ಆಜಾನ್ ಅಭಿಯಾನದ ನಡುವೆ ತಲೆ ಎತ್ತಿದ ಮತ್ತೊಂದು ಅಭಿಯಾನ; ಮಾವಿನಹಣ್ಣಿನ ಮಾರ್ಕೆಟ್ ಹಿಂದೂಗಳದ್ದಾಗಬೇಕೆಂಬ ಕೂಗು

| Updated By: ಆಯೇಷಾ ಬಾನು

Updated on: Apr 05, 2022 | 11:29 AM

ಮಾವಿನಹಣ್ಣು ಹೋಲ್‌ಸೇಲ್ ಮಾರ್ಕೆಟ್ ಹಿಂದೂಗಳ‌ ಪಾಲಾಗಬೇಕೆಂದು ವ್ಯಾಟ್ಸಪ್ ಗ್ರೂಪ್‌ಗಳ ಮೂಲಕ ಹಿಂದು ಕಾರ್ಯಕರ್ತರು ಅಭಿಯಾನ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ಗಳು ವೈರಲ್ ಆಗುತ್ತಿವೆ.

ಆಜಾನ್ ಅಭಿಯಾನದ ನಡುವೆ ತಲೆ ಎತ್ತಿದ ಮತ್ತೊಂದು ಅಭಿಯಾನ; ಮಾವಿನಹಣ್ಣಿನ ಮಾರ್ಕೆಟ್ ಹಿಂದೂಗಳದ್ದಾಗಬೇಕೆಂಬ ಕೂಗು
ಆಜಾನ್ ಅಭಿಯಾನದ ನಡುವೆ ಹಾಸನದಲ್ಲಿ ತಲೆ ಎತ್ತಿದ ಮತ್ತೊಂದು ಅಭಿಯಾನ; ಮಾವಿನಹಣ್ಣಿನ ಮಾರ್ಕೆಟ್ ಹಿಂದೂಗಳದ್ದಾಗಬೇಕೆಂಬ ಕೂಗು
Follow us on

ಹಾಸನ: ರಾಜ್ಯದಲ್ಲಿ ಹಿಜಾಬ್ ವಿವಾದ, ಹಿಂದೂ ದೇವಾಲಯ, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಹಲಾಲ್-ಜಟ್ಕಾ ಕಟ್ ವಿವಾದ, ಆಜಾನ್ ವಿವಾದದ ಬಳಿಕ ಈಗ ಮತ್ತೊಂದು ಅಭಿಯಾನ ರಾಜ್ಯದಲ್ಲಿ ತಲೆಎತ್ತಿದೆ. ಮಾವಿನಹಣ್ಣಿನ ಸೀಜನ್ ಆರಂಭವಾಗುತ್ತಿರುವ ಹಿನ್ನೆಲೆ ಮಾವಿನಹಣ್ಣಿನ ಮಾರ್ಕೆಟ್ ಹಿಂದೂಗಳದ್ದಾಗಬೇಕು ಎಂದು ಹಾಸನ ಜಿಲ್ಲೆಯಲ್ಲಿ ವಾಟ್ಸಾಪ್ ಅಭಿಯಾನ ಶುರು ಮಾಡಲಾಗಿದೆ.

ಮಾವಿನಹಣ್ಣು ಹೋಲ್‌ಸೇಲ್ ಮಾರ್ಕೆಟ್ ಹಿಂದೂಗಳ‌ ಪಾಲಾಗಬೇಕೆಂದು ವ್ಯಾಟ್ಸಪ್ ಗ್ರೂಪ್‌ಗಳ ಮೂಲಕ ಹಿಂದು ಕಾರ್ಯಕರ್ತರು ಅಭಿಯಾನ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ಗಳು ವೈರಲ್ ಆಗುತ್ತಿವೆ. ಮಾವಿನಹಣ್ಣಿನ ಮಾರ್ಕೆಟ್ ನಮ್ಮದಾಗಬೇಕು. ಹಿಂದೂ ಯುವಕರೆ ಮುಂದೆ ಬನ್ನಿ ಎಂದು ವ್ಯಾಟ್ಸಪ್‌ಗಳಲ್ಲಿ ಪೋಸ್ಟ್ ಹರಿದಾಡುತ್ತಿದೆ. ಮಾವಿನ‌ಹಣ್ಣಿನ ಸೀಜನ್ ಆರಂಭದ ಹಿನ್ನೆಲೆಯಲ್ಲಿ ಹೊಸ ರೀತಿಯ ಅಭಿಯಾನ ಆರಂಭವಾಗಿದೆ.

