ಹಾಸನ: ಎರಡು ತಿಂಗಳ ಹಿಂದೆ ಸೈನಿಕನ ತಾಯಿ ನಿಗೂಢ ರೀತಿಯಲ್ಲಿ ಕಾಣೆಯಾಗಿ (ಜುಲೈ 20 ರಿಂದ), 52 ದಿನಗಳ ಬಳಿಕ ಅಸ್ತಿ ಪಂಜರವಾಗಿ (ಸೆಪ್ಟೆಂಬರ್ 12 ರಂದು) ಪತ್ತೆಯಾಗಿದ್ದರು. ತಾಯಿಯನ್ನು ಕೊಲೆ ಮಾಡಲಾಗಿದೆ ಎಂದು ಮಹೇಶ್ ಎಂಬುವವರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿತ್ತು. ದನ ಮೇಯಿಸಲು ಜಮೀನಿನ ಬಳಿ ಹೋಗಿದ್ದ ಮಹಿಳೆ ರತ್ನಮ್ಮ ಅವರನ್ನು ಚಿನ್ನಾಭರಣಕ್ಕಾಗಿ ಕೊಲೆ ಮಾಡಲಾಗಿದೆ ಎನ್ನೋದು ಮನೆಯವರ ಆರೋಪವಾಗಿತ್ತು.
ಜನರ ಆರೋಪದ ನಡುವೆ ಒತ್ತಡಕ್ಕೆ ಸಿಲುಕಿದ್ದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರೂ ಸಹ ಸಾವಿನ ರಹಸ್ಯ ಮಾತ್ರ ಬಯಲಾಗಿರಲಿಲ್ಲ. ಹೇಗಾದರೂ ಸರಿ ಪ್ರಕರಣ ಬೇಧಿಸಲೇ ಬೇಕೆಂದು ಛಲಬಿಡದೆ ಪೊಲೀಸರು ತನಿಖೆ ಮುಂದುವರೆಸಿದ್ದರು. ಆರೋಪಿಯ ಸುಳ್ಳು ಪತ್ತೆ ಪರೀಕ್ಷೆಗಾಗಿ ನ್ಯಾಯಾಲಯದಿಂದ ಅನುಮತಿ ಪಡೆದು ಪರೀಕ್ಷೆಯ ತಯಾರಿಯಲ್ಲಿದ್ದರು.
ಈ ನಡುವೆ ಊರಿನಲ್ಲೇ ಇದ್ದ ಮತ್ತೊಬ್ಬನ ಮೇಲೆ ಅನುಮಾನಗೊಂಡು ಆತನ ವಿಚಾರಣೆ ಮಾಡಿದಾಗ ಬಯಲಾಗಿತ್ತು ಕೊಲೆ ಕೇಸ್! ರತ್ಮಮ್ಮನ ಒಡವೆ ಆಸೆಗಾಗಿ ಆಕೆಯನ್ನು ಉಸಿರುಗಟ್ಟಿಸಿ ಕೊಂದು ಮೃತದೇಹವನ್ನು ಜೊಳದ ಹೊಲದಲ್ಲಿ ಎಸೆದಿದ್ದ ಹಂತಕ ಮಧುರಾಜ್! ಬಳಿಕ, ಹಂತಕ ತಾನು ದೋಚಿದ್ದ ಚಿನ್ನವನ್ನು ಅಡವಿಟ್ಟು, ಈ ಹಿಂದೆ ತಾನು ಅಡ ಇಟ್ಟಿದ್ದ ಒಡವೆಯನ್ನು ಬಿಡಿಸಿಕೊಂಡಿದ್ದ!
ಆತನ ಮೊಬೈಲ್ ಪರಿಶೀಲನೆ ಮಾಡಿದಾಗ ಸಿಕ್ಕ ಅದೊಂದು ಮೆಸೇಜ್ ಹಿಂದೆ ಬಿದ್ದ ಪೊಲೀಸರಿಗೆ ರತ್ನಮ್ಮಗೆ ಸೇರಿದ ಒಡವೆ, ಜೊತೆಗೆ ಕೊಲೆಯ ಹಂತಕ ಕೂಡ ಸಿಕ್ಕಿ ಬಿದ್ದಿದ್ದ. ತಾನು ಕೊಂದು ಕೊಲೆಯನ್ನು ಕುಡಿತದ ಚಟಕ್ಕೆ ದಾಸನಾಗಿದ್ದ ಮಹೇಶ್ ವಿರುದ್ಧ ಕಟ್ಟಲು ತಂತ್ರ ಹೆಣೆದಿದ್ದ. ಆರೋಪಿ ಎನಿಸಿಕೊಂಡಿದ್ದ ಮಹೇಶನ ವಿರುದ್ಧ ವದಂತಿ ಹರಡಿದ್ದ. ಇದನ್ನೇ ನಂಬಿದ ರತ್ನಮ್ಮ ಮನೆಯವರು ಕೂಡ ಮಹೇಶ್ ಮೇಲೆಯೇ ಆರೋಪ ಮಾಡುತ್ತಿದ್ದರು. ಆದರೆ ನಿಜವಾಗಿಯೂ ಹತ್ಯೆ ಮಾಡಿದ್ದ ಎನ್ನಲಾದ ಮಧುರಾಜ್ ಮಾತ್ರ ಊರಿನಲ್ಲೇ ಇದ್ದು ಏನೂ ಗೊತ್ತಿಲ್ಲದವನಂತೆ ನಾಟಕ ಆಡಿದ್ದ. ಆದರೆ ಪೊಲೀಸರ ಚಾಣಾಕ್ಷತನದಿಂದ ಕಗ್ಗಂಟಾಗಿದ್ದ ಕೊಲೆ ಕೇಸ್ ಇದೀಗ ಬಟಾಬಯಲಾಗಿದೆ. ಸೈನಿಕನ ತಾಯಿಯ ಸಾವಿನ ಸತ್ಯ ಹೊರ ಬಿದ್ದಿದೆ. ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಪಿಐ ಸುರೇಶ್ ನೇತೃತ್ವದಲ್ಲಿ ತನಿಖಾ ತಂಡ ಕೊಲೆ ಕೇಸ್ ಬಯಲು ಮಾಡಿತ್ತು. ಎರಡು ತಿಂಗಳ ಬಳಿಕ ಕೊಲೆ ಕೇಸ್ ನ ರಹಸ್ಯ ಬೇಧಿಸಿದ ಪೊಲೀಸರ ಕಾರ್ಯವೈಖರಿಗೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.