ಹಾಸನ: ಜಿಲ್ಲೆಯ ಶಕ್ತಿ ದೇವತೆ ಹಾಸನಾಂಬೆ (Hassanambe) ಸನ್ನಿಧಿಯಲ್ಲಿ ಹೊಸ ಸಂಪ್ರದಾಯವನ್ನು ಅರ್ಚಕರು(Priest) ಆರಂಭಿಸಿದ್ದು, ಭಕ್ತ ಆಕ್ರೋಶಕ್ಕೆ ಕಾರಣವಾಗಿದೆ. ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆಗೆ ನಿತ್ಯ ದರ್ಶನಕ್ಕೆ ಅವಕಾಶ ಮಾಡಿದ್ದಾರೆ. ಹಾಸನಾಂಬೆಯ ಪ್ರತಿರೂಪ ಸೃಷ್ಟಿಸಿ ಗರ್ಭಗುಡಿ ಎದುರು ಪ್ರತಿಷ್ಠಾಪಿಸಿ ನಿತ್ಯ ಪೂಜೆ ನಡೆಸವುದಕ್ಕೆ ಈ ದೇಗುಲದ ಅರ್ಚಕರು ಮುಂದಾಗಿದ್ದಾರೆ. ಕಾಣಿಕೆ ಹಣದಾಸೆಗೆ ಶಕ್ತಿ ದೇವತೆ ಮಹತ್ವ ಕುಂದಿಸುವ ಪ್ರಯತ್ನ ನಡೆಯುತ್ತಿದೆ ಎಂದು ಭಕ್ತರು(Devotees) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುತ್ತದ ರೂಪದಲ್ಲಿ ನೆಲೆಸಿರುವ ಹಾಸನಾಂಬೆ, ಪ್ರತಿ ವರ್ಷ ಅಶ್ವಯುಜ ಮಾಸದಲ್ಲಿ ಮಾತ್ರ ಭಕ್ತರಿಗೆ ದರ್ಶನಕ್ಕೆ ಅವಕಾಶ ಇತ್ತು. ಆದರೆ ಈಗ ಹುತ್ತ ಸ್ವರೂಪಿಣಿ ಹಾಸನಾಂಬೆಗೆ ಕಳಸ ರೂಪದಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜೆ ನಡೆಸಲಾಗುತ್ತಿದೆ.
ಗರ್ಭಗುಡಿ ಬಾಗಿಲಿಗೆ ಹೊಂದಿಕೊಂಡಂತೆ ದೇವಿ ಪವಾಡ ಎಂದೇ ಹೇಳುವ ನಿತ್ಯ ಜ್ಯೋತಿ ಪ್ರತಿರೂಪವೂ ಸೃಷ್ಟಿ ಮಾಡಲಾಗಿದೆ. ಇದುವರೆಗೆ ವಾರ್ಷಿಕ ದರ್ಶನ ಹೊರತು ಪಡಿಸಿ ವಾರಕ್ಕೆ ಎರಡು ದಿನ ಮಾತ್ರ ಗರ್ಭಗುಡಿ ಬಾಗಿಲಿಗೆ ಪೂಜೆ ಮಾಡುತ್ತಿದ್ದ ಅರ್ಚಕರು, ಈ ವರ್ಷದಿಂದ ನಿತ್ಯ ಪೂಜೆ ಆರಂಭಿಸಿದ್ದಾರೆ. ಇದುವರೆಗೆ ಇಲ್ಲದ ಹೊಸ ಸಂಪ್ರದಾಯ ಸೃಷ್ಟಿ ಬಗ್ಗೆ ಭಕ್ತರು ಈಗ ಅಸಮದಾನ ವ್ಯಕ್ತಪಡಿಸಿದ್ದಾರೆ.
