ಹಾಸನ: ಗೂರ್ಗಿಹಳ್ಳಿ ಸಮೀಪದಲ್ಲಿ ಕಾಡಾನೆ (Elephant) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿ ಆನೆ ಗುಂಡೇಟಿನಿಂದಲೇ (Gunfire) ಸಾವನ್ನಪ್ಪಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ದೃಢವಾಗಿದೆ. ಸೈಯದ್ ಸತ್ತರೆ ಎಂಬುವವರ ತೋಟದ ಬಳಿ ನಿನ್ನೆ (ಮೇ 27) ಬೆಳಗ್ಗೆ 18 ವರ್ಷದ ಕಾಡಾನೆ ಸಾವನ್ನಪ್ಪಿತ್ತು. ಕಾಡಾನೆ ಕಣ್ಣಿನ ಭಾಗಕ್ಕೆ ಗುಂಡು ಬಿದ್ದಂತೆ ಗೋಚರವಾಗಿತ್ತು. ಆದರೆ ಈ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ ಗುಂಡಿಟ್ಟು ಆನೆಯನ್ನು ಕೊಂದಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧ ಪೊಲೀಸರು ಐವರನ್ನ ವಶಕ್ಕೆ ಪಡೆದಿದ್ದಾರೆ. ತನಿಖಾ ತಂಡ ಬಂದೂಕು ಹಾಗೂ ಗುಂಡುಗಳನ್ನ ವಶಕ್ಕೆ ಪಡೆದಿದೆ.
ಸದ್ಯ ಪೊಲೀಸರು ಗುಂಡು ಹೊಡೆದವರ ಪತ್ತೆಗಾಗಿ ತನಿಖೆಯನ್ನು ಮುಂದುವರೆಸಿದ್ದಾರೆ. ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ತನಿಖೆ ನಡೆಸುದ್ದಾರೆ. ಬೆಳೆ ಹಾನಿ ಮಾಡುತ್ತದೆ ಎಂದು ಆತಂಕಗೊಂಡು ಕಾಡಾನೆ ಓಡಿಸಲು ಗುಂಡು ಹಾರಿಸಿದ್ದಾರೆ. ಆದರೆ ಆ ಗುಂಡು ಆನೆ ಕಣ್ಣಿನ ಭಾಗಕ್ಕೆ ಬಿದ್ದಿತ್ತು. ಸಾವನ್ನಪ್ಪಿದ್ದ ಆನೆಯನ್ನು ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ವನ್ಯಜೀವಿ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದರು. ಪರೀಕ್ಷೆಯಲ್ಲಿ ಗುಂಡೇಟಿಗೆ ಸಲಗ ಬಲಿಯಾಗಿರುವ ಬಗ್ಗೆ ದೃಢಪಟ್ಟಿದೆ.
ಇದನ್ನೂ ಓದಿ: ಆಂಧ್ರಪ್ರದೇಶದ ಅನಂತಪುರದಲ್ಲಿ ಸಿಲಿಂಡರ್ ಸ್ಫೋಟದಿಂದ ಗೋಡೆ ಕುಸಿತ; ನಾಲ್ವರು ಸಾವು, ಇಬ್ಬರಿಗೆ ಗಾಯ
ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಜೋರಾಗಿದೆ. ರೈತರು ಕಾಡಾನೆ ಕಾಟಕ್ಕೆ ಕಂಗಾಲಾಗಿದ್ದಾರೆ. ಕಟಾವಿಗೆ ಬಂದ ಬೆಳೆಗಳು ಕಾಡಾನೆಗಳ ಪಾಲಾಗುತ್ತಿತ್ತು. ಈ ಹಿಂದೆ ಹಲವು ಬಾರಿ ಕಾಡಾನೆಗಳ ಕಾಟದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೂ ಕಾಡಾನೆ ಪರಿಹಾರ ಸಿಗಲಿಲ್ಲ. ರೈತರು ಕಾಡಾನೆಗಳು ಬಾರದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.
ಜನವಸತಿ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷ:
ಕಾರವಾರ: ನಗರದ ಜನವಸತಿ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದೆ. ಕಾರವಾರದ ಹಬ್ಬುವಾಡ ಗುತ್ತಿಂಬಿರ ದೇವಸ್ಥಾನದ ಬಳಿ ಕಳೆದ ಮೂರು ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದೆ. ಚಿರತೆ ಕಂಡು ಜನ ಭಯಗೊಂಡಿದ್ದಾರೆ. ಚಿರತೆ ಹಿಡಿದು ಬೇರೆ ಕಡೆ ಬಿಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.
2 ಹಸುಗಳ ಸಜೀವ ದಹನ:
ಚಿಕ್ಕಮಗಳೂರು: ದನದ ಕೊಟ್ಟಿಗೆಗೆ ಬೆಂಕಿ ಬಿದ್ದು 2 ಹಸುಗಳು ಸಜೀವ ದಹನವಾಗಿವೆ. ಈ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೊಡಿಗೆ ಶಿವಪುರದಲ್ಲಿ ಸಂಭವಿಸಿದೆ. ನಾಗೇಶ್ ಎಂಬುವರಿಗೆ ಸೇರಿದ ಕೊಟ್ಟಿಗೆಗೆ ಬೆಂಕಿ ಬಿದ್ದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಕೊಟ್ಟಿಗೆಗೆ ಬೆಂಕಿ ಹೊತ್ತಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ಭೇಟಿ ನೀಡಿದ್ದಾರೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:06 pm, Sat, 28 May 22