ಹಾಸನ, ಮಾರ್ಚ್ 01: ಇಂದಿನಿಂದ ದ್ವೀತಿಯ ಪಿಯುಸಿ ಪರೀಕ್ಷೆಗಳು (2nd PUC Exam) ಆರಂಭವಾಗಿದ್ದು, ಪರೀಕ್ಷಾ ಕೇಂದ್ರಗಳಿಗೆ (Exam Center) ತೆರಳಲು ಸರ್ಕಾರಿ ಬಸ್ಗಳಿಲ್ಲದೆ (Government Bus) ಹಾಸನ (Hassan) ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳು (Students) ಪರದಾಡಿದರು. ಹೌದು ಹಾಸನದಲ್ಲಿ ಇಂದು (ಮಾ.01) ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಲಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಿಗ್ಗೆ 11 ಗಂಟೆಗೆ ಹಾಸನಕ್ಕೆ ತೆರಳಲಿದ್ದಾರೆ. ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಜನರನ್ನು ಕರೆತರಲು ಕೆಎಸ್ಆರ್ಟಿಸಿಯ 700 ಬಸ್ಗಳನ್ನು ಬಳಸಲಾಗುತ್ತಿದೆ. ಇದರಿಂದ ಹಾಸನ ನಗರ ಮತ್ತು ವಿವಿಧ ಗ್ರಾಮಗಳಿಗೆ ಬಸ್ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ಬಸ್ ಇಲ್ಲದೆ ದ್ವಿತೀಯ ಪಿಯುಸಿ ಮತ್ತು ಪದವಿ ಪರೀಕ್ಷೆ ಬರೆಯಲು ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು, ಪರೀಕ್ಷಾರ್ಥಿಗಳು ಪರದಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಿಗ್ಗೆ 11 ಗಂಟೆಗೆ ಹೆಲಿಕ್ಯಾಪ್ಟರ್ ಮೂಲಕ ಬೂವನಹಳ್ಳಿ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ನಂತರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಹಾಸನ ನಗರ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ 1344 ಕೋಟಿ ರೂ. ವೆಚ್ಚದ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಇದರ ಜೊತೆಗೆ 2022-23 ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ಹಾಸನ ನಗರಸಭೆ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮಾಡಲಿದ್ದಾರೆ. ಬಳಿಕ ಗ್ಯಾರೆಂಟಿ ಯೋಜೆನಗಳ ಫಲಾನುಭವಿಗಳ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಮಧ್ಯಾಹ್ನ 2 ಗಂಟೆಗೆ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ತೆರಳಲಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಸಮಾವೇಶಕ್ಕೆ ಸಾರಿಗೆ ಬಸ್ ಬಳಕೆ; ಬಸ್ಗಳಿಲ್ಲದೆ ಪರೀಕ್ಷೆಗೆ ಹೋಗಲು ದ್ವಿತೀಯ ಪಿಯು ವಿದ್ಯಾರ್ಥಿಗಳ ಪರದಾಟ
ಈ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ, ನಗರಾಭಿವೃದ್ಧಿ ಸಚಿವ ಸುರೇಶ್ ಬಿ.ಎಸ್ ಭಾಗಿಯಾಗಲಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಸಚಿವರು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಸಾಕಷ್ಟು ಹರಸಾಹಸ ಪಟ್ಟು ಜಾರಿಗೆ ತಂದಿದೆ. ಈ ಗ್ಯಾರಂಟಿಗಳನ್ನೇ ಮುಂದಿಟ್ಟುಕೊಂಡು ಲೋಕಸಭೆ ಚುನಾವಣೆ ಎದುರಿಸಲು ನಿರ್ಧರಿಸಿದೆ. ಹೀಗಾಗಿ ಪ್ರತಿ ಜಿಲ್ಲೆಗಳಲ್ಲೂ ಗ್ಯಾರಂಟಿ ಸಮಾವೇಶಗಳನ್ನು ಮಾಡುವ ಮೂಲಕ ಜನರ ಮನದಲ್ಲಿ ಗ್ಯಾರಂಟಿ ಯೋಜನೆಗಳನ್ನು ಅಚ್ಚೊತ್ತಿದೆ. ಈ ಮೂಲಕ ಮತಗಳನ್ನು ಗಟ್ಟಿ ಮಾಡಿಕೊಳ್ಳುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:34 am, Fri, 1 March 24