ಪ್ರಜ್ವಲ್ ವಿರುದ್ದ ಬೃಹತ್ ಪ್ರತಿಭಟನೆಗೆ ಸಜ್ಜಾದ ಹಾಸನ; ಹತ್ತು ಸಾವಿರಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ

ಅತ್ಯಾಚಾರ ಆರೋಪದಲ್ಲಿ ದೇಶಾಂತರ ಓಡಿ ಹೋಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ನಾಳೆ (ಮೇ.30) ಹಾಸನ ಚಲೋ ಕಾರ್ಯಕ್ರಮಕ್ಕೆ ಕರೆ ನೀಡಲಾಗಿದ್ದು, ಹೋರಾಟಗಾರರು ಸಜ್ಜಾಗಿದ್ದಾರೆ. ರಾಜ್ಯದ ವಿವಿಧೆಡೆಗಳ 113 ಕ್ಕೂ ಅಧಿಕ ಸಂಘಟನೆಗಳು ಹೋರಾಟ ಬೆಂಬಲಿಸಿ ತಮ್ಮ ಕಾರ್ಯಕರ್ತರ ಜೊತೆಗೆ ನಾಳೆ ಹಾಸನಕ್ಕೆ ಲಗ್ಗೆಯಿಡಲಿದ್ದು, ಹತ್ತು ಸಾವಿರಕ್ಕೂ ಅಧಿಕ ಜನರನ್ನ ಸೇರಿಸಿ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲು ತಯಾರಿ ನಡೆದಿದೆ.

ಪ್ರಜ್ವಲ್ ವಿರುದ್ದ ಬೃಹತ್ ಪ್ರತಿಭಟನೆಗೆ ಸಜ್ಜಾದ ಹಾಸನ; ಹತ್ತು ಸಾವಿರಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ
ಹಾಸನ ಚಲೋ
Edited By:

Updated on: May 29, 2024 | 8:21 PM

ಹಾಸನ, ಮೇ.29: ಹಲವು ಮಹಿಳೆಯರ ಅತ್ಯಾಚಾರ ಆರೋಪ ಹೊತ್ತಿರುವ ಹಾಸನ(Hassan)ದ ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ನಾಳೆ(ಮೇ.30) ಕರೆ ನೀಡಲಾಗಿರುವ ಹಾಸನ ಚಲೋ(Hassan Chalo) ಕಾರ್ಯಕ್ರಮಕ್ಕೆ ಕೌಂಟ್ ಡೌನ್ ಶುರುವಾಗಿದೆ. ಕರ್ನಾಟಕ ರಾಜ್ಯ ಜನಪರ ಚಳುವಳಿಗಳ ಒಕ್ಕೂಟದಿಂದ ಕರೆನೀಡಲಾಗಿರುವ ಬೃಹತ್ ಹೋರಾಟಕ್ಕೆ ಹಾಸನ ಸಜ್ಜಾಗಿದ್ದು, ನಾಳಿನ ಹೋರಾಟದ ಸಲುವಾಗಿ ಹಾಸನದ ಡಿಸಿ ಕಛೇರಿ ಎದುರಿನ ಚತುಷ್ಪತ ರಸ್ತೆಯಲ್ಲಿ ಬೃಹತ್ ವೇದಿಕೆಯನ್ನ ಸಿದ್ದಗೊಳಿಸಲಾಗಿದೆ. ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನರು ತಮ್ಮ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.

ಇನ್ನು ಈ ಕುರಿತು ಕರ್ನಾಟಕ ರಾಜ್ಯ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಅಧ್ಯಕ್ಷರಾದ ಡಾ.ಮೀನಾಕ್ಷಿ ಭಾಳಿ ಮಾತನಾಡಿ, ‘ ಕುಮಾರಸ್ವಾಮಿಯವರು ಇದೊಂದು ರಾಜಕೀಯ ಪ್ರೇರಿತ ಹೋರಾಟ ಎಂದಿದ್ದಾರೆ. ನಮ್ಮ ಸ್ವಾಭಿಮಾನ ಕೆಣಕಬೇಡಿ, ಆದಿಶೇಷನಿಗೆ ನೂರು ನಾಲಿಗೆಯಾದರೆ ದೇವೇಗೌಡರ ಕುಟುಂಬಕ್ಕೆ ಲಕ್ಷ ನಾಲಗೆ. ಅವರು ಬೆಳಿಗ್ಗೆ ಒಂದು, ಮಧ್ಯಾಹ್ನ ಇನ್ನೊಂದು ಹಾಗೂ ಸಂಜೆ ಮತ್ತೊಂದು ಮಾತನಾಡ್ತಾರೆ. ನಾಳಿನ ಹೋರಾಟಕ್ಕೆ ಸ್ವಯಂಪ್ರೇರಿತವಾಗಿ ಸಹಸ್ರಾರು ಜನರು ಬರುತ್ತಾರೆ. ನಮ್ಮ ಹೋರಾಟಕ್ಕೆ ಅಡ್ಡಿ ಮಾಡುವ ಪ್ರಯತ್ನ ನಡೆದಿದೆಯಾದರೂ ಜನರು ಬಂದೇ ಬರ್ತಾರೆ ಎಂದು ಗುಡುಗಿದ್ದಾರೆ.

