ಹಾಸನ, (ಜೂನ್ 21): ಪ್ರಜ್ವಲ್ ಸಹೋದರ ಸೂರಜ್ ರೇವಣ್ಣ (Suraj Revanna Case) ವಿರುದ್ಧ ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯ (unnatural sexual abuse) ಆರೋಪ ಕೇಳಿಬಂದಿದೆ. ಆದ್ರೆ, ಇತ್ತ ಆರೋಪ ಮಾಡಿರುವ ಜೆಡಿಎಸ್ ಕಾರ್ಯಕರ್ತನ ವಿರುದ್ಧವೇ ಎಫ್‌ಐಆರ್ ದಾಖಲಾಗಿದೆ. ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ವಿರುದ್ಧ ಸಲಿಂಗ ಕಾಮ ಆರೋಪ ಮಾಡಿ ಅರಕಲಗೂಡಿನ ಜೆಡಿಎಸ್ ಕಾರ್ಯಕರ್ತ ದೂರು ನೀಡಿದ್ದರು. ಆದರೆ, ಸುಳ್ಳು ಆರೋಪ ಮಾಡಿ ಹಣಕ್ಕಾಗಿ ಪೀಡಿಸಿದ್ದಾರೆ ಎಂದು ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ನೀಡಿದ ದೂರಿನ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸೂರಜ್ ರೇವಣ್ಣ ವಿರುದ್ಧ ದೂರುದಾರ ಲೈಂಗಿಕ ಕಿರುಕುಳ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದ. ಐದು ಕೋಟಿ ಹಣ ನೀಡದಿದ್ದರೆ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಸುಳ್ಳು ದೂರು ನೀಡಿ ಬೆದರಿಕೆ ಹಾಕಿರುವ ಬಗ್ಗೆ ಉಲ್ಲೇಖಿಸಿ ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ದೂರು ಸಲ್ಲಿಕೆ ಮಾಡಿದ್ದರಿಂದ ಐಪಿಸಿ ಸೆಕ್ಸೆನ್ 384, 506 ರ ಅಡಿಯಲ್ಲಿ 168/2024 ರಡಿ ಕೇಸ್ ದಾಖಲಾಗಿದೆ.
ನಿಮ್ಮ ಬಾಸ್ ಬಳಿ ಕೆಲಸ ಕೊಡಿಸು ಎಂದು ಅರಕಲಗೂಡು ಮೂಲದ ಯುವಕ ಕೇಳಿಕೊಂಡಿದ್ದ. ನೀನೇ ಹೋಗಿ ಬಾಸ್ ಭೇಟಿ ಮಾಡು ಎಂದು ಫೊನ್ ನಂಬರ್ ಕೊಟ್ಟಿದ್ದೆ. ಜೂನ್ 16 ರಂದು ಗನ್ನಿಕಡದ ತೋಟದ ಮನೆಗೆ ಕೆಲಸ ಕೇಳಲು ಸಂತ್ರಸ್ತ ಹೋಗಿದ್ದ. ಕೆಲಸ ಕೇಳಿ ವಾಪಸ್ ಬಂದ ಬಳಿಕ ಬ್ಲ್ಯಾಕ್ ಮೇಲ್ ಮಾಡಿರೊದಾಗಿ ಆರೋಪಿಸಲಾಗಿದೆ. ನೀನು ಕೆಲಸ ಕೊಡಿಸಲ್ಲ, ನಿಮ್ಮ ಬಾಸೂ ಕೆಲಸ ಕೊಡಿಸ್ತಿಲ್ಲ. ನನಗೆ ತುಂಬಾ ಕಷ್ಟ ಇದೆ, ನನಗೆ ಹಣ ಬೇಕು. ನೀನು, ನಿಮ್ಮ ಬಾಸ್‌ನಿಂದ ಐದು ಕೋಟಿ ಹಣ ಕೊಡಿಸದಿದ್ದರೆ, ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸುತ್ತೇನೆ ಎಂದು ಸಂತ್ರಸ್ತ ಬೆದರಿಕೆ ಹಾಕಿದ್ದಾನೆ ಎಂದು ದೂರುದಾರ ಶಿವಕುಮಾರ್ ಹೇಳಿದ್ದಾರೆ.
ಈ ವಿಚಾರವನ್ನು ನಾನು ನಮ್ಮ ಬಾಸ್‌ಗೆ ತಿಳಿಸಿದೆ. ಆತ ಕೆಲಸ ಕೇಳಿಕೊಂಡು ಮನೆಗೆ ಬಂದಾಗ ಭದ್ರತೆಗಾಗಿ ಇದ್ದ ಪೊಲೀಸ್ ಸೇರಿ ಹಲವಾರು ಜನರು ಇದ್ದರು. ನಾನೇನು ತಪ್ಪು ಮಾಡಿಲ್ಲ, ಯಾಕೆ ಹಣ ಕೊಡಬೇಕು ಎಂದು ಬಾಸ್ ಹೇಳಿದರು. ನಂತರ ಜೂನ್ 18 ರಂದು ಹಾಸನದ ಜಿಲ್ಲಾಸ್ಪತ್ರೆಗೆ ಬಂದು ಆಸ್ಪತ್ರೆ ಚೀಟಿಗೆ ಎಂಎಲ್‌ಸಿ ಸೀಲ್ ಹಾಕಿಸಿ ಫೋಟೊ ಹಾಕಿ ಬೆದರಿಕೆ ಹಾಕಿದ್ದಾನೆ. ಆಸ್ಪತ್ರೆ ಚೀಟಿ ತೋರಿಸಿ ಮತ್ತೆ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾನೆ.
ಐದು ಕೋಟಿ ಬಳಿಕ ಮೂರು ಕೋಟಿ ಅಥವಾ ಕಡೆಗೆ ಎರಡೂವರೆ ಕೋಟಿಯಾದ್ರು ಹಣ ಕೊಡಿಸು ಎಂದು ಡಿಮ್ಯಾಂಡ್ ಮಾಡಿದ್ದಾನೆ. ಹಣ ಕೊಡಿಸದಿದ್ದರೆ ದೊಡ್ಡ ಕುಟುಂಬವಾದ ಅವರ ಮರ್ಯಾದೆ ಕಳೆಯುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡಿದ ಬಗ್ಗೆ ದೂರು ಸಲ್ಲಿಸಲಾಗಿದೆ ಎಂದು ಸೂರಜ್ ಆಪ್ತ ಶಿವಕುಮಾರ್ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:31 pm, Fri, 21 June 24