ಅಧಿಕಾರ ಸ್ವೀಕರಿಸಲು ತೆರಳುತ್ತಿದ್ದ ಪ್ರೊಬೆಷನರಿ ಐಪಿಎಸ್​ ಅಧಿಕಾರಿ ಭೀಕರ ಅಪಘಾತದಲ್ಲಿ ಸಾವು

| Updated By: ವಿವೇಕ ಬಿರಾದಾರ

Updated on: Dec 02, 2024 | 10:31 AM

ಹಾಸನ ತಾಲೂಕಿನ ಕಿತ್ತಾನೆಗಡಿ ಬಳಿ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಹರ್ಷವರ್ಧನ್ (26) ಅವರು ಡಿಸೆಂಬರ್ 1 ರಂದು ನಿಧನರಾಗಿದ್ದಾರೆ. ಮೈಸೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ವೇಳೆ ಅವರ ಜೀಪ್ ಪಲ್ಟಿಯಾಗಿತ್ತು. ಅವರು 2022 ರ ಯುಪಿಎಸ್ಸಿ ಪರೀಕ್ಷೆಯಲ್ಲಿ 153ನೇ ರ್ಯಾಂಕ್ ಪಡೆದು ಐಪಿಎಸ್ ಆಗಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ.

ಅಧಿಕಾರ ಸ್ವೀಕರಿಸಲು ತೆರಳುತ್ತಿದ್ದ ಪ್ರೊಬೆಷನರಿ ಐಪಿಎಸ್​ ಅಧಿಕಾರಿ ಭೀಕರ ಅಪಘಾತದಲ್ಲಿ ಸಾವು
ಪ್ರೊಬೆಷನರಿ ಐಪಿಎಸ್​ ಅಧಿಕಾರಿ ಹರ್ಷವರ್ಧನ್
Follow us on

ಹಾಸನ, ಡಿಸೆಂಬರ್​ 02: ಚಾಲಕನ ನಿಯಂತ್ರ ತಪ್ಪಿ ಜೀಪ್ ರಸ್ತೆ ಬದಿಗೆ ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಪ್ರೊಬೆಷನರಿ ಐಪಿಎಸ್​ ಅಧಿಕಾರಿ ಹರ್ಷವರ್ಧನ್ (IPS Harshvardhan) (26) ಚಿಕಿತ್ಸೆ ಫಲಕಾರಿಯಾಗದೆ ರವಿವಾರ (ಡಿಸೆಂಬರ್​ 01) ರಾತ್ರಿ 9.30ರ ವೇಳೆಗೆ ಮೃತಪಟ್ಟಿದ್ದಾರೆ. ಹಾಸನ (Hassan) ತಾಲೂಕಿನ ಕಿತ್ತಾನೆಗಡಿ ಗ್ರಾಮದ ಬಳಿ ಜೀಪ್‌ ಪಲ್ಟಿಯಾಗಿತ್ತು. ಕರ್ತವ್ಯಕ್ಕೆ ಹಾಜರಾಗುವ ಮುನ್ನವೇ ​ಪ್ರೊಬೆಷನರಿ ಐಪಿಎಸ್​ ಅಧಿಕಾರಿ ಹರ್ಷಬರ್ಧನ್ ಕೊನೆಯುಸಿರು ಎಳೆದಿದ್ದಾರೆ.

ಮೂಲತಃ ಬಿಹಾರ ಮೂಲದ ಹರ್ಷಬರ್ಧನ ಮದ್ಯಪ್ರದೇಶದ ಸಿಂಗ್ರುಲಿಯಲ್ಲಿ ವಾಸವಾಗಿದ್ದರು. ಅಖಿಲೇಶ್ ಕುಮಾರ್ ಸಿಂಗ್ ಹಾಗೂ ಡೋಲಿ ಸಿಂಗ್ ದಂಪತಿಯ ಪುತ್ರ ಹರ್ಷವರ್ಧನ. ರಾಜ್ಯ ಆಡಳಿತ ಸೇವೆಯಲ್ಲಿರುವ ಸರ್ಕಾರಿ ನೌಕರನ ಮಗನಾಗಿದ್ದ ಹರ್ಷವರ್ಧನ್​ ಸಿವಿಲ್ ಇಂಜಿನಿಯರಿಂಗ್ ಪದವಿಧರರಾಗಿದ್ದರು. ಸರ್ಕಾರಿ ಕೆಲಸಕ್ಕೂ ಸೇರಿಕೊಂಡಿದ್ದರು. ಆದರೆ, ಜೀವನದ ಗುರಿ ಬೇರೆಯೇ ಆಗಿತ್ತು. 2022ರಲ್ಲಿ ಮೊದಲ ಯತ್ನದಲ್ಲೇ ಯುಪಿಎಸ್​​​ಸಿಯಲ್ಲಿ 153ನೇ ರ‍್ಯಾಂಕ್ ಪಡೆದಿದ್ದರು.  ​

