Mysore News: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡಾನೆ ದಾಳಿಗೆ ವಾಚರ್ ಸಾವು: ಮಾವು, ತೆಂಗು ಬೆಳೆ ನಾಶ
ಹೆಚ್.ಡಿ.ಕೋಟೆ ತಾಲೂಕಿನ ಮೇಟಿಕುಪ್ಪೆ ಅರಣ್ಯದಲ್ಲಿ ಕಾಡಾನೆ ದಾಳಿಗೆ ವಾಚರ್ ಬಲಿ ಆಗಿರುವಂತಹ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸೊಳ್ಳಾಪುರ ಗ್ರಾಮದ ಬಳಿ ನಡೆದಿದೆ.
ಮೈಸೂರು: ಹೆಚ್.ಡಿ.ಕೋಟೆ ತಾಲೂಕಿನ ಮೇಟಿಕುಪ್ಪೆ ಅರಣ್ಯದಲ್ಲಿ ಕಾಡಾನೆ ದಾಳಿಗೆ (Elephant attack) ವಾಚರ್ ಸಾವನ್ನಪ್ಪಿರುವಂತಹ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸೊಳ್ಳಾಪುರ ಗ್ರಾಮದ ಬಳಿ ನಡೆದಿದೆ. ಅರಣ್ಯ ಸಿಬ್ಬಂದಿ ಮೇಲೆ ತಡರಾತ್ರಿ ಕಾಡಾನೆ ಹಠಾತ್ ದಾಳಿ ಮಾಡಿದೆ. ಕಳೆದ 10 ವರ್ಷಗಳಿಂದ ಹಂಗಾಮಿ ವಾಚರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಾಚರ್ ಮಹದೇವಸ್ವಾಮಿ (36) ಮೃತ ವ್ಯಕ್ತಿ. ಮತ್ತೊಬ್ಬ ವಾಚರ್ ರಾಜೇಶ್ಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಮಹದೇವಸ್ವಾಮಿ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: Leopard: ಬೆಂಗಳೂರಿನಲ್ಲಿ ಮತ್ತೆ ಶುರುವಾದ ಚಿರತೆ ಕಾಟ: ಹಸುವಿನ ಮೇಲೆ ದಾಳಿ, ಆತಂಕದಲ್ಲಿ ಜನ
ರಾಮನಗರ ಜಿಲ್ಲೆಯಲ್ಲಿ ಮುಂದುವರಿದ ಕಾಡಾನೆ ಹಾವಳಿ: ಬೆಳೆ ನಾಶ
ರಾಮನಗರ: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದೆ. ಕಾಡಾನೆ ದಾಳಿಗೆ ಮಾವು, ತೆಂಗು, ಬೋರ್ ವೆಲ್ ಪರಿಕರಗಳು ನಾಶವಾಗಿರುವಂತಹ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಹೂಕುಂದ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಭೀಮೇಗೌಡ ಎಂಬುವವರ ಜಮೀನಿನಲ್ಲಿ ಬೆಳೆ ನಾಶವಾಗಿದೆ. ಪದೇ ಪದೇ ಜಮೀನಿಗೆ ಲಗ್ಗೆ ಇಟ್ಟು ಕಾಡಾನೆಗಳು ಬೆಳೆ ನಾಶ ಮಾಡುತ್ತಿದ್ದು, ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Street Dog Attack: 8 ವರ್ಷದ ಬಾಲಕಿ ಹಾಗೂ ತಂದೆ ಮೇಲೆ ಬೀದಿ ನಾಯಿ ದಾಳಿ, ಬಾಲಕಿ ಮುಖ ಮತ್ತು ಕುತ್ತಿಗೆ ಭಾಗಕ್ಕೆ ಹೊಲಿಗೆ
ಕೊನೆಗೂ ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರುಬಿಟ್ಟ ಜನ
ತುಮಕೂರು: ಚಿರತೆಯೊಂದು ಬೋನಿಗೆ ಬಿದಿದ್ದು, ಸುತ್ತಮುತ್ತಲಿನ ಗ್ರಾಮದ ಜನರು ನಿಟ್ಟುಸಿರುಬಿಟ್ಟಿರುವಂತಹ ಘಟನೆ ಕೊರಟಗೆರೆ ತಾಲ್ಲೂಕಿನ ನೀಲಗೊಂಡನಹಳ್ಳಿಯಲ್ಲಿ ನಡೆದಿದೆ. ಇತ್ತೀಚೆಗೆ ನೀಲಗೊಂಡನಹಳ್ಳಿಯಲ್ಲಿ ಚಿರತೆ ದಾಳಿಗೆ ಇಬ್ಬರು ಬಾಲಕರು ಒಳಗಾಗಿದ್ದರು. ಸದ್ಯ ಗ್ರಾಮದ ಹೊರವಲಯದಲ್ಲಿ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ. ಕೊರಟಗೆರೆ ವಲಯ ಅರಣ್ಯಾಧಿಕಾರಿಗಳು ಬೇರೆಡೆಗೆ ಚಿರತೆ ಸ್ಥಳಾಂತರಿಸಿದ್ದಾರೆ.
ಬೆಂಗಳೂರಿನಲ್ಲಿ ಮತ್ತೆ ಶುರುವಾದ ಚಿರತೆ ಕಾಟ
ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಚಿರತೆ ಕಾಟ ಶುರುವಾಗಿದೆ. ಈ ಹಿಂದೆ ನೈಸ್ ರಸ್ತೆಯ ತುರಹಳ್ಳಿ ಅರಣ್ಯ ಪ್ರದೇಶದ ಸುತ್ತಮುತ್ತ ಚಿರತೆ ಕಾಣಿಸಿಕೊಂಡಿತ್ತು. ಮೊದಲ ಬಾರಿಗೆ ಚಿರತೆ ಕಾಣಿಸಿಕೊಂಡಾಗ ಜಿಂಕೆ ಬೇಟೆಯಾಡಿದ್ದು, ಈಗ ಹಸುವನ್ನ ಬೇಟೆಯಾಡಿರುವಂತಹ ಘಟನೆ ಬಿ.ಎಂ.ಕಾವಲು ಅರಣ್ಯ ಪ್ರದೇಶದ ಬಳಿಯಿರುವ ಸಿದ್ದನಪಾಳ್ಯದಲ್ಲಿ ನಡೆದಿದೆ. ನಾಗಣ್ಣ ಎನ್ನುವವರಿಗೆ ಸೇರಿದ ಹಸುವನ್ನು ಡಿ. 30 ರಾತ್ರಿ ಮನೆ ಬಳಿ ಕಟ್ಟಿಹಾಕಿದ್ದಾಗ ಕೊಂದಿದೆ. ಈ ಹಿಂದೆ ಸಂಜೆ ವೇಳೆ ಹಸುವಿನ ಮೇಲೆ ದಾಳಿಗೆ ಚಿರತೆ ಯತ್ನಿಸಿತ್ತು. ಆದರೆ ಚಿರತೆ ದಾಳಿ ನಡೆಸಿದಾಗ ಮನೆಯವರು ಪಟಾಕಿ ಸಿಡಿಸಿ ಓಡಿಸಿದ್ದರು. ಹಸು ಕೊಂದಿರುವ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಶುರುವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.