ಹಾಸನಾಂಬೆ ದೇಗುಲದ ಬಾಗಿಲು ಬಂದ್: ಈ ವರ್ಷ ಭೇಟಿ ನೀಡಿದ ಭಕ್ತರೆಷ್ಟು ಗೊತ್ತಾ? ಸಂಗ್ರಹವಾಯ್ತು ಬರೋಬ್ಬರಿ ಆದಾಯ!

ಹಾಸನಾಂಬ ದರ್ಶನ ಮುಕ್ತಾಯವಾಗಿದ್ದು, ದೇಗುಲದ ಗರ್ಭಗುಡಿ ಬಾಗಿಲು ಬಂದ್ ಮಾಡಲಾಗಿದೆ. ಈ ವರ್ಷ ಯಶಸ್ವಿಯಾಗಿ ದರ್ಶನ ನಡೆದಿದ್ದು, ಕಳೆದ ವರ್ಷಕ್ಕಿಂತ ಹೆಚ್ಚಿನ ಆದಾಯವೂ ಸಂಗ್ರಹವಾಗಿದೆ. ಈ ಕುರಿತು ಸಚಿವ ಕೃಷ್ಣಭೈರೇಗೌಡ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಅವರು ನೀಡಿದ ವಿವರಗಳು ಇಲ್ಲಿವೆ.

ಹಾಸನಾಂಬೆ ದೇಗುಲದ ಬಾಗಿಲು ಬಂದ್: ಈ ವರ್ಷ ಭೇಟಿ ನೀಡಿದ ಭಕ್ತರೆಷ್ಟು ಗೊತ್ತಾ? ಸಂಗ್ರಹವಾಯ್ತು ಬರೋಬ್ಬರಿ ಆದಾಯ!
ಹಾಸನಾಂಬೆ ದೇಗುಲ
Updated By: Ganapathi Sharma

Updated on: Oct 23, 2025 | 2:59 PM

ಹಾಸನ, ಅಕ್ಟೋಬರ್ 23: ಹಾಸನದ ಅಧಿದೇವತೆ, ವರ್ಷಕ್ಕೊಂದು ಬಾರಿ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ ದೇವಿ (Hasanamba Temple) ಗರ್ಭಗುಡಿ ಬಾಗಿಲು ಸಾರ್ವಜನಿಕರ ದರ್ಶನಕ್ಕೆ ಬುಧವಾರವೇ ಬಂದ್ ಆಗಿತ್ತು. ಇದೀಗ ಸಂಪೂರ್ಣವಾಗಿ ಮುಚ್ಚಲಾಗಿದ್ದು, ಇನ್ನು ಮುಂದಿನ ವರ್ಷ 29-10-2026 ರಿಂದ 11-11-2026 ರವರೆಗೆ ತೆರೆಯಲಿದೆ. ಈ ವರ್ಷ ಭೇಟಿ ನೀಡಿದ ಭಕ್ತರ ಸಂಖ್ಯೆ ಕೂಡ ಹೆಚ್ಚಾಗಿದ್ದು, ಆದಾಯವೂ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. ಈ ಬಗ್ಗೆ ಹಾಸನದ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಶಾಸಕರು, ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಮಾತನಾಡಿದ ಕೃಷ್ಣಭೈರೇಗೌಡ, 2025 ನೇ ವರ್ಷದ ಹಾಸನಾಂಬೆ ದರ್ಶನ ಮುಕ್ತಾಯ ಆಗಿದೆ. ಬುಧವಾರ ಸಾರ್ವಜನಿಕ ದರ್ಶನ ಮುಗಿದಿದ್ದು, ಉಳಿದಂತೆ ಸ್ಥಳೀಯರಿಗೆ ರಾತ್ರಿ ಕೂಡ ದರ್ಶನ ಆಗಿದೆ. ಶಾಸ್ತ್ರದ ಪ್ರಕಾರ ದೇವಾಲಯದ ಬಾಗಿಲು ಬಂದ್ ಮಾಡಲಾಗಿದೆ. ಎಲ್ಲ ಸಹಕಾರದಿಂದ, ಶಾಸಕರು, ಸಂಸದರ ಸಹಕಾರ ಹಾಗೂ ಜಿಲ್ಲಾಡಳಿತ ಸಹಕಾರದಿಂದ ಹಾಸನಾಂಬೆ ದರ್ಶನೋತ್ಸವ ಯಶಸ್ವಿಯಾಗಿ ನಡೆದಿದೆ. ಅದಿಕಾರಿಗಳು ಶ್ರಮ‌ ವಹಿಸಿ ಕೆಲಸ ಮಾಡಿದ್ದಾರೆ ಎಂದರು.

ಕೃಷ್ಣಭೈರೇಗೌಡ ಸುದ್ದಿಗೋಷ್ಠಿ

ಹಾಸನಾಂಬೆ ಉತ್ಸವ ಯಶಸ್ವಿಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದ ಸಚಿವರು, ಹಿಂದಿನ ಎಲ್ಲ ವರ್ಷಗಳಿಗಿಂತ ಈ ಬಾರಿ ಅತ್ಯಂತ ಯಶಸ್ವಿಯಾಗಿ ದರ್ಶನ ನಡೆದಿದೆ. ಸಾಮಾನ್ಯ ಜನರಿಗೆ ನೂಕು ನುಗ್ಗಲು ಇಲ್ಲದೆ ಸರಳವಾಗಿ ಭಕ್ತರ ದರ್ಶನ ಆಗಿದೆ. ಇದು ನಮಗೆ ಅತೀವ ಸಂತೋಷ ನೀಡಿದೆ. ಎಲ್ಲಾ ಜನರು ನಗುನಗುತ್ತಾ ದರ್ಶನ ಮಾಡಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ, ಹೊರ ರಾಜ್ಯಗಳಿಂದ ಭಕ್ತರು ಬಂದಿದ್ದಾರೆ. ಹಾಸನದ ಕೀರ್ತಿ ಎಲ್ಲೆಡೆ ಪ್ರಜ್ಚಲಿಸಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಹಾಸನಾಂಬೆ ಉತ್ಸವಕ್ಕೆ ತೆರೆ: ಮತ್ತೆ ಮುಂದಿನ ವರ್ಷ ದೇವಿ ದರ್ಶನಕ್ಕೆ ಮುಹೂರ್ತ ಫಿಕ್ಸ್

ಈ ವರ್ಷ 26,13000 ಭಕ್ತರು ದರ್ಶನ ಮಾಡಿದ್ದಾರೆ. ಟಿಕೆಟ್ ಹಾಗೂ ಲಡ್ಡು ಮಾರಾಟದಿಂದ 2,18,20,000 ರೂ. ಆದಾಯ ಬಂದಿದೆ. ಕಳೆದ ವರ್ಷಕ್ಕಿಂದ ಆದಾಯ ಕೂಡ ಹೆಚ್ಚಾಗಿದೆ ಎಂದು ಸಚಿವರು ತಿಳಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