ನಾವು ನೋಡಿದ ಹಾಗೆ ನಲ್ವತ್ತು ಐವತ್ತು ವರ್ಷಗಳಿಂದ ಎಂದೂ ಹೀಗೆ ಹಾಸನಾಂಬೆ ದೇಗುಲದ ಬಾಗಿಲು ಬಂದ್ ಆದ ಬಳಿಕ ಈ ರೀತಿ ಪೂಜೆ ಆಗಿರಲಿಲ್ಲ. ಈಗಿನ ಅರ್ಚಕರು ಹೊಸ ಆಚರಣೆ ಶುರುಮಾಡಿದ್ದಾರೆ. ಕಾಣಿಕೆ ಹಣದಾಸೆಗೆ ಹೀಗೆ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು. ಹೀಗಾದ್ರೆ ವರ್ಷಕ್ಕೆ ಒಮ್ಮೆ ದರ್ಶನ ನೀಡೋ ಪರಂಪರೆಯ ಹಾಸನಾಂಬೆ ದೇಗುಲದ ಪ್ರಾಮುಖ್ಯತೆ ಹಾಳಾಗಲಿದೆ ಎಂದು ಭಕ್ತರಾದ ಜಗದೀಶ್ ಹೇಳಿದ್ದಾರೆ.
12 ನೇ ಶತಮಾನದಲ್ಲಿ ಕೃಷ್ಣಪ್ಪ ನಾಯಕ, ಸಂಜೀವ ನಾಯಕರೆಂಬ ಪಾಳೆಗಾರರಿಂದ ಈ ದೇಗುಲ ಸ್ಥಾಪನೆಯಾಗಿದೆ. ಹಾಸನಾಂಬೆ ದೇಗುಲದಲ್ಲಿ ನೆಲೆಸಿರುವ ವೈಷ್ಣವಿ, ಮಹೇಶ್ವರಿ, ಕೌಮಾರಿ ದೇವಿಯರು ಶಕ್ತಿ ದೇವತೆ ಎಂದೇ ಹೆಸರಾಗಿದ್ದಾರೆ. ಶಕ್ತಿದೇವತೆ ದರ್ಶನಕ್ಕೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಆದರೀಗ ದೇವಿಯ ಗರ್ಭಗುಡಿಯ ಎದುರು ದೇವಿಯ ಪ್ರತಿರೂಪ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ನಿತ್ಯ ನೂರಾರು ಜನರು ಹಾಸನಾಂಬೆ ದರ್ಶನ ಪಡೆಯುತ್ತಿದ್ದಾರೆ. ಸದ್ಯ ಹೊಸ ಸಂಪ್ರದಾಯದ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ವಹಿಸಲಿ ಎಂದು ಭಕ್ತರು ಮನವಿ ಮಾಡಿದ್ದಾರೆ.
ಇನ್ನು ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲ ಮುಂದೆ ಅಲಂಕಾರ ಪೂಜೆ ವಿಚಾರಕ್ಕೆ ಸಂಬಂಧಪಟ್ಟಂತೆ ದೇಗುಲಕ್ಕೆ ಭೇಟಿ ನೀಡಿದ ಬಳಿಕ ಹಾಸನ ಉಪ ವಿಭಾಗ ಅಧಿಕಾರಿ ದೇವಾಲಯ ಆಡಳಿತಾಧಿಕಾರಿ ಜಗದೀಶ್ ಹೇಳಿಕೆ ನೀಡಿದ್ದಾರೆ. ಗರ್ಭಗುಡಿ ಎದುರು ಅಲಂಕಾರ ಪೂಜೆ ಮಾಡಿರುವುದು ಕಂಡು ಬಂದಿದೆ. ಅರ್ಚಕರನ್ನು ಕೇಳಿದಾಗ ಹಿಂದಿನಿಂದಲೂ ಹೀಗೆ ನಡೀತಿತ್ತು. ಈಗ ಹೆಚ್ಚಿನ ಅಲಂಕಾರ ಮಾಡಿದ್ದೇವೆ. ಇದರಲ್ಲಿ ವಿಶೇಷ ಏನಿಲ್ಲ ಎಂದು ಅರ್ಚಕರು ಹೇಳುತ್ತಿದ್ದಾರೆ. ಆದರೆ ಜನರ ಅಭಿಪ್ರಾಯ ಹಿಂದೆ ಈ ರೀತಿ ಇರಲಿಲ್ಲ. ಈಗ ನಡೆಯುತ್ತಿರುವ ಪೂಜೆಯಲ್ಲಿ ಹೊಸತನ ಇದೆ ಎನ್ನುವ ಅಭಿಪ್ರಾಯ ಇದೆ. ಹೀಗೆ ನಿತ್ಯ ಅಲಂಕಾರ ಪೂಜೆ ನಡೆದರೆ ವರ್ಷಪೂರ್ತಿ ದೇಗುಲದ ಬಾಗಿಲು ತೆರೆತಂದೆ ಆಗುತ್ತಾ ಎನ್ನುವ ಭಾವನೆ ಕೆಲವರಲ್ಲಿ ಇದೆ. ಈ ಬಗ್ಗೆ ನಾಳೆ ಅರ್ಚಕರು ಹಾಗೂ ಸಂಬಂಧಪಟ್ಟವರ ಸಭೆ ನಡೆಸುತ್ತೇವೆ. ಈ ಪೂಜೆಯ ಹಿನ್ನೆಲೆ ಹಾಗೂ ಅವಶ್ಯಕತೆ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಲಕ್ಷಣವಾಗಿ ಇರಲಿ ಎಂದು ಅಲಂಕಾರ ಪೂಜೆ ಮಾಡಿದ್ದೇವೆ: ಅರ್ಚಕ ನಾಗರಾಜ್ ಸ್ಪಷ್ಟನೆ
ವಂಶ ಪಾರಂಪರ್ಯವಾಗಿ ಈ ಪೂಜೆ ನಡೆದುಕೊಂಡು ಬಂದಿದೆ. ಅಲಂಕಾರ ಮಾಡುತ್ತಿರಲಿಲ್ಲ, ಆದರ ದ್ವಾರಕ್ಕೆ ಪೂಜೆ ಮಾಡುತ್ತಿದ್ದೆವು. ಈಗ ಚೆನ್ನಾಗಿ ಕಾಣಲಿ ಎಂದು ಹೀಗೆ ಅಲಂಕಾರ ಮಾಡಿ ಪೂಜೆ ಮಾಡುತ್ತಿದ್ದೇವೆ. ಲಕ್ಷಣವಾಗಿ ಇರಲಿ ಎಂದು ಅಲಂಕಾರ ಪೂಜೆ ಮಾಡಿದ್ದೇವೆ. ದೇವಾಲಯ ಬೆಳಗಿಂದ ಸಂಜೆವರೆಗೆ ತೆರೆದು ಇರೋದಿಲ್ಲ. ಒಂದೊಂದುದಿನ ಲೇಟಾಗಿ ಪೂಜೆ ಮಾಡಿದಾಗ ಹೆಚ್ಚು ಸಮಯ ತೆರೆದಿರಬಹುದು. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡುವ ಅಗತ್ಯ ಇಲ್ಲ. ಇದು ಮಾಮೂಲಿಯಾಗಿ ನಡೆಯುತ್ತಿರುವುದು. ದೇವರ ಪೂಜೆ ಮಾಡುವುದರಿಂದ ಏನು ಕೆಡಕು ಆಗುವುದಿಲ್ಲ ಎಂದು ದೇಗುಲದ ಗರ್ಭಗುಡಿಯ ಬಾಗಿಲಿಗೆ ಪೂಜೆ ವಿಚಾರದ ಬಗ್ಗೆ ಹಾಸನಾಂಬೆ ದೇಗುಲದ ಅರ್ಚಕ ನಾಗರಾಜ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ:
ಹಾಸನದ ಹಾಸನಾಂಬೆ ದೇವಸ್ಥಾನ ಹತ್ತು ದಿನಗಳ ಉತ್ಸವದ ನಂತರ ಶನಿವಾರ ಮುಚ್ಚಲಾಯಿತು, ದೇವಿ ದರ್ಶನ ಇನ್ನು ಮುಂದಿನ ವರ್ಷವೇ!
Published On - 10:22 am, Sun, 30 January 22