‘ಬಂಗಾರ’ದಂತಾ ಬದುಕಿಗೆ ಗ್ರಹಣ: ಚಿನ್ನಾಭರಣ ಖರೀದಿ ಕುಸಿತ; ಬೀದಿಗೆ ಬಿದ್ದ ಹಾಸನದ ಅಕ್ಕಸಾಲಿಗರ ಬದುಕು
ಇರಾನ್-ಇಸ್ರೇಲ್ ಯುದ್ಧ, ಚಿನ್ನದ ಬೆಲೆ ಏರಿಕೆ ಮತ್ತು ಆಮದು ಸುಂಕ ಹೆಚ್ಚಳದಿಂದ ರಾಜ್ಯದ ಅದರಲ್ಲೂ ಹಾಸನ ಜಿಲ್ಲೆಯ ಸಾವಿರಾರು ಅಕ್ಕಸಾಲಿಗರು ತೀವ್ರ ಸಂಕಷ್ಟದಲ್ಲಿದ್ದಾರೆ. ಆಭರಣ ಖರೀದಿ ಕುಸಿದಿದ್ದು, ಕೆಲಸವಿಲ್ಲದೆ ಕಾರ್ಮಿಕರು ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಕಾರ್ಪೊರೇಟ್ ಸ್ಪರ್ಧೆಯ ನಡುವೆ ಸಣ್ಣ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದು, ಸರ್ಕಾರದಿಂದ ತುರ್ತು ನೆರವು ಕೋರಿದ್ದಾರೆ.

ಹಾಸನ, ಮೇ 18: ನಿತ್ಯವೂ ಕೆಜಿಗಟ್ಟಲೆ ಬಂಗಾರವನ್ನು (Gold) ಕೈಯಲ್ಲಿ ಹಿಡಿದು, ನೂರಾರು ಡಿಸೈನ್ ಒಡವೆಗಳನ್ನು ತಯಾರಿಸುವ ಅಕ್ಕಸಾಲಿಗರ (Goldsmith) ಬದುಕು ಮಾತ್ರ ಬಂಗಾರದಂತಿಲ್ಲ. ಇರಾನ್-ಇಸ್ರೇಲ್ ಯುದ್ಧ, ಚಿನ್ನದ ಬೆಲೆ ಏರಿಕೆ ಮತ್ತು ಆಮದು ಸುಂಕ ಹೆಚ್ಚಳದ ತ್ರಿವಳಿ ಏಟಿಗೆ ಸಿಲುಕಿ ರಾಜ್ಯದ ಅದರಲ್ಲೂ ಹಾಸನ ಜಿಲ್ಲೆಯ ಸಾವಿರಾರು ಅಕ್ಕಸಾಲಿಗರು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮುಖ್ಯಾಂಶಗಳು
- ಚಿನ್ನದ ಬೆಲೆ ಗಗನಕ್ಕೇರಿದ್ದರಿಂದ ಆಭರಣ ಖರೀದಿ ಭಾರೀ ಕುಸಿತ
- ಆರ್ಡರ್ ಇಲ್ಲದೆ ಸಾವಿರಾರೂ ಅಕ್ಕಸಾಲಿಗರು ಕೆಲಸ ಕಳೆದುಕೊಂಡ ಆತಂಕ
- 400ಕ್ಕೂ ಹೆಚ್ಚು ಸಣ್ಣ ಜ್ಯುವೆಲರಿ ವರ್ಕ್ಸ್‌ಗಳು ನಷ್ಟದ ಸುಳಿಯಲ್ಲಿ
ಯುದ್ಧದ ಬಿಸಿ: ಚಿನ್ನಕ್ಕೆ ಸುಟ್ಟ ಗಾಯ
ಇರಾನ್-ಇಸ್ರೇಲ್ ನಡುವಿನ ಯುದ್ಧದಿಂದ ಜಗತ್ತಿನ ಬಹುತೇಕ ದೇಶಗಳು ಒಂದಲ್ಲ ಒಂದು ಸಮಸ್ಯೆಗೆ ಸಿಲುಕಿವೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಅಡುಗೆ ಅನಿಲ, ಪೆಟ್ರೋಲ್-ಡೀಸೆಲ್ ಪೂರೈಕೆ ವ್ಯತ್ಯಯದ ನಡುವೆ ಹಳದಿ ಲೋಹದ ವ್ಯಾಪಾರದಲ್ಲಿ ದೊಡ್ಡ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿದೆ. ಕೇಂದ್ರ ಸರ್ಕಾರ ಚಿನ್ನದ ಆಮದು ಸುಂಕ ಹೆಚ್ಚಿಸಿದ ಪರಿಣಾಮ ಚಿನ್ನದ ದರ ಮತ್ತಷ್ಟು ಏರಿಕೆಯಾಗಿದೆ. ಇದರಿಂದ ಚಿನ್ನಾಭರಣ ಖರೀದಿಸುವವರ ಸಂಖ್ಯೆ ಗಣನೀಯವಾಗಿ ಇಳಿದಿದೆ. ಮಾರಾಟ ಕುಸಿದ ಕಾರಣ ಜ್ಯುವೆಲರಿ ಶಾಪ್‌ಗಳಿಂದ ಆಭರಣ ತಯಾರಿಕೆಗೆ ಆರ್ಡರ್ ಬರುತ್ತಿಲ್ಲ.
