ಬೇಲೂರು ಚನ್ನಕೇಶವ ದೇವಸ್ಥಾನ ರಥೋತ್ಸವಕ್ಕೂ ಮುನ್ನ ಕುರಾನ್ ಪಠಣೆ: ಹೆಚ್ಚಿದ ಹಿಂದೂ ಸಂಘಟನೆಗಳ ಪ್ರತಿಭಟನೆ ಕಿಚ್ಚು

|

Updated on: Mar 28, 2023 | 1:29 PM

ರಥೋತ್ಸವ ಸಂದರ್ಭದಲ್ಲಿ ಕುರಾನ್ ಪಠಣ ಮಾಡದಂತೆ ಬೇಲೂರಿನಲ್ಲಿ ಚನ್ನಕೇಶವ ದೇವಸ್ಥಾನದ ಬಳಿ ಪ್ರತಿಭಟನೆ ನಡೆಸಲಾಗುತ್ತಿದೆ.

ಬೇಲೂರು ಚನ್ನಕೇಶವ ದೇವಸ್ಥಾನ ರಥೋತ್ಸವಕ್ಕೂ ಮುನ್ನ ಕುರಾನ್ ಪಠಣೆ:  ಹೆಚ್ಚಿದ ಹಿಂದೂ ಸಂಘಟನೆಗಳ ಪ್ರತಿಭಟನೆ ಕಿಚ್ಚು
ಪ್ರತಿಭಟನೆ ನಡೆದ ಸ್ಥಳ
Follow us on

ಹಾಸನ: ಹಲವು ದಶಕಗಳಿಂದ ನಡೆದುಕೊಂಡು ಬರುತ್ತಿದ್ದ ಐತಿಹಾಸಿಕ ಬೇಲೂರಿನ ಶ್ರೀ ಚನ್ನಕೇಶವ ದೇವರ ರಥೋತ್ಸವಕ್ಕೂ ಮುನ್ನ ನಡೆಯುವ ಕುರಾನ್ ಪಠಣೆ ನಿಲ್ಲಬೇಕು ಎಂಬ ಕೂಗು ಮತ್ತಷ್ಟು ಜೋರಾಗಿದೆ. ರಥೋತ್ಸವ ಸಂದರ್ಭದಲ್ಲಿ ಕುರಾನ್ ಪಠಣ ಮಾಡದಂತೆ ಬೇಲೂರಿನಲ್ಲಿ ಚನ್ನಕೇಶವ ದೇವಸ್ಥಾನದ ಬಳಿ ಪ್ರತಿಭಟನೆ ನಡೆಸಲಾಗುತ್ತಿದೆ. ವಿಹೆಚ್​​ಪಿ, ಬಜರಂಗದಳ ಕಾರ್ಯಕರ್ತರು ಧರಣಿ ನಡೆಸಿ ಕುರಾನ್ ಪಠಣ ರದ್ದು ಮಾಡುವಂತೆ ತಹಶೀಲ್ದಾರ್​ಗೆ ಮನವಿ ಸಲ್ಲಿಸಿದ್ದಾರೆ. ಈ ಹಿಂದೆ ಹಾಸನದ ವೈದ್ಯ ಡಾ.ರಮೇಶ್ ಈ ಬಗ್ಗೆ ಐತಿಹಾಸಿಕ ದಾಖಲೆಗಳ ಜೊತೆಗೆ ಬೇಲೂರಿನ ಶ್ರೀ ಚನ್ನಕೇಶವನಿಗೆ ಬೇಕಿಲ್ಲ ಕುರಾನ್ ಪಠಣ ಎಂಬ ಪುಸ್ತಕ ಬರೆದು ಬಿಡುಗಡೆ ಮಾಡಿದ್ದರು.

ಏಪ್ರಿಲ್​​​ 3ರೊಳಗೆ ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದ್ದಾರೆ. ಇನ್ನು ಇದೇ ವೇಳೆ ಮುಸ್ಲಿಂ ಯುವಕರು ‘ಕುರಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದು ಬಜರಂಗದಳ ಕಾರ್ಯಕರ್ತರು, ಮುಸ್ಲಿಂ ಯುವಕನ ನಡುವೆ ವಾಗ್ವಾದ ನಡೆದಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪೊಲೀಸರು ಮುಸ್ಲಿಂ ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಹಿಂದೂಪರ ಸಂಘಟನೆಗಳು ರಸ್ತೆ ತಡೆದು ಪ್ರತಿಭಟನೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಬೇಲೂರು ದೇವಸ್ಥಾನವನ್ನು ಯುನೆಸ್ಕೋ ಶಾಶ್ವತ ಪಟ್ಟಿಗೆ ಸೇರಿಸಲು ದಾಖಲೆ ಸಲ್ಲಿಸಿದ ಕರ್ನಾಟಕ ಸರ್ಕಾರ: ಸಿಎಂ ಬೊಮ್ಮಾಯಿ ಮಾಹಿತಿ

