ಹಾಸನ: ರಾತ್ರಿ ವೇಳೆ ಕಾಫಿ ಬೀಜ ಕದಿಯಲು ಬಂದಿದ್ದ ಎನ್ನುವ ಆರೋಪದಲ್ಲಿ ಕೆಲ ಕಾಫಿ ತೋಟದ ಮಾಲೀಕರು ದಲಿತ ಯುವಕನನ್ನು ಹಿಡಿದು ಕೈ ಕಾಲು ಕಟ್ಟಿ ಅಮಾನವೀಯವಾಗಿ ಥಳಿಸಿರುವ ಘಟನೆ ಹಾಸನದಲ್ಲಿ ನಡೆದಿದೆ. ಕೈ ಕಾಲು ಕಟ್ಟಿ ಮರಕ್ಕೆ ನೇತು ಹಾಕಿ ಕ್ರೂರವಾಗಿ ಹಲ್ಲೆ ನಡೆಸಿದ್ಧಾರೆ. ಪರಿ ಪರಿಯಾಗಿ ಬೇಡಿಕೊಂಡರೂ ಬಿಡದೆ ಗಹ ಗಹಿಸಿ ನಗುತ್ತಾ ಸಿಕ್ಕ ಸಿಕ್ಕವರು ಮನಬಂದಂತೆ ಥಳಿಸಿ ಅಟ್ಟಹಾಸ ಮೆರೆದಿದ್ದಾರೆ. ತಮ್ಮ ಅಮಾನವೀಯ ಕೃತ್ಯವನ್ನ ವಿಡಿಯೋ ಮಾಡಿಕೊಂಡು ಮನುಷ್ಯತ್ವ ಮರೆತವರಂತೆ ವರ್ತಿಸಿದ್ದಾರೆ. ಒದೆ ತಿಂದು ನರಳಾಡುತ್ತಿದ್ದವನ ಮೇಲೆ ನಾಯಿ ಬಿಟ್ಟು ನೀಚತನ ಮೆರೆದಿದ್ದಾರೆ. ದುರುಳರ ಕ್ರೌರ್ಯದ ಘಟನೆ ಬೆಳಕಿಗೆ ಬರುತ್ತಲೆ ಎಚ್ಚೆತ್ತ ಪೊಲೀಸರು ಹಲ್ಲೆಗೊಳಗಾದವನನ್ನ ರಕ್ಷಿಸಿ ಐವರು ಕ್ರೂರಿಗಳನ್ನ ಬಂದಿಸಿದ್ದು ಮನುಷ್ಯತ್ವ ಮರೆತವರ ನೀಚತನಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಕಾಫಿ ತೋಟದಲ್ಲಿ ಕಾಫಿ ಕದಿಯೋಕೆ ಬಂದಿದ್ದ ಎಂದು ಆರೋಪಿಸಿ ಬಡ ಕಾರ್ಮಿಕನ ಮೇಲೆ ಬಲಿಷ್ಠರು ಮಾಡಿರೋ ಅಟ್ಟಹಾಸದ ವಿಡಿಯೋಗಳು ನಾಗರೀಕ ಸಮಾಜವನ್ನ ಅಣಕಿಸುವಂತಿದ್ದರೆ. ಅಣ್ಣ ಅಪ್ಪಾ ಬಿಟ್ಟು ಬಿಡಿ, ನಿಮ್ಮ ಕೈ ಮುಗಿತೀನಿ ಕಾಲಿಗೆ ಬೀಳ್ತೀನಿ ಎಂದರೂ ಬಿಡದೆ ಕ್ರೌರ್ಯತೆ ಮೆರೆದ ದುರುಳರ ನೀಚತನಕ್ಕೆ ಜನರು ಹಿಡಿಶಾಪ ಹಾಕುತ್ತಿದ್ಧಾರೆ. ಜಗತ್ತಿಗೆ ಶಾಂತಿಮಂತ್ರ ಸಾರಿದ ಬಾಹುಬಲಿಯ ನಾಡಿನಲ್ಲಿ ಮನುಷ್ಯತ್ವ ಮರೆತವರ ಅಟ್ಟಹಾಸ ನಿಜಕ್ಕೂ ಕಲ್ಲು ಹೃದಯವನ್ನೂ ಕರಗಿಸುವಂತಿದೆ. ಬೇಲೂರು ತಾಲೂಕಿನ ಅರೆಹಳ್ಳಿ ಸಮೀಪದ ಬೆಳ್ಳಾವರ ಗ್ರಾಮದಲ್ಲಿ ನಡೆದಿರೋ ಅಮಾನವೀಯ ಕೃತ್ಯಕ್ಕೆ ನಾಗರೀಕ ಸಮಾಜವೇ ತಲೆ ತಗ್ಗಿಸುವಂತಾಗಿದೆ.
