ಹಾಸನಾಂಬೆ ದರ್ಶನೋತ್ಸವ ಸಂಪನ್ನ: ಶಾಸ್ತ್ರೋಕ್ತವಾಗಿ ದೇವಾಲಯದ ಗರ್ಭಗುಡಿ ಬಾಗಿಲು ಬಂದ್
ಮುಖ್ಯಾಂಶಗಳು
- ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಬಂದ್
- ಹಾಸನಾಂಬೆ ದೇವಿಗೆ ಪೂಜೆ ಸಲ್ಲಿಸಿ ಬಾಗಿಲು ಮುಚ್ಚಿದ ಅರ್ಚಕರು
- ಹಾಸನಾಂಬೆ ದರ್ಶನ ಪಡೆದ 31 ಲಕ್ಷಕ್ಕೂ ಹೆಚ್ಚು ಭಕ್ತರು
ಹಾಸನದಲ್ಲಿ ಶ್ರೀ ಹಾಸನಾಂಬ ದೇವಿ ಹಾಗೂ ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಅಕ್ಟೋಬರ್ 29 ರಿಂದ ನವೆಂಬರ್ 11 ರವರೆಗೆ 12 ದಿನಗಳ ಕಾಲ ಸಾರ್ವಜನಿಕರಿಗೆ ದರ್ಶನ ನೀಡಿದ ನಂತರ, ಪ್ರಧಾನ ಅರ್ಚಕ ನಾಗರಾಜ್ ಅವರು ಗಣ್ಯರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲಿಗೆ ಬೀಗ ಹಾಕಲಾಗಿದೆ.
ಹಾಸನ, ನವೆಂಬರ್ 11: ಹಾಸನಾಂಬೆಯ ದರ್ಶನೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಅಕ್ಟೋಬರ್ 29 ರಿಂದ ನವೆಂಬರ್ 11 ರವರೆಗೆ ಒಟ್ಟು 12 ದಿನಗಳ ಕಾಲ ಲಕ್ಷಾಂತರ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸಿದ ಶಕ್ತಿದೇವತೆಯ ಗರ್ಭಗುಡಿ ಬಾಗಿಲನ್ನು ಬುಧವಾರ ಮಧ್ಯಾಹ್ನ 1.36ಕ್ಕೆ ಶಾಸ್ತ್ರೋಕ್ತವಾಗಿ ಮುಚ್ಚಲಾಯಿತು. ಅರ್ಚಕರು ದೇವಿ ಮೇಲೆ ಹೂ ಹಾಕಿ, ಕೊನೆಯ ಆರತಿ ಬೆಳಗಿ ಪೂಜೆ ಮಾಡಿದರು. ಬಳಿಕ ಗರ್ಭಗುಡಿಯ ಒಳಗೆ ದೀಪ ಹಚ್ಚಿಟ್ಟರು. ಮಧ್ಯಾಹ್ನ 12 ಗಂಟೆಯಿಂದ 1.30ರವರೆಗೆ ರಾಹುಕಾಲ ಇದ್ದ ಹಿನ್ನಲೆ ಈ ಬಾರಿ ತಡವಾಗಿ ಗರ್ಭಗುಡಿಯ ಬಾಗಿಲು ಮುಚ್ಚಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆಎಂ ಶಿವಲಿಂಗೇಗೌಡ, ಸಂಸದ ಶ್ರೇಯಸ್‌ಪಟೇಲ್, ಶಾಸಕ ಹೆಚ್ಪಿ ಸ್ವರೂಪ್‌ಪ್ರಕಾಶ್ ಮತ್ತು ಜಿಲ್ಲಾಧಿಕಾರಿ ಕೆಎಸ್ ಲತಾಕುಮಾರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಈ ವೇಳೆ ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಹಾಸನಾಂಬೆ ತಾಯಿಗೆ ಜೈ, ಎಂದು ಘೋಷಣೆ ಕೂಗಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

