ಪೀಠವೇರಿದ ಮೇಲೂ ನಿಲ್ಲದ ಓದು; ಎಂಎ ಓದಿ 6 ಚಿನ್ನದ ಪದಕ ಪಡೆದ ಹಾಸನದ ಯಸಳೂರು ತೆಂಕಲಗೂಡು ಸ್ವಾಮೀಜಿ

| Updated By: preethi shettigar

Updated on: Oct 08, 2021 | 9:36 AM

ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜಪ ತಪಗಳಲ್ಲಿ ತೊಡಗಿ, ಪೂಜೆ, ಪುನಸ್ಕಾರ ಮಾಡುತ್ತಲೇ ಸಮಯ ಕಳೆಯುವ ಸ್ವಾಮಿಜಿಯೊಬ್ಬರು ಓದಿಗೂ ತಮ್ಮ ಸಮಯ ಮೀಸಲಿಟ್ಟು ಸ್ನಾತಕೋತ್ತರ ಪದವಿ ಪೂರೈಸಿ ಬರೋಬ್ಬರಿ 6 ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಪೀಠವೇರಿದ ಮೇಲೂ ನಿಲ್ಲದ ಓದು; ಎಂಎ ಓದಿ 6 ಚಿನ್ನದ ಪದಕ ಪಡೆದ ಹಾಸನದ ಯಸಳೂರು ತೆಂಕಲಗೂಡು ಸ್ವಾಮೀಜಿ
ಚನ್ನಸಿದ್ದೇಶ್ವರ ಶಿವಾಚಾರ್ಯ ಶ್ರೀಗಳು
Follow us on

ಹಾಸನ: ಶಿಕ್ಷಣ ಯಾರೊಬ್ಬರ ಆಸ್ತಿಯಲ್ಲ. ಓದುವ ಛಲ ಇದ್ದರೆ, ಗುರಿಮುಟ್ಟುವ ದಿಟ್ಟ ನಿರ್ಧಾರವೊಂದಿದ್ದರೆ ಯಾವುದೂ ನಮ್ಮನ್ನು ತಡೆಯಲಾರದು. ಈ ಮಾತಿಗೆ ಓರ್ವ ಸ್ವಾಮೀಜಿ ಸ್ನಾತಕೋತ್ತರ ಪದವಿಯಲ್ಲಿ 6 ಚಿನ್ನದ ಪದಕಗಳೊಂದಿಗೆ ಉತ್ತೀರ್ಣರಾಗಿರುವುದೇ ಸಾಕ್ಷಿ. ಸದಾಕಾಲ ಭಕ್ತರಿಗೆ ಮಾರ್ಗದರ್ಶನ ಮಾಡುತ್ತಾ, ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜಪ ತಪಗಳಲ್ಲಿ ತೊಡಗಿ, ಪೂಜೆ, ಪುನಸ್ಕಾರ ಮಾಡುತ್ತಲೇ ಸಮಯ ಕಳೆಯುವ ಸ್ವಾಮಿಜಿಯೊಬ್ಬರು ಓದಿಗೂ ತಮ್ಮ ಸಮಯ ಮೀಸಲಿಟ್ಟು ಸ್ನಾತಕೋತ್ತರ ಪದವಿ ಪೂರೈಸಿ ಬರೋಬ್ಬರಿ 6 ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಈಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ತೆಂಕಲಗೂಡು ಮಠದ ಪೀಠಾಧೀಶರಾದ ಚನ್ನಸಿದ್ದೇಶ್ವರ ಶಿವಾಚಾರ್ಯ ಶ್ರೀಗಳೇ ಈಗ ಎಲ್ಲರೂ ತಿರುಗಿ ನೋಡುವಂತಹ ಸಾಧನೆ ಮಾಡಿರುವ ಶ್ರೀಗಳು. ಈಹಿಂದಿನ ಶ್ರೀಮಠದ ಪೀಠಾಧ್ಯಕ್ಷರಾಗಿದ್ದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗಳ ಆಸೆಯಂತೆ ಉನ್ನತ ಶಿಕ್ಷಣದ ಕಡೆಗೆ ಆಸಕ್ತಿ ತೋರಿದ ಚನ್ನಸಿದ್ದೇಶ್ವರ ಶಿವಾಚಾರ್ಯ ಶ್ರೀಗಳು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲದಲ್ಲಿ ತತ್ವಶಾಸ್ತ್ರ ಎಂಎ ಪದವಿ ಅಧ್ಯಯನ ಆರಂಭಿಸಿದರು.

