
ಹಾಸನ, ನವೆಂಬರ್ 11: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನೋತ್ಸವಕ್ಕೆ ಅದ್ಧೂರಿ ತೆರೆ ಬಿದ್ದಿದೆ. 12 ದಿನದಲ್ಲೇ ಬರೋಬ್ಬರಿ 30 ಲಕ್ಷ ಭಕ್ತರು ದರ್ಶನ ಪಡೆದಿದ್ದಾರೆ. ದೇಗುಲಕ್ಕೆ ಕೋಟ್ಯಂತರ ರೂ ಆದಾಯ ಹರಿದುಬಂದಿದೆ. ಇನ್ಮುಂದೆ ದಸರಾ ಮಾದರಿಯಲ್ಲಿ ಹಾಸನಾಂಬೆ ಉತ್ಸವ ನಾಡಹಬ್ಬವಾಗಿ ಆಚರಣೆ ಮಾಡಲು ನಿರ್ಣಯಿಸಲಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಮಾಹಿತಿ ನೀಡಿದ್ದಾರೆ.
ಹಾಸನಾಂಬೆ ದರ್ಶನೋತ್ಸವಕ್ಕೆ ತೆರೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಉಸ್ತುವಾರಿ ಸಚಿವ ಶಿವಲಿಂಗೇಗೌಡ, ‘ಹಾಸನಾಂಬೆ ದರ್ಶನೋತ್ಸವವನ್ನು ಇನ್ಮುಂದೆ ದೊಡ್ಡ ನಾಡ ಹಬ್ಬವಾಗಿ ಆಚರಣೆ ಮಾಡಲು ನಿರ್ಣಯ ಮಾಡಿದ್ದೇವೆ. ಇನ್ಮುಂದೆ ದಸರಾ ಮಾದರಿಯಲ್ಲಿ ಹಾಸನಾಂಬೆ ಉತ್ಸವ ನಾಡಹಬ್ಬವಾಗಿ ಆಚರಣೆ ಆಗಲಿದೆ. ಸಾಗರೋಪಾದಿಯಲ್ಲಿ ಹರಿದು ಬಂದಿರುವ ಜನ ಸಂಖ್ಯೆ ಹಾಸನ ಜಿಲ್ಲೆಗೆ ಆದರ್ಶವಾಗಿ ಉಳಿಯಲಿದೆ’ ಎಂದು ಅವರು ಹೇಳಿದರು.
‘ನಾಡ ಹಬ್ಬ ಆಗಲು ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಆಗಬೇಕು ಎಂದರು. ಹಾಗಾಗಿ ಆ ದಸರಾ ನೋಡಿ ಬಂದು ನಾಡ ಹಬ್ಬದ ರೀತಿ ಆಚರಣೆ ಮಾಡಿದ್ದೇವೆ. ಕೆಲವು ಕಡೆ ಸಣ್ಣ-ಪುಟ್ಟ ತಪ್ಪು ಆಗಿರಬಹುದು. ತಪ್ಪು ಆಗಿದ್ದರೆ ನಾವು ಕ್ಷಮೆ ಕೇಳುತ್ತೇವೆ. ಅನೇಕರು ರಾಜಕೀಯ ಮಾಡಬಹುದು, ಅದಕ್ಕೆ ತಾಯಿ ಒಳ್ಳೆ ಬುದ್ಧಿ ಕೊಡಲಿ. ಇಂತಹ ಪವಿತ್ರ ಜಾತ್ರೆಯಲ್ಲಿ ರಾಜಕೀಯ ಮಾಡಬಾರದು’ ಎಂದಿದ್ದಾರೆ.
‘ದೇಗುಲಕ್ಕೆ ಹರಿದುಬಂದ ಆದಾಯದ ಬಗ್ಗೆ ಮಾತನಾಡಿದ ಅವರು, ‘300 ರೂ ಟಿಕೆಟ್ಯಿಂದ 6.04 ಕೋಟಿ, 1 ರೂ ಟಿಕೆಟ್ಯಿಂದ 13.18 ಕೋಟಿ, ಆನ್ಲೈನ್ನಲ್ಲಿ 5.8 ಕೋಟಿ ರೂ ಸೇರಿ 24.31 ಕೋಟಿ ಆದಾಯ ಬಂದಿದೆ. ಲಡ್ಡು ಪ್ರಸಾದ ಮಾರಾಟದಿಂದ 1.29 ಕೋಟಿ ರೂ ಆದಾಯ ಬಂದಿದ್ದು, ಒಟ್ಟು ಹುಂಡಿ ಎಣಿಕೆ ಮುನ್ನವೇ 25.60 ಕೋಟಿ ರೂ ಆದಾಯ ಬಂದಿದೆ’ ಎಂದು ಅವರು ಮಾಹಿತಿ ನೀಡಿದರು.
‘ಈ ಸಾರಿ ಮಳೆ, ಬೆಳೆ ಕಡಿಮೆಯಾಗಿದೆ. ನಾನು ದರ್ಶನ ಮಾಡಿದಾಗ ರೈತ ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿ ಮಾಡಲು ಉತ್ತಮ ಮಳೆ ಕೊಡು ತಾಯಿ ಎಂದು ಕೇಳಿದ್ದೇನೆ. ಜಿಲ್ಲಾಧಿಕಾರಿ, ಆಡಳಿತ ಅಧಿಕಾರಿ ಒಳ್ಳೆ ಕೆಲಸ ಮಾಡಿದಾರೆ. ಈ ಸಂದರ್ಭದಲ್ಲಿ ಏನೇನೋ ಕತೆ ಕಟ್ಟಿದರು. ಮುಂದೆ ಅದು ಮಹಾಭಾರತ ಶುರುವಾಗುತ್ತೆ. ಒಳ್ಳೆ ಕೆಲಸ ಮಾಡಿದ್ದೇವೆ ಎನ್ನುವ ಸಮಾಧಾನವಿದೆ. ಸಿಎಂ, ಮಾಜಿ ಸಿಎಂ, ಸಚಿವರು, ಶಾಸಕರು ಬಂದು ಹೋಗಿದಾರೆ. ಇದರಲ್ಲಿ ಕಲ್ಲು ಹುಡುಕುವ ಕೆಲಸ ಯಾರು ಮಾಡಬೇಡಿ. ಜಿಲ್ಲೆಯ ಜನರು ಈ ಜಾತ್ರೆಯನ್ನು ಹೊಗಳಿದಾರೆ. ಮೈಸೂರು ಮೀರಿಸರುವ ರೀತಿ ಇತ್ತು ಎಂದು ಜನರು ಹೇಳಿದಾರೆ’ ಎಂದು ಶಿವಲಿಂಗೇಗೌಡ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.