ಹಾವೇರಿ: ಜಿಲ್ಲೆಯ ಆಲದಕಟ್ಟಿ ಬಳಿ ಪಟಾಕಿ (Firecracker) ಗೋದಾಮಿಗೆ ಬೆಂಕಿ ಹೊತ್ತಿಕೊಂಡು ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಸಂಖ್ಯೆ ಏರಿಕೆಯಾಗಿದೆ. ನಿರಂತರ ಕಾರ್ಯಾಚರಣೆ ಬಳಿಕ ಮತ್ತೊಬ್ಬರ ಶವ ಪತ್ತೆಯಾಗಿದೆ. ದ್ಯಾಮಪ್ಪ, ರಮೇಶ್ ಬಾರ್ಕಿ, ಶಿವಲಿಂಗ ಅಕ್ಕಿ, ಜಯಣ್ಣ ಮೃತ ದುರ್ದೈವಿಗಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಪಟಾಕಿ ಗೋದಾಮು ಮಾಲೀಕ ಕುಮಾರ ಸಾತೇನಹಳ್ಳಿಯನ್ನು ಹಾವೇರಿ (Haveri) ಗ್ರಾಮೀಣ ಪೊಲೀಸರು (Police) ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ನಿನ್ನೆ (ಆ.29) ಮಧ್ಯಾಹ್ನ ಗೋಡೌನಿಗೆ ಬೆಂಕಿ ಹೊತ್ತಿಕೊಂಡಿದ್ದು ನಿರಂತರ 16 ಗಂಟೆ ಕಾರ್ಯಾಚರಣೆ ಬಳಿಕ ಇಂದು (ಆ.30)ರ ನಸುಕಿನ ಜಾವ 4 ಗಂಟೆಗೆ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದಾರೆ.
ಅವಘಡದಲ್ಲಿ ಕೋಟ್ಯಂತರ ಮೌಲ್ಯದ ಪಟಾಕಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡುವ ಸಚಿವ ಶಿವಾನಂದ ಪಾಟೀಲ್ ಭೇಟಿ ನೀಡಲಿದ್ದಾರೆ. ಇನ್ನು ಜಿಲ್ಲೆಯ ಅಧಿಕಾರಿಗಳ ಮೂಲಕ ಇಂದು ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಮಾಹಿತಿ ಪಡೆದಿದ್ದಾರೆ.ಕೆಲವೇ ದಿನಗಳಲ್ಲಿ ಗಣೇಶ ಚತುರ್ಥಿ ಬರುತ್ತಿದೆ. ಹೀಗಾಗಿ ಹಬ್ಬಕ್ಕೆಂದು ಹಾವೇರಿ ಹೊರವಲಯದ ಸಾತೇನಹಳ್ಳಿ ಬಳಿ ಕುಮಾರ್ ಎಂಬುವವರಿಗೆ ಸೇರಿದ ಭೂಮಿಕಾ ಪಟಾಕಿ ಗೋದಾಮಿನಲ್ಲಿ ಸುಮಾರು ಒಂದು ಕೋಟಿಗೂ ಹೆಚ್ಚು ಮೌಲ್ಯದ ಪಟಾಕಿ ದಾಸ್ತಾನು ಮಾಡಲಾಗಿತ್ತು.
ಇದನ್ನೂ ಓದಿ: ಹಾವೇರಿ ಪಟಾಕಿ ಅವಘಡ ಪ್ರಕರಣ, ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ
ಇನ್ನು ಪಟಾಕಿ ಇಟ್ಟಿದ್ದ ಗೋದಾಮಿನ ಬಳಿ ವೆಲ್ಡಿಂಗ್ ಕಾರ್ಯ ನಡೆಯುತ್ತಿತ್ತು. ಈ ವೆಲ್ಡಿಂಗ್ ಬೆಂಕಿ ಕಿಡಿ ಸಿಡಿದು ಪಟಾಕಿಗೆ ತಗುಲಿದ್ದರಿಂದ ಬೆಂಕಿ ಹತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ. ಇನ್ನು ಅವಘಡ ವೇಳೆ ಕಾರ್ಮಿಕ ವಾಸಿಮ್ ಹರಿಹರ್(32) ಅವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪಟಾಕಿ ಅವಘಡ ಸ್ಥಳಕ್ಕೆ ಉಪಸಭಾಧ್ಯಕ್ಷ ರುದ್ರಪ್ಪಾ ಲಮ್ಮಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ನಂತರ ಮಾತನಾಡಿದ್ದ ಅವರು, ನನಗೆ ನಾಲ್ಕು ಗಂಟೆಗೆ ಈ ವಿಷಯ ಗೊತ್ತಾಗಿದೆ. ಘಟನೆ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಬಂದಿದ್ದೇನೆ. ನಮ್ಮ ಜಿಲ್ಲೆಯ ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಅಧಿಕಾರಿಗಳು ಸ್ಥಳದಲ್ಲಿದ್ದು ಪರಿಸ್ಥಿತಿ ನಿಭಾಯಿಸಿದ್ದಾರೆ ಎಂದು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:53 am, Wed, 30 August 23