ಹರ್ಷವರ್ಧನ್​ ಅವರು ಇಲಾಖಾ ತರಬೇತಿ ಮುಗಿಸಿ ನಾಲ್ಕು ವಾರ ಮೈಸೂರಿನ ಪೊಲಿಸ್ ಅಕಾಡೆಮಿಯಲ್ಲಿ ಟ್ರೈನಿಂಗ್ ಮುಗಿಸಿದ್ದರು. ನಂತರ, ಅವರು ಹಾಸನ ಜಿಲ್ಲೆಗೆ ಡಿವೈಎಸ್​ಪಿಯಾಗಿ ನಿಯೋಜನೆಗೊಂಡಿದ್ದರು. ಹೀಗಾಗಿ ಹಾಸನ ಜಿಲ್ಲಾ ಎಸ್​ಪಿ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ಪೊಲೀಸ್ ಇಲಾಖೆಯ ಜೀಪ್​​ ಹತ್ತಿ ಮೈಸೂರಿನಿಂದ ಹಾಸನದತ್ತ ಬರುತ್ತಿದ್ದರು.

ಇದನ್ನೂ ಓದಿ: ತುಮಕೂರು ರಸ್ತೆ ಅಪಘಾತ: 3 ಮಹಿಳೆಯರು ಸಾವು, 20 ಮಂದಿಗೆ ಗಾಯ

ಹಾಸನ ತಾಲ್ಲೂಕಿನ ಹಾಸನ ಮೈಸೂರು ರಸ್ತೆಯ ರಾಷ್ಟ್ರಿಯ ಹೆದ್ದಾರಿ 373ರ ಕಿತ್ತಾನೆಗಡಿ ಬಳಿ ಅತಿಯಾದ ವೇಗದಲ್ಲಿ ಬರುತ್ತಿದ್ದ ಜೀಪ್ ಸಂಜೆ 4:15ಕ್ಕೆ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಇಳಿದಿದ್ದು, ನಂತರ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದು, ಪಲ್ಟಿಯಾಗಿದೆ. ಅಪಘಾತದಲ್ಲಿ ಹರ್ಷವರ್ಧನ್​ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೆ ಸ್ಥಳೀಯರು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ತೀವ್ರ ರಕ್ತಸ್ರಾವಾಗಿದ್ದರಿಂದ ಮತ್ತು ತಲೆಗೆ ಗಂಭಿರ ಗಾಯವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

ಹರ್ಷವರ್ಧನ್ ಅವರ ಸಾವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವಿಟರ್ ಮೂಲಕ ಸಂತಾಪ ಸೂಚಿಸಿದ್ದಾರೆ. “ಅಪಘಾತದಲ್ಲಿ ಹರ್ಷವರ್ಧನ್ ನಿಧನರಾದ ವಿಷಯ ತಿಳಿದು ದುಃಖವಾಯಿತು, ಅಧಿಕಾರ ಸ್ವೀಕರಿಸಲು ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ವರ್ಷಗಳ‌ ಕಠಿಣ ಪರಿಶ್ರಮ ಫಲ ನೀಡುವ ಹೊತ್ತಲ್ಲಿ ಹೀಗಾಗಬಾರದಿತ್ತು. ಹರ್ಷವರ್ಧನ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸ್ತೇನೆ ಎಂದುಸಂತಾಪ ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:26 am, Mon, 2 December 24