ಹಾವೇರಿ: ವೈದ್ಯೋ ನಾರಾಯಣೋ ಹರಿ ಎಂಬ ಮಾತಿದೆ. ಆದ್ರೆ ಇಲ್ಲೊಬ್ಬ ವೈದ್ಯ ಮಹಾಶಯ ಜೀವ ಉಳಿಸೋ ಬದಲು ತನ್ನ ಸಹಾಯಕನ ಜೊತೆ ಸೇರಿ ಸಂಬಂಧಿಕನನ್ನೆ ಹತ್ಯೆ(Murder) ಮಾಡಿದ್ದಾನೆ. ಕುಡಿತದ(Alcohol) ದಾಸನಾಗಿದ್ದ ಸಂಬಂಧಿಕನಿಗೆ ಮದ್ಯದಲ್ಲಿ ನಿದ್ರೆ ಮಾತ್ರೆ ಬೆರೆಸಿ ಪ್ರಜ್ಞೆ ತಪ್ಪಿಸಿ ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿದೆ. ಸದ್ಯ ಪೊಲೀಸರ ಕಾರ್ಯಾಚರಣೆಯಿಂದ ಸಹಾಯಕನ ಜೊತೆ ಸೇರಿ ಸಂಬಂಧಿಕನನ್ನೆ ಹತ್ಯೆ ಮಾಡಿದ ವೈದ್ಯ ಈಗ ಜೈಲು ಸೇರಿದ್ದಾನೆ.
ಜುಲೈ 28ರಂದು ಹಾವೇರಿ ತಾಲೂಕಿನ ಸೋಮನಕಟ್ಟಿ ಗ್ರಾಮದ ಬಳಿ ಇರುವ ಹಾವೇರಿ-ಗುತ್ತಲ ರಸ್ತೆ ಪಕ್ಕದಲ್ಲಿ ಯುವಕನೊಬ್ಬನ ಮೃತದೇಹ ಪತ್ತೆ ಆಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಮೃತನ ಬಳಿ ಸಿಕ್ಕ ಡ್ರೈವಿಂಗ ಲೈಸನ್ಸ್ ಆಧಾರದ ಮೇಲೆ ಮೃತನನ್ನು ಇಪ್ಪತ್ತಾರು ವರ್ಷದ ನವೀನ ರಾಠೋಡ ಅಂತಾ ಗುರ್ತಿಸಿದ್ರು. ನವೀನ ಮೂಲತಃ ಗದಗ ಜಿಲ್ಲೆಯವನಾದ್ರೂ ವಿಜಯನಗರ ಜಿಲ್ಲೆ ಹೂವಿನಹಡಗಲಿ ಪಟ್ಟಣದ ತಮ್ಮ ಚಿಕ್ಕಮ್ಮಳ ಮನೆಯಲ್ಲಿ ವಾಸವಾಗಿದ್ದ. ಮೃತನ ಗುರುತು ಪತ್ತೆ ಮಾಡಿದ್ದ ಗುತ್ತಲ ಠಾಣೆ ಪೊಲೀಸರು ಸ್ಥಳಕ್ಕೆ ಸಂಬಂಧಿಕರನ್ನು ಕರೆಯಿಸಿದ್ರು. ಸ್ಥಳಕ್ಕೆ ಬಂದಿದ್ದ ಮೃತನ ಸಂಬಂಧಿ ಡಾ.ಚಿರಂಜೀವಿ, ನವೀನ ಕುಡಿತ ಹಾಗೂ ಗಾಂಜಾ ಸೇದುತ್ತಿದ್ದ. ನವೀನ ಕೆಲವು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ಯಾವಾಗ ಮನೆಗೆ ಬರ್ತಾನೋ, ಎಲ್ಲಿ ಹೋಗ್ತಾನೋ ಅನ್ನೋದೆ ಗೊತ್ತಾಗೋದಿಲ್ಲ ಅಂತಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೃತದೇಹ ಕಂಡಿದ್ದ ಪೊಲೀಸರು ಕುತ್ತಿಗೆ ಸೇರಿದಂತೆ ದೇಹದ ಕೆಲವು ಭಾಗದಲ್ಲಿ ಕಂಡಿದ್ದ ಗಾಯಗಳಿಂದ ಇದೊಂದು ಕೊಲೆ ಅಂತಲೇ ಭಾವಿಸಿದ್ರು. ಮೃತದೇಹ ನೋಡಿದ್ದ ಮೃತನ ಸಂಬಂಧಿ ಡಾ.ಚಿರಂಜೀವಿ ನಗುತ್ತಲೆ ದುಃಖ ಆಗುತ್ತಿದೆ. ನವೀನ ಕುಡಿದು ಹೆದರಿಸೋದು ಮಾಡುತ್ತಿದ್ದ. ಗೆಳೆಯರ ಜೊತೆ ಓಡಾಡುತ್ತಿದ್ದ. ಯಾರಾದರೂ ಹೊಡೆದಿರಬಹುದು ಅಂತಾ ಹೇಳಿಕೆ ನೀಡಿದ್ದ.
