
ಹಾಸನ, ನವೆಂಬರ್ 9: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ (Hassan wild elephant rampage) ದಿನೇ ದಿನೇ ಹೆಚ್ಚುತ್ತಿದೆ. ಜನರ ಬಳಿಯೇ ಓಡಾಡುತ್ತಾ ಯಾರಿಗೂ ಏನೂ ಮಾಡುವುದಿಲ್ಲ ಎಂಬ ನಂಬಿಕೆ ಮೂಡಿಸಿದ್ದ ಭೀಮ, ಈಗ ಊರಿನ ಜನರಲ್ಲಿ ಆತಂಕ ಮೂಡುವಂತೆ ಮಾಡಿದೆ. ಗ್ರಾಮದೊಳಗೆ ಸಿಕ್ಕ ಸಿಕ್ಕದ್ದನ್ನು ಪುಡಿಗಟ್ಟಿ ಅಟ್ಟಹಾಸ ಮೆರೆಯುತ್ತಿರುವ ಬೃಹತ್ ಸಲಗ ಮತ್ತೊಂದು ಮದವೇರಿದ ಕಾಡಾನೆ ಜೊತೆಗಿನ ಕಾಳಗದಲ್ಲಿ ಒಂದು ದಂತವನ್ನೇ ಮುರಿದುಕೊಂಡಿದೆ. ಇದೀಗ ಭೀಮ ನಡೆಸುತ್ತಿರುವ ದಾಂಧಲೆ ಅರಣ್ಯ ಇಲಾಖೆಗೆ ದೊಡ್ಡ ತಲೆನೋವು ತರಿಸಿದೆ.
ಕಳೆದ ಐದಾರು ವರ್ಷಗಳಿಂದ ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಬೇಲೂರು ತಾಲ್ಲೂಕಿನ ವಿವಿದೆಡೆ ಸಂಚಾರ ಮಾಡುತ್ತಾ, ಶಾಂತವಾಗಿ ಓಡಾಡುತ್ತಿದ್ದ ಭೀಮ ಇದೀಗ ಮತ್ತೆ ಆತಂಕ ಮೂಡಿಸಿದೆ. ಕಳೆದ ಒಂದು ವಾರದಿಂದ ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿಯ ಹಲವು ಗ್ರಾಮಗಳ ಮುಖ್ಯಬೀದಿಯಲ್ಲೇ ನಡೆದು ಹೋಗಿದ್ದ ಭೀಮ, ಇಂದು ಮತ್ತೊಂದು ದೈತ್ಯಾಕಾರದ ಕ್ಯಾಫ್ಟನ್ ಹೆಸರಿನ ಕಾಡಾನೆ ಜೊತೆಗೆ ಓಡಾಡುತ್ತಾ ಭೀತಿ ಸೃಷ್ಟಿಸಿದೆ.
ಇಂದು ಬೆಳಿಗ್ಗೆ ಬೇಲೂರು ತಾಲ್ಲೂಕಿನ ಜಗಬೋರನಹಳ್ಳೀ ಗ್ರಾಮದಲ್ಲಿ ಎರಡೂ ಆನೆಗಳು ಕಾಳಗ ಶುರುಮಾಡಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ರೋಷಾವೇಶದಿಂದ ಗ್ರಾಮದೊಳಗೆ ಎಂಟ್ರಿಯಾದ ಭೀಮ, ನೀರಿನ ಟ್ಯಾಂಕರ್ ಪುಡಿಗಟ್ಟಿ, ಎತ್ತಿನ ಗಾಡಿಯಲ್ಲ ಎತ್ತಿ ಬಿಸಾಡಿ ರೌದ್ರಾವತಾರ ಪ್ರದರ್ಶನ ಮಾಡಿದೆ.ಕಾಡಾನೆ ಗ್ರಾಮದೊಳಗೆ ಬಂದಾಗ ಅರಣ್ಯ ಇಲಾಖೆಯ ಇಟಿಎಫ್ ಸಿಬ್ಬಂದಿ ಹಿಂಬಾಲಿಸಿದರೂ ಸಹ ಪಟಾಕಿ ಇಲ್ಲದೆ ಆನೆಯನ್ನು ಓಡಿಸಲು ಪರದಾಡಬೇಕಾಯಿತು.
ಕ್ಯಾಫ್ಟನ್ ಜೊತೆಗಿನ ಕಾದಾಟದಲ್ಲಿ ಭೀಮನ ಬಲಬಾಗದ ದಂತ ಸಂಪೂರ್ಣ ಮುರಿದು ಬಿದ್ದಿದ್ದು, ಮತ್ತೊಂದು ಆನೆಗೂ ಗಾಯಗಳಾಗಿವೆ. ಸದ್ಯ ದಂತ ಮುರಿದುಕೊಂಡು ಕಾಫಿತೋಟದಲ್ಲಿ ಸೇರಿಕೊಂಡಿರುವ ಸಲಗ ನರಳಾಡುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಆನೆಯನ್ನು ಬೆನ್ನಟ್ಟಿ ಜನರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಿದ್ದಾರೆ.
2023ರ ಆಗಸ್ಟ್ ತಿಂಗಳಲ್ಲಿ ಬೆನ್ನಿನ ಕೆಳಬಾಗದಲ್ಲಿ ದೊಡ್ಡ ಗಾಯವಾಗಿ ನರಳಾಡಿದ್ದ ಭೀಮನಿಗೆ ಸೆಪ್ಟೆಂಬರ್ 25ರಂದು ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜೀವಿ ವೈದ್ಯರ ಮೂಲಕ ಚಿಕಿತ್ಸೆ ಕೊಡಿಸಿದ್ದರು. ಆದರೆ ಅದು ಪರಿಣಾಮಕಾರಿಯಾಗದ್ದರಿಂದ ಆಗಸ್ಟ್ 31ರಂದು ಭೀಮನಿಗೆ ಅರವಳಿಕೆ ಮದ್ದು ನೀಡಿ ಚಿಕಿತ್ಸೆ ನೀಡಲಾಗಿತ್ತು. ಆಪರೇಷನ್ ನಡೆಸುತ್ತಿದ್ದ ವೇಳೆ ಮದವೇರಿದ್ದ ಭೀಮ ಏಕಾ ಏಕಿ ಅಂದಿನ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಶಾರ್ಪ್ ಶೂಟರ್ ವೆಂಕಟೇಶ್ ಮೇಲೆ ದಾಳಿ ಮಾಡಿ ಕೊಂದಿತ್ತು. ಬಳಿಕ ಗಾಯ ಗುಣಮುಖವಾಗಿ ಎಲ್ಲಿಯೂ ಕಾಣಿಸಿಕೊಳ್ಳದೆ ಓಡಾಡುತ್ತಿದ್ದ ಭೀಮ ಇದೀಗ ಮತ್ತೆ ಮದವೇರಿದ ಕಾರಣ ಊರೂರು ಒಳಗೆ ಅಡ್ಡಾಡುತ್ತಾ ದಾಂದಲೆನಡೆಸುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.