ಏಪ್ರಿಲ್ 4ರಂದು ಐತಿಹಾಸಿಕ ಬೇಲೂರಿನ ಶ್ರೀ ಚನ್ನಕೇಶವ ಜಾತ್ರೆ ನಡೆಯಲಿದ್ದು, ಚುನಾವಣೆ ವೇಳೆ ಈ ಬೆಳವಣಿಗೆ ಕೋಮು ದ್ವೇಶಕ್ಕೆ ತಿರುಗುತ್ತಿದೆ ಎಂದು ಜಿಲ್ಲಾಡಳಿತ ಚಿಂತಿಸುತ್ತಿದೆ. 12 ನೇ ಶತಮಾನದ ಬೇಲೂರು ಚೆನ್ನಕೇಶವ ದೇವಾಲಯದ ವಾಸ್ತುಶಿಲ್ಪವು ಅದ್ಭುತವಾಗಿದ್ದು ಇದನ್ನು ಮೂರು ತಲೆಮಾರುಗಳ ವರೆಗೆ ನಿರ್ಮಿಸಲಾಗಿದೆ. ಮತ್ತು ಈ ದೇವಸ್ಥಾನ ಪೂರ್ಣಗೊಳಿಸಲು 103 ವರ್ಷಗಳು ಬೇಕಾದವು ಎನ್ನಲಾಗಿದೆ. ಹೊಯ್ಸಳರ ಕಾಲದ ವಿಶ್ವ ವಿಖ್ಯಾತ ಚನ್ನಕೇಶವಸ್ವಾಮಿ ದೇವಾಲಯ ತನ್ನ ಕಲೆ ವಾಸ್ತು ಶಿಲ್ಪಗಳ ಮೂಲಕ ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರಲಿದೆ. ಆದ್ರೆ ಇಂತಹ ನಿರೀಕ್ಷೆಯ ವೇಳೆಯಲ್ಲಿ ಕುರಾನ್ ವಿವಾದ ಹುಟ್ಟುಕೊಂಡಿದೆ.

1932ರಲ್ಲಿ ರಥೋತ್ಸವದ ವೇಳೆ ಕುರಾನ್ ಪಠಣೆ ಮಾಡಬೇಕು ಎಂಬ ಸುಳ್ಳು ಸಂಪ್ರದಾಯವನ್ನು ತರಲಾಯಿತು ಎಂದು ವೈದ್ಯ ಡಾ.ರಮೇಶ್ ಬರೆದ ಬೇಲೂರಿನ ಶ್ರೀ ಚನ್ನಕೇಶವನಿಗೆ ಬೇಕಿಲ್ಲ ಕುರಾನ್ ಪಠಣ ಎಂಬ ಪುಸ್ತಕದಲ್ಲಿ ತಿಳಿಸಲಾಗಿದೆ. ಸೌಹಾರ್ದತೆ ಓಕೆ, ಎಲ್ಲರೂ ಒಂದಾಗಿ ಇರಬೇಕು ಎನ್ನೋದು ಸರಿ. ಆದ್ರೆ ಚನ್ನಕೇಶವನ ಜಾತ್ರೆ ವೇಳೆ ಗೋವಿಂದ ನಾಮಸ್ಮರಣೆ ಮೊಳಗಬೇಕೇ ವಿನಹ ಅಲ್ಲಿ ಕುರಾನ್ ಪಠಣ ಸರಿಯಲ್ಲ. ದರ್ಗಾಗೆ ಹೋಗಿ ನಾವು ಹನುಮಾನ್ ಚಾಲಿಸ ಹೇಳೋಕೆ ಆಗುತ್ತಾ ಹಾಗೆಯೇ ಕೆಲವೇ ವರ್ಷಗಳ ಹಿಂದೆ ಸೇರಿಸಲಾಗಿರೋಇಂತಹ ಆಚರಣೆಯನ್ನು ಕೈಬಿಡಬೇಕು ಎಂದು ಡಾ ರಮೇಶ್ ಒತ್ತಾಯಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:29 pm, Tue, 28 March 23