ಮಾಜಿ ಪ್ರಧಾನಿ ಗೌಡರ ಜಿಲ್ಲೆಯಲ್ಲಿ IIT ಜಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುತ್ತದಂತೆ ಹಾಲಿ ಬಿಜೆಪಿ ಸರ್ಕಾರ!

| Updated By: ರಮೇಶ್ ಬಿ. ಜವಳಗೇರಾ

Updated on: Jan 20, 2023 | 7:53 PM

ಮುಗಿಯದ ಐಐಟಿ ಭೂ ವಿವಾದ: ವಿವಾದಗಳ ನಡುವೆಯೂ ಐಐಟಿ ಇಂದಲ್ಲ ನಾಳೆ ಸ್ಥಾಪನೆ ಆಗುತ್ತೆ ಅನ್ನೋ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಇದೀಗ ಐಐಟಿಗೆ ಮೀಸಲಾಗಿದ್ದ ಭೂಮಿಯಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಭೂಮಿ ಅಭಿವೃದ್ದಿಪಡಿಸಲು ರಾಜ್ಯ ವಾಣಿಜ್ಯ ಮತ್ತು ಕೈಗಾರಿಗೆ ಇಲಾಖೆ ಮುಂದಾಗಿದೆ.

ಮಾಜಿ ಪ್ರಧಾನಿ ಗೌಡರ ಜಿಲ್ಲೆಯಲ್ಲಿ IIT ಜಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುತ್ತದಂತೆ ಹಾಲಿ ಬಿಜೆಪಿ ಸರ್ಕಾರ!
ಮಾಜಿ ಪ್ರಧಾನಿ ಗೌಡರ ಜಿಲ್ಲೆಯಲ್ಲಿ IIT ಜಾಗದಲ್ಲಿ ಕೈಗಾರಿಕೆಗಳ ಸ್ಥಾಪನೆ
Follow us on

ಅದು ಹಾಸನ (Hassan) ಜಿಲ್ಲೆಯ ದಶಕಗಳ ಕನಸು… ಮೆಡಿಕಲ್ ಕಾಲೇಜು, ಇಂಜನಿಯರಿಂಗ್, ಕೃಷಿ, ತೋಟಗಾರಿಕೆ, ಪಶು ವೈದ್ಯಕೀಯ ಕಾಲೇಜು ಹೀಗೆ ಶೈಕ್ಷಣಿಕವಾಗಿ ಎಲ್ಲಾ ವಿಭಾಗದ ಸರ್ಕಾರಿ ಕಾಲೇಜುಗಳಿರೋ ಮಾಜಿ ಪ್ರಧಾನಿಗಳ (HD Deve gowda) ತವರಿನಲ್ಲಿ ವಿಶ್ವ ದರ್ಜೆಯ ತಾಂತ್ರಿಕ ಶಿಕ್ಷಣ ಸಂಸ್ಥೆ ಐಐಟಿ (IIT) ಸ್ಥಾಪನೆ ಆಗಬೇಕು ಅನ್ನೋದು ಒಂದೂವರೆ ದಶಕದ ಕನಸು, ಅದಕ್ಕಾಗಿ 1,057 ಎಕರೆ ಭೂಮಿ (Land) ಕೂಡ ಮೀಸಲಾಗಿತ್ತು. ಇಂದಲ್ಲಾ, ನಾಳೆ ಕಾಲೇಜು ನಿರ್ಮಾಣ ಆಗುತ್ತೆ ಅನ್ನೋ ನಿರೀಕ್ಷೆಯೂ ಇತ್ತು. ಆದ್ರೆ ಈಗ ಎಲ್ಲವೂ ಉಲ್ಟಾ ಆಗಿದೆ. ಕಾಲೇಜಿಗಾಗಿ ಮೀಸಲಾಗಿದ್ದ ಭೂಮಿಯನ್ನ ಕೆಐಎಡಿಬಿ (KIADB) ಮೂಲಕ ಕೈಗಾರಿಕೆಗಳ ಸ್ಥಾಪನೆಗೆ ಬಳಕೆ ಮಾಡಲು ಸರ್ಕಾರ (Basavaraj Bommai) ಮುಂದಾಗಿದ್ದು, ಐಐಟಿ ಕನಸಿಗೆ ಎಳ್ಳುನೀರು ಬಿಟ್ಟಂತಾಗುತ್ತಾ? ಅನ್ನೋ ಅನುಮಾನ ಶುರುವಾಗಿದೆ. ಐಐಟಿ ಭೂಮಿ ಬೇರೆ ಉದ್ದೇಶಕ್ಕೆ ಬಳಸಿದ್ರೆ ಮಾಜಿ ಪ್ರಧಾನಿ ದೇವೇಗೌಡರ ಜೊತೆ ಬೆಂಗಳೂರಿನಲ್ಲಿ ಧರಣಿ ಮಾಡೋದಾಗಿ ಜೆಡಿಎಸ್ ನಾಯಕ ರೇವಣ್ಣ ಎಚ್ಚರಿಕೆ ನೀಡಿದ್ದಾರೆ. ಐಐಟಿಗೆ ಬೇಕಿರೋದು 260 ಎಕರೆ ಭೂಮಿ, ಅದನ್ನ ಬಿಟ್ಟು ಉಳಿದ ಕಡೆ ಕೈಗಾರಿಕೆ ಮಾಡ್ತೀವಿ. ಎಲ್ಲವೂ ಇವರನ್ನ ಕೇಳಿ ಮಾಡೋಕೆ ಆಗಲ್ಲ ಎಂದು ಸವಾಲೆಸೆದಿರೋ ಶಾಸಕ ಪ್ರೀತಂ ಗೌಡ ರಾಜ್ಯದಲ್ಲಿ ಈಗಾಗಲೇ ಐಐಟಿ ಇದ್ದು, ಮತ್ತೊಂದು ಐಐಟಿ ಕೊಡೋದು ಅನುಮಾನ ಎಂದಿದ್ದಾರೆ. ಒಟ್ಟಿನಲ್ಲಿ ದಶಕಗಳಿಂದ ಮೀಸಲಾಗಿದ್ದ ಭೂಮಿ ವಿಚಾರಲ್ಲಿ ಇದೀಗ ಹಗ್ಗ ಜಗ್ಗಾಟ ಶುರುವಾಗಿದೆ.