ಕೊಲೆಯ ಹಿಂದೆ ವೈದ್ಯನ ಕೈವಾಡ
ಮೃತನ ಸಂಬಂಧಿಕರು ಬಂದು ಮೃತದೇಹ ನೋಡಿದ ಮೇಲೆ ಅದೊಂದು ಕೊಲೆ ಅಂತಾ ಸಂಬಂಧಿಕರೊಬ್ಬರು ನೀಡಿದ ದೂರಿನ ಮೇರೆಗೆ ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಪೊಲೀಸರು ಜಿಲ್ಲಾಸ್ಪತ್ರೆಗೆ ರವಾನಿಸಿದ್ದರು. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಮೃತ ನವೀನನ ಸಂಬಂಧಿಕರಿಗೆ ಹಸ್ತಾಂತರಿಸಿದ್ರು. ನಂತರ ತನಿಖೆಗೆ ಇಳಿದ ಹಾವೇರಿ ಗ್ರಾಮೀಣ ಠಾಣೆ ಸಿಪಿಐ ನಾಗಮ್ಮ ಮತ್ತು ಗುತ್ತಲ ಠಾಣೆ ಪಿಎಸ್ಐ ಜಗದೀಶ ನೇತೃತ್ವದ ಪೊಲೀಸರ ತಂಡ ಆರೋಪಿಗಳ ಪತ್ತೆಗಾಗಿ ಜಾಲ ಬೀಸಿತು. ಹತ್ಯೆಯಾದ ನವೀನ ಸಂಬಂಧಿ ಹಾಗೂ ಹತ್ಯೆ ನಡೆದಿದ್ದ ಸ್ಥಳಕ್ಕೆ ಬಂದು ಹೋಗಿದ್ದ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಆಗಿದ್ದ ವೈದ್ಯ ಡಾ.ಚಿರಂಜೀವಿಯನ್ನು ಪೊಲೀಸರು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ರು.
ಆಗ ವೈದ್ಯ ಡಾ.ಚಿರಂಜೀವಿ ಪೊಲೀಸರೆ ಒಂದು ಕ್ಷಣ ಆಶ್ಚರ್ಯ ಆಗುವಂತಾ ಹೇಳಿಕೆ ನೀಡಿದ್ದ. ಯಾಕಂದ್ರೆ ವೈದ್ಯ ಡಾ.ಚಿರಂಜೀವಿ ತಮ್ಮ ಸಂಬಂಧಿಯಾಗಿದ್ದ ನವೀನನನ್ನು ಆಸ್ಪತ್ರೆಯಲ್ಲಿ ತನಗೆ ಸಹಾಯಕನಾಗಿದ್ದ ಪ್ರಶಾಂತ ಲಮಾಣಿ ಎಂಬಾತನ ಜೊತೆ ಹತ್ಯೆ ಮಾಡಿ ಮೃತದೇಹ ಎಸೆದು ಹೋಗಿದ್ದಾಗಿ ಪೊಲೀಸರ ಬಳಿ ಬಾಯಿ ಬಿಟ್ಟಿದ್ದ. ಮತ್ತಷ್ಟು ವಿಚಾರಣೆ ನಡೆಸಿದಾಗ ಆರೋಪಿ ವೈದ್ಯ ಡಾ.ಚಿರಂಜೀವಿ ತನ್ನ ಸಹಾಯಕ ಪ್ರಶಾಂತ ಜೊತೆ ಸೇರಿಕೊಂಡು ಮದ್ಯದ ದಾಸನಾಗಿದ್ದ ನವೀನನಿಗೆ ಮದ್ಯದಲ್ಲಿ ನಿದ್ರೆ ಮಾತ್ರೆ ಬೆರೆಸಿ ಕುಡಿಸಿದ್ರು. ನಿದ್ರೆ ಮಾತ್ರೆ ಬೆರೆಸಿದ್ದ ಮದ್ಯ ಸೇವಿಸಿದ್ದ ನವೀನ ಕೆಲವೇ ನಿಮಿಷಗಳಲ್ಲಿ ಪ್ರಜ್ಞೆ ತಪ್ಪಿ ಮಲಗಿದ್ದ. ಪ್ರಜ್ಞೆ ತಪ್ಪಿ ಮಲಗಿದ್ದವನನ್ನು ವೈದ್ಯ ಡಾ.