ಕೋಲಾರದಲ್ಲೂ ಮಾವಿನಹಣ್ಣಿನ ಅಭಿಯಾನ
ಕೋಲಾರದಲ್ಲೂ ಮತ್ತೊಂದು ದಂಗಲ್ ಆರಂಭದ ಮುನ್ಸೂಚನೆ ಕಾಣಿಸುತ್ತಿದೆ. ಮಾವಿನ ನಗರಿ ಎಂದೇ ಖ್ಯಾತಿ ಪಡೆದಿರುವ ಶ್ರೀನಿವಾಸಪುರದಲ್ಲಿ ಹಿಂದೂಗಳೇ ಮಾವಿನಹಣ್ಣು ಮಾರ್ಕೆಟ್ ತೆರೆಯಲು ಚಿಂತನೆ ನಡೆಸಲಾಗುತ್ತಿದೆ. ಮಾವಿನ ಹಣ್ಣಿನ ಮಾರ್ಕೆಟ್ ಹಿಂದೂಗಳದ್ದಾಗಬೇಕೆಂದು ಸಂದೇಶ ರವಾನಿಸಲಾಗುತ್ತಿದ್ದು ಜಾಲತಾಣಗಳಲ್ಲಿ ಹಿಂದೂ ಕಾರ್ಯಕರ್ತ ಪೋಸ್ಟ್ ವೈರಲ್ ಆಗುತ್ತಿದೆ.

ಯಾವುದೇ ಕಾರಣಕ್ಕೂ ಮುಂದಿಟ್ಟ ಹೆಜ್ಜೆ ಹಿಂದೆ ತೆಗೆಯಲ್ಲ
ಇನ್ನು ಆಜಾನ್ ಅಭಿಯಾನದ ಬಗ್ಗೆ ಮಾತನಾಡಿರುವ ಹಿಂದೂ ಕನ್ನಡ ಸಂಘಟನೆಯ ಮುಖಂಡ ಭರತ್ ಶೆಟ್ಟಿ, ಹಿಂದೂಗಳು ಯಾವತ್ತೂ ಕಾನೂನು ಮೀರಿದವರಲ್ಲ. ಪೊಲೀಸರು ನಮ್ಮನ್ನ ಭೇಟಿ ಮಾಡಿ ಭರವಸೆ ಕೊಟ್ಟಿದ್ದಾರೆ. ನಿಮ್ಮ ಬೇಡಿಕೆ, ಸರ್ಕಾರದ ಆದೇಶವನ್ನ ಪಾಲಿಸುತ್ತೇವೆ. ಪೊಲೀಸರ ಮನವಿ ಮೇರೆಗೆ ಕಾಲಾವಕಾಶ ಕೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ.

ನಮ್ಮ ಕಾಳಿ ಕೂಗು ನಿಲ್ಲಬಾರದೆಂದು ಸಣ್ಣದಾಗಿ ಚಾಲನೆ ಮಾಡಿದ್ದೇವೆ. ನಮ್ಮ ಭರವಸೆ ಈಡೇರದಿದ್ದರೆ ಎಲ್ಲರ ಮನೆಯಲ್ಲಿ ಮೈಕ್ ಹಾಕಲಾಗುತ್ತೆ. ಕಾಳಿ ಕೂಗನ್ನ ಸ್ವಲ್ಪ ವಿಳಂಬ ಮಾಡಿದ್ದೇವೆ. ಪೊಲೀಸರು ಕಾಲಾವಕಾಶ ಕೇಳಿದ್ದಾರೆ, ನಾವು ಕೊಟ್ಟಿದ್ದೇವೆ. ಯಾವುದೇ ಕಾರಣಕ್ಕೂ ಮುಂದಿಟ್ಟ ಹೆಜ್ಜೆ ಹಿಂದೆ ತೆಗೆಯಲ್ಲ. ಅನಧಿಕೃತ ಧ್ವನಿವರ್ಧಕ ತೆರವು ಮಾಡಲು ಮುಂದಾಗಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಸೇಡು ತೀರಿಸಿಕೊಳ್ಳಲು ಎಂಟು ವರ್ಷದ ಬಾಲಕನನ್ನು ಅಪಹರಿಸಿ ಕೊಲೆ ಮಾಡಿದ 13 ವರ್ಷದ ದೆಹಲಿ ಹುಡುಗ

ಅಜಾನ್ ನಿರ್ಬಂಧಿಸಲು ಏಪ್ರಿಲ್ 13ರವರೆಗೆ ಕರ್ನಾಟಕ ಸರ್ಕಾರಕ್ಕೆ ಡೆಡ್​ಲೈನ್ ನೀಡಿದ ಪ್ರಮೋದ್ ಮುತಾಲಿಕ್

Published On - 11:12 am, Tue, 5 April 22