ಹಾಸನದಲ್ಲಿ 3 ಸಾವಿರ ಕುಟುಂಬಗಳ ಆಕ್ರಂದನ
ಹಾಸನ ಜಿಲ್ಲೆಯೊಂದರಲ್ಲೇ ಸುಮಾರು 400ಕ್ಕೂ ಹೆಚ್ಚು ಸಣ್ಣಪುಟ್ಟ ಜ್ಯುವೆಲರಿ ವರ್ಕ್ ಶಾಪ್‌ಗಳಿದ್ದು, 2 ರಿಂದ 3 ಸಾವಿರಕ್ಕೂ ಹೆಚ್ಚು ನುರಿತ ಕರಕುಶಲ ಕಾರ್ಮಿಕರು ಇದನ್ನೇ ನಂಬಿ ಬದುಕುತ್ತಿದ್ದಾರೆ. ‘ನಮಗೆ ಬೇರೆ ಕೆಲಸ ಗೊತ್ತಿಲ್ಲ. ಈಗ ಕೆಲಸವೂ ಇಲ್ಲದೆ, ಕೈಯಲ್ಲಿ ಕಾಸೂ ಇಲ್ಲದೆ ಮನೆ ಬಾಡಿಗೆ, ಮಕ್ಕಳ ಶಾಲಾ ಫೀಸ್ ಕಟ್ಟಲು ಪರದಾಡುತ್ತಿದ್ದೇವೆ. ನಮಗೆ ಕೊರೊನಾ ದಿನಗಳು ನೆನಪಾಗುತ್ತಿವೆ’ ಎಂದು ಅಕ್ಕಸಾಲಿಗರು ಅಳಲು ತೋಡಿಕೊಂಡಿದ್ದಾರೆ.
ಕಾರ್ಪೊರೇಟ್ ಸಂಸ್ಥೆಗಳ ಹೊಡೆತ
ಇನ್ನೊಂದೆಡೆ, ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ದೊಡ್ಡ ದೊಡ್ಡ ಕಾರ್ಪೊರೇಟ್ ಜ್ಯುವೆಲರಿ ಸಂಸ್ಥೆಗಳು ತಮ್ಮದೇ ಆದ ಸ್ವಂತ ಫ್ಯಾಕ್ಟರಿಗಳ ಮೂಲಕ ಒಡವೆ ತಯಾರಿಸಿಕೊಳ್ಳುತ್ತಿವೆ. ಇದರಿಂದ ಸ್ಥಳೀಯ ಸಣ್ಣ ವ್ಯಾಪಾರಿಗಳನ್ನು ನಂಬಿಕೊಂಡಿದ್ದ ದೇಶೀಯ ಕರಕುಶಲ ಕರ್ಮಿಗಳು ತೀವ್ರ ನಷ್ಟದ ಸುಳಿಗೆ ಸಿಲುಕಿದ್ದಾರೆ.
ಸರ್ಕಾರಕ್ಕೆ ಕಣ್ಣೀರಿನ ಮನವಿ
ಯುದ್ಧ ಆರಂಭವಾಗಿ ಸುಮಾರು ತಿಂಗಳು ಕಳೆಯುತ್ತಾ ಬಂದಿದ್ದು, ಸಮಸ್ಯೆಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿವೆ. ಇದ್ರಿಂದ ಸಂಕಷ್ಟಕ್ಕೆ ಸಿಲುಕುವ ಜೊತೆಗೆ ಹಲವರ ಬದುಕು ಅತಂತ್ರವಾಗುತ್ತಿದೆ. ನಮ್ಮಂತ ನಲುಗಿದ ಕಾರ್ಮಿಕರ ಕೈಹಿಡಿಯುವ ಕೆಲಸ ಸರ್ಕಾರ ಮಾಡಬೇಕಿದ್ದು, ತಕ್ಷಣವೇ ನಮ್ಮ ನೆರವಿಗೆ ಬರಬೇಕು ಎಂದು ಅಕ್ಕಸಾಲಿಗರ ಸಂಘಟನೆಗಳು ಮನವಿ ಮಾಡಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:05 pm, Mon, 18 May 26