ಹಾಸನದಲ್ಲಿ ಐಐಟಿ ಸ್ಥಾಪನೆ ಕನಸು ಹುಸಿಯಾಗುತ್ತಾ ಸಾಗಿದ್ದು ಒಂದೂವರೆ ದಶಕದ ನಿರೀಕ್ಷೆಗೆ ತಣ್ಣೀರು ಎರಚಿದೆ ಹಾಲಿ ರಾಜ್ಯ ಸರ್ಕಾರ. ಕಾಲೇಜು ಬರುವುದೇ ಡೌಟ್. ಬಂದರೂ ಅದಕ್ಕೆ ಬೇಕಾದ ಭೂಮಿ ಸಿಗುತ್ತೆ ಬಿಡಿ ಎಂಬುದು ಶಾಸಕ ಪ್ರೀತಂ ಗೌಡ ಧೋರಣೆ. ಹೌದು ಹಾಸನ ಜಿಲ್ಲೆ ಅಂದ್ರೆ ಸರ್ಕಾರಿ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿರುವ ಜಿಲ್ಲಾ ಕೇಂದ್ರ. ಒಂದು ಜಿಲ್ಲೆಯೊಳಗೆ ಎರಡೆರಡು ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿದೆ. ಹಲವು ಡಿಪ್ಲೊಮಾ ಕಾಲೇಜುಗಳಿವೆ. ಮೆಡಿಕಲ್ ಕಾಲೇಜು… ಎರಡು ಲಾ ಕಾಲೇಜು… ಪಶು ವೈದ್ಯಕೀಯ, ಕೃಷಿ.. ಹೀಗೆ ಎಲ್ಲಾ ವಿಭಾಗದ ಶಿಕ್ಷಣಕ್ಕೂ ಜಿಲ್ಲೆಯಲ್ಲಿ ಸರ್ಕಾರಿ ಸಂಸ್ಥೆಗಳಿವೆ.

