ಹಾಸನ: ಪ್ರವಾಸಕ್ಕೆ ತೆರಳುತ್ತಿದ್ದ ಯುವಕರ ಕಾರಿನಲ್ಲಿ ಗಾಂಜಾ ಪತ್ತೆಯಾಗಿರುವ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಅಂಕನಾಯಕಹಳ್ಳಿ ಬಳಿ ನಡೆದಿದೆ. ಬೆಂಗಳೂರಿನ ಕಿರಣ್, ಭಾರ್ಗವ, ವೆಂಕಟೇಶ್ ಎಂಬ ಮೂವರು ಯುವಕರು ಅರೆಸ್ಟ್ ಆಗಿದ್ದು ಅವರ ಬಳಿ ಇದ್ದ ಗಾಂಜಾ ಜಪ್ತಿ ಮಾಡಲಾಗಿದೆ.
ಅತಿ ವೇಗವಾಗಿ ಮನಬಂದಂತೆ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಮೂವರು ಯುವಕರನ್ನು ಪೊಲೀಸರು ತಡೆದು ಪರಿಶೀಲನೆಗೆ ಮುಂದಾಗಿದ್ದರು. ಆದ್ರೆ ಯಾವುದೋ ಮತ್ತಿನಲ್ಲಿದ್ದ ಯುವಕರು ಪೋಲೀಸರ ವಾಹನ ಪರಿಶೀಲನೆ ವೇಳೆಯೂ ವಾಹನ ನಿಲ್ಲಿಸದೆ ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಈ ವೇಳೆ ಅನುಮಾನ ಬಂದು ಪೊಲೀಸರು ಅವರ ಬೆನ್ನಟ್ಟಿ ಕಾರನ್ನು ನಿಲ್ಲಿಸಿದ್ದು ಕಾರು ತಪಾಸಣೆ ಮಾಡಿದಾಗ ಗಾಂಜಾ ಪತ್ತೆಯಾಗಿದೆ. ಯುವಕರ ರ್ಯಾಶ್ ಡ್ರೈವಿಂಗ್ನಿಂದ ಕೂದಲೆಳೆ ಅಂತರದಲ್ಲಿ ಪಾದಾಚಾರಿಗಳು ಪಾರಾಗಿದ್ದಾರೆ.
ಕಾರಿನಲ್ಲಿ 36 ಗ್ರಾಂ ನ ಒಂದು ಪ್ಯಾಕೇಟ್ ಗಾಂಜಾ ಪತ್ತೆಯಾಗಿದೆ. ಬಂಧಿತರು ಬೆಂಗಳೂರಿನ ಸುಂಕದಕಟ್ಟೆ ಮೂಲದವರು ಎಂದು ತಿಳಿದು ಬಂದಿದೆ. ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯ ಕಿಟಕಿ ಮುರಿದು ಚಿನ್ನಾಭರಣ, ನಗದು ಕಳವು
ಇನ್ನು ಮನೆಯ ಕಿಟಕಿ ಮುರಿದು ಚಿನ್ನಾಭರಣ, ನಗದು ಕಳವು ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗುಣಿಅಗ್ರಾಹಾರ ಗ್ರಾಮದ ಮಾರುತಿ ಎಂಬುವರ ಮನೆಯಲ್ಲಿ ನಡೆದಿದೆ. 100 ಗ್ರಾಂ ಚಿನ್ನ, 200 ಗ್ರಾಂ ಬೆಳ್ಳಿ, ₹50,000 ಕಳವಾಗಿದೆ. ಸಂಬಂಧಿಕರ ಮನೆಯಲ್ಲಿ ನಾಮಕರಣ ಕಾರ್ಯಕ್ರಮವಿತ್ತು ಎಂದು ಕುಟುಂಬಸ್ಥರು ಹೋಗಿದ್ದು ನಾಮಕರಣ ಮುಗಿಸಿ ಮನೆ ಬಳಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರಿನ ಸರಗಳ್ಳ ಅರೆಸ್ಟ್
ಬೆಂಗಳೂರು ನಗರದಲ್ಲಿ ಕುಖ್ಯಾತ ಸರಗಳ್ಳನ ಬಂಧನವಾಗಿದೆ. ಮೂರು ಬಾರಿ ಜೈಲಿಗೆ ಹೋಗಿ ಬಂದಿದ್ದು ಮತ್ತೆ ತನ್ನ ಹಳೇ ಕಸುಬನ್ನೇ ಮಾಡುತ್ತಿದ್ದ ಕಳ್ಳನನ್ನು ಬಂಧಿಸಲಾಗಿದೆ. ಮೈಸೂರು ಮೂಲದ ಸುಹೈಲ್(28) ಬಂಧಿತ ಆರೋಪಿ. ಬಂಧಿತನಿಂದ 19 ಲಕ್ಷ ಮೌಲ್ಯದ 338 ಗ್ರಾಂ ಚಿನ್ನಾಭರಣ, ಸರಗಳ್ಳತನಕ್ಕೆ ಬಳಸಿದ್ದ ಮೂರು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಬೆಂಗಳೂರಲ್ಲಿ 30ಕ್ಕಿಂತ ಹೆಚ್ಚು ಸರಗಳ್ಳತನ ಪ್ರಕರಣದಲ್ಲಿ ಆರೋಪಿ ಸುಹೈಲ್ ಭಾಗಿಯಾಗಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Viral News: ಗಾಂಜಾ ಎಣ್ಣೆ ಶ್ವಾಸಕೋಶದ ಕ್ಯಾನ್ಸರ್ ಗುಣಪಡಿಸಲು ಸಹಾಯಕವೇ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ
Published On - 9:11 am, Wed, 20 October 21