ಹಾಸನಾಂಬೆ ಹುಂಡಿ ಎಣಿಕೆ: 9 ದಿನದಲ್ಲಿ 12.63 ಕೋಟಿ ರೂ. ಹಣ, 51 ಗ್ರಾಂ ಚಿನ್ನ

| Updated By: ರಮೇಶ್ ಬಿ. ಜವಳಗೇರಾ

Updated on: Nov 04, 2024 | 5:14 PM

ಹಾಸನಾಂಬೆ.. ಹಾಸನದ ಶಕ್ತಿದೇವತೆ.. ವರ್ಷಕ್ಕೆ ಒಮ್ಮೆ ಮಾತ್ರವೇ ದರ್ಶನ ನೀಡೋ ಜಗನ್ಮಾತೆಯ ದರ್ಶನೋತ್ಸವ ನಿನ್ನೆ(ನವೆಂಬರ್ 03) ಸಂಪನ್ನಗೊಂಡಿದೆ. ಅಕ್ಟೋಬರ್ 24 ರಂದು ಶುರುವಾಗಿದ್ದ ಹಾಸನಾಂಬೆ ದರ್ಶನೋತ್ಸವಕ್ಕೆ ನಿನ್ನೆ ವಿದ್ಯುಕ್ತ ತೆರೆ ಬಿದ್ದಿದೆ. ಒಟ್ಟು 11 ದಿನ ನಡೆದ ಜಾತ್ರೋತ್ಸವದಲ್ಲಿ 9 ದಿನ ಮಾತ್ರ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದ್ದು, ದಾಖಲೆಯ ಒಟ್ಟು 20 ಲಕ್ಷದ 40 ಸಾವಿರ ಭಕ್ತರು ಹಾಸನಾಂಬೆ ದೇವಿ ದರ್ಶನ ಪಡೆದುಕೊಂಡು ಪುನೀತರಾಗಿದ್ದಾರೆ. ಇನ್ನು ದೇವಿಗೆ 51 ಗ್ರಾಂ ಚಿನ್ನ, 913 ಗ್ರಾಂ ಬೆಳ್ಳಿ ಕಾಣಿಕೆ ಬಂದಿದೆ. ಹಾಗಾದ್ರೆ, 2024ರ ಹಾಸನಾಂಬೆ ದರ್ಶನೋತ್ಸವದಿಂದ ಎಷ್ಟು ಆದಾಯ ಬಂದಿದೆ ಎನ್ನುವ ವಿವರ ಇಲ್ಲಿದೆ.

ಹಾಸನಾಂಬೆ ಹುಂಡಿ ಎಣಿಕೆ: 9 ದಿನದಲ್ಲಿ 12.63 ಕೋಟಿ ರೂ. ಹಣ, 51 ಗ್ರಾಂ ಚಿನ್ನ
ಹಾಸನಾಂಬೆ
Follow us on

ಹಾಸನ, (ನವೆಂಬರ್ 04): ಹಾಸನದ ಹಾಸನಾಂಬೆ ದೇವಿ ಉತ್ಸವ ನಿನ್ನೆ(ನವೆಂಬರ್ 03) ಸಂಪನ್ನಗೊಂಡಿದೆ. 11 ದಿನಗಳ ಉತ್ಸವದಲ್ಲಿ 9 ದಿನಗಳ ಕಾಲ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಬರೋಬ್ಬರಿ 20 ಲಕ್ಷದ 40 ಸಾವಿರ ಭಕ್ತರು ಹಾಸನಾಂಬೆ ದೇವಿ ದರ್ಶನ ಪಡೆದುಕೊಂಡಿದ್ದಾರೆ. ಕಳೆದ ವರ್ಷ 14 ಲಕ್ಷ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದರು. ಈ ವರ್ಷ ಶಕ್ತಿ ಯೋಜನೆಯ ಎಫೆಕ್ಟ್​ನಿಂದಾಗಿ 20 ಲಕ್ಷದ 40 ಸಾವಿರ ಭಕ್ತರು ಜಗನ್ಮಾತೆಯ ದರ್ಶನ ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ. ಹುಂಡಿ ಹಣ ಬಿಟ್ಟು ಕೇವಲ ಟಿಕೆಟ್ ಹಾಗೂ ಲಡ್ಡು ಪ್ರಸಾದ ಮಾರಾಟದಿಂದ 9.69 ಕೋಟಿಯಷ್ಟು ಆದಾಯ ಸಂಗ್ರಹವಾಗಿದ್ದರೆ, ಹುಂಡಿ ಕಾಣಿಕೆಯನ್ನು ಸೇರಿಸಿದರೆ 12,63,83,808 ಆದಾಯ ಸಂಗ್ರಹವಾಗಿದೆ. ಇಷ್ಟೊಂದು ಪ್ರಮಾಣದ ಆದಾಯ ಹಾಸನಾಂಬೆ ದರ್ಶನದ ಇತಿಹಾಸದಲ್ಲೇ ದಾಖಲೆಯಾಗಿದೆ.