ಹಾಗಾಗಿ ಜಿಲ್ಲೆಯಲ್ಲಿ ವಿಶ್ವ ದರ್ಜೆಯ ಐಐಟಿ ಕ್ಯಾಂಪಸ್​​ ಇರಬೇಕು ಅನ್ನೋ ಕಾರಣಕ್ಕೆ ಹಿಂದೆ ಜೆಡಿಎಸ್ ಸರ್ಕಾರ ಇದ್ದ ಕಾಲದಲ್ಲಿ15 ವರ್ಷಗಳ ಹಿಂದೆಯೇ 1,057 ಎಕರೆ ಭೂಮಿಯನ್ನ ಸ್ವಾಧಿನಪಡಿಸಿಕೊಳ್ಳುವ ಪ್ರಕ್ರಿಯೆ ನಡೆದಿತ್ತು. ಹಾಸನ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಇರುವ ಬೊಮ್ಮನಾಯಕನಹಳ್ಳಿ, ಕಾಚನಾಯಕನಹಳ್ಳಿ, ಆಡುವಳ್ಳಿ, ಗವೇನಹಳ್ಳಿ, ಬುಸ್ತೇನಹಳ್ಳಿ, ದೊಡ್ಡ ಹೊನ್ನೇನಹಳ್ಳಿ, ಕಸ್ತೂವರಳ್ಳಿ ಗ್ರಾಮಗಳ ವ್ಯಾಪ್ತಿಯ ಭೂಮಿಯಲ್ಲಿ 527 ಎಕರೆ ಭೂಮಿಗೆ ಸಂಪೂರ್ಣ ಪರಿಹಾರ ನೀಡಲಾಗಿತ್ತು.

ಇನ್ನು 485 ಎಕರೆಗೆ ಪರಿಹಾರ ನೀಡುವ ಪ್ರಕ್ರಿಯೆ ತಾಂತ್ರಿಕ ಕಾರಣಗಳಿಗಾಗಿ ನಿಧಾನಗತಿಯಲ್ಲಿ ಸಾಗಿತ್ತು. ಕೆಲ ರೈತರು ಹೆಚ್ಚಿನ ಪರಿಹಾರಕ್ಕಾಗಿ ಕೋರ್ಟ್ ಮೊರೆ ಹೋಗಿದ್ದರು. ಈ ಎಲ್ಲಾ ವಿವಾದಗಳ ನಡುವೆಯೂ ಐಐಟಿ ಇಂದಲ್ಲ ನಾಳೆ ಸ್ಥಾಪನೆ ಆಗುತ್ತೆ ಅನ್ನೋ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಈ ಎಲ್ಲಾ ನಿರೀಕ್ಷೆಗಳಿ ಇದೀಗ ಸುಳ್ಳಾಗಿವೆ. ಐಐಟಿಗೆ ಮೀಸಲಾಗಿದ್ದ ಭೂಮಿಯಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಭೂಮಿ ಅಭಿವೃದ್ದಿಪಡಿಸಲು ರಾಜ್ಯ ವಾಣಿಜ್ಯ ಮತ್ತು ಕೈಗಾರಿಗೆ ಇಲಾಖೆ ಮುಂದಾಗಿದೆ.

