ಪುರವರ ಪುಟ್ಟ ಮುದ್ದಾದ ವಿಗ್ರಹ ಹೊತ್ತು ತಂದಿದ್ದ ಅಪ್ಪು ಅಭಿಮಾನಿಗಳಿಗೆ ಪೊಲೀಸರು ವಿಶೇಷ ಕ್ಯೂ ಮೂಲಕ ದರ್ಶನಕ್ಕೆ ಅವಕಾಶ ನೀಡಿದರು. ಕಳೆದ ವರ್ಷ ಹಾಸನಾಂಬೆ ದರ್ಶನೋತ್ಸವದ ವೇಳೆಯೇ ಕಣ್ಮರೆಯಾದ ರಾಜರತ್ನನನ್ನ ಹಾಸನಾಂಬೆ ಎದುರಿಗೆ ಇರಿಸಿ ಪೂಜೆ ಸಲ್ಲಿಸಿದ ಯುವಕರು ಕಳೆದ ವರ್ಷ ಅಪ್ಪು ಇಲ್ಲದ ನೋವಿನಲ್ಲಿ ಹಾಸನಾಂಬೆ ದರ್ಶನ ಮಾಡಲಿಲ್ಲ. ಈ ವರ್ಷ ಪರಮಾತ್ಮ ಜೊತೆಗೆ ಪರಮಾತ್ಮನ ದರ್ಶನ ಮಾಡಿದ್ಧೇವೆ ಎಂದು ಖುಷಿ ಹಂಚಿಕೊಂಡ್ರು.

7 ಲಕ್ಷಕ್ಕೂ ಅಧಿಕ ಭಕ್ತರು ಹಾಸನಾಂಬೆಯನ್ನ ಕಣ್ತುಂಬಿಕೊಂಡಿದ್ದಾರೆ. ಕೋಟಿ ಕೋಟಿ ರೂ ಆದಾಯವೂ ಬಂದಿದೆ. ಕೊನೆಯ ದಿನವಾದ ಇಂದೂ ಕೂಡ ಬೆಳಿಗ್ಗೆ 5 ಗಂಟೆಯಿಂದಲೇ ಹಾಸನಾಂಬೆ ದೇಗುಲಕ್ಕೆ ಬಂದಿದ್ದ ಭಕ್ತರು ದೀಪಾವಳಿ ಹಬ್ಬದ ಖುಷಿಯ ನಡುವೆ ಬೇಡಿದ ವರವನ್ನು ಕರುಣಿಸೋ ದೇವಿಯನ್ನ ದರ್ಶನ ಮಾಡಿದ್ರು. ಇನ್ನು ಇಂದೇ ಕೊನೆಯ ದಿನವಾದ್ದರಿಂದ ಭಕ್ತರ ಜೊತೆಗೆ ಹಲವು ಗಣ್ಯರು ಕೂಡ ಹಾಸನಾಂಬೆಯ ಆಶೀರ್ವಾದ ಪಡೆದುಕೊಂಡ್ರು. ವಿಧಾನಪರಿಷತ್ ಸದಸ್ಯ ಬೋಜೇಗೌಡ, ಶ್ರವಣಬೆಳಗೊಳ ಕ್ಷೇತ್ರದ ಜೆಡಿಎಸ್ ಶಾಸಕ ಸಿ.ಎನ್, ಬಾಲಕೃಷ್ಣ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಇಂದು ಹಾಸನಾಂಬೆಯ ದರ್ಶನ ಪಡೆದುಕೊಂಡದ್ರು.

ಪ್ರತೀ ವರ್ಷ ಕೆಲವೇ ದಿನಗಳು ಮಾತ್ರ ದರ್ಶನ ನೀಡೋ ಹಾಸನಾಂಬೆ ಈ ವರ್ಷ ಸುದೀರ್ಘವಾದ 15 ದಿನಗಳು ಭಕ್ತರ ದರ್ಶನಕ್ಕೆ ಲಭ್ಯ ವಿದ್ದದ್ದು ವಿಶೇಷವಾಗಿತ್ತು. ಇಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ದೇವರಿಗೆ ನೈವೃದ್ಯ ಪೂಜೆಗಳ ಬಳಿಕ, ಮತ್ತೆ ನಾಳೆ ಮುಂಜಾನೆ 7 ಗಂಟೆವರೆಗೆ ಹಾಸನಾಂಬೆ ದರ್ಶನ ಭಕ್ತರಿಗೆ ಸಿಗಲಿದ್ದು ನಾಳೆ ಮಧ್ಯಾಹ್ನ 12 ಗಂಟೆಗೆ ಜಿಲ್ಲಾಡಳಿತದ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಗರ್ಭಗುಡಿ ಬಾಗಿಲು ಮುಚ್ಚಲಿದ್ದು ಭೇಟಿ ನೀಡಿದ ಭಕ್ತರು ಗಣ್ಯರೆಲ್ಲರೂ ಸರ್ವರಿಗೂ ಒಳಿತುಮಾಡಿ ಎಲ್ಲರ ಕಷ್ಟ ದೂರಮಾಡು ತಾಯೇ ಎಂದು ಬೇಡಿಕೊಂಡ್ರು.

ಒಟ್ನಲ್ಲಿ ವರ್ಷಕ್ಕೆ ಒಮ್ಮೆ ದರ್ಶನ ನೀಡೋ ಹಾಸನದ ಅಧಿದೇವತೆ ಹಾಸನಾಂಬೆಯ ಸಾರ್ವಜನಿಕ ದರ್ಶನ ಇಂದಿಗೆ ಸಂಪನ್ನವಾಗಿದೆ. ವರ್ಷದ ಹಿಂದೆ ಹಚ್ಚಿಟ್ಟ ದೀಪ ಆರುವುದಿಲ್ಲ. ದೇವರ ಮುಡಿಗಿಟ್ಟ ಹೂ ಬಾಡುವುದಿಲ್ಲ ಎನ್ನೋ ನಂಬಿಕೆ ವರ್ಷದಿಂದ ವರ್ಷಕ್ಕೆ ಹಾಸನದತ್ತ ಭಕ್ತರ ದಂಡು ಹರಿದು ಬರುವಂತೆ ಮಾಡಿದೆ.

Published On - 7:40 pm, Wed, 26 October 22