ಬೆಳ್ಳಾವರದ ಸಮೀಪದ ಗ್ರಾಮದವನಾದ ಮಂಜು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ. ಬೆಳ್ಳಾವರದ ರಾಘವೇಂದ್ರ ಎಂಬುವವರ ತೋಟದಲ್ಲಿ ಕಾಫಿ ಕದಿಯಲು ಬಂದಿದ್ದಾನೆ ಎಂದು ಆತನನ್ನ ಹಿಡಿದುಕೊಂಡಿದ್ದ ರಾಘವೇಂದ್ರ, ಉಮೇಶ್, ಕೀರ್ತಿ, ಸ್ಯಾಮ್ಯುವಲ್, ನವೀನ್ ರಾಜ್ ಮತ್ತಿತರರು ರಾತ್ರಿಯಿಡಿ ಮನ ಬಂದಂತೆ ಥಳಿಸಿದ್ದಾರೆ. ಕೈ ಕಾಲು ಕಟ್ಟಿ, ಕ್ರೌರ್ಯ ಮೆರೆದಿದ್ದಾರೆ. ನೀರಿಗೆತಳ್ಳಿ ತಲೆಯಲ್ಲಿ ರಕ್ತ ಸೋರುವಂತೆ ಹೊಡೆದರೂ ಸಮಾಧಾನವಾಗದೆ ತಮ್ಮ ನೀಚತನ ತೋರಿಸಿದ್ದಾರೆ. ಕೈಮುಗಿದು ಬೇಡಿಕೊಂಡರೂ ಕಾಲು ಹಿಡಿದು ಗೋಳಾಡಿದ್ರು ಬಿಡದೆ, ಕಳ್ಳತನ ಮಾಡ್ತೀಯಾ, ಕದ್ದು ಮಾಲನ್ನು ಎಲ್ಲಿ ಮಾರಿದೆ ಎಂದೆಲ್ಲಾ ಬೆದರಿಸುತ್ತಾ ಅಮಾನುಷವಾಗಿ ವರ್ತಿಸಿದ್ದಾರೆ. ಅಷ್ಟೇ ಅಲ್ಲಾ ಹಲ್ಲೆಗೊಂಡು ನಿತ್ರಾಣಗೊಂಡವನ ಮೇಲೆ ನಾಯಿ ಚೂಬಿಟ್ಟು ಮನುಷ್ಯತ್ವ ಮರೆತವರಂತೆ ವರ್ತಿಸಿದ್ದಾರೆ. ತಮ್ಮೆಲ್ಲಾ ನೀಚತನದ ವರ್ತನೆಯನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಇಷ್ಟಕ್ಕೂ ಸಮಾಧಾನವಾಗದ ಈ ನೀಚರು ಬೆಳಿಗ್ಗೆ ಎದ್ದು ಮತ್ತೆ ಹಲ್ಲೆ ಮಾಡಿದ್ದಾರೆ ಕಾಲು ಕಟ್ಟಿ ಮರಕ್ಕೆ ನೇತುಹಾಕಿ ಅಟ್ಟಹಾಸಗೈದಿದ್ದು ನೀಚರ ಕೃತ್ಯದ ಬಗ್ಗೆ ಮಾಹಿತಿ ತಿಳಿಯುತ್ತಲೆ ಕಾರ್ಯಪ್ರವೃತ್ತರಾದ ಅರೆಹಳ್ಳಿ ಪೊಲೀಸರು ಸಂತ್ರಸ್ಥನನ್ನು ರಕ್ಷಿಸಿ ಹಲ್ಲೆಪಾಡಿದ ಪಾಪಿಗಳನ್ನು ಬಂಧಿಸಿದ್ದಾರೆ.