ಇದನ್ನೂ ಓದಿ:ಬಂಧನದಿಂದ ಪಾರಾಗಲು ಪ್ರಜ್ವಲ್ ಮಾಡಿದ್ದ ಪ್ಲಾನ್ ಫೇಲ್​: ಮೇ 31 ತಾಯಿ-ಮಗನಿಗೆ ಮಹತ್ವದ ದಿನ

ಪ್ರಜ್ವಲ್ ರೇವಣ್ಣ ಸಂವಿಧಾನ ಬದ್ದವಾಗಿ ಪ್ರಮಾಣ ವಚನ ಸ್ವೀಕಾರ ಮಾಡಿ ತಮ್ಮ ಬಳಿ ನೆರವು ಕೇಳಿ ಬಂದ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗಿದ್ದಾರೆ. ಮಹಿಳೆಯರ ಮೇಳೆ ಅತ್ಯಾಚಾರ ಬಳಿಕ ಅದನ್ನ ವೀಡಿಯೋ ಮಾಡಿಕೊಳ್ಳಲಾಗಿದೆ. ಇದೊಂದು ಘೋರ ಕೃತ್ಯ ಎಂದು ಖಂಡಿಸಿರುವ ಸಾಹಿತಿ ಹಾಗೂ ಹಿರಿಯ ವಕೀಲರು ಆಗಿರುವ ಹಾಸನದ ಭಾನು ಮುಷ್ತಾಕ್ ಅವರು, ‘ಈ ಘಟನೆಯನ್ನ ಇಡೀ ನಾಗರಿಕ ಸಮಾಜ ಖಂಡಿಸಬೇಕಾಗಿದೆ. ಪ್ರಜ್ವಲ್ ಬಂಧನಕ್ಕೆ ಆಗ್ರಹಿಸಿ, ಸಂತ್ರಸ್ಥ ಮಹಿಳೆಯರ ಘನತೆಯ ರಕ್ಷಣೆಗೆ ಒತ್ತಾಯಿಸಿ ಮತ್ತು ಅಶ್ಲೀಲ ವೀಡಿಯೋಗಳನ್ನ ಅತ್ಯಂತ ನೀಚ ತನದಿಂದ ಹಂಚಿದವರ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿ ಈ ಹೋರಾಟ ನಡೆಸಲಾಗುತ್ತಿದೆ ಎಂದರು.

ಇಂದು ಹಲವು ಮಹಿಳಾಪರ ಹೋರಾಟಗಾರರು, ಸಾಹಿತಿಗಳು ಜಂಟಿಯಾಗಿ ಸುದ್ದಿಗೋಷ್ಟಿ ನಡೆಸಿ ದೇವೇಗೌಡರು ಬರೆದಿರುವ ಪತ್ರ ಅವರ ಕುಟುಂಬ ವ್ಯಾಮೋಹ ತೋರಿಸುತ್ತಿದೆ. ಅವರು ಮಾಜಿ ಪ್ರದಾನಿಯಾಗಿ ಈತನ ಕೃತ್ಯವನ್ನ ಖಂಢಿಸಬೇಕಾಗಿತ್ತು ಎಂದು ಆಕ್ರೋಶ ಹೊರ ಹಾಕಿದರು. ಕೂಡಲೇ ಆರೋಪಿಯನ್ನ ಬಂಧಿಸಬೇಕು. ಅದಕ್ಕಾಗಿ ನಾಳಿನ ಹೊರಾಟ ನಡೆಯಲಿದ್ದು, ಕಾನೂನಿನ ಮುಂದೆ ಎಲ್ಲವೂ ಒಂದೇ, ನಾಳಿನ ಹೋರಾಟಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಕರೆ ನೀಡಿದರು.

ಒಟ್ಟಿನಲ್ಲಿ ಅತ್ಯಾಚಾರ ಆರೋಪ ಹೊತ್ತು ದೇಶಾಂತರ ಓಡಿರುವ ಪ್ರಜ್ವಲ್ ಬಂಧನಕ್ಕಾಗಿ ಎಸ್​ಐಟಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿರುವಾಗಲೇ, ತಾನೇ ಖುದ್ದು ಬಂದು ಎಸ್​ಐಟಿ ಮುಂದೆ ಹಾಜರಾಗೋದಾಗಿ ಸ್ವತಃ ಪ್ರಜ್ವಲ್ ರೇವಣ್ಣ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಆರೋಪಿ ಪ್ರಜ್ವಲ್ ಬರ್ತಾರಾ ಇಲ್ಲವೋ ಎನ್ನುವ ಚರ್ಚೆ ನಡುವೆ ನಾಳೆ ಹಾಸನದಲ್ಲಿ ಪ್ರಜ್ವಲ್ ಬಂಧನಕ್ಕೆ ಆಗ್ರಹಿಸಿ ಬೃಹತ್ ಹೋರಾಟಕ್ಕೆ ಕೌಂಟ್ ಡೌನ್ ಶುರುವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