ಮುಂದಿನ ವಾರದಿಂದ ಪದವಿ ತರಗತಿಗಳು ಆರಂಭ: ಶಿಕ್ಷಣ ಸಚಿವ ಬಿಸಿ ನಾಗೇಶ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 13, 2022 | 3:22 PM

ದೇಶದಲ್ಲಿ ಗೊಂದಲ ಸೃಷ್ಟಿಸಲು ಹಲವರು ಯತ್ನಿಸುತ್ತಿದ್ದಾರೆ. ಕೊವಿಡ್ ಲಸಿಕೆ ಬಗ್ಗೆಯೂ ಗೊಂದಲ ಸೃಷ್ಟಿ ಮಾಡಿದ್ದರು. ಮಕ್ಕಳಲ್ಲಿ ನನ್ನ ದೇಶ ಎಂಬ ಮನೋಭಾವನೆ ಬೆಳೆಯಬೇಕು ಎಂದು ಬಿ.ಸಿ.ನಾಗೇಶ್ ಹೇಳಿದರು.

ಮುಂದಿನ ವಾರದಿಂದ ಪದವಿ ತರಗತಿಗಳು ಆರಂಭ: ಶಿಕ್ಷಣ ಸಚಿವ ಬಿಸಿ ನಾಗೇಶ್
ಶಿಕ್ಷಣ ಸಚಿವ ಬಿ ಸಿ ನಾಗೇಶ್
Follow us on

ಹಾಸನ: ಕರ್ನಾಟಕದಲ್ಲಿ ಸೋಮವಾರದಿಂದ (ಫೆ.14) ಪ್ರೌಢಶಾಲೆಗಳ 9 ಮತ್ತು 10ನೇ ತರಗತಿಗಳು ಆರಂಭವಾಗಲಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಪಿಯು ಮತ್ತು ಪದವಿ ಕಾಲೇಜುಗಳನ್ನು ಆರಂಭಿಸುವ ಬಗ್ಗೆ ನಿರ್ಧಾರ ಮಾಡಲಾಗುವುದು. ಬಹುತೇಕ ಮುಂದಿನ ವಾರದಿಂದ ಪದವಿ ತರಗತಿಗಳು ಆರಂಭವಾಗಲಿವೆ ಎಂದು ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh) ಹೇಳಿದರು. ದೇಶದಲ್ಲಿ ಗೊಂದಲ ಸೃಷ್ಟಿಸಲು ಹಲವರು ಯತ್ನಿಸುತ್ತಿದ್ದಾರೆ. ಕೊವಿಡ್ ಲಸಿಕೆ ಬಗ್ಗೆಯೂ ಗೊಂದಲ ಸೃಷ್ಟಿ ಮಾಡಿದ್ದರು. ಮಕ್ಕಳಲ್ಲಿ ನನ್ನ ದೇಶ ಎಂಬ ಮನೋಭಾವನೆ ಬೆಳೆಯಬೇಕು. ಡಿ.28ರವರೆಗೆ ವಿದ್ಯಾರ್ಥಿನಿಯರು ಸಮವಸ್ತ್ರದಲ್ಲಿ ಬರುತ್ತಿದ್ದರು. ಬಳಿಕ ಸಮವಸ್ತ್ರದ ಜತೆ ಹಿಜಾಬ್ ಧರಿಸಿ ಬರುವುದಾಗಿ ಹಟ ಹಿಡಿದರು. ಆ ವಿದ್ಯಾರ್ಥಿನಿಯರು ಯಾಕೆ ಹಾಗೆ ವರ್ತಿಸಿದರೆಂದು ಗೊತ್ತಿಲ್ಲ. ಒಂದು ಶಾಲೆಯ 6 ವಿದ್ಯಾರ್ಥಿಗಳ ಸಮಸ್ಯೆಯನ್ನು ಈಗ ಅಂತಾರಾಷ್ಟ್ರೀಯ ಸಮಸ್ಯೆ ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಈಗಾಗಲೇ ವಿಶ್ವದ ಹಲವು ದೇಶಗಳಲ್ಲಿ ಹಿಜಾಬ್, ಬುರ್ಖಾ ನಿಷೇಧ ಆಗಿದೆ. ಇಟಲಿಯಲ್ಲಿ ಬ್ಯಾನ್ ಆದಾಗ ಯಾರಿಗೂ ಸಮಸ್ಯೆ ಇರಲಿಲ್ಲ. ಫ್ರಾನ್ಸ್, ಜರ್ಮನ್, ರಷ್ಯಾದಲ್ಲಿ ಆದಾಗಲೂ ಸಮಸ್ಯೆ ಆಗಿಲ್ಲ. ಹಲವು ಮುಸ್ಲಿಂ ದೇಶಗಳಲ್ಲೂ ಹಿಜಾಬ್, ಬುರ್ಖಾ ನಿಷೇಧವಾಗಿದೆ. ನಮ್ಮಲ್ಲಿ ಬುರ್ಖಾ-ಹಿಜಾಬ್ ಧರಿಸುವ ಕುರಿತು ಚರ್ಚೆಯೇ ಆಗಿಲ್ಲ. ಮಕ್ಕಳು ಸಮವಸ್ತ್ರದಲ್ಲಿ ಶಾಲೆಗೆ ಬರಬೇಕೆಂದು ಹೇಳಿದ್ದೇವೆ ಅಷ್ಟೇ. ಸಮವಸ್ತ್ರ ವಿಚಾರದಲ್ಲಿ ಹೈಕೋರ್ಟ್ ನೀಡಿರುವ ಆದೇಶಕ್ಕೆ ಸರ್ಕಾರ ಬದ್ಧವಾಗಿರುತ್ತದೆ. ವಿನಾಕಾರಣ ಸಮಸ್ಯೆಯನ್ನು ಹುಟ್ಟಿಸಿದ್ದರಿಂದ ಹಾಗೂ ಅನಗತ್ಯವಾಗಿ ಒಂದು ರಾಜಕೀಯ ಪಕ್ಷ ಭಾಗಿಯಾಗಿದ್ದರಿಂದ ಮನಸುಗಳು ಸರಿಯಾಗಲಿ ಎಂದು ಶಾಲೆಗಳಿಗೆ ರಜೆ ನೀಡಿದ್ದೆವು ಎಂದರು.

