ತುಮಕೂರು ರಸ್ತೆ ಅಪಘಾತ: 3 ಮಹಿಳೆಯರು ಸಾವು, 20 ಮಂದಿಗೆ ಗಾಯ

ತುಮಕೂರಿನ ಶಿರಾ ತಾಲೂಕಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬಸ್ ಪಲ್ಟಿಯಾಗಿ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ ಮತ್ತು 20 ಜನ ಗಾಯಗೊಂಡಿದ್ದಾರೆ. ಹಾಸನದಲ್ಲಿ ಪ್ರತ್ಯೇಕ ಘಟನೆಯಲ್ಲಿ, ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಎರಡೂ ಘಟನೆಗಳು ದೊಡ್ಡ ಪ್ರಮಾಣದ ಸಾವು ನೋವುಗಳಿಗೆ ಕಾರಣವಾಗಿವೆ.

ತುಮಕೂರು ರಸ್ತೆ ಅಪಘಾತ: 3 ಮಹಿಳೆಯರು ಸಾವು, 20 ಮಂದಿಗೆ ಗಾಯ
ಅಪಘಾತ
Follow us
ಮಹೇಶ್ ಇ, ಭೂಮನಹಳ್ಳಿ
| Updated By: ವಿವೇಕ ಬಿರಾದಾರ

Updated on:Dec 02, 2024 | 8:02 AM

ತುಮಕೂರು, ಡಿಸೆಂಬರ್​ 02: ತುಮಕೂರು (Tumakur) ಜಿಲ್ಲೆಯ ಶಿರಾ (Sira) ತಾಲೂಕಿನ ಚಿಕ್ಕನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ (NH 48) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ. 20 ಜನರಿಗೆ ಗಾಯವಾಗಿದ್ದು, ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಗಿನ ಜಾವ ಗೋವಾದಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಖಾಸಗಿ ಬಸ್​ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ನಂತರ ಬಸ್ ಪಲ್ಟಿಯಾಗಿದೆ. ಪರಿಣಾಮ ಬಸ್​ನಲ್ಲಿದ್ದ ಮೂವರು ಮಹಿಳಾ ಪ್ರಯಾಣಿಕರು ಮೃತಪಟ್ಟಿದ್ದಾರೆ. 20 ಜನ ಪ್ರಯಾಣಿಕರಿಗೆ ಗಾಯವಾಗಿದೆ. ಬಸ್​ನಲ್ಲಿ ಒಟ್ಟು 29 ಮಂದಿ ಪ್ರಯಾಣಿಸುತ್ತಿದ್ದರು. ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ರಾಮನಗರ: ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್ ವೇಯಲ್ಲಿ ಭೀಕರ ಅಪಘಾತ, ಮೂವರು ಸಾವು

ಅಪಘಾತದಲ್ಲಿ ಗಾಯಗೊಂಡಿದ್ದ IPS ಅಧಿಕಾರಿ ಸಾವು

ಅಪಘಾತದಲ್ಲಿ ಗಾಯಗೊಂಡಿದ್ದ IPS ಅಧಿಕಾರಿ ಹರ್ಷಬರ್ಧನ್ ಮೃತಪಟ್ಟಿದ್ದಾರೆ. ಹಾಸನ ತಾಲೂಕಿನ ಕಿತ್ತಾನೆಗಡಿ ಗ್ರಾಮದ ಬಳಿ ಪೊಲೀಸ್ ಜೀಪ್‌ ಪಲ್ಟಿಯಾಗಿತ್ತು. ರಕ್ತಸ್ರಾವದಿಂದ ಹರ್ಷಬರ್ಧನ್ ರವಿವಾರ (ಡಿಸೆಂಬರ್​ 01) ರಾತ್ರಿ 9.30ರ ವೇಳೆಗೆ ಕೊನೆಯುಸಿರೆಳೆದಿದ್ದಾರೆ.

ಐಪಿಎಸ್ ಅಧಿಕಾರಿ ಹರ್ಷಬರ್ಧನ್ (26 ವರ್ಷ) ಮೂಲತಃ ಬಿಹಾರದವರು. ಓದಿದ್ದು ಸಿವಿಲ್ ಇಂಜಿನಿಯರಿಂಗ್. 2022ರಲ್ಲಿ ಮೊದಲ ಯತ್ನದಲ್ಲೇ ಯುಪಿಎಸ್​​​ಸಿಯಲ್ಲಿ 153ನೇ ರ‍್ಯಾಂಕ್ ಪಡೆದು, ಐಪಿಎಸ್​ಗೆ ಆಯ್ಕೆಯಾದರು.​ ತರಬೇತಿ ಹಂತದಲ್ಲಿದ್ದ ಹರ್ಷಬರ್ಧನ್​​ ಅವರು ಹೈದ್ರಾಬಾದ್​​​​ನಲ್ಲಿ ಟ್ರೈನಿಂಗ್ ಮುಗಿಸಿ, ಮೈಸೂರಿನ ಪೊಲೀಸ್ ತರಬೇತಿ ಕೇಂದ್ರದಲ್ಲಿ ನಾಲ್ಕು ವಾರಗಳ ತರಬೇತಿಗೆ ಆಗಮಿಸಿದ್ದರು.

ರವಿವಾರ ಹಾಸನದಲ್ಲಿ ಪ್ರಾಕ್ಟಿಕಲ್ ಟ್ರೈನಿಂಗ್​​ಗಾಗಿ ತೆರಳುತ್ತಿದ್ದರು. ಆದರೆ, ಹಾಸನ ಬಳಿಯ ರಾಷ್ಟ್ರೀಯ ಹೆದ್ದಾರಿ ಕಿತ್ತಾನೆಗಡಿ ಬಳಿ ಭೀಕರ ಅಪಘಾತ ಸಂಭವಿಸಿದೆ. ವೇಗದಲ್ಲಿದ್ದ ಜೀಪ್ ಮೂರು ಬಾರಿ ಪಲ್ಟಿಯಾಗಿದೆ. ನಂತರ ತೆಂಗಿನ ಮರಕ್ಕೆ ಅಪ್ಪಳಿಸಿದೆ. ತಕ್ಷಣವೇ ಓಡಿಬಂದ ಗ್ರಾಮಸ್ಥರು ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಕೊನೆಯುಸಿರೆಳೆದಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ದಕ್ಷಿಣ ವಲಯ ಐಜಿಪಿ ಹಾಗೂ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ದೌಡಾಯಿಸಿದರು. ಪೊಲೀಸ್ ಜೀಪ್ ಚಾಲಕ ಮಂಜೇಗೌಡ ಕೂಡ ಗಾಯಗೊಂಡಿದ್ದು, ಆತನ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:02 am, Mon, 2 December 24