
ಹಾಸನ, ಸೆಪ್ಟೆಂಬರ್ 30: ಹಾಸನ (Hassan) ಜಿಲ್ಲೆ ಆಲೂರು ಪಟ್ಟಣದ ಆಲೂರು ಪ್ರದೇಶದಲ್ಲಿ ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಊರಿಗೆ ಊರೇ ಬೆಚ್ಚಿಬೀಳಿಸುವಂತಹ ಸ್ಫೋಟ ಸಂಭವಿಸಿದೆ. ಖಾಸಗಿ ಕಂಪನಿ ಉದ್ಯೋಗಿಯಾದ ಸುದರ್ಶನ್ ಆಚಾರ್ (32)ಮತ್ತು ಪತ್ನಿ ಕಾವ್ಯಾ (27) ತಮ್ಮ ಇಬ್ಬರು ಮಕ್ಕಳ ಜೊತೆ ಮನೆಯಲ್ಲಿದ್ದ ವೇಳೆ ಈ ಘೋರ ದುರಂತ ಸಂಭವಿಸಿದೆ. ಮೇಲ್ನೋಟಕ್ಕೆ ಇದೊಂದು ಸಿಲಿಂಡರ್ ಬ್ಲಾಸ್ಟ್ ಎಂಬ ರೀತಿ ಕಾಣಿಸಿದೆ. ಸ್ಥಳೀಯರು ಆ್ಯಂಬುಲೆನ್ಸ್ ನೆರವಿನಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಸ್ಫೋಟದ ತೀವ್ರತೆ ಹೇಗಿತ್ತೆಂದರೆ, ಇಡೀ ಮನೆಯೇ ಧ್ವಂಸವಾಗಿದೆ. ಮನೆಯ ಹೊರಗಡೆ ಈ ಸ್ಫೋಟ ಆಗಿದ್ದು, ಮನೆ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದೆ. ಕಾಂಪೌಂಡ್ ಕುಸಿದುಬಿದ್ದಿದೆ. ಸ್ಫೋಟದ ತೀವ್ರತೆ ನೋಡಿದರೆ ಇದು ಜಿಲೆಟಿನ್ ಅಥವಾ ಡಿಟೋನೇಟರ್ ಇರಬಹುದೇ ಎಂಬ ಅನುಮಾನ ಮೂಡಿದೆ.
ಅದೃಷ್ಟವಶಾತ್, ಮನೆ ಒಳಗಿದ್ದ ಮಕ್ಕಳಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಹಾಸನದ ಹಿಮ್ಸ್‌ನಲ್ಲಿ ಗಾಯಾಳು ದಂಪತಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ದೀಪಾವಳಿಗೆ ಎಂದು ಪಟಾಕಿ ಏನಾದ್ರೂ ಸಂಗ್ರಹಿಸಿದ್ದರೇ? ಇದರಿಂದಲೇ ದುರಂತ ಸಂಭವಿಸಿತಾ ಎಂಬ ಬಗ್ಗೆಯೂ ಆಲೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಮನೆ ಒಂಟಿ ಮನೆಯಾಗಿದ್ದು, ಅಕ್ಕಪಕ್ಕ 50 ಮೀಟರ್ ದೂರದಲ್ಲಿ ಯಾವುದೇ ಮನೆಗಳಿಲ್ಲ. ಇದ್ದಿದ್ದರೆ ಮತ್ತಷ್ಟು ಅನಾಹುತ ಸಂಭವಿಸುತ್ತಿತ್ತು.
ಏತನ್ಮಧ್ಯೆ, ಗಾಯಾಳುಗಳಾದ ಸುದರ್ಶನ್ ಆಚಾರ್, ಕಾವ್ಯಾ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಿಮ್ಸ್ ಆಸ್ಪತ್ರೆಯಿಂದ ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ. ಝೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿನ ಆಸ್ಪತ್ರೆಗೆ ದಂಪತಿಯನ್ನು ಕರೆದೊಯ್ಯಲಾಗಿದೆ.
ಇದನ್ನೂ ಓದಿ: ಮೊದಲ ಬಾರಿ ಋತುಮತಿಯಾದ ಬಾಲಕಿಯರೇ ಟಾರ್ಗೆಟ್, 20 ಲಕ್ಷಕ್ಕೆ ಬಾಲಕಿ ಪೂರೈಸುವ ಜಾಲ ಪತ್ತೆ
ಮತ್ತೊಂದೆಡೆ, ವಿವಿಧ ಆಯಾಮಗಳಲ್ಲಿ ಪೊಲೀಸರ ತನಿಖೆ ಮುಂದವರಿದಿದೆ. ಸಿಲಿಂಡರ್ ಸ್ಫೋಟವೇ ಸಂಭವಿಸಿದೆಯಾ ಅಥವಾ ಸ್ಫೋಟಕ್ಕೆ ಬೇರೆ ಕಾರಣಗಳಿವೆಯೇ ಎಂಬ ಬಗ್ಗೆ ತನಿಖೆ ಪ್ರಗತಿಯಲ್ಲಿದೆ.