ಹಾಸನ: ಜೆಡಿಎಸ್ ದಳಪತಿಗಳ ಭದ್ರಕೋಟೆಯಲ್ಲಿ ಗುಡುಗಿದ ಕೈ ನಾಯಕರು
ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೆಡಿಎಸ್, ಬಿಜೆಪಿ ವಿರುದ್ದ ಹರಿಹಾಯ್ದರು.
ಹಾಸನ: ಜಿಲ್ಲೆಯಲ್ಲಿ ಇಂದು(ಜ.21) ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರಜಾದ್ವನಿ ಯಾತ್ರೆ ರಾಜಕೀಯ ವಾಗ್ಯುದ್ದಕ್ಕೆ ಕಾರಣವಾಯ್ತು, ಗೌಡರ ತವರು, ಜೆಡಿಎಸ್ ಭದ್ರಕೋಟೆಯಲ್ಲಿ ನಿಂತು ಗುಟುರು ಹಾಕಿದ ಟಗರು ಸಿದ್ದರಾಮಯ್ಯ ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು. ಈ ಕುಮಾರಸ್ವಾಮಿ ಪಂಚ ರತ್ನ ಯಾತ್ರೆ ಹೊರಟಿದ್ದಾರೆ ಅವರಿಗೆ ಅಧಿಕಾರ ಇರುವಾಗ ಯಾಕೆ ಪಂಚರತ್ನ ಮಾಡಲಿಲ್ಲ ಎಂದು ಪ್ರಶ್ನಿಸಿದ್ರು, ಈ ಜೆಡಿಎಸ್ಗೆ ಸಿದ್ದಾಂತ ಇಲ್ಲಾ ಇವರು ಗೆದ್ದೆತ್ತಿನ ಬಾಲ ಹಿಡಿಯೋರು ಬಿಜೆಪಿ ಬಂದ್ರೆ ಆಕಡೆ ಹೋಗ್ತಾರೆ ಕಾಂಗ್ರೆಸ್ ಬಂದರೆ ಈ ಕಡೆ ಬರ್ತಾರೆ, ಆ ಕಡೆನೂ ಸೈ ಈ ಕಡೆನೂ ಸೈ ಅವರಿಗೆ ಮತ ನೀಡಿದ್ರೆ ವೇಸ್ಟ್ ಅಗುತ್ತೆ ದಯವಿಟ್ಟು ಈ ಜೆಡಿಎಸ್ ಅನ್ನು ಸೋಲಿಸಿ ಎಂದು ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದರು. ಜೆಡಿಎಸ್ ಭದ್ರ ಕೋಟೆಯಲ್ಲಿ ನಿಂತು ನೀವು ಪುಕ್ಕಲು ತನ ಬಿಡಬೇಕು, ಬಿಜೆಪಿ ಜೊತೆ ಅಷ್ಟೆ ಅಲ್ಲಾ ಜೆಡಿಎಸ್ ಎದುರು ತೊಡೆ ತಟ್ಟಬೇಕು ಎಂದು ತಮ್ಮ ನಾಯಕರಿಗೆ ಧೈರ್ಯತುಂಬಿದ ಸಿದ್ದರಾಮಯ್ಯ ಕಾಂಗ್ರೆಸ್ಗೆ ಬೆಂಬಲಿಸಿ ಎಂದರು.
ತಮ್ಮ ಮಾತಿನುದ್ದಕ್ಕೂ ಜೆಡಿಎಸ್ ವಿರುಧ್ದ ಗುಡುಗಿದ ಟಗರು, ಬಿಜೆಪಿ ವಿರುದ್ದವೂ ತೀವ್ರ ವಾಗ್ದಾಳಿ ನಡೆಸಿದರು. ಈ ಮೋದಿ ಬರಿ ಸುಳ್ಳು ಹೇಳ್ತಾರೆ. ಅಚ್ಚೇ ದಿನ್ ಅಂದ್ರು ಅದು ಬಂತಾ? ಎಲ್ಲಾ ಬೆಲೆ ಏರಿಕೆ ಆಯ್ತು, ನಾನು ಬಡವರಿಗೆ ಉಚಿತವಾಗಿ ಏಳು ಕೆಜಿ ಅಕ್ಕಿ ಕೊಟ್ಟಿದ್ದೆ, ಅವನ ಮನೆ ಹಾಳಾಗ ಈ ಸಿಎಂ ಬಸವರಾಜ್ ಬೊಮ್ಮಾಯಿ ಅದನ್ನೂ ನಿಲ್ಲಿಸಿಬಿಟ್ಟರು. ಕೊಟ್ಟಿದ್ರೆ ಅವರಪ್ಪನ ಮನೆ ಗಂಟು ಹೋಗ್ತಾ ಇತ್ತಾ ಎಂದು ಅಬ್ಬರಿಸಿದರು. ಇನ್ನು