ಹಾಸನದ ಕ್ಯಾನ್ಸರ್ ಸೆಂಟರ್​ಗೇ ಕ್ಯಾನ್ಸರ್: ಸೌಲಭ್ಯಗಳಿದ್ದರೂ ರೋಗಿಗಳಿಗೆ ಸಿಗದ ಚಿಕಿತ್ಸೆ

| Updated By: Ganapathi Sharma

Updated on: Feb 14, 2024 | 8:30 AM

Hassan's Cancer Center: ಹಾಸನದ ಕ್ಯಾನ್ಸರ್ ಸೆಂಟರ್​​ನ ಅವ್ಯವಸ್ಥೆ ಬಗ್ಗೆ ರೋಗಿಗಳು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನದ ಉಪಕರಣಗಳು, ಸೌಲಭ್ಯಗಳಿದ್ದರೂ ವೈದ್ಯಕೀಯ ಸಿಬ್ಬಂದಿ ಕೊರತೆಯಿಂದ ಬಡ ರೋಗಿಗಳಿಗೆ ಸಂಕಷ್ಟ ಎದುರಾಗಿದೆ. ಈ ಬಾರಿಯ ಬಜೆಟ್​ನಲ್ಲಾದರೂ ಸರ್ಕಾರ ಇತ್ತ ಗಮನ ಹರಿಸಬೇಕು ಎಂದು ಜನ ಆಗ್ರಹಿಸಿದ್ದಾರೆ.

ಹಾಸನದ ಕ್ಯಾನ್ಸರ್ ಸೆಂಟರ್​ಗೇ ಕ್ಯಾನ್ಸರ್: ಸೌಲಭ್ಯಗಳಿದ್ದರೂ ರೋಗಿಗಳಿಗೆ ಸಿಗದ ಚಿಕಿತ್ಸೆ
ಹಾಸನ ವೈದ್ಯಕೀಯ ಬೋಧಕ ಆಸ್ಪತ್ರೆ
Follow us on

ಹಾಸನ, ಫೆಬ್ರವರಿ 14: ಹಾಸನದ ಕ್ಯಾನ್ಸರ್ ಸೆಂಟರ್​​ನಲ್ಲಿ (Hassan’s Cancer Center) ಸೌಲಭ್ಯಗಳಿದ್ದರೂ ರೋಗಿಗಳಿಗೆ ಚಿಕಿತ್ಸೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ತಜ್ಞ ವೈದ್ಯರು, ಸಿಬ್ಬಂದಿ ಕೊರತೆಯಿಂದ ಕ್ಯಾನ್ಸರ್ ರೋಗಿಗಳು (Cancer Patients) ನರಳಾಡುವಂತಾಗಿದೆ. ಎರಡು ದಶಕದ ಹಿಂದೆ ಹಾಸನದಲ್ಲಿ ಮೆಡಿಕಲ್ ಕಾಲೇಜ್ (Hassan Medical College) ಸ್ಥಾಪನೆಯಾದರೂ ಪೂರ್ಣಪ್ರಮಾಣದಲ್ಲಿ ಕ್ಯಾನ್ಸರ್ ವಿಭಾಗ ಕಾರ್ಯಾಚರಣೆ ಆರಂಭಿಸಿಲ್ಲ. ಅಂಕಾಲಜಿ ವಿಭಾಗಕ್ಕೆ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ಸಂಕಷ್ಟ ಎದುರಿಸುವಂತಾಗಿದೆ. ನಿತ್ಯ ನೂರಾರು ಹೊರ ರೋಗಿಗಳು ಆಸ್ಪತ್ರೆಗೆ ಬಂದರೂ ಸೌಲಭ್ಯ ಸಿಗುತ್ತಿಲ್ಲ.

ಆಸ್ಪತ್ರೆ ಇದ್ದರೂ ಸಣ್ಣ ಸಣ್ಣ ಚಿಕಿತ್ಸೆ, ತುರ್ತು ಆರೈಕೆಗಾಗಿ ಬೆಂಗಳೂರು ಮೈಸೂರು ಅಥವಾ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹಾಸನದ ಕ್ಯಾನ್ಸರ್ ಸೆಂಟರ್​​ನಲ್ಲಿ ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಬಾಬಾ ಟ್ರಾನ್ 3ಐ ರೇಡಿಯೋ ಥೆರಫಿ ಯಂತ್ರ ಅವಳಡಿಕೆ ಮಾಡಲಾಗಿದೆ. ಆದಾಗ್ಯೂ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಸಂಪೂರ್ಣ ಭಾರತೀಯ ತಂತ್ರಜ್ಞಾನದ ವಿಶ್ವದರ್ಜೆಯ ಚಿಕಿತ್ಸಾ ಸೌಲಭ್ಯ ಇದ್ದರೂ ಚಿಕಿತ್ಸೆಗೆ ಗತಿಯಿಲ್ಲದಾಗಿದೆ.

