ಹಾವೇರಿ: ಸ್ವತಃ ರೈತರಿಂದಲೇ ರಸ್ತೆ ದುರಸ್ತಿ; ತಲಾ 10 ಸಾವಿರ ರೂ. ಸಂಗ್ರಹಿಸಿ ರಸ್ತೆ ನಿರ್ಮಾಣ

| Updated By: preethi shettigar

Updated on: Sep 22, 2021 | 2:46 PM

ರೈತರು ಹತ್ತಾರು ಬಾರಿ ಮನವಿಗಳ ಮೇಲೆ ಮನವಿ ಸಲ್ಲಿಸಿದ ಬಳಿಕ  ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಸ್ಥಳೀಯ ಶಾಸಕ ನೆಹರು ಓಲೇಕಾರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಸೇರಿದಂತೆ ಅನೇಕರು ಬಂದು ರಸ್ತೆ ನೋಡಿಕೊಂಡು ಹೋಗಿದ್ದರು. ಆದರೆ ಯಾರೂ ಸಹ ಈವರೆಗೆ ರಸ್ತೆ ನಿರ್ಮಿಸಿಕೊಡುವ ಮನಸ್ಸು ಮಾಡಿಲ್ಲ.

ಹಾವೇರಿ: ಸ್ವತಃ ರೈತರಿಂದಲೇ ರಸ್ತೆ ದುರಸ್ತಿ; ತಲಾ 10 ಸಾವಿರ ರೂ. ಸಂಗ್ರಹಿಸಿ ರಸ್ತೆ ನಿರ್ಮಾಣ
ಹದಗೆಟ್ಟ ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾದ ರೈತರು
Follow us on

ಹಾವೇರಿ: ಅದು ಕೇವಲ ಒಂದರಿಂದ ಒಂದೂವರೆ ಕಿ.ಮೀ ರಸ್ತೆ. ಹತ್ತಾರು ಜನ ರೈತರ ಜಮೀನಿಗೆ ತೆರಳುವುದಕ್ಕೆ ಇರುವುದು ಅದೊಂದೆ ದಾರಿ. ಆದರೆ ಈ ದಾರಿಯುದ್ದಕ್ಕೂ ಮುಳ್ಳು ಕಂಟೆಗಳು ಬೆಳೆದು, ರಸ್ತೆ ಹದಗೆಟ್ಟು ಹೋಗಿದೆ. ಹೀಗಾಗಿ ಇಲ್ಲಿನ ರೈತರು ರಸ್ತೆ ಮಾಡಿಸಿಕೊಡಿ ಎಂದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ದುಂಬಾಲು ಬಿದ್ದಿದ್ದರು. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಬಂದು ನೋಡಿ ಹೋಗಿದ್ದು ಬಿಟ್ಟರೆ, ಈ ರಸ್ತೆ ಮಾತ್ರ ಸುಧಾರಣೆ ಆಗಿಲ್ಲ. ಇದೇ ಕಾರಣಕ್ಕೆ ಈಗ ರೈತರೇ ಮುಂದೆ ಬಂದಿದ್ದು, ತಮ್ಮ ಸ್ವಂತ ಹಣದಲ್ಲಿ ರಸ್ತೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ಹಾವೇರಿ ನಗರದ ರೈತರ ಜಮೀನಿನಿಂದ ದೇವಿಹೊಸೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಿದು. ಈ ರಸ್ತೆ ಮಾರ್ಗವಾಗಿ ನೂರಾರು ರೈತರು ಓಡಾಡುತ್ತಿದ್ದಾರೆ. ರಸ್ತೆಯ ಅಕ್ಕಪಕ್ಕದಲ್ಲಿ 200 ಎಕರೆಗೂ ಅಧಿಕ ಜಮೀನಿದೆ. ರೈತರು ಜಮೀನಿಗೆ ತೆರಳೋಕೆ, ಜಮೀನಿನಲ್ಲಿ ಕೊಯ್ಲು ಮಾಡಿದ ಫಸಲು ತರುವುದಕ್ಕೆ ಸೇರಿದಂತೆ ಎಲ್ಲದಕ್ಕೂ ಇದೆ ರಸ್ತೆ ಮಾರ್ಗವಾಗಿ ಓಡಾಡಬೇಕಿದೆ. ಆದರೆ ರಸ್ತೆಯುದ್ದಕ್ಕೂ ಮುಳ್ಳುಕಂಟೆಗಳು ಬೆಳದು ನಿಂತು, ರಸ್ತೆಯಲ್ಲಿ ಓಡಾಡುವುದಕ್ಕೆ ಬಾರದ ಸ್ಥಿತಿಯಿತ್ತು. ಹೀಗಾಗಿ ರಸ್ತೆ ಅಕ್ಕಪಕ್ಕದ ರೈತರು, ತಮ್ಮ ಜಮೀನಿಗೆ ತೆರಳುವುದಕ್ಕೆ ಸುಸಜ್ಜಿತ ರಸ್ತೆ ನಿರ್ಮಿಸಿಕೊಡಿ ಎಂದು ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಮನವಿ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ.