ಹಲ್ಲೆ ಮಾಡಿರೋ ಆರೋಪದಲ್ಲಿ ಬೆಳ್ಳಾವರ ಮತ್ತಿತರ ಸುತ್ತಮುತ್ತಲ ಕಾಫಿ ಬೆಳೆಗಾರರಾದ ರಾಘವೇಂದ್ರ, ಉಮೇಶ್, ಕೀರ್ತಿ, ಶ್ಯಾಮ್ಯುವಲ್, ನವೀನ್ ರಾಜ್ ರನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಹಲ್ಲೆಗೊಳಗಾಗಿರೋ ಮಂಜು ಈ ಎಲ್ಲರ ಮನೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರಂತೆ. ಈ ಹಿಂದೆ ಕೂಡ ಇವರುಗಳ ಮನೆಯಿಂದ ಕಾಫಿ ಕಳ್ಳತನವಾಗಿತ್ತಂತೆ. ನಿನ್ನೆ ಕೂಡ ಕಾಫಿ ಕದಿಯಲು ಬಂದಿದ್ದ ಎಂದು ಹೇಳಿ ಮಂಜುನನ್ನ ಹಿಡಿದು ಮನಬಂದಂತೆ ಥಳಿಸಿದ್ದಾರೆ. ಮನುಷ್ಯತ್ವವನ್ನೇ ಮರೆತ ಮೃಗಗಳಂತೆ ದೊಣ್ಣೆ, ಕೋಲುಗಳಿಂದ ಹಲ್ಲೆಮಾಡಿದ್ದಾರೆ. ಪರಿ ಪರಿಯಾಗಿಬೇಡಿಕೊಂಡರು ಮನಸ್ಸು ಕರಗಿಲ್ಲ, ಅಣ್ಣಾ ಬಿಟ್ಬಿಡಿ, ಆಗ್ತಿಲ್ಲ ನನ್ನ ಬಿಡಿ ಎಂದರೂ ಬಿಡದೆ ಗಹಗಹಿಸಿ ನಗುತ್ತಾ, ಅಶ್ಲೀಲವಾಗಿ ನಿಂದಿಸುತ್ತಾ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ.
ಹಲ್ಲೆ ಮಾಡಿದ ಕ್ರೂರಿಗಳ ವಿರುದ್ದ ಕೊಲೆ ಯತ್ನ ಕೇಸ್ ಜೊತೆಗೆ ಜಾತಿ ದೌರ್ಜನ್ಯ ಕೇಸ್ ಕೂಡ ದಾಖಲಿಸಿ ಐವರು ಆರೋಪಿಗಳನ್ನ ಬಂಧಿಸಲಾಗಿದೆ. ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿರೋ ಹಾಸನ ಎಸ್ಪಿ ಹರಿರಾಮ್ ಶಂಕರ್ ಇಂತಹ ಘಟನೆಗಳು ನಡೆಯಲೇ ಬಾರದು, ನಿಜಕ್ಕೂ ಇದು ಘೋರ ಕೃತ್ಯ ಆಗಬಾರದ ಘಟನೆ ಆಗಿ ಹೋಗಿದೆ, ಸದ್ಯ ಸಂತ್ರಸ್ಥ ಅಪಾಯದಿಂದ ಪಾರಾಗಿದ್ದು ಅವರನ್ನ ಹಾಸನದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ತನಿಖೆ ಮುಂದುವರೆದಿದೆ.
ವರದಿ: ಮಂಜುನಾಥ್ ಕೆಬಿ, ಟಿವಿ9 ಹಾಸನ
Published On - 11:16 am, Mon, 30 January 23