ಹಾಸನ: ಸಕಲೇಶಪುರ ತಾಲ್ಲೂಕಿನ ಹೊಸಕೊಪ್ಪಲಿನಲ್ಲಿ ರೈತರು ತೋಡಿದ ಕಂದಕಕ್ಕೆ ಬಿದ್ದ ಮರಿ ಕಾಡಾನೆ (Baby elephant falls into ditch)ಯನ್ನು ಹೊರತೆಗೆಯದಲು ಸ್ಥಳಕ್ಕೆ ದೌಡಾಯಿಸಿದ ಅರಣ್ಯಾಧಿಕಾರಿಗಳಿಗೆ ರೈತರು ಬಿಸಿ ಮುಟ್ಟಿಸಿದರು. ಜೆಸಿಬಿ ಮೂಲಕ ಕಾಡಾನೆ ಹೊರ ತೆಗೆಯಲಯ ಅರಣ್ಯ ಇಲಾಖೆ ಅಧಿಕಾರಿಗಳ ತಯಾರಿ ನಡೆಸಿದ್ದು, ಸ್ಥಳಕ್ಕೆ ಬರುತ್ತಿದ್ದಂತೆ ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನೀವು ಒಂದು ಕಾಡಾನೆ ಹಿಡಿಯಲು 25 ಲಕ್ಷ ಖರ್ಚು ಮಾಡುತ್ತೀರಿ, ನಾವು ಕೇವಲ 25 ಸಾವಿರಕ್ಕೆ ಒಂದು ಕಾಡಾನೆ ಹಿಡಿದಿದ್ದೇವೆ ಎಂದು ರೈತರು ಹೇಳಿದರು.
ಕಂದಕಕ್ಕೆ ಬಿದ್ದಿರುವ ಕಾಡಾನೆಯನ್ನ ಮತ್ತೆ ಇದೇ ಪ್ರದೇಶದಲ್ಲಿ ಬಿಡುವುದಕ್ಕೆ ಒಪ್ಪದ ಗ್ರಾಮಸ್ಥರು ಬೇರೆಡೆ ಸ್ಥಳಾಂತರ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಅಲ್ಲದೆ ನಾವು ಗುಂಡಿ ತೆಗೆಯುವ ದಿನವೇ ಅರಣ್ಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದೇವೆ. ಅಂದಿನಿಂದ ಇಲ್ಲಿಯವರೆಗೂ ಒಬ್ಬ ಅಧಿಕಾರಿಯೂ ಇತ್ತ ಸುಳಿದಿಲ್ಲ. ಇದೀಗ ಕಾಡಾನೆ ಬಿದ್ದ ಕೂಡಲೇ ಓಡೋಡಿ ಬಂದಿದ್ದೀರಿ ಎಂದು ಆರ್‌ಎಫ್‌ಓ ಶಿಲ್ಪಾ ಅವರನ್ನು ರೈತರು ತರಾಟೆ ತೆಗೆದುಕೊಂಡರು.
ಇದನ್ನೂ ಓದಿ: ರೈತರು-ಸರ್ಕಾರದ ಮಧ್ಯೆ ಸಂಘರ್ಷ: ಹಾಸನದಲ್ಲಿ ರೈತರ ಖೆಡ್ಡಾಗೆ ಬಿದ್ದ ಮರಿಯಾನೆ!
ನಾವು ಬೆಳೆ ಕಳೆದುಕೊಂಡು ಪ್ರಾಣ ಕಳೆದುಕೊಳ್ಳುವ ಸ್ಥತಿಗೆ ಬಂದಿದ್ದೇವೆ. ನೀವು ಸ್ಥಳಾಂತರಕ್ಕೆ ಅನುಮತಿ ಪಡೆಯಿರಿ. ಅಲ್ಲಿಯವರೆಗೂ ನಾವೇ ಕಾಡಾನೆ ಸಾಕುತ್ತೇವೆ ಎಂದು ರೈತರು ಹೇಳುತ್ತಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ರೈತರನ್ನು ಮನವೋಲಿಸಲು ಯತ್ನಿಸಿದರು. ಆದರೂ ರೈತರು ಪೊಲೀಸರ ಮಾತಿಗೆ ಕ್ಯಾರೇ ಎಂದಿಲ್ಲ.
