ಹಾಸನ, ಸೆಪ್ಟೆಂಬರ್ 6: ಎತ್ತಿನಹೊಳೆ ಯೋಜನೆಯ ಮೊದಲ ಹಂತ ಲೋಕಾರ್ಪಣೆ ಸಂಬಂಧ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡನಗರ ಗ್ರಾಮದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮಕ್ಕೆ ಪತ್ರಕರ್ತರನ್ನು ಕಳುಹಿಸಲು ವಾರ್ತಾ ಇಲಾಖೆ ಬ್ರೇಕ್ ಫೇಲ್ ಆಗಿರುವ ವಾಹನ ಬಳಕೆ ಮಾಡಿದೆ. ಪರಿಣಾಮವಾಗಿ, ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಪತ್ರಕರ್ತರು ತೆರಳುತ್ತಿದ್ದ ವಾಹನ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಬಳಿ ಚಲಿಸುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ. ಬ್ರೇಕ್ ಫೇಲ್ಯೂರ್ ಕಾರಣ ವಾಹನ ಲಾರಿಗೆ ಡಿಕ್ಕಿಯಾಗಿರುವುದು ತಿಳಿದುಬಂದಿದೆ. ಅಪಘಾತದಲ್ಲಿ ಏಳು ಮಂದಿ ಪತ್ರಕರ್ತರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಂದು ಎತ್ತಿನಹೊಳೆ ಯೋಜನೆಯ ಮೊದಲ ಹಂತ ಲೋಕಾರ್ಪಣೆಗೊಳ್ಳಲಿದೆ. ಡಿಸಿಎಂ ಡಿಕೆ ಶಿವಕುಮಾರ್ ಈಗಾಗಲೇ ದೊಡ್ಡನಗರ ಗ್ರಾಮ ತಲುಪಿದ್ದು, ಯೋಜನೆ ಲೋಕಾರ್ಪಣೆ ಪೂರ್ವಭಾವಿ ಪೂಜೆಯಲ್ಲಿ ಅಧಿಕಾರಿಗಳ ಜತೆ ಭಾಗಿಯಾಗಿದ್ದಾರೆ.
ದೊಡ್ಡನಗರದ ವಿತರಣಾ ತೊಟ್ಟಿ 3ರಲ್ಲಿ ಎತ್ತಿನಹೊಳೆ ಯೋಜನೆಯ ಮೊದಲ ಹಂತವನ್ನು ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಲಿದ್ದಾರೆ. ಈಗಾಗಲೇ ರಸ್ತೆ ಮಾರ್ಗವಾಗಿ ಬೆಂಗಳೂರಿನಿಂದ ಹೊರಟಿರುವ ಸಿದ್ದರಾಮಯ್ಯ ಮಧ್ಯಾಹ್ನ 12 ಗಂಟೆಗೆ ದೊಡ್ಡನಗರಕ್ಕೆ ಆಗಮಿಸಲಿದ್ದಾರೆ.
ನಂತರ ನೀರೆತ್ತುವ ಪಂಪ್ ಹಾಗೂ ಮೋಟಾರ್ಗಳಿಗೆ ಚಾಲನೆ ನೀಡಲಿದ್ದಾರೆ. ದೊಡ್ಡನಗರದಲ್ಲೇ ನೀರನ್ನೆತ್ತುವ ಏಳು ವಿಯರ್ಗಳಿಗೂ ಚಾಲನೆ ದೊರೆಯಲಿದೆ. ಏಳು ಸಚಿವರಿಂದ ಏಳು ವಿಯರ್ಗಳಿಗೆ ಚಾಲನೆ ನೀಡಲು ಸಿದ್ಧತೆ ಮಾಡಲಾಗಿದೆ.
ಇಂದು ಬೆಳಗ್ಗೆ 8.30ರಿಂದ ಉದ್ಘಾಟನಾ ಸ್ಥಳದಲ್ಲಿ ಹೋಮ ಹವನ ನೆರವೇರಿದೆ. ಕಾರ್ಯಕ್ರಮದ ಉಸ್ತುವಾರಿಯನ್ನು ಜಲಸಂಪನ್ಮೂಲ ಇಲಾಖೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಹಿಸಿದ್ದಾರೆ.
ಇದನ್ನೂ ಓದಿ: ಎತ್ತಿನಹೊಳೆ ಯೋಜನೆ ಲೋಕಾರ್ಪಣೆಗೆ ಸಿದ್ಧತೆ ಹೇಗಿದೆ ನೋಡಿ
ದೊಡ್ಡನಗರ ಕಾರ್ಯಕ್ರಮ ಬಳಿಕ ಹೆಬ್ಬನಹಳ್ಳಿಗೆ ಬರುವ ಸಿಎಂ, ಡಿಸಿಎಂ ಅಲ್ಲಿ ಗಂಗೆಗೆ ಬಾಗಿನ ಅರ್ಪಿಸಲಿದ್ದಾರೆ. 7 ವಿಯರ್ಗಳ ಮೂಲಕ ಪಂಪ್ ಮಾಡಿದ್ದ ನೀರಿಗೆ ಬಾಗಿನ ಅರ್ಪಣೆ ಮಾಡಲಿದ್ದಾರೆ. ಬಾಗಿನ ಅರ್ಪಣೆ ಸ್ಥಳದ ಸಮೀಪವೇ ಬೃಹತ್ ಬಹಿರಂಗ ಸಮಾವೇಶ ಆಯೋಜನೆ ಮಾಡಲಾಗಿದೆ.
ಹೆಬ್ಬನಹಳ್ಳಿಯಲ್ಲಿ ಮಧ್ಯಾಹ್ನ 1 ಗಂಟೆಗೆ ಸಮಾರಂಭ ಆರಂಭವಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