Street Dog Attack: 8 ವರ್ಷದ ಬಾಲಕಿ ಹಾಗೂ ತಂದೆ ಮೇಲೆ ಬೀದಿ ನಾಯಿ ದಾಳಿ, ಬಾಲಕಿ ಮುಖ ಮತ್ತು ಕುತ್ತಿಗೆ ಭಾಗಕ್ಕೆ ಹೊಲಿಗೆ
ಎಂಟು ವರ್ಷದ ಬಾಲಕಿ ಮೇಲೆ ಬೀದಿ ನಾಯಿ ದಾಳಿ ನಡೆಸಿದೆ. ಹಾಗೂ ನಾಯಿಯಿಂದ ಬಾಲಕಿಯನ್ನು ಬಿಡಿಸಲು ಹೋದ ಆಕೆಯ ತಂದೆಯ ಮೇಲೂ ಬೀದಿ ನಾಯಿ ದಾಳಿ ಮಾಡಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ(Street Dog Attack). ಬಿಬಿಎಂಪಿ(BBMP) ವ್ಯಾಪ್ತಿಯ ಲಕ್ಷ್ಮೀದೇವಿ ನಗರದಲ್ಲಿ ಭಾನುವಾರ ರಾತ್ರಿ ಎಂಟು ವರ್ಷದ ಬಾಲಕಿ ಮೇಲೆ ಬೀದಿ ನಾಯಿ ದಾಳಿ ನಡೆಸಿದೆ. ಹಾಗೂ ನಾಯಿಯಿಂದ ಬಾಲಕಿಯನ್ನು ಬಿಡಿಸಲು ಹೋದ ಆಕೆಯ ತಂದೆಯ ಮೇಲೂ ಬೀದಿ ನಾಯಿ ದಾಳಿ ಮಾಡಿದೆ. ನಾಯಿ ದಾಳಿಯಿಂದ ಬಾಲಕಿಗೆ ಗಂಭೀರ ಗಾಯಗಳಾಗಿದ್ದು ಮುಖ ಮತ್ತು ಕುತ್ತಿಗೆ ಭಾಗಕ್ಕೆ ಹೊಲಿಗೆ ಹಾಕಲಾಗಿದೆ.
ಬಿಬಿಎಂಪಿಯ ಆರಂಭಿಕ ವರದಿಗಳ ಪ್ರಕಾರ, ನೂರಿನ್ ಫಲಕ್ ಎಂಬ 8 ವರ್ಷದ ಬಾಲಕಿ ತಡರಾತ್ರಿ ತನ್ನ ತಂದೆ ಫಕ್ರುದ್ದೀನ್‌ನೊಂದಿಗೆ ಹೊರಗೆ ಹೋಗುತ್ತಿದ್ದಾಗ ನಾಯಿಯು ಬಾಲಕಿಯನ್ನು ಹಿಂಬಾಲಿಸಿ ದಾಳಿ ಮಾಡಿದೆ. ಈ ವೇಳೆ ಬಾಲಕಿಯ ತಂದೆ ಮಗಳ ರಕ್ಷಣೆಗೆ ಧಾವಿಸಿ, ನಾಯಿಯನ್ನು ದೂರ ಓಡಿಸಲು ಯತ್ನಿಸಿದ್ದಾರೆ. ಈ ವೇಳೆ ನಾಯಿ ತಂದೆ-ಮಗಳಿಬ್ಬರ ಮೇಲೂ ದಾಳಿ ಮಾಡಿದೆ. ಇಬ್ಬರಿಗೂ ಆಂಟಿ ರೇಬಿಸ್ ಇಂಜೆಕ್ಷನ್ ಹಾಕಲಾಗಿದೆ.
ಚಿಕಿತ್ಸೆ ವೆಚ್ಚ ಭರಿಸಿ 10 ಸಾವಿರ ಪರಿಹಾರ
ಘಟನೆ ಸಂಬಂಧ ಮಾತನಾಡಿದ ಬಿಬಿಎಂಪಿ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಶಿಂಧೆ, ಮಗುವಿಗೆ ಗಾಯಗಳಾಗಿದ್ದು, ಆಕೆಯ ಮುಖ ಮತ್ತು ಕುತ್ತಿಗೆ ಭಾಗದಲ್ಲಿ ಹೊಲಿಗೆ ಹಾಕಲಾಗಿದೆ. ಬಾಲಕಿ ಅಪಾಯದಿಂದ ಪಾರಾಗಿದ್ದಾಳೆ. ನಾವು ಚಿಕಿತ್ಸೆಯ ವೆಚ್ಚವನ್ನು ಭರಿಸುತ್ತೇವೆ. ಹಾಗೂ ಪರಿಹಾರವಾಗಿ 10,000 ರೂ. ನೀಡುತ್ತೇವೆ ಎಂದರು.
ಇದನ್ನೂ ಓದಿ: ಗದಗದಲ್ಲಿ ಬೀದಿ ನಾಯಿಗಳ ಹಾವಳಿ: ಮಕ್ಕಳು ಸೇರಿ 10ಕ್ಕೂ ಹೆಚ್ಚು ಜನರ ಮೇಲೆ ದಾಳಿ, ಇಂಜೆಕ್ಷನ್ಗಾಗಿ ಪರದಾಟ
ಸುತ್ತಮುತ್ತಲಿನ ಸ್ಥಳೀಯರು ಬೀದಿ ನಾಯಿಗಳಿಗೆ ಆಹಾರವನ್ನು ನೀಡುತ್ತಾರೆ, ಆದರೆ ನಾವು ನಾಯಿಯನ್ನು ಹುಡುಕಲು ಸಾಧ್ಯವಿಲ್ಲ. ನಾಯಿ ಸಿಕ್ಕಿಬೀಳಬಹುದೆಂಬ ಭಯದಿಂದ ಮಾಲೀಕರು ಅದನ್ನು ಎಲ್ಲೋ ಬಿಟ್ಟು ಹೋಗಿದ್ದಾರೆ. ನಾಯಿಗೆ ಕ್ರಿಮಿನಾಶಕ ಮತ್ತು ಲಸಿಕೆ ಹಾಕಲಾಗಿದೆಯೇ ಎಂಬುದು ನಮಗೆ ತಿಳಿದಿಲ್ಲ,” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಬಿಎಂಪಿಯಿಂದ ಪ್ರಾಣಿ ಜನನ ನಿಯಂತ್ರಣ ಕಾರ್ಯಕ್ರಮ ವಿಫಲವಾಗಿರುವುದೇ ಘಟನೆಗೆ ಕಾರಣ ಎಂದು ಪ್ರಾಣಿ ಕಲ್ಯಾಣ ಕಾರ್ಯಕರ್ತರು ಆರೋಪಿಸಿದ್ದಾರೆ. ಕಾರ್ಯಕರ್ತೆ ಸುಜಯ ಜಗದೀಶ್ ಮಾತನಾಡಿ, ಆರ್‌ಆರ್‌ನಗರದ ಅನಿಮಲ್ ಬರ್ತ್ ಕಂಟ್ರೋಲ್ ಸೆಂಟರ್‌ಗೆ ಭೇಟಿ ನೀಡಿದ್ದು, ಅದು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:43 am, Tue, 27 December 22