ಏನಿದು ಪ್ರಕರಣ?
ಹೊಸಕೊಪ್ಪಲು ಗ್ರಾಮಸ್ಥರು ಕಾಡಾನೆಗಳ ಭೀತಿಯಿಂದಲೇ ಜೀವಿಸುತ್ತಿದ್ದಾರೆ. ಸರ್ಕಾರ ಶಾಶ್ವತ ಪರಿಹಾರ ನೀಡಲು ಮನಸ್ಸು ಮಾಡದ ಹಿನ್ನಲೆ ಕಾಡಾನೆ ಕೆಡವಲು ಗ್ರಾಮಸ್ಥರೇ ಸ್ವಂತ ಖರ್ಚಿನಲ್ಲಿ ಕಂದಕ ನಿರ್ಮಾಣ ಮಾಡಿ ಅದರ ಮೇಲೆ ಬಿದಿರು, ಸೊಪ್ಪು ಹಾಕಿ ಮುಚ್ಚಿ ಆನೆ ಖೆಡ್ಡಾಕ್ಕೆ ಕೆಡವಲು ಬೇಕಾದ ಎಲ್ಲಾ ತಂತ್ರ ರೂಪಿಸಿ ಸಿದ್ಧಪಡಿದ್ದರು. ಈ ಕಂದಕಕ್ಕೆ ಇಂದು ಮುಂಜಾನೆ ಮರಿ ಕಾಡಾನೆಯೊಂದು ಬಿದ್ದಿದೆ. ಕಾಡಾನೆ ಹಾವಳಿಯಿಂದ ಬೇಸತ್ತ ಜನರ ಪ್ರತಿರೋದಕ್ಕೆ ಅರಣ್ಯ ಇಲಾಖೆಯೂ ಬೆಚ್ಚಿಬಿದ್ದಿದೆ.
ರೈತರ ಖೆಡ್ಡಾಕ್ಕೆ ಬಿದ್ದಿರುವ ಕಾಡಾನೆ ಸ್ಥಳಾಂತರಕ್ಕೆ ಅರಣ್ಯ ಇಲಾಖೆ, ಕಂದಾಯ ಇಲಾಖೆ ಪೊಲೀಸ್ ಇಲಾಖೆ ಅಧಿಕಾರಿಗಳ ದಂಡು ಆಗಮಿಸಿದೆ. ಆನೆ ಸ್ಥಳಾಂತರಕ್ಕೆ ಬಂದ ಎಸಿ ಅನ್ಮೋಲ್ ಜೈನ್ ಅವರನ್ನ ಬೆಳೆ ಹಾನಿ ಪ್ರದೇಶಕ್ಕೆ ರೈತರು ಕರೆದೊಯ್ದರು. ನಿನ್ನೆ ಅಡಿಕೆ ತೋಟಗಳಿಗೆ ನುಗ್ಗಿದ ಕಾಡಾನೆ ಹಿಂದು ನೂರಾರು ಅಡಿಕೆ ಗಿಡ ಮುರಿದು ನಾಶಗೊಳಿಸಿದೆ. ನಮ್ಮ ಬೆಳೆ ನಾಶವಾಗುತ್ತಿದೆ, ಮಾಡಿರುವ ಸಾಲ ತೀರಿಸಲು ಆಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಇದೇ ವೇಳೆ ಎಸಿ ಕಾಲಿಗೆ ಬಿದ್ದು ಸಮಸ್ಯೆ ಬಗೆಹರಿಸಿ ಸ್ವಾಮಿ ಎಂದು ರೈತರೊಬ್ಬರು ಅಂಗಲಾಚಿದರು. ಬ್ಯಾಂಕ್ನಿಂದ ನೊಟೀಸ್ ಬಂದಿದೆ, ಬೆಳೆಯನ್ನು ಆನೆಗಳು ನಾಶ ಮಾಡುತ್ತಿವೆ, ನಾವೇನು ಮಾಡಬೇಕು ಎಂದು ಪ್ರಶ್ನಿಸಿ ನೀವೇ ಇದಕ್ಕೆ ಉತ್ತರ ಕೊಡಿ ಸಾರ್ ಎಂದು ರೈತರ ಆಕ್ರೋಶ ಹೊರಹಾಕಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:46 pm, Mon, 2 January 23