ಪೂರ್ವಾಶ್ರಮದಿಂದಲೂ ಶಿಕ್ಷಣದಲ್ಲಿ ಆಸಕ್ತಿ
ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳ ಪೂರ್ವಾಶ್ರಮದ ಹೆಸರು ಪೂರ್ಣಚಂದ್ರ ದೇವರು. ಪುಷ್ಪಾವತಿ ದೇವಿ ಹಾಗೂ ಪಂಡಿತಾರಾಧ್ಯ ದಂಪತಿಯ ಜೇಷ್ಠಪುತ್ರರಾಗಿ ತೆಂಕಲಗೂಡು ಬೃಹನ್ಮಠದಲ್ಲಿ ಮೇ 3, 1996 ರಂದು ಜನಿಸಿದ ಇವರು ಒಂದರಿಂದ 10ನೇ ತರಗತಿಯನ್ನು ಶನಿವಾರಸಂತೆಯ ಸೆಕ್ರೆಡ್ ಹಾರ್ಟ್ ಶಾಲೆಯಲ್ಲಿ ಪೂರೈಸಿದರು. ಪಿಯುಸಿಯನ್ನು ಮೈಸೂರಿನ ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಆಶ್ರಯದಲ್ಲಿ ಸುತ್ತೂರು ಮಠದ ಗುರುಕುಲದಲ್ಲಿದ್ದುಕೊಂಡು ಜೆಎಸ್ಎಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು. ನಂತರ ಸಂಸ್ಕೃತ, ಇಂಗ್ಲೀಷ್ ಹಾಗೂ ತತ್ವಶಾಸ್ತ್ರ ವಿಷಯಗಳಲ್ಲಿ ಬಿಎ ಪದವಿಯನ್ನು ಉತ್ತರ ಕರ್ನಾಟಕದ ಪ್ರತಿಷ್ಠಿತ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು. ಅಧ್ಯಯನದ ಜೊತೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಂಗೀತ ಕಾರ್ಯಕ್ರಮಗಳಲ್ಲಿ, ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಕಾಲೇಜಿಗೆ ಹಲವಾರು ಬಹುಮಾನಗಳನ್ನು ತಂದುಕೊಟ್ಟಿದ್ದ ಶ್ರೀಗಳು ಸಾಂಸ್ಕೃತಿಕ ಯುವಜನೋತ್ಸವದಲ್ಲಿ ಕರ್ನಾಟಕ ಕಾಲೇಜು ತಂಡ ಎರಡು ಬಾರಿ ಚಾಂಪಿಯನ್ಸ್ ಆಗಿದ್ದ ತಂಡದ 27 ಸದಸ್ಯರಲ್ಲಿ ಒಬ್ಬರಾಗಿದ್ದರು. ಆನಂತರ ಶ್ರೀ ಷ. ಬ್ರ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳ ಆಶಯದಂತೆ ಎಂಎ ತತ್ವಶಾಸ್ತ್ರ ವಿಷಯವನ್ನು ಆಯ್ಕೆಮಾಡಿ ಕರ್ನಾಟಕ ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಪೀಠದಲ್ಲಿ ಅಧ್ಯಯನಗೈದಿದ್ದಾರೆ.  ಎಂಎ ತತ್ವಶಾಸ್ತ್ರದಲ್ಲಿ 6 ಚಿನ್ನದ ಪದಕ ಪಡೆಯುವ ಮೂಲಕ ಶ್ರೀಮಠದ 3ನೇ ಪೀಠಾಧ್ಯಕ್ಷರಾಗಿದ್ದ ಶ್ರೀ ಚನ್ನಮಲ್ಲಿಕಾರ್ಜುನ ಶ್ರೀಗಳ ಆಸೆಯನ್ನು ನೆರವೇರಿಸಿದ್ದಾರೆ. ಇದೇ ಅಕ್ಟೋಬರ್ 9 ರಂದು ನಡೆಯಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಘಟಿಕೋತ್ಟವದಲ್ಲಿ ಶ್ರೀಗಳಿಗೆ ಪದವಿ ಪ್ರದಾನವೂ ಆಗಲಿದೆ.