ಸರ್ಕಾರದ ನಡೆಗೆ ತೀವೃ ಆಕ್ಷೇಪ ವ್ಯಕ್ತಪಡಿಸಿರೋ ಜಿಲ್ಲೆಯ ಶಾಸಕ ರೇವಣ್ಣ ಅವರು ಅದು ಐಐಟಿಗಾಗಿ ಮೀಸಲಾಗಿರುವ ಭೂಮಿ, ಬೇರೆ ಉದ್ದೇಶಕ್ಕೆ ಬಳಕೆ ಮಾಡಕೂಡದು. ಹಾಗೇನಾದರೂ ಮಾಡಿದ್ರೆ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಬೆಂಗಳೂರಿನ ಮಹಾತ್ಮಗಾಂಧಿ ಪ್ರತಿಮೆ ಎದುರು ಧರಣಿ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯ ಎಲ್ಲಾ ಪಕ್ಷಗಳು ಪಕ್ಷಾತೀತವಾಗಿ ಈ ವಿಚಾರದಲ್ಲಿ ಹೋರಾಟ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ತಿಂಗಳ ಹಿಂದೆ ದೇವೇಗೌಡರು ಪ್ರಧಾನಿಯವರನ್ನ ಭೇಟಿ ಮಾಡಿದ್ದು ಐಐಟಿ ಸ್ಥಾಪನೆ ಬಗ್ಗೆ ಪರಿಶೀಲನೆ ನಡೆಸೋದಾಗಿ ಪಿಎಂ ಹೇಳಿದ್ದಾರೆ. ಹಾಗಾಗಿ ಈ ಭೂಮಿ ಬೇರೆ ಉದ್ದೇಶಕ್ಕೆ ಬಳಕೆ ಮಾಡಕೂಡದು ಎಂದು ಆಗ್ರಹಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಬೆಲೆ ಬಾಳುವ ಭೂಮಿಯಲ್ಲಿ ಕೈಗಾರಿಕೆ ಸ್ಥಾಪನೆಯ ಬಗ್ಗೆ ಜೆಡಿಎಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರೆ… ದೇಶದಲ್ಲಿ ಐಐಟಿ ಸ್ಥಾಪನೆ ಬಗ್ಗೆ ತೀರ್ಮಾನ ಮಾಡೋದು ಕೇಂದ್ರ ಸರ್ಕಾರ. ರಾಜ್ಯದಲ್ಲಿ ಈಗಾಗಲೇ ಒಂದು ಐಐಟಿ ಇದೆ, ಕೆಲ ರಾಜ್ಯಗಳಲ್ಲಿ ಆ ಒಂದು ಕೂಡ ಇಲ್ಲ. ಹೀಗಿರುವಾಗ ರಾಜ್ಯಕ್ಕೆ ಎರಡನೆಯ ಕಾಲೇಜು ಬರೋದೆ ಅನುಮಾನವಿದೆ. ಅಕಸ್ಮಾತ್ ಕಾಲೇಜು ಮಂಜೂರಾದರೂ ಅದಕ್ಕೆ ಬೇಕಿರೋದು ಕೇವಲ 260 ಎಕರೆ ಭೂಮಿ ಮಾತ್ರ. ಹಾಗಾಗಿ ಲಭ್ಯವಿರೋ ಸಾವಿರಾರು ಎಕರೆ ಭೂಮಿಯಲ್ಲಿ 260 ಎಕರೆ ಭೂಮಿಯನ್ನ ಐಐಟಿಗೆ ಮೀಸಲಿಟ್ಟು ಉಳಿದ ಭೂಮಿಯನ್ನ ಕೈಗಾರಿಕೆ ಸ್ಥಾಪನೆಗೆ ಬಳಕೆ ಮಾಡುತ್ತೇವೆ.

ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಸಾವಿರಾರು ಅರ್ಜಿಗಳು ಬಂದಿವೆ. ಯುವಕರಿಗೆ ಉದ್ಯೋಗ ನೀಡಬೇಕು ಅಂದ್ರೆ ಕೈಗಾರಿಕೆ ಸ್ಥಾಪನೆ ಮಾಡೋರಿಗೆ ಭೂಮಿ ಕೊಡಬೇಕು. ಸಾಕಷ್ಟು ರೈತರಿಗೆ ಇನ್ನೂ ಪರಿಹಾರ ಕೂಡ ನೀಡಲಾಗಿಲ್ಲ. ಆ ರೈತರಿಗೆ ಎಕರೆಗೆ 10700 ಅಡಿ ಪರಿವರ್ತಿತ ಭೂಮಿಯನ್ನ ನೀಡುವ ಒಪ್ಪಂದದ ಮೇಲೆ ರೈತರ ಭೂಮಿಯನ್ನ ಈ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲು ಒಪ್ಪಂದ ಕೂಡ ಆಗಿದೆ.