ಸಿದ್ದು ಅಬ್ಬರ ಇಷ್ಟಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾನೇ ಸಿಎಂ ಎಂದು ಹೋದಲೆಲ್ಲಾ ಜನರ ಬೆಂಬಲ ಕೇಳುತ್ತಿರುವ ಡಿಕೆಶಿ ಗೌಡರ ತವರು ಹಾಸನದಲ್ಲಿ ಬೇರೆಯದೇ ದಾಟಿಯಲ್ಲಿ ದಾಳ ಉರುಳಿಸಿದ್ರು, ನಾನೂ ಕೆಂಪೇಗೌಡರ ಮಗನೇ, ನಾನೂ ಈ ಮಣ್ಣಿನ ಮಗನೇ, ದೇವೇಗೌಡರಿಗೆ ಅವಕಾಶ ಕೊಟ್ರಿ ಕುಮಾರಸ್ವಾಮಿಗೂ ಅವಕಾಶ ಕೊಟ್ರಿ ನಿಮ್ಮ ಕೈ ಮುಗಿದು ಕಾಲು ಮುಗಿದು ಕೇಳ್ತಿನಿ ನಿಮ್ಮ ಋಣ ತೀರಿಸಲು ನನಗೊಂದು ಅವಕಾಶ ಕೊಡಿ ಎಂದು ಬೇಡಿಕೊಂಡರು.
ಜೆಡಿಎಸ್ಗೆ ನಾವೇ ಸ್ವಾಭಿಮಾನ ಬಿಟ್ಟು ಅಧಿಕಾರ ಕೊಟ್ಟೆವು, ಬೇಕಿದ್ರೆ ನಾವೇ ಸಿಎಂ ಆಗಿ ಅವರಿಗೆ ಡಿಸಿಎಂ ಕೊಡಬಹುದಿತ್ತು ಆದರೆ ನಾವು ಹಾಗೆ ಮಾಡಲಿಲ್ಲ, ಅವರಿಗೆ ಅವಕಾಶ ನೀಡಿ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದೆವು, ಅವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ನಡೆಸಬೇಕಿತ್ತು ಆದರೆ ಅವರು ಹಾಗೆ ಮಾಡಲಿಲ್ಲ ಎಂದು ಸಮ್ಮಿಶ್ರ ಸರ್ಕಾರ ಪತನಕ್ಕೆ ಕುಮಾರಸ್ವಾಮಿಯೇ ಕಾರಣ ಎಂದು ಪರೋಕ್ಷವಾಗಿ ಹೇಳುತ್ತಲೇ ರಾಜ್ಯದಲ್ಲಿ ಮತ್ತೊಮ್ಮೆ ಒಕ್ಕಲಿಗ ಸಿಎಂ ಆಗುವ ಸಾದ್ಯತೆ ಇದೆ. ಅದಕ್ಕೆ ನನಗೆ ಆಶೀರ್ವಾದ ಮಾಡಿ ಎಂದು ಪರೋಕ್ಷವಾಗಿ ಹೇಳಿದರು.
ಇದನ್ನೂ ಓದಿ:Siddaramaiah: ಸಂಚಲನ ಮೂಡಿಸಿದ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಹೇಳಿಕೆ; ಹಾಸನ ಭಾಷಣದ ಸಂಪೂರ್ಣ ವಿವರ ಇಲ್ಲಿದೆ
ಒಟ್ಟಿನಲ್ಲಿ ವಿದಾನಸಭೆ ಚುನಾವಣೆ ಹತ್ತಿರ ಬರುತ್ತಿದೆ, ಸಿಎಂ ಗದ್ದುಗೆ ಮೇಲೆ ಕಣ್ಣಿಟ್ಟಿರೊ ನಾಯಕರು ಒಬ್ಬರ ಕಾಲನ್ನ ಇನ್ನೊಬ್ಬರು ಎಳೆಯುತ್ತಾ ತಮಗೊಂದು ಅವಕಾಶಕ್ಕಾಗಿ ಮೊರೆಯಿಡುತ್ತಿದ್ದಾರೆ, ಆದರೆ ಕೆಲವೇ ತಿಂಗಳಲ್ಲಿ ನಡೆಯಲಿರೋ ರಾಜ್ಯ ರಾಜಕೀಯದ ರಣರಂಗದಲ್ಲಿ ಮತದಾರ ಯಾರಿಗೆ ಜೈ ಎನ್ನುತ್ತಾನೆ ಕಾದು ನೋಡಬೇಕಾಗಿದೆ.
ವರದಿ: ಮಂಜುನಾಥ ಕೆಬಿ ಟಿವಿ9ಹಾಸನ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