ಹಣ ಕೊಡಲಿಲ್ಲವೆಂದು ಎರಡೂ ಕಾಲು ಮುರಿದ್ರು; ಪೊಲೀಸ್ ಇನ್ಸ್ಪೆಕ್ಟರ್‌ರಿಂದಲೇ ಮಾರಣಾಂತಿಕ ಹಲ್ಲೆ?
ಬೆಂಗಳೂರು ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರು ಹಾಸನದ ವ್ಯಕ್ತಿಯೋರ್ವನ ಮೇಲೆ ಕಬ್ಬಿಣದ ರಾಡ್‌ನಿಂದ ಥಳಿಸಿದ ಆರೋಪ ಕೇಳಿಬಂದಿದೆ. ಹಲ್ಲೆಗೊಳಗಾದ ವ್ಯಕ್ತಿಯ ಎರಡೂ ಕಾಲುಗಳು ಮುರಿದಿದ್ದು, ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದಶಕದ ಹಿಂದೆ ನೀಡಿದ ಹಣ ವಾಪಸ್ ಕೊಟ್ಟಿಲ್ಲವೆಂಬ ಕಾರಣಕ್ಕೆ ಹಲ್ಲೆ ನಡೆದಿರುವುದಾಗಿ ಸಂತ್ರಸ್ತರು ಹೇಳಿದ್ದಾರೆ.

ಹಾಸನ, ಜನವರಿ 07: ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧ ಮಾರಣಾಂತಿಕ ಹಲ್ಲೆ ಆರೋಪದ ಕೇಳಿ ಬಂದಿದೆ. ಹಾಸನ ತಾಲ್ಲೂಕಿನ ಕಾರ್ಲೆಕೊಪ್ಪಲು ಗ್ರಾಮದ ಶಶಿಧರ್ ಎಂಬವರ ಮೇಲೆ ಬೆಂಗಳೂರು ಪೊಲೀಸ್ ಇನ್ಸ್ಪೆಕ್ಟರ್ ಶಿವಕುಮಾರ್ ಅವರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
‘ಕಬ್ಬಿಣದ ರಾಡ್‌ನಿಂದ ಹಲ್ಲೆ’
ನಿನ್ನೆ ಸಂಜೆ ಹಾಸನ ಜಿಲ್ಲೆಯ ಗೊರೂರು ಸಮೀಪದ ಉಳುವಾರೆ ಗ್ರಾಮದ ಬಳಿ ಇನ್ನೊವಾ ಕಾರಿನಲ್ಲಿ ಬಂದ ಶಿವಕುಮಾರ್ ಹಾಗೂ ಅವರೊಂದಿಗೆ ಇದ್ದ ಇಬ್ಬರು ತನ್ನನ್ನು ಅಡ್ಡಗಟ್ಟಿ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ಶಶಿಧರ್ ಆರೋಪಿಸಿದ್ದಾರೆ. ಹಲ್ಲೆಯ ವೇಳೆ ಇಬ್ಬರು ತನ್ನನ್ನು ಹಿಡಿದುಕೊಂಡಿದ್ದು, ಶಿವಕುಮಾರ್ ಕಬ್ಬಿಣದ ರಾಡ್‌ನಿಂದ ನಿರಂತರವಾಗಿ ದಾಳಿ ಮಾಡಿದ್ದಾರೆ ಎಂದು ಶಶಿಧರ್ ಹೇಳಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಶಶಿಧರರನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎರಡು ಕಾಲುಗಳು ಮುರಿದಿದ್ದು, ಹದಿನೈದು ಹೊಲಿಗೆ ಹಾಕಲಾಗಿದೆ. ಅಲ್ಲದೇ ಬಲ ಕಣ್ಣಿಗೆ ಗಂಭೀರ ಗಾಯವಾಗಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಹಣದ ವಿಚಾರಕ್ಕೆ ಕಲಹ
ಹತ್ತು ವರ್ಷಗಳ ಹಿಂದೆ ಶಿವಕುಮಾರ್ ಹಾಸನದಲ್ಲೇ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದ ವೇಳೆ ತಮ್ಮ ನಡುವೆ ಹಣಕಾಸಿನ ವ್ಯವಹಾರ ನಡೆದಿತ್ತು ಎಂದು ಶಶಿಧರ್ ಹೇಳಿದ್ದಾರೆ. ತನ್ನ ಹೆಸರಿನಲ್ಲಿ ಆಸ್ತಿ ಮಾಡಿಕೊಳ್ಳಲು ಶಿವಕುಮಾರ್ ಐವತ್ತು ಲಕ್ಷ ರೂಪಾಯಿ ನೀಡಿದ್ದು, ಅದರಲ್ಲಿ ಇಪ್ಪತ್ತು ಲಕ್ಷವನ್ನು ವಾಪಸ್ ಕೊಟ್ಟಿದ್ದೇನೆ. ಉಳಿದ ಮೂವತ್ತು ಲಕ್ಷ ಹಣಕ್ಕಾಗಿ ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದರು. ಹಣ ನೀಡದ ಕಾರಣಕ್ಕೆ ಈ ರೀತಿ ಹಲ್ಲೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:25 pm, Wed, 7 January 26