ಹಾಸನ ಮೆಡಿಕಲ್ ಕಾಲೇಜ್​​ನಲ್ಲಿ 2007 ರಲ್ಲಿ ಕ್ಯಾನ್ಸರ್ ಚಿಕಿತ್ಸೆ ಘಟಕ ಆರಂಭವಾಗಿದೆ. ಆದರೆ ಅಂಕಾಲಜಿ ವಿಭಾಗದಲ್ಲಿ ಕೇವಲ ಓರ್ವ ಸಹ ಪ್ರಾದ್ಯಾಪಕ ಹುದ್ದೆ ಮಾತ್ರ ಇದು ಹೊಂದಿದೆ. ಪ್ರೊಫೆಸರ್, ಸಹಾಯಕ ಪ್ರೊಫೆಸರ್ ಹಾಗೂ ಇತರೆ ತಜ್ಞ ವೈದ್ಯರ ಕೊರತೆ ಎದುರಿಸುತ್ತಿದೆ. ಇರುವ ಏಕೈಕ ಸಹ ಪ್ರಾಧ್ಯಾಪಕರೂ ಇದೀಗ ರಾಜಿನಾಮೆ ಸಲ್ಲಿಸಿದ್ದು, ನೊಟೀಸ್​ ಅವಧಿಯಲ್ಲಿದ್ದಾರೆ. ಇದು ರೋಗಿಗಳ ಸಂಕಷ್ಟವನ್ನು ಹೆಚ್ಚಿಸಿದೆ.

ಒತ್ತಡದ ಕಾರಣ ವೈದ್ಯ ರಾಜೀನಾಮೆ

ನಿತ್ಯ ಬರುವ ನೂರಾರು ಹೊರ ರೋಗಿಗಳಿಗೆ ಸೇವೆ ನೀಡಿ ರೇಡಿಯೋಲಜಿ, ಕಿಮೋ ಥೆರಫಿ ಹಾಗೂ ಶಸ್ತ್ರಚಿಕಿತ್ಸೆ ಮಾಡಬೇಕಾದ ಒತ್ತಡದಲ್ಲಿ ವೈದ್ಯರು ಇದ್ದಾರೆ. ಇರುವ ಒಬ್ಬರೇ ವೈದ್ಯರಿಗೆ ಒತ್ತಡ ಹೆಚ್ಚಾಗಿರುವ ಕಾರಣ ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, ಹೊಸ ಅತ್ಯಾಧುನಿಕ ಯಂತ್ರ ಸ್ಥಾಪನೆಯಾಗಿ ತಿಂಗಳುಗಳೇ ಕಳೆದರೂ ಅದರ ಸೇವೆ ರೋಗಿಗಳಿಗೆ ಸಿಗುತ್ತಿಲ್ಲ. ಹಿಮ್ಸ್ ಆಡಳಿತ ಮಂಡಳಿಯ ನಿರಾಸಕ್ತಿಯಿಂದ ರೋಗಿಗಳಿಗೆ ಸಂಕಷ್ಟ ಎದುರಾಗಿದೆ.

2018 ರಲ್ಲಿ ಕ್ಯಾನ್ಸರ್ ಕೇಂದ್ರ ಮೇಲ್ದರ್ಜೆ ಗೇರಿಸಲು 18.25 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಸರ್ಕಾರ ಅನುಮೋದನೆ ನೀಡಿತ್ತು. ಈ ಯೋಜನೆಗಾಗಿ 5 ಕೋಟಿ ರೂಪಾಯಿ ಬಿಡುಗಡೆಯಾಗಿ ನಾಲ್ಕು ವರ್ಷ ಆದರೂ ಯೋಜನೆಗೆ ಬಳಸದೆ ನಿರ್ಲಕ್ಷ್ಯ ವಹಿಸಿದ ಆರೋಪ ಕೇಳಿಬಂದಿದೆ.

ಹಾಸನ ವೈದ್ಯಕೀಯ ಬೋಧಕ ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಾರಿಯ ಬಜೆಟ್​​ನಲ್ಲಿ ಹಾಸನ ಕ್ಯಾನ್ಸರ್ ಕೇಂದ್ರಕ್ಕೆ‌ ಅಗತ್ಯ ಸೌಲಭ್ಯ ನೀಡಲು ಜನರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಕಾಡಾನೆ ದಾಳಿ: ಇಬ್ಬರಿಗೆ ಗಂಭೀರ ಗಾಯ, ಮತ್ತಿಬ್ಬರು ಪಾರು

ಹಾಸನ, ಕೊಡಗು, ಚಿಕ್ಕಮಗಳೂರು, ತುಮಕೂರು ಹಾಗೂ ಮಂಡ್ಯ ಜಿಲ್ಲೆಯ ರೋಗಿಗಳಿಗೆ ಸಂಜೀವಿಯಾಗಿರುವ ಕೇಂದ್ರ ಇದಾಗಿದೆ. ಆದಾಗ್ಯೂ ಬಡ ರೋಗಿಗಳಿಗೆ ಸಮೀಪದಲ್ಲೇ ಉಚಿತ ಚಿಕಿತ್ಸೆ ಸಿಗುವ ಅವಕಾಶ ಹಿಮ್ಸ್ ನಿರ್ಲಕ್ಷ್ಯದಿಂದಾಗಿ ಇಲ್ಲವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