ಇಂದು (ನವೆಂಬರ್ 04) 500 ಜನರಿಂದ 7 ಗಂಟೆಗಳ ಕಾಲ ಹಾಸನಾಂಬೆ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಒಟ್ಟು 9 ದಿನಗಳ ಕಾಲ ಹಾಸನಾಂಬೆ ದರ್ಶನ ವೇಳೆ 12,63,83,808 ರೂ. ಕಾಣಿಕೆ ಸಂಗ್ರವಾಗಿದೆ. ಇನ್ನು 1000, 300 ಟಿಕೆಟ್, ಲಡ್ಡು ಪ್ರಸಾದ ಮಾರಾಟದಿಂದ 9,67,27,180 ರೂಪಾಯಿ ಹಾಗೂ ದೇವಸ್ಥಾನದ ಹುಂಡಿಯಲ್ಲಿ 2,55,97,567 ರೂ. ಸೇರಿಕೊಂಡು 2024ರ ಹಾಸನಾಂಬೆ ದರ್ಶನೋತ್ಸವದಿಂದ ಒಟ್ಟು 12,63,83,808 ರೂಪಾಯಿ ಆದಾಯ ಬಂದಿದೆ. ಇದರ ಜೊತೆಗೆ 51 ಗ್ರಾಂ ಚಿನ್ನ ಹಾಗೂ 913 ಗ್ರಾಂ ಬೆಳ್ಳಿ ಕಾಣಿಕೆಯಾಗಿದೆ ಬಂದಿದೆ. ಹಾಸನಾಂಬೆ ದರ್ಶನದ ಇತಿಹಾಸದಲ್ಲೇ ಹರಿದುಬಂದ ದಾಖಲೆಯ ಆದಾಯ ಇದಾಗಿದೆ.

ಇದನ್ನೂ ಓದಿ: ಹಾಸನದ ಹಾಸನಾಂಬೆ ದೇವಿ ಉತ್ಸವಕ್ಕೆ‌ ವಿಧ್ಯುಕ್ತ ತೆರೆ: ಗರ್ಭಗುಡಿ ಬಾಗಿಲು ಬಂದ್​

ಕಳೆದ ವರ್ಷಕ್ಕಿಂತ ಈ ವರ್ಷ ಅಧಿಕ ಭಕ್ತರು ಆಗಮಿಸಿದ್ದರಿಂದ ದರ್ಶನ ವ್ಯವಸ್ಥೆಯಲ್ಲಿ ಕೊಂಚ ಅಸ್ತವ್ಯಸ್ಥವಾಗಿದೆ. ಸರಿಯಾದ ವ್ಯವಸ್ಥೆ ಇಲ್ಲದೇ ದೇವಿ ದರ್ಶನಕ್ಕೆ ಬಂದಿದ್ದ ಭಕ್ತರು ಪರದಾಡಿದರು ಜಿಲ್ಲಾಡಳಿತ ವಿರುದ್ಧ ಆರೋಪಗಳು ಕೇಳಿಬರುತ್ತಲ್ಲೇ ವಿವಿಐಪಿ ಪಾಸ್​ಗಳನ್ನು ರದ್ದುಗೊಳಿಸಿ ಸುಗಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆಗ ಕೊಂಚ ಪರಿಸ್ಥಿತಿ ಸುಧಾರಣೆಯಾಯ್ತು.

ಈ ವರ್ಷದ ಹಾಸನಾಂಬೆಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗಿದೆ. ಮುಂದಿನ ವರ್ಷ ಅಕ್ಟೋಬರ್ 9ರಿಂದ 23ರವರೆಗೆ ಅಂದ್ರೆ 15 ದಿನಗಳ ಕಾಲ ಹಾಸನಾಂಬೆ ಉತ್ಸವಕ್ಕೆ ಮುಹೂರ್ತ ನಿಗದಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.