ಪೀಠವೇರಿದ ಮೇಲೂ ನಿಲ್ಲದ ಓದು
2020ರ ಆಗಸ್ಟ್ ತಿಂಗಳಿನಲ್ಲಿ ಹಾಸನ ಜಿಲ್ಲೆಯ ಯಸಳೂರು ಗ್ರಾಮದ ಶ್ರೀ ತೆಂಕಲಗೂಡು ಮಠದ ಪೀಠಾಧ್ಯಕ್ಷರಾಗಿ ಪಟ್ಟಾಭಿಷೇಕವಾದ ಬಳಿಕವೂ ಓದು ನಿಲ್ಲಿಸದ ಶ್ರೀಗಳು ಸ್ನಾತಕೋತ್ತರ ಪದವಿ ಪಡೆದು 6 ಚಿನ್ನದ ಪದಕಗಳೊಂದಿಗೆ ತೇರ್ಗಡೆ ಹೊಂದಿ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ಜತೆಗೆ “ಸಿದ್ಧಾಂತ ಶಿಖಾಮಣಿಯಲ್ಲಿನ ಅಧಿಭೌತ ತತ್ವಗಳ ತಾತ್ವಿಕ ಅಧ್ಯಯನ” ಎಂಬ ವಿಚಾರದಲ್ಲಿ ಪಿಎಚ್​ಡಿ ಡಾ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳ ಮಾರ್ಗದರ್ಶನದಲ್ಲಿ ಮಾಡುತ್ತಿದ್ದಾರೆ. ಧಾರ್ಮಿಕ ಚಿಂತನೆಯಲ್ಲಿ ತೊಡಗಿಕೊಂಡಿರುವ ಶ್ರೀಗಳು ಧಾರ್ಮಿಕ ಕ್ಷೇತ್ರದಲ್ಲೇ ಅಧ್ಯಯನ ಮಾಡಬೇಕು, ಹೆಚ್ಚಿನ ಅಧ್ಯಯನ ಮಾಡಿ ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು ಎಂಬ ಮಹದಾಸೆಯಿಂದ ಓದಿನ ಪಡೆಗೆ ಆಸಕ್ತಿ ವಹಿಸಿದ್ದರು. ಜತೆಗೆ ಶ್ರೀಮಠದ ಪೀಠಾಧ್ಯಕ್ಷರಾಗುವ ಮೊದಲು ತಾವು ಪದವಿ ಪಡೆದಿದ್ದ ಧಾರವಾಡದ ಕರ್ನಾಟಕ ಕಲಾ ಮಹಾ ವಿದ್ಯಾಲಯದಲ್ಲಿ ಧರ್ಮಶಾಸ್ತ್ರ ಉಪನ್ಯಾಸಕಾಗಿಯೂ ಕೆಲಸ ಮಾಡಿ ಅಲ್ಲಿ ಧಾರ್ಮಿಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ಗಮನಸೆಳೆದಿದ್ದರು. ಶ್ರೀಗಳು ಇದೀಗ ಕರ್ನಾಟಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ 6 ಚಿನ್ನದ ಪದಕಗಳೊಂದಿಗೆ ಸ್ನಾತಕೋತ್ತರ ಪದವಿ ಪಡೆಯಲಿರುವುದು ಅವರ ಭಕ್ತರು, ಆಪ್ತರಲ್ಲಿ ಖುಷಿ ಹೆಚ್ಚಿಸಿದೆ.

ಈಕುರಿತು ಟಿವಿ9 ಕನ್ನಡ ಡಿಜಿಟಲ್​ಗೆ ಪ್ರತಿಕ್ರಿಯಿಸಿದ ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಶ್ರೀಗಳು. ನಮ್ಮ ಶ್ರೀಮಠದ 2ನೇ ಶ್ರೀಗಳಾದ ನೀಲಕಂಠ ಶಿವಾಚಾರ್ಯ ಶ್ರೀಗಳು ಬನಾರಸ್ ವಿಶ್ವವಿದ್ಯಾನಿಲಯದಲ್ಲಿಅಬ್ಯಾಸ ಮಾಡಿ ಮೂರು ಚಿನ್ನದ ಪದಕ ಪಡೆದಿದ್ದರು. ಮೂರನೇ ಶ್ರೀಗಳಾದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳೂ ಕೂಡ ಬಿಎಸ್ಸಿ ಎಂಎ ಪದವಿ ಪಡೆದಿದ್ದರು. ಅವರು ಐ.ಎಸ್.ಎಸ್ ಪರೀಕ್ಷೆಯನ್ನು ಕೂಡ ತೆಗೆದುಕೊಂಡಿದ್ದರು. ಅದೇ ಸ್ಪೂರ್ತಿಯಿಂದ ನಾವೂ ಓದಿನ ಕಡೆಗೆ ಆಸಕ್ತಿ ವಹಿಸಿ ಸ್ನಾತಕೋತ್ತರ ಪದವಿ ಪೂರೈಸಿದ್ದು, ಈಗ ಪಿಎಚ್​ಡಿ ಪದವಿ ಮಾಡುತ್ತಿದ್ದು, ಓದು ಹೆಚ್ಚಿನ ಜ್ಞಾನಾರ್ಜನೆಗೆ ನೆರವಾಗುತ್ತದೆ ಎಂದು ಹೇಳಿದ್ದಾರೆ.

ವಿಶೇಷ ವರದಿ: ಮಂಜುನಾಥ್-ಕೆ.ಬಿ
ಟಿವಿ9, ಹಾಸನ

ಇದನ್ನೂ ಓದಿ: 

17 ವರ್ಷದಿಂದ ಕಾಡಲ್ಲೇ ವಾಸ, ಕಾರೇ ಮನೆ! ನಾಗರಿಕ ಸಮಾಜವನ್ನು ಧಿಕ್ಕರಿಸಿ ಬದುಕುತ್ತಿರುವ ಸುಳ್ಯದ ವ್ಯಕ್ತಿಯ ಕಥೆಯಿದು

ಮಹಾಲಯ ಅಮವಾಸ್ಯೆಯಂದು ಸಮಾಧಿಗಳಿಗಾಗಿ ನೀರಲ್ಲಿಳಿದು ಹುಡುಕಾಡಿದ ಕೋಲಾರದ ಜನರು!