ಹಿಜಾಬ್ ವಿವಾದದ ಹಿಂದೆ ಯಾರಿದ್ದಾರೆಂದು ತನಿಖೆ ನಡೆಸಲಾಗುವುದು. ಸಮಗ್ರ ತನಿಖೆಯ ನಂತರವಷ್ಟೇ ಸತ್ಯಾಂಶ ಬಯಲಾಗಲಿದೆ. ಏಕಾಏಕಿ ಹಿಜಾಬ್ ವಿವಾದ ಹೇಗೆ ಸೃಷ್ಟಿಯಾಯಿತು? ಯಾವ ವಿದ್ಯಾರ್ಥಿನಿಯರು ಇಂಥ ವಿಚಾರಗಳನ್ನು ರಿಟ್ವೀಟ್ ಮಾಡುತ್ತಿದ್ದಾರೆ ಎಂಬ ಅಂಶಗಳ ಬಗ್ಗೆಯೂ ತನಿಖೆ ನಡೆಯಲಿದೆ. ಗೃಹ ಇಲಾಖೆ ಇದನ್ನ ತನಿಖೆ ಮಾಡುತ್ತಿದೆ. ಹಿಜಾಬ್ ವಿವಾದವನ್ನು ದೇಶದಾದ್ಯಂತ ಹರಡಿಸಲು ಪಾಕಿಸ್ತಾನದ ಐಎಸ್ಐ ಪ್ರಯತ್ನ ಮಾಡಿದೆ ಎಂಬ ಮಾತುಗಳ ಕುರಿತು ಪ್ರತಿಕ್ರಿಯಿಸಿದ ಅವರು, ಮೋದಿಯವರ ಸರ್ಕಾರ ಬಂದ ಬಳಿಕ ಪಾಕಿಸ್ತಾನದ ಎಲ್ಲಾ ಪ್ರಯತ್ನ ಏನಾಗಿದೆ ಎಂದು ಗೊತ್ತಿದೆ. ಜಮ್ಮುವನ್ನು ದಾಟಿ ಒಂದೇ ಒಂದು ಬಾಂಬ್ ಸಿಡಿಸಲು ಆಗಿಲ್ಲ. ಅದಕ್ಕಿಂತ ಮುಂಚೆ ಹೇಗೆ ಬಾಂಬೆ, ಟಾಟಾ ಸಂಸ್ಥೆಯಲ್ಲಿ ಬಾಂಬ್ ಬ್ಲಾಸ್ಟ್ ಆಯ್ತು ಇದೆಲ್ಲವನ್ನು ನೋಡಿದ್ದೇವೆ. ಮೋದಿ ಸರ್ಕಾರ ಬಂದ ಬಳಿಕ ಭಯೋತ್ಪಾದಕತೆ ಕಡಿಮೆ ಆಗಿದೆ. ಜಗತ್ತಿನಲ್ಲಿ ಭಾರತಕ್ಕೆ ಸಿಗುತ್ತಿರೊ ಬೆಲೆ ತಡೆಯಲಾಗದ ಪಾಕಿಸ್ತಾನ ಇನ್ನೇನು ತಾನೆ ಮಾಡಲು ಸಾಧ್ಯ. ಭಾರತವು ಈ ಸವಾಲನ್ನು ಒಂದಾಗಿ ಎದುರಿಸಲಿದೆ ಎಂದರು.