ಐಐಟಿ ಸ್ಥಾಪನೆ ದೇವೇಗೌಡರ ಕನಸಾದ್ರೆ ನಮಗೂ ಗೌರವ ಇದೆ. ಆದ್ರೆ ದೇವೇಗೌಡರೇ ಸಿಎಂ ಆಗಿ ಪಿಎಂ ಆಗಿದ್ದವರು. ಅವರ ಮಗ ಎರಡು ಬಾರಿ ಸಿಎಂ ಆಗಿದ್ದರು. ಇನ್ನೊಬ್ಬ ಮಗ ಮಂತ್ರಿಯಾಗಿದ್ದರು. ಆಗ ಯಾಕೆ ಕಾಲೇಜು ಸ್ಥಾಪನೆ ಮಾಡಲಾಗಲಿಲ್ಲ? ವಿಮಾನ ನಿಲ್ದಾಣ ಮಾಡಲು ಯಡಿಯೂರಪ್ಪ ಬರಬೇಕಾಯ್ತು ಎಂದು ಲೇವಡಿ ಮಾಡಿರೋ ಬಿಜೆಪಿ ಶಾಸಕ ಪ್ರೀತಂ ಗೌಡ ಅವರು ಇದು ನನ್ನ ಕ್ಷೇತ್ರ ವ್ಯಾಪ್ತಿಯ ವಿಚಾರ. ಹಾಗಾಗಿ ಇದನ್ನ ಸರ್ಕಾರ ತೀರ್ಮಾನ ಮಾಡುತ್ತೆ, ಕಾಲೇಜು ಮಂಜೂರಾದ್ರೆ ಅದಕ್ಕೆ ಬೇಕಾದ ಭೂಮಿ ಇರುತ್ತೆ, ಕೈಗಾರಿಕೆ ಅಭಿವೃದ್ದಿ ದೃಷ್ಟಿಯಿಂದ ಈ ಭೂಮಿಯನ್ನ ಕೈಗಾರಿಕೆ ಸ್ಥಾಪನೆಗೆ ಬಳಕೆ ಮಾಡೋದು ನಿಶ್ಚಿತ ಎಂದು ಜೆಡಿಎಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ ಶಾಸಕ ಪ್ರಿತಂ ಗೌಡ.

ಒಟ್ನಲ್ಲಿ ಒಂದೂವರೆ ದಶಕದಿಂದ… ಐಐಟಿ ಕಾಲೇಜು ಆಗುತ್ತೆ. ಹಾಸನವೂ ಕೂಡ ತಾಂತ್ರಿಕ ಶಿಕ್ಷಣದಲ್ಲಿ ವಿಶ್ವ ದರ್ಜೆಯ ಶಿಕ್ಷಣ ನೀಡುವ ತಾಣಗಳ ಪಟ್ಟಿಗೆ ಸೇರುತ್ತೆ ಅನ್ನೋ ನಿರೀಕ್ಷೆ ಹುಸಿಯಾಗುತ್ತಾ ಇದೆಯಾ ಅನ್ನೋ ಆತಂಕ ಎದುರಾಗಿದೆ. ಶಿಕ್ಷಣಕ್ಕೆಂದು ಮೀಸಲಿಟ್ಟ ಭೂಮಿಯನ್ನ ಮತ್ತೊಂದು ಉದ್ದೇಶಕ್ಕೆ ಬಳಸಲು ಸರ್ಕಾರ ಈಗಾಗಲೆ ಕ್ರಮ ವಹಿಸಿರೋದು ಜೆಡಿಎಸ್ ಮತ್ತು ಬಿಜೆಪಿ ನಡುವೆ ಜಟಾಪಟಿಗೆ ಕಾರಣವಾಗಿದೆ. ಸರ್ಕಾರ ಈ ವಿಚಾರದಲ್ಲಿ ಕೈಗೊಂಡಿರುವ ತೀರ್ಮಾನಕ್ಕೆ ಬದ್ದವಾಗಿ ಮುಂದುವರೆದರೆ ಜೆಡಿಎಸ್ ನಾಯಕರು ಹೋರಾಟದ ಹಾದಿ ಹಿಡಿಯುತಾರಾ? ಮಾಜಿ ಪ್ರಧಾನಿಯವರು ಹಾಲಿ ಸಿಎಂ-ಪಿಎಂಗೆ ಬರೆದಿರೋ ಪತ್ರ ಐಐಟಿ ಸ್ಥಾಪನೆ ವಿಚಾರದಲ್ಲಿ ಮ್ಯಾಜಿಕ್ ಮಾಡುತ್ತಾ ಕಾದು ನೋಡಬೇಕಿದೆ.

ವರದಿ: ಮಂಜುನಾಥ್ ಕೆಬಿ, ಟಿವಿ 9, ಹಾಸನ

Published On - 6:51 pm, Fri, 20 January 23