ರೈತರು ಹತ್ತಾರು ಬಾರಿ ಮನವಿಗಳ ಮೇಲೆ ಮನವಿ ಸಲ್ಲಿಸಿದ ಬಳಿಕ  ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಸ್ಥಳೀಯ ಶಾಸಕ ನೆಹರು ಓಲೇಕಾರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಸೇರಿದಂತೆ ಅನೇಕರು ಬಂದು ರಸ್ತೆ ನೋಡಿಕೊಂಡು ಹೋಗಿದ್ದರು. ಆದರೆ ಯಾರೂ ಸಹ ಈವರೆಗೆ ರಸ್ತೆ ನಿರ್ಮಿಸಿಕೊಡುವ ಮನಸ್ಸು ಮಾಡಿಲ್ಲ. ಹೀಗಾಗಿ ರಸ್ತೆ ಅಕ್ಕಪಕ್ಕದ ರೈತರೇ ತಲಾ ಹತ್ತು ಸಾವಿರ ರುಪಾಯಿಯಂತೆ ಹಣ ಸೇರಿಸಿ ರಸ್ತೆ ನಿರ್ಮಿಸಿಕೊಳ್ಳುತ್ತಿದ್ದಾರೆ.

ಜೆಸಿಬಿ ವಾಹನದ ಮೂಲಕ ರಸ್ತೆಯಲ್ಲಿ ಬೆಳೆದು ನಿಂತಿರುವ ಮುಳ್ಳುಕಂಟೆಗಳನ್ನು ತೆರವು ಮಾಡಿಸಿ, ರಸ್ತೆ ಸಮತಟ್ಟು ಮಾಡಿಸುತ್ತಿದ್ದಾರೆ. ಇಷ್ಟೇ ಅಲ್ಲದೆ ಟಿಪ್ಪರ್​ನಿಂದ ಬೇರೆ ಕಡೆಯಿಂದ ಮಣ್ಣು ತರಿಸಿ, ರಸ್ತೆಗೆ ಮಣ್ಣು ಹಾಕಿಸಿ ರಸ್ತೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಈ ರಸ್ತೆಯಲ್ಲಿ ಸಂಪೂರ್ಣ ಓಡಾಡುವುದಕ್ಕೆ ಆಗದೆ ಇದ್ದಿದ್ದರಿಂದ ರೈತರು ಅನಿವಾರ್ಯವಾಗಿ ತಾವೇ ಹಣ ಸೇರಿಸಿ ರಸ್ತೆ ನಿರ್ಮಿಸಿಕೊಳ್ಳುತ್ತಿದ್ದಾರೆ.

ಈಗಾಗಲೇ ರಸ್ತೆ ಪಕ್ಕದ ಜಮೀನಿನಲ್ಲಿ ಬೆಳೆದಿದ್ದ ಶೇಂಗಾ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳು ಕಟಾವಿಗೆ ಬಂದಿವೆ. ಕಟಾವು ಮಾಡಿದ ನಂತರ ಅವುಗಳನ್ನು ಮಾರುಕಟ್ಟೆಗೆ ಸಾಗಿಸುವುದಕ್ಕೆ ರಸ್ತೆ ಇಲ್ಲದ್ದರಿಂದ ನಾವೇ ಈಗ ರಸ್ತೆ ನಿರ್ಮಿಸಿಕೊಳ್ಳುತ್ತಿದ್ದೇವೆ ಎಂದು ಸ್ಥಳೀಯ ರೈತ ನಾಗಪ್ಪ ಬೂದಿಹಾಳ ತಿಳಿಸಿದ್ದಾರೆ.

ವರದಿ: ಪ್ರಭುಗೌಡ.ಎನ್.ಪಾಟೀಲ

ಇದನ್ನು ಓದಿ:
Viral Video: ಶಿರಸಿ- ಕುಮಟಾ ರಸ್ತೆಯಲ್ಲಿ ಸಾಗಿದ್ರೆ ಗರ್ಭಿಣಿಗೆ ಹೆರಿಗೆಯೇ ಆಗೋಗುತ್ತೆ ಅಂತಿವೆ ಟ್ರೋಲ್​​ಗಳು; ಸಾರ್ವಜನಿಕರಿಗೆ ಪರಿಹಾರ ಸಿಗೋದು ಯಾವಾಗ?

ಅವಘಡ ಸಂಭವಿಸದಂತೆ ಎಚ್ಚರವಹಿಸಿ ರಸ್ತೆಯಲ್ಲಿ ಬಿದ್ದಿದ್ದ ಆಯಿಲ್​ಗೆ ಮರಳು ಹಾಕಿದ ಕನ್ಸ್​ಟೇಬಲ್ಸ್​​; ಪೊಲೀಸ್ ಕಮಿಷನರ್​ನಿಂದ ಮೆಚ್ಚುಗೆ‌​