ಬಿಸಿ ನಾಗೇಶ್ ಕಾಲೇಳೆದ ಶಿವಲಿಂಗೇಗೌಡ

ಕಾರ್ಯಕ್ರಮದಲ್ಲಿ ಮಾತನಾಡುವಾಗ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಮತ್ತು ಸಚಿವ ಬಿ.ಸಿ.ನಾಗೇಶ್ ಪರಸ್ಪರರ ಕಾಲೆಳೆದರು. ಅವರದೇ ಮುಖ್ಯ, ಅವರನ್ನೇ ಮೊದಲು ಮಾತನಾಡಿಸಿ ಶಿವಲಿಂಗೇಗೌಡ ಬಿ.ಸಿ.ನಾಗೇಶ್ ಕಡೆ ಕೈತೋರಿಸಿದರು. ಆಗ ಹುಟ್ಟುಹಾಕಿದ ಸಮಸ್ಯೆ ಈಗ ಭೂತಾಕಾರವಾಗಿ ಬೆಳೆದಿದೆ ಎಂದು ಸಚಿವರು ಹೇಳಿದರು. ಸಮಸ್ಯೆಯನ್ನು ಯಾರು ಹುಟ್ಟುಹಾಕಿದ್ದು ನೀವೋ-ನಾವೋ ಮುಂದೆ ನೋಡೋಣ ಎಂದು ಶಾಸಕರು ತಿಳಿಸಿದರು. ಮಾತನಾಡುವಾಗ ಇಬ್ಬರೂ ಪರಸ್ಪರರ ಕಾಲೆಳೆದರು.

ಮೆಚ್ಚುಗೆಯ ಮಾತನಾಡಿದ ಬಿಎಸ್​ವೈ

ವಿಧಾನಸಭೆಯಲ್ಲಿ ಶಾಸಕ ಶಿವಲಿಂಗೇಗೌಡ ಯಾವುದೇ ವಿಚಾರ ಪ್ರಸ್ತಾಪ ಮಾಡಿದರೂ ಎಲ್ಲರ ಗಮನ ಸೆಳೆಯುತ್ತಾರೆ. ರಾಜ್ಯದ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಎಲ್ಲರ ಗಮನ ಸೆಳೆಯುವಂತೆ ಮಾತನಾಡುತ್ತಾರೆ ಎಂದು ಮೆಚ್ಚುಗೆ ಮಾತುಗಳನ್ನು ಆಡಿದರು.

ತಾರತಮ್ಯ ಮಾಡದ ಯಡಿಯೂರಪ್ಪ

ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ನನ್ನನ್ನು ಗೌರವಯುತವಾಗಿ ನಡೆಸಿಕೊಂಡರು. ನನ್ನ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿ ಸಹಕರಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಎಚ್​.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ನೀಡಿದ ಅನುದಾನದ ಮಾದರಿ ಯಡಿಯೂರಪ್ಪ ಅವಧಿಯಲ್ಲಿಯೂ ಮುಂದುವರಿಯಿತು. ನಾನು ಬೇರೆ ಪಕ್ಷದಲ್ಲಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿದ್ದಾರೆ ಎಂದು ಶಾಸಕ ಶಿವಲಿಂಗೇಗೌಡ ನೆನಪಿಸಿಕೊಂಡರು.

ಇದನ್ನೂ ಓದಿ: ಶಾಲೆಗಳ ಅಭಿವೃದ್ಧಿಗಾಗಿ ಆ್ಯಪ್ ರೂಪಿಸಲು ಚಿಂತನೆ: ಶಿಕ್ಷಣ ಸಚಿವ ಬಿಸಿ ನಾಗೇಶ್

ಇದನ್ನೂ ಓದಿ: ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಬಗ್ಗೆ ಚರ್ಚೆ ಆಗಿಲ್ಲ; ಅಂಜಲಿ ನಿಂಬಾಳ್ಕರ್, ಯತ್ನಾಳ್, ಶಿವಲಿಂಗೇಗೌಡ ಬೇಸರ