ಚಿರಂಜೀವಿ ತನ್ನ ಸಹಾಯಕನ ಜೊತೆ ಸೇರಿಕೊಂಡು ತನ್ನದೆ ಕಾರಿನಲ್ಲಿ ಹಾಕಿಕೊಂಡು ಸ್ವಲ್ಪ ದೂರಕ್ಕೆ ಬಂದು ಕಾರು ನಿಲ್ಲಿಸಿ ನವೀನನಿಗೆ ಬಟ್ಟೆಯಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ನಂತರ ಮೃತದೇಹವನ್ನು ಸೋಮನಕಟ್ಟಿ ಗ್ರಾಮದ ಬಳಿ ರಸ್ತೆ ಪಕ್ಕದಲ್ಲಿ ಎಸೆದು ಹೋಗಿದ್ರಂತೆ. ನವೀನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗೋದರ ಜೊತೆಗೆ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ನಂತೆ. ಇದ್ರಿಂದ ಬೇಸತ್ತು ನವೀನನನ್ನು ತನ್ನ ಸಹಾಯಕನ ಜೊತೆ ಸೇರಿಕೊಂಡು ಕೊಲೆ ಮಾಡಿ ಮೃತದೇಹ ಎಸೆದು ಹೋಗಿದ್ದಾಗಿ ಆರೋಪಿಗಳು ಪೊಲೀಸರ ಬಳಿ ಬಾಯಿ ಬಿಟ್ಟಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸಿದ ಪೊಲೀಸರು ಆರೋಪಿಗಳಾದ ವೈದ್ಯ ಡಾ.ಚಿರಂಜೀವಿ ಮತ್ತು ಅತನ ಸಹಾಯಕ ಪ್ರಶಾಂತನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
ವೈದ್ಯರು ಅಂದರೆ ಸಾವು ಬದುಕಿನ ನಡುವೆ ಹೋರಾಡೋರ ಜೀವ ಉಳಿಸೋರು ಅನ್ನೋ ಮಾತಿದೆ. ಆದ್ರೆ ಕುಡಿತದ ನಶೆಯಲ್ಲಿ ಗಲಾಟೆ ಮಾಡ್ತಿದ್ದ ಅನ್ನೋ ಕಾರಣಕ್ಕೆ ಸರಕಾರಿ ಆಸ್ಪತ್ರೆಯ ವೈದ್ಯನಾಗಿರೋನೆ ಮತ್ತೊಬ್ಬನ ಜೊತೆ ಸೇರಿ ಸಂಬಂಧಿಕನ ಜೀವ ತೆಗೆದಿದ್ದಾನೆ. ಮಾಡಬಾರದ ತಪ್ಪು ಮಾಡಿ ಪೊಲೀಸರ ಕೈಗೆ ಸಿಕ್ಕು ಈಗ ಜೈಲು ಪಾಲಾಗಿದ್ದಾನೆ.
ವರದಿ: ಪ್ರಭುಗೌಡ.ಎನ್.ಪಾಟೀಲ, ಟಿವಿ9 ಹಾವೇರಿ
Published On - 4:24 pm, Mon, 1 August 22